Site icon Vistara News

ಶ್ರೀರಂಗಪಟ್ಟಣದಲ್ಲಿ ಬೀದಿಗೆ ಬಿದ್ದ ಗದ್ದೆ ರಂಗನಾಥ; ದೇಗುಲ ಕೆಡವಿ ದೇವರನ್ನೇ ಬಯಲಿಗೆ ತಂದ ಅಧಿಕಾರಿಗಳು!

Srirangapatna Gadde Ranganatha Temple

ಮಂಡ್ಯ: ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಶ್ರೀರಂಗಪಟ್ಟಣದಲ್ಲಿ ಗದ್ದೆ ರಂಗನಾಥ (Gadde Ranganatha Temple) ಬೀದಿಗೆ ಬಿದ್ದಿದ್ದಾನೆ. ಅಧಿಕಾರಿಗಳು ಇದ್ದ ದೇಗುಲವನ್ನು ಕೆಡವಿ ದೇವರನ್ನೇ ಈಗ ಬಯಲಿನಲ್ಲಿ ಕಳೆಯುವಂತೆ ಮಾಡಿದ್ದಾರೆ. ಇದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.

ಹೆದ್ದಾರಿ ಪ್ರಾಧಿಕಾರ ಮತ್ತು ತಾಲೂಕು ಆಡಳಿತದ ನಿರ್ಲಕ್ಷ್ಯಕ್ಕೆ ಗದ್ದೆ ರಂಗನಾಥನ ವಿಗ್ರಹವು ಈಗ ಅಕ್ಷರಶಃ ಬೀದಿಯಲ್ಲಿ ಇರುವಂತೆ ಆಗಿದೆ. ಸಮ್ಮೋನ ಶೈಲಿಯಲ್ಲಿರುವ ಉಬ್ಬು ಶಿಲ್ಪದಲ್ಲಿ ಕೆತ್ತಿರುವ ಶ್ರೀ ಗದ್ದೆ ರಂಗನಾಥ‌ನ ವಿಗ್ರಹವು ನೋಡಲು ಆಕರ್ಷಕವಾಗಿರುವುದಲ್ಲದೆ, ಭಕ್ತರು ಸಹ ಸಾಕಷ್ಟು ನಡೆದುಕೊಳ್ಳುತ್ತಾರೆ.

ಗದ್ದೆ ರಂಗನಾಥ ದೇಗುಲದ ಕಂಬಗಳನ್ನು ನೆಲದ ಮೇಲೆ ಇಟ್ಟಿರುವುದು

ಶ್ರೀರಂಗಪಟ್ಟಣದ ನೂತನ ಮೈಸೂರು-ಬೆಂಗಳೂರು ದಶಪಥ ಹೆದ್ದಾರಿ ಬದಿಯ ಬಯಲಿನಲ್ಲಿ ಈ ರಂಗನಾಥ‌ನ ದೇವಸ್ಥಾನ ಇದೆ. ರಸ್ತೆ ಬದಿಯಲ್ಲಿ ಇದ್ದ ದೇಗುಲವನ್ನು ದಶಪಥ ಹೆದ್ದಾರಿ ಕಾಮಗಾರಿಯ ಹೆಸರಿನಲ್ಲಿ ಕೆಡವಿ ಹಾಕಲಾಗಿತ್ತು. ಹೀಗಾಗಿ ಕಳೆದ ಮೂರು ವರ್ಷಗಳಿಂದ ಬಿಸಿಲು, ಮಳೆಯಲ್ಲಿ ರಂಗನಾಥನ ವಿಗ್ರಹ ರಸ್ತೆಯಲ್ಲಿ ನಿಂತಿದೆ!

ಅರ್ಧಕ್ಕೇ ನಿಂತ ಗದ್ದೆ ರಂಗನಾಥ ದೇವಸ್ಥಾನದ ಕಟ್ಟಡ ಕಾಮಗಾರಿ

ದಶಪಥ ಹೆದ್ದಾರಿಗಾಗಿ ಕೆಡವಿದರು!

ಈ ಹಿಂದೇ ಈ ಜಾಗದಲ್ಲಿ ಪುರಾತನವಾದ ಗದ್ದೆ ರಂಗನಾಥ ದೇಗುಲವಿತ್ತು. ದಶಪಥ ಹೆದ್ದಾರಿ ಕಾಮಗಾರಿ ಹೆಸರಿನಲ್ಲಿ ಈ ದೇಗುಲವನ್ನು ಅಧಿಕಾರಿಗಳು ಕೆಡವಿದ್ದರು. ದೇಗುಲ ತೆರವು ಕಾರ್ಯಾಚರಣೆ ವೇಳೆ ಭಕ್ತರಿಂದ ವಿರೋಧ ವ್ಯಕ್ತವಾಗಿತ್ತು. ಈ ವೇಳೆ ಹೊಸ ದೇಗುಲ ನಿರ್ಮಾಣ ಮಾಡುವುದಾಗಿ ಭರವಸೆ ನೀಡಿ ತೆರವು ಮಾಡಲಾಗಿತ್ತು. ಆದರೆ, ಹೆದ್ದಾರಿ ಕಾಮಗಾರಿ ಪೂರ್ಣಗೊಂಡರೂ ಗದ್ದೆ ರಂಗನಾಥನ ಹೊಸ ದೇಗುಲ ಮಾತ್ರ ಪೂರ್ಣಗೊಂಡಿಲ್ಲ.

ಅರ್ಧದಲ್ಲೇ ನಾಪತ್ತೆಯಾದ ಅಧಿಕಾರಿಗಳು

ಹೊಸ ದೇಗುಲ ನಿರ್ಮಾಣ ಕಾಮಗಾರಿಯನ್ನು ಅರ್ಧದಲ್ಲೇ ಕೈ ಬಿಟ್ಟು ಅಧಿಕಾರಿಗಳು ನಾಪತ್ತೆಯಾಗಿದ್ದಾರೆ. ಈಗ ದೇವರ ವಿಗ್ರಹ ಸಹ ಬೀದಿಯಲ್ಲಿದೆ. ಭರವಸೆ ಕೊಟ್ಟು ಮೋಸ ಮಾಡಿದ ಅಧಿಕಾರಿಗಳ ವಿರುದ್ಧ ಭಕ್ತರು ಆಕ್ರೋಶವನ್ನು ಹೊರಹಾಕಿದ್ದಾರೆ.

ಇದನ್ನೂ ಓದಿ: D.K. Shivakumar: ತಮಿಳುನಾಡಿನವರಿಗೆ ಹೃದಯ ಶ್ರೀಮಂತಿಕೆ ಬೇಕು ಎಂದು ಡಿ.ಕೆ. ಶಿವಕುಮಾರ್‌ ಹೇಳಿದ್ದೇಕೆ?

ಹೆದ್ದಾರಿ ಬಂದ್‌ ಮಾಡುವ ಎಚ್ಚರಿಕೆ

ಶೀಘ್ರವಾಗಿ ಗದ್ದೆ ರಂಗನಾಥನಿಗೆ ದೇಗುಲ ನಿರ್ಮಿಸಿ ಕೊಡದಿದ್ದರೆ ಹೆದ್ದಾರಿಯನ್ನೇ ಬಂದ್ ಮಾಡುವುದಾಗಿ ಭಕ್ತರು ಎಚ್ಚರಿಕೆ ನೀಡಿದ್ದಾರೆ. ಈ ಬಗ್ಗೆ ದೇಗುಲದ ಪುರೋಹಿತ ಮಾತನಾಡಿ, “ಗದ್ದೆ ರಂಗನಾಥನಿಗೆ ಭರವಸೆ ಕೊಟ್ಟು ನಿರ್ಲಕ್ಷ್ಯ ತೋರುತ್ತಿರುವ ಅಧಿಕಾರಿಗಳಿಗೆ ದೇವರೇ ಶಾಪ ತಟ್ಟಲಿದೆ” ಎಂದು ಆಕ್ರೋಶವನ್ನು ಹೊರಹಾಕಿದ್ದಾರೆ.

Exit mobile version