ಬೆಂಗಳೂರು: ರಾಜ್ಯ ಸರ್ಕಾರ ಶಿಕ್ಷಣ ಕ್ಷೇತ್ರದಲ್ಲಿ (Education Sector) ಆಮೂಲಾಗ್ರ ಬದಲಾವಣೆ ತರುವತ್ತ ಹೆಜ್ಜೆಯನ್ನಿಡುತ್ತಿದೆ. ಇದಲ್ಲದೆ, ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಹಲವು ಕ್ರಮಗಳನ್ನು ಕೈಗೊಳ್ಳಲು ಮುಂದಾಗಿದೆ. ಇದರ ಭಾಗವಾಗಿ ಎಸ್‌ಎಸ್‌ಎಲ್‌ಸಿ (SSLC) ಹಾಗೂ ಪಿಯುಸಿ (PUC) ವಿದ್ಯಾರ್ಥಿಗಳಿಗೆ ಗುಡ್‌ನ್ಯೂಸ್ ಕೊಡಲಾಗಿದೆ. 2023-24ನೇ ಶೈಕ್ಷಣಿಕ ಸಾಲಿನಿಂದ ಎಸ್‌ಎಸ್‌ಎಲ್‌ಸಿ, ದ್ವಿತೀಯ ಪಿಯುಸಿ ಪರೀಕ್ಷಾ (SSLC PUC Exam) ವ್ಯವಸ್ಥೆಯಲ್ಲಿ ಬದಲಾವಣೆ ತರಲಾಗಿದ್ದು, ಒಂದೇ ವರ್ಷಕ್ಕೆ ಮೂರು ಪರೀಕ್ಷೆಯನ್ನು ಆಯೋಜನೆ ಮಾಡಿ ಆದೇಶಿಸಲಾಗಿದೆ. ಈ ಮೂಲಕ ಪರೀಕ್ಷೆಯಲ್ಲಿ ಅನುತ್ತೀರ್ಣ ಆದವರಿಗೆ ಮಾನಸಿಕ ಸ್ಥೈರ್ಯ ತುಂಬುವ ಕೆಲಸವನ್ನು ರಾಜ್ಯ ಶಿಕ್ಷಣ ಇಲಾಖೆ ಮಾಡಿದ್ದು, ಪ್ರಮುಖ ಪರೀಕ್ಷೆಯ ನಂತರ ಎರಡು ಪೂರಕ ಪರೀಕ್ಷೆಯನ್ನು ನಡೆಸಲು ತೀರ್ಮಾನಿಸಿದೆ. ಶಿಕ್ಷಣ ಸಚಿವ ಮಧು ಬಂಗಾರಪ್ಪ (Education Minister Madhu Bangarappa) ಅವರು ಶಿಕ್ಷಕರ ದಿನದಂದೇ ಇಂಥದ್ದೊಂದು ಸಿಹಿ ಸುದ್ದಿಯನ್ನು ನೀಡಿದ್ದಾರೆ.
ಈಗಿನ ಹೊಸ ನಿಯಮದಂತೆ ಪೂರಕ ಪರೀಕ್ಷೆ ಎಂಬ ಪದ್ಧತಿಯನ್ನು ತೆಗೆದಿದ್ದು, ಪರೀಕ್ಷೆ 1, ಪರೀಕ್ಷೆ 2, ಪರೀಕ್ಷೆ 3 ಎಂದು ಮಾಡಲಾಗಿದೆ. ಅದರನ್ವಯ ಪರೀಕ್ಷೆಗಳನ್ನು ನಡೆಸಲಾಗುತ್ತದೆ.
ದ್ವಿತೀಯ ಪಿಯುಸಿ ಪರೀಕ್ಷಾ ವೇಳಾಪಟ್ಟಿ (II PUC Exam Schedule) ಹೀಗಿದೆ
ಪರೀಕ್ಷೆ 1- ಮಾರ್ಚ್ 1ರಿಂದ ಮಾರ್ಚ್ 25ರವರೆಗೆ ನಡೆಯಲಿದೆ
ಪರೀಕ್ಷೆ 2 – ಮೇ 15ರಿಂದ ಜೂನ್ 5ರವರೆಗೆ ನಡೆಯಲಿದೆ
ಪರೀಕ್ಷೆ 3 – ಜುಲೈ 12ರಿಂದ ಜುಲೈ 30ರವರೆಗೆ ನಡೆಯಲಿದೆ
ಎಸ್‌ಎಸ್‌ಎಲ್‌ಸಿ ಪರೀಕ್ಷೆಯ ವೇಳಾಪಟ್ಟಿ (SSLC Exam Schedule) ಹೀಗಿದೆ
ಪರೀಕ್ಷೆ 1- ಮಾರ್ಚ್ 30ರಿಂದ ಏಪ್ರಿಲ್ 15ರವರೆಗೆ ನಡೆಸಲು ನಿರ್ಧಾರ
ಪರೀಕ್ಷೆ 2 – ಜೂನ್ 12ರಿಂದ ಜೂನ್ 19ರವರೆಗೆ ನಡೆಸಲು ನಿರ್ಧಾರ
ಪರೀಕ್ಷೆ 3 – ಜುಲೈ 29ರಿಂದ ಆಗಸ್ಟ್ 5ರವರೆಗೆ ನಡೆಸಲು ತೀರ್ಮಾನ
ಇದನ್ನೂ ಓದಿ: LoK Sabha Election 2024 : ಕಾಂಗ್ರೆಸ್ ನಡೆ ಪಂಚಾಯಿತಿಗಳ ಕಡೆ; ಪಾದಯಾತ್ರೆ ʼಗ್ಯಾರಂಟಿʼ!
ಫೇಲ್ ಆದರೂ ಮುಂದಿನ ತರಗತಿಗಳಿಗೆ ಪ್ರವೇಶ!
ಮಂಗಳವಾರ ವಿಧಾನಸಸೌಧದಲ್ಲಿ ಏರ್ಪಡಿಸಲಾಗಿದ್ದ ಶಿಕ್ಷಕರ ದಿನಾಚರಣೆ (Teachers Day) ಕಾರ್ಯಕ್ರಮದಲ್ಲಿ ಮಾತನಾಡಿದ ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಸಚಿವ ಮಧು ಬಂಗಾರಪ್ಪ , ಈ ವಿಷಯವನ್ನು ತಿಳಿಸಿದರು. ಅಲ್ಲದೆ, ಒಂದು ವೇಳೆ ವಿದ್ಯಾರ್ಥಿಗಳು ಎಸ್‌ಎಸ್‌ಎಲ್‌ಸಿ ಹಾಗೂ ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಯಲ್ಲಿ ಅನುತ್ತೀರ್ಣರಾದರೂ ಮುಂದಿನ ತರಗತಿಗಳಿಗೆ ಪ್ರವೇಶಿಸುವ ಅವಕಾಶವನ್ನು ನೀಡಲಾಗುತ್ತಿದೆ. ಆದರೆ, ಅವರು ಉಳಿದ ಎರಡು ಪೂರಕ ಪರೀಕ್ಷೆಗಳಲ್ಲಿ ಉತ್ತೀರ್ಣರಾಗಬೇಕು. ಈ ಮೂಲಕ ಮುಂದಿನ ಶೈಕ್ಷಣಿಕ ಭವಿಷ್ಯಕ್ಕೆ ತೊಂದರೆಯಾಗದಂತೆ ಶಿಕ್ಷಣ ಇಲಾಖೆ ಈ ಕ್ರಮವನ್ನು ತೆಗೆದುಕೊಂಡಿದೆ ಎಂದು ತಿಳಿಸಿದರು.
ಇನ್ನು ಇದರಲ್ಲಿ ಕೆಲವು ಮಾನದಂಡಗಳನ್ನು ಅನುಸರಿಸಲಾಗಿದೆ. ಒಟ್ಟು ಅಂಕಗಳ ಪೈಕಿ ಕನಿಷ್ಠ ಅಂಕಗಳನ್ನು ತೇರ್ಗಡೆಗೆ ಪರಿಗಣಿಸಲಾಗುವುದು. ಫೇಲ್ ಅಥವಾ ಕಡಿಮೆ ಅಂಕ ಬಂದವರು 3 ಬಾರಿ ಪರೀಕ್ಷೆ ಬರೆಯಬಹುದು. ಈ ಮೂಲಕ ಕಲಿಕಾ ಗುಣಮಟ್ಟ ಹಾಗೂ ಮಕ್ಕಳ ಆತ್ಮವಿಶ್ವಾಸ ಹೆಚ್ಚಿಸಲು ಸರ್ಕಾರ ಕ್ರಮ ಕೈಗೊಂಡಿದೆ ಎಂದು ಮಧು ಬಂಗಾರಪ್ಪ ತಿಳಿಸಿದರು.
32.44 ಲಕ್ಷ ಮಕ್ಕಳ ಶೈಕ್ಷಣಿಕ ಪ್ರಗತಿಗೆ ಶಿಕ್ಷಣ ಇಲಾಖೆ (Department of Education) ಕ್ರಮ ವಹಿಸಿದ್ದು, ಕಲಿಕಾ ಬಲವರ್ಧನೆ ಕಾರ್ಯಕ್ರಮವನ್ನು ನಡೆಸಲಾಗುವುದು ಎಂದು ಸಚಿವ ಮಧು ಬಂಗಾರಪ್ಪ ಹೇಳಿದರು.
ಈವರೆಗೆ ವಾರಕ್ಕೆ ಒಂದು ದಿನ ಮಾತ್ರವೇ ಮೊಟ್ಟೆಯನ್ನು ನೀಡಲಾಗುತ್ತಿತ್ತು. ಈಗ ವಾರಕ್ಕೆ ಎರಡು ದಿನ ಮೊಟ್ಟೆ ನೀಡಲು ತೀರ್ಮಾನ ಮಾಡಿದ್ದೇವೆ. ಸುಮಾರು 58 ಲಕ್ಷ ಮಕ್ಕಳಿಗೆ ಪೌಷ್ಟಿಕ ಆಹಾರ ಸಿಕ್ಕಂತೆ ಆಗುತ್ತದೆ. ಈ ಯೋಜನೆಗೆ ಅಂದಾಜು 280 ಕೋಟಿ ರೂಪಾಯಿ ವೆಚ್ಚ ಆಗಲಿದೆ. 10ನೇ ತರಗತಿವರೆಗಿನ ಮಕ್ಕಳಿಗೆ ಮೊಟ್ಟೆ ವಿತರಣೆ ಮಾಡಲಾಗುವುದು ಎಂದು ಮಧು ಬಂಗಾರಪ್ಪ ಮಾಹಿತಿ ನೀಡಿದರು.
ಶಿಕ್ಷಕರ ಕೊರತೆ ನೀಗಿಸಿದ ಸಿಎಂ ಸಿದ್ದರಾಮಯ್ಯ
ರಾಜ್ಯದಲ್ಲಿ ಶಿಕ್ಷಕರ ಕೊರತೆ ಸಮಸ್ಯೆ ಇತ್ತು. ಇದನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ (CM Siddaramaiah) ಅವರ ಗಮನಕ್ಕೆ ತರಲಾಯಿತು. ಕೂಡಲೇ ಅವರು ಅತಿಥಿ ಉಪನ್ಯಾಸಕರ ನೇಮಕಕ್ಕೆ ಆದೇಶವನ್ನು ನೀಡಿದರು. 10 ಸಾವಿರ ಅತಿಥಿ ಉಪನ್ಯಾಸಕರನ್ನು 2 ದಿನಗಳಲ್ಲೇ ನೇಮಕ ಮಾಡಿಕೊಳ್ಳುವಂತೆ ಸಿಎಂ ಆದೇಶ ಮಾಡಿದ್ದಾರೆ ಎಂದು ಮಧು ಬಂಗಾರಪ್ಪ ಸಂತಸ ಹಂಚಿಕೊಂಡರು.
ಇದನ್ನೂ ಓದಿ: Lok Sabha Election 2024 : ಲೋಕಸಭಾ ಟಿಕೆಟ್‌ಗೆ ಪ್ರಬಲ ಸಮುದಾಯಗಳ ಪಟ್ಟು; ಕಾಂಗ್ರೆಸ್‌ಗೆ ಇಕ್ಕಟ್ಟು!
ಶಿಕ್ಷಕರ ವರ್ಗಾವಣೆ ವಿಚಾರದಲ್ಲೂ ಸಾಕಷ್ಟು ಗೊಂದಲ ಇತ್ತು. 32 ಸಾವಿರ ಶಿಕ್ಷಕರು ಸ್ವಂತ ಇಚ್ಛೆಯಿಂದ ವರ್ಗಾವಣೆ ಪಡೆದುಕೊಂಡಿದ್ದಾರೆ. ನಮ್ಮ ಸರ್ಕಾರ ಬಂದ ಮೇಲೆ 10 ಸಾವಿರ ಅತಿಥಿ ಶಿಕ್ಷಕರನ್ನು ನೇಮಕ ಮಾಡಿಕೊಂಡಿದ್ದೇವೆ. ಕೊರೊನಾ ನಂತರ ಕಲಿಕಾ ಚೇತರಿಕೆ ಕಾರ್ಯಕ್ರಮ ಮಾಡುತ್ತಿದ್ದೇವೆ ಎಂದು ಮಧು ಬಂಗಾರಪ್ಪ ಹೇಳಿದರು.