Site icon Vistara News

Karnataka Elections | ರೊಚ್ಚಿಗೆದ್ದ ರೆಡ್ಡಿ ಮನವೊಲಿಸಲು ಸ್ನೇಹ ಮಂತ್ರ ಪಠಿಸಿದ ಶ್ರೀರಾಮುಲು

Sriramulu- janardhana reddy

ಬಳ್ಳಾರಿ: ಒಂದು ಕಾಲದಲ್ಲಿ ಬಿಜೆಪಿಯ ಬಲಾಢ್ಯ ಶಕ್ತಿಯಾಗಿದ್ದು ಗಣಿ ಹಗರಣದ ಬಳಿಕ ಪಕ್ಷದಲ್ಲಿ ಮೂಲೆಗುಂಪಾದ ಜನಾರ್ದನ ರೆಡ್ಡಿ (Karnataka Elections) ಅವರು ಈಗ ರೊಚ್ಚಿಗೆದ್ದಿರುವ ಹಿನ್ನೆಲೆಯಲ್ಲಿ ಅವರನ್ನು ಮನವೊಲಿಸಲು ಸಚಿವ ಶ್ರೀರಾಮುಲು ಮುಂದಾಗಿದ್ದಾರೆ.

ಬಳ್ಳಾರಿ ಕೋಟೆಯನ್ನು ಮುನ್ನಡೆಸುತ್ತಿರುವ ರೆಡ್ಡಿ ಈ ಬಾರಿ ತಮ್ಮ ಕೇಂದ್ರ ಸ್ಥಾನವನ್ನು ಗಂಗಾವತಿಗೆ ಶಿಫ್ಟ್‌ ಮಾಡಲು ನಿರ್ಧರಿಸಿದ್ದಾರೆ. ತಾನಿನ್ನೂ ಬಿಜೆಪಿಯಲ್ಲಿದ್ದೇನೆ ಎಂದು ಹೇಳಿಕೊಂಡಿದ್ದರೂ ಜನಾರ್ದನ ರೆಡ್ಡಿ ಅವರು ಹೊಸ ಪಕ್ಷ ಕಟ್ಟಲು ಮುಂದಾಗಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದೆ. ಈ ಹಿನ್ನೆಲೆಯಲ್ಲಿ ಕಳೆದ ಕೆಲವು ಸಮಯದಿಂದ ರೆಡ್ಡಿ ಅವರಿಂದ ಅಂತರ ಕಾಯ್ದುಕೊಂಡಿದ್ದ ಶ್ರೀರಾಮುಲು ಸ್ನೇಹ ಮಂತ್ರ ಪಠಿಸಿದ್ದಾರೆ.

ಜನಾರ್ದನ ರೆಡ್ಡಿ ಅವರಿಗೆ ಪಕ್ಷದಲ್ಲಿ ಕಡೆಗಣಿಸಿದ್ದರ ಬಗ್ಗೆ ಬೇಸರವಾಗಿರುವುದು ನಿಜ. ಈ ವಿಚಾರವನ್ನು ನಾನು ಹಿರಿಯ ನಾಯಕರಿಗೆ ಹೇಳಿದ್ದೇನೆ ಎಂದು ಹೇಳಿಕೊಂಡಿದ್ದ ಶ್ರೀರಾಮುಲು ಈಗ ಜನಾರ್ದನ ರೆಡ್ಡಿ ಮನವೊಲಿಸಲು ರೆಡಿ, ಸ್ನೇಹಕ್ಕಾಗಿ ಜೀವ ಕೊಡಲೂ ಸಿದ್ಧ ಎಂದು ಹೇಳಿದ್ದಾರೆ.

ಕಂಪ್ಲಿಯಲ್ಲಿ ಹೇಳಿಕೆ ನೀಡಿದ ಸಾರಿಗೆ ಸಚಿವ ಶ್ರೀರಾಮುಲು, ಜನಾರ್ದನ ರೆಡ್ಡಿ ಅವರು ನನ್ನ ಆತ್ಮೀಯ ಸ್ನೇಹಿತರು. ಸ್ನೇಹ ಅಂದ್ರೆ ಜನಾರ್ದನ‌ರೆಡ್ಡಿ ಮತ್ತು ರಾಮುಲು ಎನ್ನುವಂತೆ ಎಲ್ಲರೂ ಮಾತಾಡ್ತಾರೆ.…ಸ್ನೇಹಕ್ಕೆ ಪ್ರಾಣ ಕೊಡೋ ವ್ಯಕ್ತಿ ರಾಮುಲು. ಸ್ನೇಹ ಮತ್ತು ರಾಜಕಾರಣ ಎರಡೂ ಕೂಡ ಮುಖ್ಯʼʼ ಎಂದಿದ್ದಾರೆ ರಾಮುಲು.
ʻʻಬಿಜೆಪಿ ಪಕ್ಷ ನನಗೆ ತಾಯಿ ಸಮಾನ. ಸ್ನೇಹ ಮತ್ತು ಪಾರ್ಟಿ ವಿಚಾರ ಬಂದಾಗ ಎರಡನ್ನೂ ಕೂಡ ಸರಿದೂಗಿಸಿಕೊಂಡು ಹೋಗುವೆ. ರಾಜಕಾರಣ ಬಂದಾಗ ಜನಾರ್ದನ ರೆಡ್ಡಿ ಅವರ ಬಗ್ಗೆ ಅಲ್ಲಿ ಇಲ್ಲಿ ಸುದ್ದಿಗಳನ್ನು ಕೇಳುತ್ತಾ ಇದ್ದೇವೆ. ನಾನಿನ್ನೂ ಜನಾರ್ದನ ರೆಡ್ಡಿ ಅವರನ್ನು ಭೇಟಿಯಾಗಿಲ್ಲ. ಜನಾರ್ದನ ರೆಡ್ಡಿ ಸದ್ಯದ ರಾಜಕೀಯದ ಬಗ್ಗೆ ನನಗೆ ಯಾವುದೇ ಮಾಹಿತಿ ಸಿಕ್ಕಿಲ್ಲ. ಅವರು ನನಗೆ ಸಿಕ್ಕ ಬಳಿಕ ಅವರನ್ನು ಕೂರಿಸಿಕೊಂಡು ಮಾತಾಡುವೆʼʼ ಎಂದಿದ್ದಾರೆ ರಾಮುಲು.

ʻʻನನ್ನ ಸ್ನೇಹಿತ ಅಸಮಾಧಾನಗೊಳ್ಳದಂತೆ ನಾನು ಕೂರಿಸಿ ಮಾತಾಡುವೆ.…ಅವರ ಮನವೊಲಿಸುವ ಕೆಲಸ ಮಾಡುವೆ. ಪಕ್ಷಕ್ಕೆ ಮುಜುಗರವಾಗದಂತೆ ಎಲ್ಲವನ್ನೂ ಸಮಾನವಾಗಿ ತೆಗೆದುಕೊಂಡು ಹೋಗುವೆʼʼ ಎಂದು ಹೇಳಿದರು.

ಗಂಗಾವತಿಯಲ್ಲಿ ಕೆಲವು ಬೇರೆ ಪಕ್ಷದ ನಾಯಕರು ಜನಾರ್ದನ ರೆಡ್ಡಿ ಅವರ ಜತೆ ಕಾಣಿಸಿಕೊಂಡ ಬಗ್ಗೆ ಕೇಳಿದಾಗ, ʻʻಅವರೆಲ್ಲರೂ ಹನುಮನ ಜಯಂತಿಗೆ ಬಂದಿದ್ದರು. ಸಾರ್ವಜನಿಕ ಕಾರ್ಯಕ್ರಮವಾಗಿರುವುದರಿಂದ ಎಲ್ಲರೂ ಪಕ್ಷಾತೀತವಾಗಿ ಬರುತ್ತಾರೆ. ಈ ಬಗ್ಗೆ ಅಪಾರ್ಥ ಕಲ್ಪಿಸೋದು ಬೇಡʼʼ ಎಂದರು ಸಚಿವ ಶ್ರೀರಾಮುಲು.

ಶ್ರೀರಾಮುಲು ಅವರು ಇತ್ತೀಚೆಗೆ ಜನಾರ್ದನ ರೆಡ್ಡಿ ಅವರಿಂದ ಅಂತರ ಕಾಯ್ದುಕೊಂಡಿದ್ದರು. ಎಲ್ಲಕ್ಕಿಂತ ಮುಖ್ಯವಾಗಿ ಯಾವತ್ತೂ ಜನಾರ್ದನ ರೆಡ್ಡಿ ಅವರ ಕೌಟುಂಬಿಕ ಕಾರ್ಯಕ್ರಮವನ್ನು ಮಿಸ್‌ ಮಾಡಿಕೊಳ್ಳದ ರಾಮುಲು ಅವರು ಈ ಬಾರಿ ಅವರ ಮೊಮ್ಮಗಳ ನಾಮಕರಣ ಕಾರ್ಯಕ್ರಮಕ್ಕೂ ಹೋಗಿರಲಿಲ್ಲ. ಇದು ಅವರಿಬ್ಬರ ಮಧ್ಯೆ ದೊಡ್ಡ ಬಿರುಕು ಹುಟ್ಟಿದೆ ಎಂಬ ಭಾವವನ್ನು ಮೂಡಿಸಿತ್ತು.

ಇದನ್ನೂ ಓದಿ | Sreeramulu absent | ರೆಡ್ಡಿ ಮೊಮ್ಮಗಳ ನಾಮಕರಣಕ್ಕೆ ಆಪ್ತಮಿತ್ರ ರಾಮುಲು ಗೈರು: ಮೊದಲ ಬಾರಿ ಹೀಗಾಗಿದ್ದರ ಹಿಂದೆ ಇದ್ಯಾ ರಾಜಕೀಯ?

Exit mobile version