Site icon Vistara News

Temple issue | ಅಯೋಧ್ಯೆ ರಾಮ ಮಂದಿರದಂತೆ, ಶ್ರೀರಂಗಪಟ್ಟಣದಲ್ಲೂ ಹನುಮ ಮಂದಿರ ನಿರ್ಮಾಣ ಎಂದ ಬಿಜೆಪಿ ನಾಯಕ

ಜಾಮಿಯಾ ಮಸೀದಿ

ಮಂಡ್ಯ: ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿಯಲ್ಲಿದ್ದ ವಿವಾದಿತ ಕಟ್ಟಡದ ಜಾಗದಲ್ಲಿ ರಾಮ ಮಂದಿರ ನಿರ್ಮಾಣ ಮಾಡಿದಂತೆ ಶ್ರೀರಂಗ ಪಟ್ಟಣದ ಜಾಮಿಯ ಮಸೀದಿ (Temple issue) ಇರುವ ಜಾಗದಲ್ಲಿ ಆಂಜನೇಯ ಸ್ವಾಮಿ ದೇವಸ್ಥಾನವನ್ನು ನಿರ್ಮಾಣ ಮಾಡಲಿದ್ದೇವೆ ಎಂದು ಹಿಂದು ಸಂಘಟನೆ ಮುಖಂಡ ಹಾಗೂ ಬಿಜೆಪಿ ನಾಯಕ ಡಾ. ಇಂದ್ರೇಶ್‌ ಹೇಳಿದ್ದಾರೆ.

ಶ್ರೀರಂಗಪಟ್ಟಣದಲ್ಲಿ ನಾಳೆ (ಡಿಸೆಂಬರ್​ 4) ಹನುಮ ಮಾಲಾಧಾರಿಗಳ ಸಂಕೀರ್ತನಾ ಯಾತ್ರೆ ನಡೆಯಲಿದ್ದು, ಇದರ ಉದ್ದೇಶವೇ ಹನುಮ ಮಂದಿರ ನಿರ್ಮಾಣ ಮಾಡುವುದು ಎಂದು ಡಾ. ಇಂದ್ರೇಶ್‌ ಅವರು ಪಾಂಡವಪುರದಲ್ಲಿ ಹೇಳಿದರು.

ʻʻಜಾಮೀಯ ಮಸೀದಿ ಜಾಗದಲ್ಲಿ ಹನುಮ ಮಂದಿ ನಿರ್ಮಾಣಕ್ಕೆ ಹನುಮ ಮಾಲಾ ಧಾರಿಗಳು ಸಂಕಲ್ಪ ಮಾಡಿದ್ದೇವೆ. ನರಹಂತಕ ಟಿಪ್ಪು ಮೂಡಲ ಬಾಗಿಲು ಆಂಜನೇಯ ಸ್ವಾಮಿ ದೇವಸ್ಥಾನದ ಮೇಲೆ ಮಸೀದಿ ನಿರ್ಮಿಸಿದ್ದಾನೆ. ಹೇಗೆ ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣ ಮಾಡಿದ್ದೇವೋ ಅದೇ ರೀತಿ ಶ್ರೀರಂಗಪಟ್ಟಣದಲ್ಲೂ ಹನುಮ ಮಂದಿರ ನಿರ್ಮಾಣ ಮಾಡೇ ಮಾಡುತ್ತೇವೆ. ಡಿಸೆಂಬರ್‌ ೪ರಂದು ಒಂದುವರೆ ಲಕ್ಷ ಹನುಮ ಮಾಲಾಧಾರಿಗಳು ಸೇರಲಿದ್ದೇವೆ. ಹನುಮ ಮಂದಿರ ನಿರ್ಮಾಣದ ಸಂಕಲ್ಪದೊಂದಿಗೆ ದೊಡ್ಡ ಮಟ್ಟದಲ್ಲಿ ಹನುಮ ಮಾಲಾಧಾರಿಗಳು ಸೇರಲಿದ್ದೇವೆʼʼ ಎಂದು ಹೇಳಿದರು.

ʻʻಎಲ್ಲಾ ಹಿಂದುಗಳು ಜಾಗೃತರಾಗಿದ್ದಾರೆ. ಮುಚ್ಚಿ ಹಾಕಿದ್ದ ಇತಿಹಾಸ ಈಗ ಎಲ್ಲವೂ ಜನಗಳಿಗೆ ತಿಳಿಯುತ್ತಿದೆ. ಕಳೆದ ವರ್ಷಕ್ಕಿಂತ ಈ ಬಾರಿ ಹನುಮ ಮಾಲಾಧಾರಿಗಳು ಹೆಚ್ಚಾಗಿದ್ದಾರೆ. ಮುಂದಿನ ವರ್ಷದಷ್ಟರಲ್ಲಿ ಜಾಮಿಯಾ ಮಸೀದಿ ಜಾಗದಲ್ಲಿ ಹನುಮ ಮಂದಿರ ನಿರ್ಮಾಣ ಮಾಡಲಿದ್ದೇವೆʼʼ ಎಂದಿರುವ ಇಂದ್ರೇಶ್‌, ʻʻಸಣ್ಣ ಮಗು ಕೂಡ ಮಸೀದಿ ಅಲ್ಲಾ ಅದು ದೇವಸ್ಥಾನ ಎಂದು ಹೇಳುತ್ತದೆʼʼ ಎಂದರು.

ʻʻಮಸೀದಿ ಜಾಗದಲ್ಲಿ ಆಂಜನೇಯ ಸ್ವಾಮಿ ಮೂರ್ತಿ ಪ್ರತಿಸ್ಠಾಪನೆ ಆಗಲಿದೆ. ಆ ಒಳ್ಳೆ ದಿನ ಮುಂದೆ ಬಂದೇ ಬರುತ್ತದೆ..
ನಾವು ಹನುಮ ಮಾಲೆ ಹಾಕ್ತಿರೋದು, ನಾವು ಸಂಕರ್ತನೆ ಯಾತ್ರೆ ಮಾಡ್ತಿರುವ ಉದ್ದೇಶವೇ ಮೂಡಲ ಬಾಗಿಲು ಆಂಜನೇಯಸ್ವಾಮಿ ಮೂರ್ತಿ ಪುನರ್ ಪ್ರತಿಸ್ಠಾಪಿಸಲುʼʼ ಎಂದು ಇಂದ್ರೇಶ್‌ ಹೇಳಿದರು.

ಇದನ್ನೂ ಓದಿ | ಶ್ರೀರಂಗಪಟ್ಟಣದಲ್ಲಿ ಹನುಮ ಮಾಲಾಧಾರಿಗಳ ಸಂಕೀರ್ತನಾ ಯಾತ್ರೆಗೆ ಬಿಗಿ ಭದ್ರತೆ; ಜಾಮಿಯಾ ಮಸೀದಿ ಸುತ್ತ ಪೊಲೀಸ್​ ಕಾವಲು

Exit mobile version