Site icon Vistara News

Karnataka Election: ಒಲ್ಲದ ಮನಸ್ಸಿನಿಂದ ಮದುವೆಯಾದ ಡಿಕೆಶಿ, ಸಿದ್ದರಾಮಯ್ಯ ನಿತ್ಯ ಕಚ್ಚಾಡುತ್ತಾರೆ: ಸಚಿವ ಶ್ರೀರಾಮುಲು ವ್ಯಂಗ್ಯ

Sriramulu says Siddaramaiah DK Shivakumar get married reluctantly fight on a daily basis

#image_title

ವಿಜಯನಗರ: ಒಡೆದ ಮನೆಯಂತಾಗಿರುವ ಕಾಂಗ್ರೆಸ್ ನಾಯಕರ ನಾಟಕವನ್ನು ಜನರು ಈ ಬಾರಿ ಬಂದ್ ಮಾಡಲಿದ್ದಾರೆ. ಒಲ್ಲದ ಮನಸ್ಸಿನಿಂದ ಮದುವೆ ಮಾಡಿಕೊಂಡಿರುವ ಡಿಕೆಶಿ, ಸಿದ್ದರಾಮಯ್ಯ ನಿತ್ಯ ಕಚ್ಚಾಡುತ್ತಾರೆ. ಮೋದಿ ಅವರು ರಾಜ್ಯಕ್ಕೆ ಬಂದಾಗಲೆಲ್ಲ ಕಾಂಗ್ರೆಸ್‌ನವರಿಗೆ ಚಳಿಜ್ವರ ಬರುತ್ತದೆ. ಮೋದಿ ಬಿರುಗಾಳಿಗೆ ಸುನಾಮಿಯಂತೆ ಕಾಂಗ್ರೆಸ್ ಕೊಚ್ಚಿಕೊಂಡು ಹೋಗುತ್ತದೆ. ರಾಜ್ಯದ ಅಭಿವೃದ್ಧಿ, ಪ್ರಧಾನಿ ಮೋದಿ ಅವರ ಕಾರ್ಯವೈಖರಿಯಿಂದ ಮತ್ತೊಮ್ಮೆ ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ (Karnataka Election) ಬರಲಿದೆ ಎಂದು ಸಾರಿಗೆ ಸಚಿವ ಶ್ರೀರಾಮುಲು ಹೇಳಿದರು.

ಹೊಸಪೇಟೆಯ ಅನಂತಶಯನ ಗುಡಿಯ ಬಳಿ 283.84 ಕೋಟಿ ರೂಪಾಯಿ ವೆಚ್ಚದ 328 ಕಾಮಗಾರಿಗಳ ಶಂಕುಸ್ಥಾಪನೆ ಮತ್ತು 641.40 ಕೋಟಿ ರೂಪಾಯಿ ವೆಚ್ಚದ 91 ಕಾಮಗಾರಿಗಳನ್ನು ಸಚಿವ ಆನಂದ್‌ ಸಿಂಗ್‌ ಅವರೊಂದಿಗೆ ಜಂಟಿಯಾಗಿ ಉದ್ಘಾಟಿಸಿ ಮಾತನಾಡಿದರು.

ಆನಂದ ಸಿಂಗ್‌ರನ್ನು ಹಾಡಿಹೊಗಳಿದ ಶ್ರೀರಾಮುಲು

ಪ್ರತ್ಯೇಕ ಜಿಲ್ಲೆ ಘೋಷಣೆಯಾದ ಬಳಿಕ ಆನಂದ್‌ ಸಿಂಗ್‌ ಅವರು ವಿಜಯನಗರ ಜಿಲ್ಲೆಯ ಅಭಿವೃದ್ಧಿ ಮಾಡುತ್ತಿದ್ದಾರೆ. ಈ ನಿಟ್ಟಿನಲ್ಲಿ ದೊಡ್ಡಮಟ್ಟದಲ್ಲಿ ಅನುದಾನ ತಂದಿದ್ದಾರೆ. ಇಷ್ಟೊಂದು ಅನುದಾನ ತರುವುದು ಸುಲಭದ ಮಾತಲ್ಲ. ಆರ್ಥಿಕತೆ, ಶಿಕ್ಷಣ, ಸಾಂಸ್ಕೃತಿಕ ಹೀಗೆ ಎಲ್ಲಾ ಕ್ಷೇತ್ರಗಳಲ್ಲಿ ಆನಂದ ಸಿಂಗ್ ಅಭಿವೃದ್ಧಿ ಮಾಡುತ್ತಿದ್ದಾರೆ ಎಂದು ಸಾರಿಗೆ ಸಚಿವ ಶ್ರೀರಾಮುಲು ಹೇಳಿದರು.

ಇದನ್ನೂ ಓದಿ | PM-KISAN 13th Installment: ಕಿಸಾನ್ ಸಮ್ಮಾನ್ ನಿಧಿ 13ನೇ ಕಂತು ಬಿಡುಗಡೆ, ರೈತರ ಖಾತೆಗೆ 2 ಸಾವಿರ ರೂ.! ಚೆಕ್ ಮಾಡುವುದು ಹೇಗೆ?

ವಿಜಯನಗರವನ್ನು ಪ್ರತ್ಯೇಕ ಜಿಲ್ಲೆ ಮಾಡಿದಾಗ ಕೆಲವರು ಗೇಲಿ ಮಾಡಿದ್ದರು. ಜಿಲ್ಲೆ ಒಡೆದು ಏನು ಸಾಧಿಸುತ್ತೀರಿ ಎಂದು ಅಪಮಾನ ಮಾಡಿದ್ದರು. ಆದರೆ ಯಾವುದೇ ಸ್ವಾರ್ಥ ಇಲ್ಲದೇ ಜಿಲ್ಲೆ ವಿಭಜನೆ ಮಾಡಿ ಅಭಿವೃದ್ಧಿ ಮಾಡಿದ್ದಾರೆ. ಅಖಂಡ ಬಳ್ಳಾರಿ ಜಿಲ್ಲೆ ವಿಭಜನೆ ಅನಿವಾರ್ಯವಾಗಿತ್ತು. ಮಾಜಿ ಸಿಎಂ ಯಡಿಯೂರಪ್ಪ ಅವರಿಂದ ಹೊಸ ಜಿಲ್ಲೆ ಉದಯವಾಯಿತು ಎಂದು ಸ್ಮರಿಸಿದರು.

ಪ್ರಧಾನಿ ನರೇಂದ್ರ ಮೋದಿ ಅವರು ಶಿವಮೊಗ್ಗ, ಬೆಳಗಾವಿಯಲ್ಲಿ ಸಾಕಷ್ಟು ಕಾಮಗಾರಿಗಳನ್ನು ಉದ್ಘಾಟಿಸಿದ್ದಾರೆ. ಕಾಕತಾಳೀಯ ಎನ್ನುವಂತೆ‌ ಹೊಸಪೇಟೆಯಲ್ಲಿ ಆನಂದ್‌ ಸಿಂಗ್ ಅವರು ಕಾಮಗಾರಿಗಳಿಗೆ ಚಾಲನೆ ನೀಡಿದ್ದಾರೆ. ಚುನಾವಣೆ ಬಂದಾಗ ಮಾತ್ರ ಕಾಂಗ್ರೆಸ್‌ನವರಿಗೆ ಬಡವರು ನೆನಪಾಗುತ್ತಾರೆ. ಆನಂದ್‌ ಸಿಂಗ್ ನಾಲ್ಕು ಬಾರಿ ಶಾಸಕರಾಗಿದ್ದಾರೆ. ಅದಕ್ಕಿಂತ ಮುಂಚೆ ಹೊಸಪೇಟೆ ಹೇಗಿತ್ತು‌, ಈಗ ಹೇಗಾಗಿದೆ ನೋಡಿ ಎಂದು ಹೇಳಿದರು.

ಅವಳಿ‌ ಜಿಲ್ಲೆ ಮತ್ತು ಕಲ್ಯಾಣ ಕರ್ನಾಟಕ ಭಾಗಕ್ಕೆ ಸರ್ಕಾರ ಕೊಟ್ಟಿರುವ ಕೊಡುಗೆಗಳ ಬಗ್ಗೆ ವಿವರಣೆ ನೀಡಿದ ಶ್ರೀರಾಮುಲು, ಚುನಾವಣೆಗಾಗಿ ಮನಸ್ಸಿಗೆ ಬಂದಂತೆ ಬಜೆಟ್ ಘೋಷಣೆ ಮಾಡಿಲ್ಲ, ಇದು ಜನಪರ ಬಜೆಟ್. ಸಿಎಂ ಬೊಮ್ಮಾಯಿ ಅವರು ಎಸ್‌ಸಿ ಎಸ್‌ಟಿ ಸಮುದಾಯಗಳ ಬೇಡಿಕೆಗೆ ಮನ್ನಣೆ ನೀಡಿ ಮೀಸಲಾತಿ ಹೆಚ್ಚಳ ಮಾಡಿದರು. ಎಸ್‌ಟಿ ಮೀಸಲಾತಿ ಹೆಚ್ಚಳವಾಗದಿದ್ದಲ್ಲಿ ನನ್ನ ಜತೆಗೆ ಆನಂದ ಸಿಂಗ್ ರಾಜೀನಾಮೆ ಕೊಡಲು ಸಿದ್ಧರಾಗಿದ್ದರು. ನಾಲ್ಕು ಬಾರಿ ಆನಂದ್‌ ಸಿಂಗ್‌ರನ್ನು ಗೆಲ್ಲಿಸಿದ್ದೀರಿ. ಐದನೇ ಬಾರಿಯೂ ಗೆಲ್ಲಿಸಿದರೆ ಮತ್ತೊಮ್ಮೆ ಅವರು ಮಂತ್ರಿಯಾಗುತ್ತಾರೆ. ಹೀಗಾಗಿ ಜನರು ಬಿಜೆಪಿಯನ್ನು ಬೆಂಬಲಿಸಬೇಕು ಎಂದು ಮನವಿ ಮಾಡಿದರು.

ಇದನ್ನೂ ಓದಿ | Modi at Belagavi: ಮನೆಮನೆಗೆ ನೀರು ಕೊಡುವ ಧೈರ್ಯ ಯಾವ ಪ್ರಧಾನಿಗೂ ಇರಲಿಲ್ಲ: ಸಿಎಂ ಬಸವರಾಜ ಬೊಮ್ಮಾಯಿ

ಸಂಡೂರು ಅಥವಾ ಬಳ್ಳಾರಿ ಗ್ರಾಮಾಂತರದಿಂದ ಸ್ಪರ್ಧೆ

ಗಣಿಗಾರಿಕೆ ಮಾಡುವ ಉದ್ದೇಶದಿಂದ ಅಮಿತ್ ಶಾ ಸಂಡೂರಿಗೆ ಭೇಟಿ ನೀಡಿದ್ದಾರೆ ಎಂಬ ಕಾಂಗ್ರೆಸ್ ‌ನಾಯಕರ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ಇವರಿಗೆ ಮಾಡುವುದಕ್ಕೆ ಕೆಲಸವಿಲ್ಲ. ಈವರೆಗೂ ಸಂಡೂರಿನಲ್ಲಿ ಬಿಜೆಪಿ ಗೆದ್ದಿಲ್ಲ. ಆದರೆ, ಗೆದ್ದಿರುವ ಕಾಂಗ್ರೆಸ್ ಏನು ಅಭಿವೃದ್ಧಿ ಮಾಡಿದೆ. ಈ ಬಾರಿ ಸಂಡೂರಿನಲ್ಲಿ ಬಿಜೆಪಿ ಗೆಲ್ಲುವುದು ಖಚಿತ. ಮೋದಿ ರಾಜ್ಯಕ್ಕೆ ಬಂದಂತೆ ಅಮಿತ್ ಶಾ ಬಳ್ಳಾರಿಗೆ ಬಂದಿದ್ದರಿಂದ ಕಾಂಗ್ರೆಸ್‌ನವರಿಗೆ ನಿದ್ದೆ ಬಂದಿಲ್ಲ. ಗದಗ ಸೇರಿ ಹಲವು ಕಡೆ ಸ್ಪರ್ಧೆ ಮಾಡಲು ಬೇಡಿಕೆ ಇದೆ, ಆದರೆ ಬಳ್ಳಾರಿ ಜಿಲ್ಲೆಯಿಂದಲೇ ಸ್ಪರ್ಧೆ ಮಾಡುತ್ತೇನೆ. ಸಂಡೂರು ಅಥವಾ ಬಳ್ಳಾರಿ ಗ್ರಾಮಾಂತರದಿಂದ ಸ್ಪರ್ಧೆ ಮಾಡುವುದಾಗಿ ಪುನರುಚ್ಚರಿಸಿದರು.

Exit mobile version