ಮಂಡ್ಯ: ಬೆಂಗಳೂರು- ಮೈಸೂರು ದಶಪಥ ಹೆದ್ದಾರಿಯಲ್ಲಿ ಇಷ್ಟು ದಿನ ಸವಾರರು ಬಿಡದಿ ಬಳಿಯ ಟೋಲ್‌ನಲ್ಲಿ ಮಾತ್ರ ಹಣ ನೀಡಿ (Toll Collection) ಸಂಚರಿಸುತ್ತಿದ್ದರು. ಆದರೆ, ಇಂದಿನಿಂದ (ಜು.1) ಮಂಡ್ಯ ವ್ಯಾಪ್ತಿಯಲ್ಲೂ ಟೋಲ್ ಸಂಗ್ರಹ ಆರಂಭವಾಗಿದೆ. ಮಂಡ್ಯದ ಶ್ರೀರಂಗಪಟ್ಟಣ (Srirangapatna Toll) ತಾಲೂಕಿನ ಗಣಂಗೂರು ಟೋಲ್‌ನಲ್ಲೂ ಹಣ ಸಂಗ್ರಹ ಕಾರ್ಯ ಆರಂಭವಾಗಿದೆ. ಕೆಲವು ಕನ್ನಡಪರ ಸಂಘಟನೆಗಳ ಪ್ರತಿಭಟನೆ ಹಾಗೂ ಸವಾರರ ಹಲವು ಆಕ್ಷೇಪದ ನಡುವೆಯೂ ಟೋಲ್ ಸಂಗ್ರಹಣೆ ಯಾವುದೇ ಸಮಸ್ಯೆ ಇಲ್ಲದಂತೆ ಆರಂಭವಾಗಿದೆ.
ಶ್ರೀರಂಗಪಟ್ಟಣ ತಾಲೂಕಿನ ಗಣಂಗೂರು ಗ್ರಾಮದ ಟೋಲ್ ಪ್ಲಾಜಾದ ಬಳಿ ಇಂದಿನಿಂದ ಟೋಲ್ ಸಂಗ್ರಹ ಆರಂಭವಾಗಿದೆ. ಬಿಡದಿ ಬಳಿಯ ಟೋಲ್ ಆರಂಭವಾಗಿ ಹಲವು ತಿಂಗಳೇ ಕಳೆದಿದ್ದರೂ, ಮಂಡ್ಯ ವ್ಯಾಪ್ತಿಯಲ್ಲಿನ ಸರ್ವಿಸ್ ರಸ್ತೆಗಳು, ಅಲ್ಲಲ್ಲಿ ಅಂಡರ್‌ಪಾಸ್‌ಗಳು ನಿರ್ಮಾಣ ಆಗುವುದು ತಡವಾಗಿತ್ತು ಎಂಬ ಕಾರಣಕ್ಕೆ ಗಣಂಗೂರು ಟೋಲ್ ಪ್ಲಾಜಾದ ಬಳಿ ಹಣ ಸಂಗ್ರಹ ಕಾರ್ಯ ಆರಂಭವಾಗಿರಲಿಲ್ಲ.
ಆದರೆ ಹಲವು ಸಮಸ್ಯೆಗಳ ನಡುವೆಯೂ ಜು.1ರಂದು ಬೆಳಗ್ಗೆ 8 ಗಂಟೆಯಿಂದ ಟೋಲ್ ಸಂಗ್ರಹ ಕಾರ್ಯ ಆರಂಭ ಆಯಿತು. ಹಣ ಸಂಗ್ರಹಕ್ಕಾಗಿ ಟೋಲ್‌ನ ಸಿಬ್ಬಂದಿ ಮೂರ್ನಾಲ್ಕು ದಿನಗಳಿಂದಲೂ ಸಿದ್ಧತೆಯನ್ನು ಮಾಡಿಕೊಂಡಿದ್ದರು. ದಶಪಥ ಹೆದ್ದಾರಿಯಲ್ಲಿ ಹಣ ಸಂಗ್ರಹ ಮಾಡುತ್ತಿರುವ ಬಗೆಗೆ ಕೆಲವು ಕನ್ನಡಪರ ಸಂಘಟನೆಯ ಕಾರ್ಯಕರ್ತರು ಪ್ರತಿಭಟನೆ ನಡೆಸಿ ಹೆದ್ದಾರಿ ಪ್ರಾಧಿಕಾರದ ವಿರುದ್ಧ ಆಕ್ರೋಶ ಹೊರ ಹಾಕಿದರು.
ಚಡ್ಡಿ ಚಳುವಳಿ ನಡೆಸಿದ ಕಾರ್ಯಕರ್ತರು
ಮಂಡ್ಯ ರಕ್ಷಣಾ ವೇದಿಕೆಯ ಕಾರ್ಯಕರ್ತರು ಚಡ್ಡಿ ಚಳುವಳಿ ನಡೆಸುವ ಮೂಲಕ ಗಮನ ಸೆಳೆದರು. ಟೋಲ್ ಪ್ಲಾಜಾದಲ್ಲೇ ವಾಹನ ತಡೆದು ಪ್ರತಿಭಟಿಸಿದರು. ಈ ವೇಳೆ ಮಾತನಾಡಿದ ಮಂಡ್ಯ ರಕ್ಷಣಾ ವೇದಿಕೆ ಅಧ್ಯಕ್ಷ ಶಂಕರ್ ಬಾಬು, ಸರ್ವಿಸ್ ರಸ್ತೆಯನ್ನು ಸರಿ ಮಾಡಬೇಕು. ಟೋಲ್‌ನಲ್ಲಿ ಕೆಲಸ ನಿರ್ವಹಿಸಲು ಸ್ಥಳೀಯರಿಗೆ ಆದ್ಯತೆ ನೀಡಬೇಕೆಂದು ಒತ್ತಾಯಿಸಿದರು.
ಪ್ರತೀ ವಾಹನಕ್ಕೂ ಇಂತಿಷ್ಟು ದರ ಎಂದು ಬಲು ದುಬಾರಿ ಎನ್ನುವಷ್ಟೇ ಟೋಲ್ ದರವನ್ನು ನಿಗಧಿಪಡಿಸಲಾಗಿದೆಯಾದರೂ, ಇಲ್ಲಿ ಪ್ರಯಾಣಿಸುವ ಕೆಲವು ಪ್ರಯಾಣಿಕರು ಹಣ ದುಬಾರಿ ಆಯಿತು ಎಂದು ಆಕ್ಷೇಪ ವ್ಯಕ್ತಪಡಿಸಿದ್ದನ್ನು ಹೊರತು ಪಡಿಸಿದರೆ ಬಹುತೇಕರು ಸಿಬ್ಬಂದಿ ಕೇಳಿದಷ್ಟು ಹಣ ನೀಡಿ ಪ್ರಯಾಣ ಮುಂದುವರೆಸಿದರು.
ಫಾಸ್ಟ್ ಟ್ಯಾಗ್ ಕಿರಿಕ್
ಇದೇ ವೇಳೆ ಫಾಸ್ಟ್ ಟ್ಯಾಗ್ ಇಲ್ಲದ ವಾಹನ ಸವಾರರಿಗೆ ದುಪ್ಪಟ್ಟು ಹಣ ವಸೂಲಿಯನ್ನು ಮಾಡಲಾಯಿತು. ಶ್ರೀರಂಗಪಟ್ಟಣದಿಂದ ಮಂಡ್ಯಗೆ ತಮ್ಮ ಕಾರಿನಲ್ಲಿ ಬರುತ್ತಿದ್ದ ರೈತ ಸಂಘದ ಜಿಲ್ಲಾ ಕಾರ್ಯದರ್ಶಿ ಮಂಜೇಶ್ ಗೌಡ ಫಾಸ್ಟ್ ಟ್ಯಾಗ್ ಇಲ್ಲದಕ್ಕೆ ದಂಡದ ರೂಪದಲ್ಲಿ 300 ರೂಗಳನ್ನು ಕೇಳಿದರು. ಇಷ್ಟು ಹಣ ನೀಡಿ ನಾನು ಹೋಗುವುದಿಲ್ಲ ವಾಪಸ್ ಹೋಗುವುದಾಗಿ ಹೇಳಿದರು. ಈ ವೇಳೆ ಮಾತನಾಡಿದ ಮಂಜೇಶ್ ಗೌಡ ಇಲ್ಲಿ ಸ್ಥಳೀಯವಾಗಿ ಓಡಾಡುವ ನಮ್ಮಂಥವರಿಗೆ ಯಾವುದೇ ಅನುಕೂಲ ಇಲ್ಲ. ಇಷ್ಟೊಂದು ದುಬಾರಿ ಹಣ ನೀಡಿ ನಾವು ಓಡಾಡಲಾಗುತ್ತಾ ಎಂದು ಪ್ರಶ್ನಿಸಿದರು.
ಕೇಂದ್ರ ಸರ್ಕಾರದ ಜೊತೆಗೆ ಮಾಡಿಕೊಂಡಿರುವ ಕರಾರಿನ ಪ್ರಕಾರವೇ ಟೋಲ್ ಸಂಗ್ರಹ ಕೆಲಸ ಆರಂಭಮಾಡಲಾಗಿದೆ. ಈಗ ಇರುವ ಸಣ್ಣಪುಟ್ಟ ಸಮಸ್ಯೆಗಳನ್ನು ಬಗೆಹರಿಸಿ 15 ದಿನಗಳಲ್ಲಿ ಮೂಲಭೂತ ಸೌಲಭ್ಯ ಕಲ್ಪಿಸಲಾಗುವುದು ಎಂದು ಟೋಲ್‌ನ ಸಹ ಮಾಲೀಕರಾ ಆರ್.ಎಸ್.ಸಿಂಗ್ ಮಾತನಾಡಿದರು. ಒಟ್ಟಾರೆ, ಸ್ಥಳೀಯರ ಸಣ್ಣ-ಪುಟ್ಟ ಪ್ರತಿಭಟನೆಯ ನಡುವೆಯೂ ಗಣಂಗೂರು ಟೋಲ್ ಹಣ ಸಂಗ್ರಹ ಕೆಲಸ ಆರಂಭವಾಗಿದೆ.
ಇದನ್ನೂ ಓದಿ: NICE Road: ನೈಸ್ ರೋಡ್‌ನಲ್ಲಿ ಓಡಾಡ್ತೀರಾ?; ಜುಲೈ 1ರಿಂದ ದುಬಾರಿಯಾಗಲಿದೆ ಟೋಲ್ ದರ
ಟೋಲ್ ಸಂಗ್ರಹಕ್ಕೆ ಚಲುವರಾಯಸ್ವಾಮಿ ಕೆಂಡಾಮಂಡಲ
ಮಂಡ್ಯ ಉಸ್ತುವಾರಿ ಸಚಿವ ಚಲುವರಾಯಸ್ವಾಮಿ ಟೋಲ್ ಸಂಗ್ರಹಕ್ಕೆ ಕೆಂಡಾಮಂಡಲರಾದರು. ಟೋಲ್ ವಿರುದ್ಧದ ಹೋರಾಟಕ್ಕೆ ನನ್ನ ಬೆಂಬಲ ಇದೆ. ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರವು ಉದ್ದಟತನ ತೋರುತ್ತಿದೆ. ಇದನ್ನು ನಾವು ಸಹಿಸುವುದಿಲ್ಲ. ರಾಜ್ಯ ಸರ್ಕಾರಗಳು ಕಟ್ಟುವ ತೆರಿಗೆಯಿಂದಲೇ ಅಭಿವೃದ್ಧಿ ಕಾರ್ಯ ಮಾಡುತ್ತದೆ. ಹೀಗಿದ್ದರೂ ರಾಜ್ಯ ಸರ್ಕಾರವನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುತ್ತಿಲ್ಲ. ಕಾಮಗಾರಿ ಪೂರ್ಣವಾಗದೆ ಟೋಲ್ ಸಂಗ್ರಹ ಬೇಡ ಎಂದು ಹೇಳಿದ್ದೇವೆ. ಎಲ್ಲ ಸಮಸ್ಯೆ ಸರಿ ಮಾಡಿಕೊಂಡು ಟೋಲ್ ಸಂಗ್ರಹಿಸಿದರೆ ನಮ್ಮ ಅಡ್ಡಿ ಇಲ್ಲ.ಆದರೆ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು ಉದ್ದಟತನದಿಂದ ನಡೆದುಕೊಳ್ಳುತ್ತಿದ್ದಾರೆ. ಶೀರ್ಘದಲ್ಲೇ ಇದಕ್ಕೊಂದು ಪರಿಹಾರ ಕಂಡು ಹಿಡಿಯುತ್ತೇವೆ ಎಂದರು .
ರಾಜ್ಯದ ಇನ್ನಷ್ಟು ಸುದ್ದಿಗಾಗಿ ಈ ಲಿಂಕ್ ಕ್ಲಿಕ್ ಮಾಡಿ