ರಾಯಚೂರು: ರಾಜ್ಯ ವಿಧಾನಸಭೆ ಚುನಾವಣೆಗೆ (Karnataka election) ಸಂಬಂಧಿಸಿ ರಾಯಚೂರು ಜಿಲ್ಲೆಯ ಚುನಾವಣೆ ರಾಯಭಾರಿಯಾಗಿ ಖ್ಯಾತ ನಿರ್ದೇಶಕ ಎಸ್.ಎಸ್ ರಾಜಮೌಳಿ (SS Rajamouli) ಅವರನ್ನು ಆಯ್ಕೆ ಮಾಡಲಾಗಿದೆ.
ರಾಯಚೂರು ಜಿಲ್ಲೆಯ ಚುನಾವಣೆ ರಾಯಭಾರಿಯಾಗಿ ತೆಲುಗು ಸ್ಟಾರ್ ನಿರ್ದೇಶಕ ಎಸ್. ಎಸ್ ರಾಜಮೌಳಿ ಸೇರಿದಂತೆ ಹಲವು ಜಿಲ್ಲೆಗಳಿಗೆ ಪ್ರತಿನಿಧಿಗಳನ್ನು ಆಯ್ಕೆ ಮಾಡಿ ರಾಜ್ಯದ ಚುನಾವಣಾ ಆಯೋಗ ಆದೇಶಿಸಿದೆ. ಹೊಣೆಯರಿತ ಮತದಾನದ ಕುರಿತು ಮತದಾರರಲ್ಲಿ ಜಾಗೃತಿ ಮೂಡಿಸುವುದು ಈ ರಾಯಭಾರಿಗಳ ಆಯ್ಕೆಯ ಉದ್ದೇಶವಾಗಿದೆ.
ರಾಯಚೂರು, ಕೊಪ್ಪಳ, ಬಳ್ಳಾರಿ, ಬೆಂಗಳೂರು ನಗರ ಮತ್ತಿತರ ಜಿಲ್ಲೆಗಳಲ್ಲಿ ಹೀಗೆ ರಾಯಭಾರಿಗಳನ್ನು ನೇಮಿಸಲಾಗಿದೆ. ಈ ಜಿಲ್ಲೆಗಳಲ್ಲಿ ಮತದಾನ ಜಾಗೃತಿಯ ವಿವಿಧ ಕಾರ್ಯಕ್ರಮಗಳಲ್ಲಿ ರಾಜಮೌಳಿ ಸೇರಿದಂತೆ ಈ ರಾಯಭಾರಿಗಳು ಭಾಗಿಯಾಗಲಿದ್ದಾರೆ. 10 ಜಿಲ್ಲೆಗಳ ಮನವಿ ಪುರಸ್ಕರಿಸಿದ ಚುನಾವಣಾ ಆಯೋಗ ವಿವಿಧ ಕ್ಷೇತ್ರಗಳ ಸಾಧಕರನ್ನು ಚುನಾವಣಾ ರಾಯಭಾರಿಗಳಾಗಿ ನೇಮಿಸಿದೆ. ಆಂಧ್ರಪ್ರದೇಶ- ತೆಲಂಗಾಣ ಗಡಿಯಲ್ಲಿರುವ ರಾಯಚೂರು ಜಿಲ್ಲೆಯಲ್ಲಿ ಸ್ಥಳೀಯರ ಫ್ಯಾನ್ ಕ್ರೇಜ್ ಹೆಚ್ಚಿರುವ ಹಿನ್ನೆಲೆಯಲ್ಲಿ ಹಾಗೂ ಜಿಲ್ಲಾಡಳಿತ ಈ ಕುರಿತು ಮನವಿ ಸಲ್ಲಿಸಿದ್ದ ಹಿನ್ನೆಲೆಯಲ್ಲಿ ರಾಜಮೌಳಿ ಆಯ್ಕೆ ಮಾಡಲಾಗಿದೆ.
ಮಂಡ್ಯ ಜಿಲ್ಲೆಗೆ ಕನ್ನಡ ನಟ ನೀನಾಸಂ ಸತೀಶ್, ಕೊಪ್ಪಳ ಜಿಲ್ಲೆಗೆ ಗಂಗಾವತಿ ಪ್ರಾಣೇಶ್ ಅವರನ್ನು ಆಯ್ಕೆ ಮಾಡಲಾಗಿದೆ. ವಿಜಯಪುರಕ್ಕೆ ಸೈಕ್ಲಿಂಗ್ ಚಾಂಪಿಯನ್ ಸಹನಾ ಕೂಡಿಗನೂರು, ಬಳ್ಳಾರಿಗೆ ಗೊಂಬೆಯಾಟ ಕಲಾವಿದ ಬೆಳಗಲ್ಲು ವೀರಣ್ಣ, ಕೊಡಗಿಗೆ ಸಾಮಾಜಿಕ ಕಾರ್ಯಕರ್ತ ಕೆ.ಯು ಮುತ್ತಪ್ಪ, ಬೆಂಗಳೂರಿನ ಮೂರು ವಿಭಾಗಗಳಿಗೆ ಬ್ಯಾಡ್ಮಿಂಟನ್ ಚಾಂಪಿಯನ್ ಅನೂಪ್ ಶ್ರೀಧರ್, ಕಬಡ್ಡಿ ಆಟಗಾರ್ತಿ ತೇಜಸ್ವಿನಿ ಬಾಯಿ, ಪ್ಯಾರಾ ಸ್ವಿಮ್ಮರ್ ಶರತ್ ಗಾಯಕವಾಡ್, ಜಾನಪದ ಗಾಯಕ ಮೋಹನ್ ಕುಮಾರ್ ಎನ್ ಅವರನ್ನು ಆಯ್ಕೆ ಮಾಡಲಾಗಿದೆ.
ಇದನ್ನೂ ಓದಿ: SS Rajamouli | ನಾನು ದುಡ್ಡಿಗಾಗಿ ಸಿನಿಮಾ ಮಾಡುವುದು! ವಿಮರ್ಶಕರ ಮೆಚ್ಚುಗೆಗಾಗಲ್ಲ ಎಂದ RRR ನಿರ್ದೇಶಕ ರಾಜಮೌಳಿ