Site icon Vistara News

ಶ್ರೀರಂಗಪಟ್ಟಣ ಚಲೋ | ಬನ್ನಿ ಮಂಟಪದ ಬಳಿ ಹೈಟೆನ್ಷನ್‌

shriranga pattana protest

ಮಂಡ್ಯ: ಜಾಮಿಯಾ ಮಸೀದಿ ವಿಡಿಯೋಗ್ರಫಿ ಸಮೀಕ್ಷೆ ಹಾಗೂ ಮದರಸಾ ತೆರವಿಗೆ ಒತ್ತಾಯಿಸಿ ವಿಶ್ವ ಹಿಂದೂ ಪರಿಷತ್‌ ಶನಿವಾರ ಕರೆ ನೀಡಿದ್ದ ಶ್ರೀರಂಗಪಟ್ಟಣ ಚಲೋ ಹೋರಾಟಕ್ಕೆ ಬ್ರೇಕ್‌ ಬಿದ್ದಿದ್ದು, ಕಾನೂನು ಗೌರವಿಸಿ ಪ್ರತಿಭಟನೆ ಕೈಬಿಟ್ಟಿರುವುದಾಗಿ ಹಿಂದೂ ಸಂಘಟನೆಗಳ ಮುಖಂಡರು ಘೋಷಿಸಿದ್ದಾರೆ. ಆದರೆ ಪಟ್ಟಣದ ಬನ್ನಿ ಮಂಟಪದ ಬಳಿ ಸೇರಿರುವ ನೂರಾರು ಕಾರ್ಯಕರ್ತರು ಪ್ರತಿಭಟನೆ ಅವಕಾಶ ನೀಡಬೇಕು ಎಂದು ಪೊಲೀಸರು ಹಾಗೂ ಜಿಲ್ಲಾಡಳಿತದ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ. ನೂರಾರು ಕಾರ್ಯಕರ್ತರು ಬನ್ನಿಮಂಟಪದ ಸ್ಥಳಕ್ಕೆ ಆಗಮಿಸುತ್ತಿದ್ದು, ಬಿಗುವಿನ ವಾತಾವರಣ ನಿರ್ಮಾಣ ಆಗುತ್ತಿದೆ.

ಹೋರಾಟಕ್ಕೆ ಶ್ರೀರಂಗಪಟ್ಟಣದ ಕುವೆಂಪು ವೃತ್ತದಲ್ಲಿ ಸೇರಲು ವಿಶ್ವ ಹಿಂದೂ ಪರಿಷತ್, ಬಜರಂಗದಳ ಹಾಗೂ ವಿವಿಧ ಹಿಂದೂ ಸಂಘಟನೆಗಳು ನಿರ್ಧರಿಸಿದ್ದವು. ಈ ನಿಟ್ಟಿನಲ್ಲಿ ಒಮ್ಮೆಲೆ ನಾಲ್ಕು ಕಡೆ ಜಾಥಾ ನಡೆಸಲು ಹಿಂದೂ ಕಾರ್ಯಕರ್ತರು ಪ್ಲಾನ್‌ ಮಾಡಿ, ಸ್ಥಳಕ್ಕೆ ಗುಂಪು ಗುಂಪಾಗಿ ಬರುವ ಬದಲು ಒಬ್ಬೊಬ್ಬರಾಗಿ ಬೈಕ್‌ಗಳಲ್ಲಿ ಬಂದಿದ್ದರು. ಈ ವೇಳೆ ಹನುಮಾನ್‌ ಚಾಲಿಸಾ ಪಠಿಸಲು ತೀರ್ಮಾನಿಸಿದ್ದ ಕಾರ್ಯಕರ್ತರು ಕೇಸರಿ ಶಾಲು, ಹನುಮ ಧ್ವಜಗಳೊಂದಿಗೆ ಸ್ಥಳದಲ್ಲಿ ಜಮಾಯಿಸಿದ್ದರು. ಆದರೆ, ಜಿಲ್ಲಾಡಳಿತ ಪ್ರತಿಭಟನೆ ತಡೆಯಲು 144 ಸೆಕ್ಷನ್‌ ಜಾರಿ ಮಾಡಿ ಹಾಗೂ ಪೊಲೀಸರು ಮಸೀದಿ ಪ್ರವೇಶಕ್ಕೆ ನಿರ್ಬಂಧ ವಿಧಿಸಿ ಬಿಗಿ ಬಂದೋಬಸ್ತ್‌ ಏರ್ಪಡಿಸಿದ್ದರಿಂದ ಕಾನೂನು ಗೌರವಿಸಿ ಪ್ರತಿಭಟನೆ ಕೈಬಿಡಲಾಗಿದ್ದು, ಬನ್ನಿಮಂಟಪದಲ್ಲಿ ಎಲ್ಲರೂ ಸೇರಿ ಹನುಮ ಭಜನೆ ಮಾಡುವುದಾಗಿ ವಿಶ್ವ ಹಿಂದೂ ಪರಿಷತ್‌ ಮುಖಂಡ ಸುನೀಲ್‌ ತಿಳಿಸಿದ್ದಾರೆ.

ಇದನ್ನೂ ಓದಿ | ಶ್ರೀರಂಗಪಟ್ಟಣದ ಜಾಮಿಯಾ ಮಸೀದಿಯಲ್ಲಿನ ಮದರಸಾ ಖಾಲಿ ಮಾಡಿಸಲು ಆಗ್ರಹ

ಪ್ರತಿಭಟನೆಯಲ್ಲಿ ಪ್ರಚೋದನಕಾರಿ ಹೇಳಿಕೆ ನೀಡುವ ಪ್ರತಿಭಟನಾಕಾರರನ್ನು ಬಂಧಿಸುವುದಾಗಿ ಎಡಿಜಿಪಿ ಅಲೋಕ್‌ ಕುಮಾರ್‌ ಎಚ್ಚರಿಕೆ ನೀಡಿದ್ದರು. ಇದಕ್ಕೂ ಮೊದಲು ಶುಕ್ರವಾರ ತಡರಾತ್ರಿ ಐಜಿಪಿ ಪ್ರವೀಣ್‌ ಮಧುಕರ್‌ ಪವರ್‌ ಭೇಟಿ ನೀಡಿ ಭದ್ರತೆ ಪರಿಶೀಲಿಸಿದ್ದರು. ಹೀಗಾಗಿ ಹಿಂದೂ ಕಾರ್ಯಕರ್ತರು ಶ್ರೀರಂಗಪಟ್ಟಣದ ಕಿರಂಗೂರು ಬಳಿಯ ಬನ್ನಿಮಂಟಪದಲ್ಲಿ ಹನಮಜಪ ಮಾಡುವ ಮೂಲಕ ತಮ್ಮ ಬೇಡಿಕೆಗಳ ಈಡೇರಿಕೆಗೆ ಶಾಂತಿಯುತವಾಗಿ ಪ್ರತಿಭಟನೆ ನಡೆಸಿದ್ದಾರೆ. ಇನ್ನು ಕಾನೂನು ಸುವ್ಯವಸ್ಥೆ ಹದಗೆಡಲು ಬಿಡುವುದಿಲ್ಲ ಎಂದು ಪೊಲೀಸರು ಶಪಥ ಮಾಡಿದ್ದು, ಬನ್ನಿ ಮಂಟಪ, ಪಶ್ಚಿಮ ವಾಹಿನಿ ಬಳಿ ಪೋಲಿಸ್‌ ಸರ್ಪಗಾವಲು ಏರ್ಪಡಿಸಲಾಗಿದೆ. ನಿಷೇಧಾಜ್ಞೆಯ ನಡುವೆ ಮಸೀದಿ ಪ್ರವೇಶಕ್ಕೆ ಯಾರಾದರೂ ಯತ್ನಿಸಿದರೆ ಬಂಧಿಸುವುದಾಗಿ ಪೊಲೀಸರು ಖಡಕ್‌ ಎಚ್ಚರಿಕೆ ನೀಡಿದ್ದಾರೆ.

ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಶ್ರೀರಾಮಸೇನೆ ಸಂಸ್ಥಾಪಕ ಪ್ರಮೋದ್‌ ಮುತಾಲಿಕ್‌, ಅತಿಕ್ರಮಣ ಮಾಡಿರುವವರನ್ನು ಮೊದಲು ತೆರವು ಮಾಡಬೇಕು. ರಾಜ್ಯ ಸರ್ಕಾರ ಹಿಂದೂಪರ ಕಾರ್ಯಕರ್ತರ ಹೋರಾಟ ಹತ್ತಿಕ್ಕುವ ಪ್ರಯತ್ನ ಮಾಡಬಾರದು ಎಂದು ಕಿಡಿಕಾರಿದ್ದಾರೆ.

ಜಿಲ್ಲಾಡಳಿತ, ಪೊಲೀಸರ ವಿರುದ್ಧ ಆಕ್ರೋಶ
ಈ ನಡುವೆ ಮಂಡ್ಯ, ಪಾಂಡವಪುರ ಹಾಗೂ ವಿವಿಧೆಡೆಯಿಂದ ಹಿಂದೂ ಕಾರ್ಯಕರ್ತರು ಶ್ರೀರಂಗಪಟ್ಟಣದತ್ತ ತೆರಳಿದ್ದಾರೆ. ಪಟ್ಟಣದ ಕಿರಂಗೂರು ಬನ್ನಿ ಮಂಟಪ ವೃತ್ತದಲ್ಲಿ ಏಕಾಏಕಿ ನೂರಾರು ಕಾರ್ಯಕರ್ತರು ಜಮಾಯಿಸಿ ಜೈ ಶ್ರೀರಾಮ್‌ ಘೋಷಣೆ ಮೊಳಗಿಸಿ, ಪ್ರತಿಭಟನೆ ನಿಯಂತ್ರಸಲು ಪ್ರಯತ್ನಿಸುತ್ತಿರುವ ಜಿಲ್ಲಾಡಳಿತ ಹಾಗೂ ಪೊಲೀಸರ ವಿರುದ್ಧ ಆಕ್ರೋಶ ವ್ಯಕ್ತಪಡಿಸದಿರು.

ಇದನ್ನೂ ಓದಿ | ಶ್ರೀರಂಗಪಟ್ಟಣ ಚಲೋ ತಡೆಗೆ ಪೊಲೀಸ್‌ ಸರ್ಪಗಾವಲು, ಪ್ರತಿಭಟನೆ ಮಾಡೇ ತೀರ್ತಾರಂತೆ ಹಿಂದೂ ಕಾರ್ಯಕರ್ತರು

Exit mobile version