Site icon Vistara News

Srirangapatna Mosque Issue | ಕೋರ್ಟ್‌ ಅಂಗಳದಲ್ಲಿ ಜಾಮಿಯಾ ಮಸೀದಿ; ಕೇಸ್ ಗೆಲ್ಲಿಸಿ ಕೊಡುವಂತೆ ಹರಕೆ ಕಟ್ಟಿದ ಹನುಮನ ಭಕ್ತರು

Srirangapatna Mosque Issue

ಮಂಡ್ಯ: ಶ್ರೀರಂಗಪಟ್ಟಣದಲ್ಲಿರುವ ಜಾಮಿಯಾ ಮಸೀದಿ (Srirangapatna mosque issue) ಮೂಲತಃ ಆಂಜನೇಯ ಸ್ವಾಮಿ ದೇವಸ್ಥಾನ. ಹೀಗಾಗಿ ಅದನ್ನು ಹಿಂದೂಗಳ ವಶಕ್ಕೆ ಒಪ್ಪಿಸಲು ಆದೇಶಿಸಬೇಕು ಎಂದು ಕೋರಿ ರಾಜ್ಯ ಹೈಕೋರ್ಟ್‌ನಲ್ಲಿ ಪಿಐಎಲ್‌ ದಾಖಲಿಸಲಾಗಿದೆ.

ಈ ಸಂಬಂಧ ಈಗ ಹನುಮನ ಭಕ್ತರು ಕೇಸ್ ಗೆಲ್ಲಿಸಿ ಕೊಡುವಂತೆ ಹರಕೆ ಹೊತ್ತು ಪೂಜೆ ಸಲ್ಲಿಸಲಿದ್ದಾರೆ. ಮಂಡ್ಯದಿಂದ ಕಲ್ಲಹಳ್ಳಿಯ ಆಂಜನೇಯಸ್ವಾಮಿ ದೇವಾಲಯದಿಂದ ಬೈಕ್‌ನಲ್ಲಿ ತೆರಳಿ ಶ್ರೀರಂಗಪಟ್ಟಣದ ಮೂಡಲ ಬಾಗೀಲ ಆಂಜನೇಯಸ್ವಾಮಿ ಮುಂದೆ ಪಿಐಎಲ್ ಅರ್ಜಿ ಇಟ್ಟು ಪೂಜೆ ಸಲ್ಲಿಸುವ ಮೂಲಕ ಹರಕೆ ಸಲ್ಲಿಸಲಿದ್ದಾರೆ.

ಮಸೀದಿ ಬಳಿ ಬಿಗಿ ಭದ್ರತೆ
ಹರಕೆ ಪೂಜೆಯಲ್ಲಿ 150ಕ್ಕೂ ಹೆಚ್ಚು ಭಕ್ತರು ಭಾಗಿಯಾಗಲಿದ್ದಾರೆ. ಬಜರಂಗ ಸೇನೆ ಕಾರ್ಯಕರ್ತರು ಭೇಟಿ ನೀಡುವ ಹಿನ್ನೆಲೆಯಲ್ಲಿ ಮಸೀದಿ ಬಳಿ ಪೊಲೀಸ್‌ ಬಿಗಿ ಭದ್ರತೆ ವಹಿಸಲಾಗಿದೆ. ಮಸೀದಿ ಸುತ್ತ ಬ್ಯಾರಿಕೇಡ್ ಹಾಕಲಾಗಿದ್ದು, ಸ್ಥಳದಲ್ಲಿ ನಾಲ್ಕು ಡಿಎಆರ್ ತುಕಡಿ ನಿಯೋಜನೆ ಮಾಡಲಾಗಿದೆ.

ಏನಿದು ಜಾಮಿಯಾ ಮಸೀದಿ ವಿವಾದ?
ಶ್ರೀರಂಗಪಟ್ಟಣದಲ್ಲಿರುವ ಜಾಮಿಯಾ ಮಸೀದಿ ಹಿಂದೆ ಮೂಡಲ ಬಾಗಿಲ ಆಂಜನೇಯ ದೇವಾಲಯವಾಗಿದ್ದು, ಹೀಗಾಗಿ ಅದನ್ನು ಹಿಂದುಗಳ ವಶಕ್ಕೆ ಒಪ್ಪಿಸಬೇಕು ಎಂದು ಆಗ್ರಹಿಸಿ ಕಳೆದ ಜೂನ್‌ ತಿಂಗಳಿನಲ್ಲಿ ಹಿಂದು ಪರ ಸಂಘಟನೆಗಳು ಬೃಹತ್‌ ಪ್ರತಿಭಟನೆ ನಡೆಸಿದ್ದವು. ಆದರೆ, ಆಗ ಸರಕಾರ ಸೂಕ್ತವಾಗಿ ಪ್ರತಿಸ್ಪಂದಿಸಿರಲಿಲ್ಲ. ಇದೀಗ ಕೋರ್ಟ್‌ ಕಟಕಟೆ ಏರುವ ಮೂಲಕ ಈ ವಿವಾದವನ್ನು ವಾರಾಣಸಿಯ ಜ್ಞಾನವಾಪಿ ವಿವಾದದ ಮಟ್ಟಕ್ಕೆ ಏರಿಸಲು ಪ್ರಯತ್ನ ನಡೆದಿದೆ.

ಮಸೀದಿಯು ಈ ಹಿಂದೆ ಹನುಮ ದೇವಾಲಯ ಆಗಿತ್ತು ಎಂಬುದಕ್ಕೆ ಸಾಕಷ್ಟು ಪುರಾವೆಗಳಿವೆ. ಮೈಸೂರು ಗೆಜೆಟ್ ನಲ್ಲೂ ಉಲ್ಲೇಖವಿದೆ. ಹಲವು ಬ್ರಿಟಿಷ್ ಬರಹಗಾರರು ಕೂಡಾ ಈ ಬಗ್ಗೆ ಬರೆದಿದ್ದಾರೆ ಎಂದು ಬಜರಂಗ ಸೇನೆ ಹೇಳಿದೆ. ʻʻಮಸೀದಿ ಎನ್ನಲಾಗುತ್ತಿರುವ ಜಾಗದಲ್ಲಿ ಹಿಂದೂ ದೇವಾಲಯದ ಕುರುಹುಗಳಿವೆ. ದೇವಾಲಯದ ನಿರ್ಮಾಣದ ಶೈಲಿಯಲ್ಲೇ ಮಸೀದಿ ಇದೆ. ಅಲ್ಲಿರುವ ಕಲ್ಯಾಣಿ ಸೇರಿದಂತೆ ಹಲವು ದಾಖಲೆಗಳ ಆಧಾರದ ಮೇಲೆ ಪಿಐಎಲ್ ಸಲ್ಲಿಸಲಾಗಿದೆʼʼ ಎಂದು ಅದು ಹೇಳಿದೆ.

ಇದನ್ನೂ ಓದಿ | Mangalore Blast | ಗಾಯಾಳು ಪ್ರಯಾಣಿಕನ ಬಳಿ ಇದ್ದ ಆಧಾರ್‌ ಕಾರ್ಡ್‌ ನಕಲಿ; ಅಸಲಿ ವ್ಯಕ್ತಿ ತುಮಕೂರಲ್ಲಿ ಪತ್ತೆ

Exit mobile version