ಬೆಂಗಳೂರು: ಬೆಂಗಳೂರಿನಲ್ಲಿ ಅನಧಿಕೃತ ಶಾಲೆಗಳ ಹಾವಳಿ ಮಿತಿಮೀರಿದೆ. ಮಕ್ಕಳ ಭವಿಷ್ಯದ ಜತೆಗೆ ಚೆಲ್ಲಾಟ ಆಡುತ್ತಿರುವ ಶಾಲೆಗಳ ಆಡಳಿತ ಮಂಡಳಿಯವರು ಅನುಮತಿ ಪಡೆದ ತರಗತಿಯಿಂದ ಮುಂದಿನ ತರಗತಿಗಳನ್ನು ಮಾಡಿ ಮಕ್ಕಳ ದಿಕ್ಕು ತಪ್ಪಿಸುತ್ತಿರುವ ಪ್ರಕರಣಗಳು ಬೆಳಕಿಗೆ ಬರುತ್ತಿವೆ. ಈಗ ಬೆಂಗಳೂರಿನ ಕ್ರೈಸ್ಟ್ ಕೃಪಾನಿಧಿ ಶಾಲೆ, ಸೆಂಟ್ ಮೇರಿಸ್ ಪಬ್ಲಿಕ್ ಶಾಲೆಯಲ್ಲಿ ಅನಧಿಕೃತವಾಗಿ 10ನೇ ತರಗತಿ ಪಾಠ ಮಾಡಿ, ಬಳಿಕ ಹಾಲ್ ಕೊಡದೇ ಯಾಮಾರಿಸಿದ್ದರು. ಈ ವಿಷಯ ತಿಳಿದ ವಿಸ್ತಾರ ನ್ಯೂಸ್ ವರದಿ ಮಾಡುತ್ತಿದ್ದಂತೆ ಬಿಇಒ ಮಧ್ಯಪ್ರವೇಶ ಮಾಡಿ ವಂಚಿತ ಮಕ್ಕಳಿಗೆ ಪರೀಕ್ಷೆ ಬರೆಯಲು ಅವಕಾಶ ಕಲ್ಪಿಸಿ ನ್ಯಾಯ ದೊರಕಿಸಿ ಕೊಡುವ ಕೆಲಸವನ್ನು ಮಾಡಿದ್ದಾರೆ.
ದೇವಸ್ಥಾನದಲ್ಲಿ ಪೂಜೆ ಮಾಡಿಸಿ ಕೊಡುವುದಾಗಿ ಹೇಳಿ ವಂಚನೆ
ಎಸ್‌ಎಸ್‌ಎಲ್‌ಸಿ (SSLC Exam 2023) ವಿದ್ಯಾರ್ಥಿಗಳು ಹಾಲ್ ಟಿಕೆಟ್ (Hall Ticket) ಕೇಳಿದರೆ ರಾಘವೇಂದ್ರ ದೇವಸ್ಥಾನದಲ್ಲಿ ಪೂಜೆ ಮಾಡಿಸಿ ಕೊಡುವುದಾಗಿ ಹೇಳಿ ಖಾಸಗಿ ಶಾಲೆಯೊಂದು ವಂಚಿಸಿರುವ ಘಟನೆ ಬೆಂಗಳೂರಲ್ಲಿ ನಡೆದಿದೆ. ರಾಜ್ಯದಲ್ಲಿ ಶುಕ್ರವಾರದಿಂದ (ಮಾ.31) ಎಸ್‌ಎಸ್‌ಎಲ್‌ಸಿ ಪರೀಕ್ಷೆ ಶುರುವಾಗಿದ್ದು, ಮೊದಲ ದಿನವೇ ವಿದ್ಯಾರ್ಥಿಗಳು ಹಾಲ್ ಟಿಕೆಟ್‌ಗಾಗಿ ಪರದಾಡಬೇಕಾಯಿತು. ಕ್ರೈಸ್ಟ್ ಕೃಪಾನಿಧಿ ಶಾಲೆಯಲ್ಲಿ ವಿದ್ಯಾರ್ಥಿಗಳು ಹಾಲ್ ಟಿಕೆಟ್ ಕೇಳಿದ್ದರೆ ದೇವಸ್ಥಾನದಲ್ಲಿ ಪೂಜೆ ಮಾಡಿಸಿ ಕೊಡುವುದಾಗಿ ಹೇಳಿ ವಂಚಿಸಿದ್ದಾರೆ. ಶಾಲೆಯ ವಂಚನೆಯಿಂದ ವಿದ್ಯಾರ್ಥಿಗಳು ಕಂಗಾಲಾಗಿದ್ದು ಆಡಳಿತ ಮಂಡಳಿಯ ವಿರುದ್ಧ ಪೋಷಕರು ಆಕ್ರೋಶ ಹೊರಹಾಕಿದ್ದಾರೆ.
ಮತ್ತೊಂದು ಕಡೆ ಅನಧಿಕೃತ ಖಾಸಗಿ ಶಾಲೆಯೊಂದರ ಯಡವಟ್ಟಿಗೆ ವಿದ್ಯಾರ್ಥಿಗಳು ಅತಂತ್ರ ಪರಿಸ್ಥಿತಿಗೆ ಸಿಲುಕುವಂತಾಯಿತು. ಲಗ್ಗೆರೆಯಲ್ಲಿರುವ ಸೇಂಟ್ ಮೇರಿಸ್ ಪಬ್ಲಿಕ್ ಶಾಲೆಯ ವಿದ್ಯಾರ್ಥಿಗಳು ಎಕ್ಸಾಂ ಹಾಲ್ ಟಿಕೆಟ್ ಕೇಳಿದ್ದರೆ ಸಪ್ಲಿಮೆಂಟರಿಯಲ್ಲಿ ಬರೆಸುವುದಾಗಿ ಆಡಳಿತ ಮಂಡಳಿ ಹೇಳುತ್ತಿತ್ತು. ಈ ಶಾಲೆಯಲ್ಲಿ ಓದುತ್ತಿರುವ ನಾಲ್ಕು ಎಸ್ಎಸ್ಎಲ್‌ಸಿ ಮಕ್ಕಳಿಗೆ ಹಾಲ್ ಟಿಕೆಟ್ ಸಿಗದೆ ಪರೀಕ್ಷೆಗೆ ಕೂರಲು ಸಾಧ್ಯವಾಗದೇ ಕಂಗಾಲಾಗಿದ್ದರು.
ಕೇವಲ 5 ಕೊಠಡಿಗಳನ್ನು ಹೊಂದಿರುವ ಸೇಂಟ್ ಮೇರಿಸ್ ಶಾಲೆಯಲ್ಲಿ ನರ್ಸರಿ, ಎಲ್‌ಕೆಜಿ, ಯುಕೆಜಿ ಸೇರಿ 1 ರಿಂದ 10ನೇ ತರಗತಿವರೆಗೂ ಬೋಧನೆ ಮಾಡುತ್ತಿದೆ. ಆದರೆ ಈ ಶಾಲೆಯಲ್ಲಿ 1-8ನೇ ತರಗತಿಗೆ ಮಾತ್ರ ಶಾಲೆ ನಡೆಸಲು ಅವಕಾಶ ಇದ್ದು, 9 ಮತ್ತು 10ನೇ ತರಗತಿಯನ್ನು ಅನಧಿಕೃತವಾಗಿ ನಡೆಸಲಾಗುತ್ತಿದೆ.
ಈ ಬಗ್ಗೆ ಗೊತ್ತಿರದ ವಿದ್ಯಾರ್ಥಿಗಳಿಗೆ ಪರೀಕ್ಷೆ ದಿನ ಶಾಕ್ ಆಗಿದೆ. ಇದರಿಂದ ಆತಂಕಗೊಂಡಿದ್ದ ವಿದ್ಯಾರ್ಥಿನಿ ನಂದಿನಿ ಪ್ರತಿಕ್ರಿಯೆ ನೀಡಿದ್ದು, ನಾನು ಎಕ್ಸಾಂಗೆ ಎಲ್ಲ ರೀತಿಯ ಸಿದ್ಧತೆಯನ್ನು ಮಾಡಿಕೊಂಡಿದ್ದೇನೆ. ಹೇಗಾದರೂ ಮಾಡಿ ನನಗೆ ಪರೀಕ್ಷೆ ಬರೆಯಲು ಅವಕಾಶ ಮಾಡಿಕೊಡಿ ಎಂದು ಅಳಲು ತೋಡಿಕೊಂಡಿದ್ದಾಳೆ. ಕೊನೇ ಕ್ಷಣದಲ್ಲಿ ಹಾಲ್ ಟಿಕೆಟ್ ಇಲ್ಲ, ಸಪ್ಲಿಮೆಂಟರಿ ಎಕ್ಸಾಂ ಬರಿರಿ ಎನ್ನುತ್ತಿದ್ದಾರೆ ಎಂದು ಕಣ್ಣೀರು ಹಾಕಿದ್ದಾಳೆ.
ಎರಡು ಶಾಲೆಗಳ 8 ವಿದ್ಯಾರ್ಥಿಗಳಿಗೆ ಹಾಲ್ ಟಿಕೆಟ್ ನೀಡದೆ ನಿರ್ಲಕ್ಷ್ಯವಹಿಸಿದ್ದು, ವಿದ್ಯಾರ್ಥಿಗಳ ಜೀವನದಲ್ಲಿ ಚೆಲ್ಲಾಟವಾಡುತ್ತಿರುವ ಖಾಸಗಿ ಶಾಲೆಯ ವಿರುದ್ಧ ಪೋಷಕರು ಕಿಡಿಕಾರಿದ್ದಾರೆ.
ವಿಸ್ತಾರ ನ್ಯೂಸ್ ಇಂಪ್ಯಾಕ್ಟ್; ಪರೀಕ್ಷೆ ಬರೆಯಲು ಅವಕಾಶ ಕೊಟ್ಟ ಬಿಇಒ ರಮೇಶ್
ಎರಡು ಶಾಲೆಗಳ ವಂಚನೆಯನ್ನು ವಿಸ್ತಾರ್ ನ್ಯೂಸ್ ಬಿತ್ತರಿಸುತ್ತಿದ್ದಂತೆ ವಿಷಯ ತಿಳಿದ ಶಿಕ್ಷಣ ಇಲಾಖೆಯ ಬಿಇಒ ರಮೇಶ್, ಪರೀಕ್ಷೆಯಿಂದ ವಂಚನೆಗೊಳಗಾದ ಎರಡೂ ಶಾಲೆಗಳ ಎಂಟು ವಿದ್ಯಾರ್ಥಿಗಳಿಗೆ ಎಕ್ಸಾಂ ಬರೆಸುವುದಾಗಿ ಭರವಸೆ ನೀಡಿದರು.
ಇದನ್ನೂ ಓದಿ: SSLC Exam 2023: ಇಂದಿನಿಂದ SSLC ಎಕ್ಸಾಂ; ಪರೀಕ್ಷೆ ಬರೆಯಲಿರುವ 8.42 ಲಕ್ಷ ವಿದ್ಯಾರ್ಥಿಗಳು
ಲಗ್ಗರೆಯ ಅನಿಕೇತನ ಶಾಲೆಯಲ್ಲಿ 8 ಮಕ್ಕಳಿಗೆ ಹಾಲ್ ಟಿಕೆಟ್ ನೀಡಿ ಪರೀಕ್ಷೆ ಬರೆಯಲು ವ್ಯವಸ್ಥೆ ಮಾಡಿದರು. ಕೈಗೆ ಹಾಲ್ ಟಿಕೆಟ್ ಸಿಗುತ್ತಿದ್ದಂತೆ ವಿದ್ಯಾರ್ಥಿಗಳು ನೆಮ್ಮದಿಯ ನಿಟ್ಟುಸಿರು ಬಿಟ್ಟು ಕಣ್ಣೀರು ಹಾಕುತ್ತಲೇ ಪರೀಕ್ಷಾ ಕೇಂದ್ರಕ್ಕೆ ತೆರಳಿದ್ದರು.
ವಿಸ್ತಾರ ನ್ಯೂಸ್‌ಗೆ ಧನ್ಯವಾದ ತಿಳಿಸಿದ ಪೋಷಕರು
ನೀವೇ ನಮಗೆ ನ್ಯಾಯ ಕೊಡಿಸಿ, ನಮ್ಮ ಮಗಳು ಪರೀಕ್ಷೆ ಬರೆಯುವಂತೆ ಮಾಡಿದ್ದು, ಕೇವಲ ನಮ್ಮ ಮಗಳು ಮಾತ್ರವಲ್ಲ, ಇನ್ನುಳಿದ ಏಳು ಜನ ವಿದ್ಯಾರ್ಥಿಗಳು ಪರೀಕ್ಷೆ ಬರೆಯುವಂತಾಯ್ತು ಎಂದು ವಿಸ್ತಾರ ನ್ಯೂಸ್‌ಗೆ ಹಾಲ್ ಟಿಕೆಟ್ ವಂಚಿತ ವಿದ್ಯಾರ್ಥಿನಿ ನಂದಿನಿ ತಂದೆ-ತಾಯಿ ಧನ್ಯವಾದ ಹೇಳಿದರು.