ಬೆಂಗಳೂರು: ರಾಜ್ಯಾದ್ಯಂತ ಸೋಮವಾರದಿಂದ(ಜೂನ್ 27) 423 ಪರೀಕ್ಷಾ ಕೇಂದ್ರಗಳಲ್ಲಿ ಎಸ್‌ಎಸ್‌ಎಲ್‌ಸಿ ಪೂರಕ ಪರೀಕ್ಷೆಯ ಆರಂಭವಾಗಿದೆ. ಪೂರಕ ಪರೀಕ್ಷೆಗೆ ಒಟ್ಟು 11,415 ಶಾಲೆಗಳಿಂದ 94,649 ವಿದ್ಯಾರ್ಥಿಗಳು ನೋಂದಾಯಿಸಿಕೊಂಡಿದ್ದಾರೆ. ಇದರಲ್ಲಿ 63,363 ಬಾಲಕರು, 31,283 ಬಾಲಕಿಯರು ಹಾಗೂ 03 ತೃತೀಯ ಲಿಂಗಿಗಳು ಪರೀಕ್ಷೆ ಬರೆಯಲು ಅರ್ಹರಾಗಿದ್ದಾರೆ.
ಇದನ್ನೂ ಓದಿ | SSLC ಪೂರಕ ಪರೀಕ್ಷೆ ನಾಳೆಯಿಂದ ಶುರು, ಹಿಜಾಬ್ ಧರಿಸುವಂತಿಲ್ಲ, ಮಾಸ್ಕ್ ಧರಿಸಲೇಬೇಕು
ಪರೀಕ್ಷಾ ಅಕ್ರಮಗಳಿಗೆ ಕಡಿವಾಣ ಹಾಕುವ ದೃಷ್ಟಿಯಿಂದ ಎಲ್ಲಾ 423 ಪರೀಕ್ಷಾ ಕೇಂದ್ರಗಳಲ್ಲಿ ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಕೆ ಮಾಡಲಾಗಿದೆ. ಇಂದು ಮೊದಲ ದಿನ ಬೆಳಗ್ಗೆ 10.30 ರಿಂದ 1.45ಕ್ಕೆ ಕೋರ್ ಸಬ್ಜೆಕ್ಟ್‌ಗಳಾದ ವಿಜ್ಞಾನ, ರಾಜ್ಯಶಾಸ್ತ್ರ ಪರೀಕ್ಷೆ ಇದ್ದು ಮಧ್ಯಾಹ್ನ 2 ರಿಂದ 5.15 ಕ್ಕೆ ಕರ್ನಾಟಕ ಸಂಗೀತ/ಹಿಂದೂಸ್ಥಾನಿ ಸಂಗೀತ ವಿಷಯಕ್ಕೆ ಪರೀಕ್ಷೆ ನಡೆಯಲಿದೆ. ವಿದ್ಯಾರ್ಥಿಗಳು ಪರೀಕ್ಷಾ ಕೇಂದ್ರಕ್ಕೆ ಅರ್ಧ ಗಂಟೆ ಮುಂಚಿತವಾಗಿ ಆಗಮಿಸಬೇಕಿದ್ದು,ಮೊದಲ 15 ನಿಮಿಷ ಪ್ರಶ್ನೆ ಪತ್ರಿಕೆ ಓದಿಕೊಳ್ಳಲು ಅವಕಾಶ ಕಲ್ಪಿಸಲಾಗಿದೆ.
ಪೂರಕ ಪರೀಕ್ಷೆಗೆ ಕೋವಿಡ್ ಭೀತಿ
ಸಾಂಕ್ರಾಮಿಕ ಕೋವಿಡ್ ನಾಲ್ಕನೆ ಅಲೆ ಭೀತಿ ಹಿನ್ನೆಲೆ ಪ್ರತಿ ಪರೀಕ್ಷಾ ಕೇಂದ್ರವನ್ನು ಪರೀಕ್ಷೆಗೆ ಮುನ್ನ, ನಂತರ ಸ್ಯಾನಿಟೈಸ್ ಮಾಡುವಂತೆ ಸೂಚನೆ ನೀಡಲಾಗಿದೆ. ಪರೀಕ್ಷಾ ಕೊಠಡಿಯ ಎಲ್ಲ ಪೀಠೋಪಕರಣ ಸ್ಯಾನಿಟೈಸ್ ಮಾಡಬೇಕು. ಸಾಮಾಜಿಕ ಅಂತರ ಪಾಲನೆ, ಪ್ರತಿ ಕೊಠಡಿಯಲ್ಲಿ ಗರಿಷ್ಠ 20 ವಿದ್ಯಾರ್ಥಿಗಳಿರಬೇಕು, ಒಂದು ಡೆಸ್ಕ್‌ಗೆ ಇಬ್ಬರು ವಿದ್ಯಾರ್ಥಿಯಂತೆ ಆಸನದ ವ್ಯವಸ್ಥೆ ಮಾಡಬೇಕು. ಸೂಚನಾ ಫಲಕದ ಮುಂದೆ ವಿದ್ಯಾರ್ಥಿಗಳು ಗುಂಪು ಗೂಡದಂತೆ ಎಚ್ಚರವಹಿಸಬೇಕು.
ಕೆಮ್ಮು, ನೆಗಡಿ, ಜ್ವರ ಮೊದಲಾದವುಗಳಿಂದ ಬಳಲುತ್ತಿರುವ, ಲಕ್ಷಣಗಳಿರುವ ವಿದ್ಯಾರ್ಥಿಗಳಿಗೆ ಪರೀಕ್ಷೆ ಬರೆಯಲು ಕನಿಷ್ಠ ಎರಡು ಕೊಠಡಿಗಳನ್ನು ವಿಶೇಷ ಕೊಠಡಿಗಳೆಂದು ಕಾಯ್ದಿರಿಸಬೇಕು. ವಿದ್ಯಾರ್ಥಿಗಳು ಮಾಸ್ಕ್ ಧರಿಸಿ ಜತೆಗೆ ಪರೀಕ್ಷಾ ಕೇಂದ್ರ ಪ್ರವೇಶಿಸುವ ವಿದ್ಯಾರ್ಥಿಗಳಿಗೆ ಸಿಬ್ಬಂದಿಗಳಿಗೆ ಹ್ಯಾಂಡ್ ಸ್ಯಾನಿಟೈಸ್ ಮಾಡಬೇಕು ಎಂದು ತಿಳಿಸಲಾಗಿದೆ.
ಪೂರಕ ಪರೀಕ್ಷೆ ಮೌಲ್ಯಮಾಪನ ಜುಲೈ 11 ರಿಂದ ಆರಂಭ
ಸೋಮವಾರದಿಂದ ಶುರುವಾಗಿರುವ ಪೂರಕ ಪರೀಕ್ಷೆಯು ಜುಲೈ 4ರ ವರೆಗೆ ನಡೆಯಲಿದ್ದು, ಪರೀಕ್ಷಾ ಮೌಲ್ಯಮಾಪನ ಕಾರ್ಯವು ಜುಲೈ 11 ರಿಂದ ರಾಜ್ಯಾದ್ಯಂತ ಒಟ್ಟು 5 ಜಿಲ್ಲೆಗಳಲ್ಲಿ 28 ಮೌಲ್ಯಮಾಪನ ಕೇಂದ್ರಗಳಲ್ಲಿ ನಡೆಯಲಿದೆ. ಪರೀಕ್ಷೆಯ ಫಲಿತಾಂಶವು ಆಗಸ್ಟ್ ಮೊದಲನೇ ವಾರದಲ್ಲಿ ಪ್ರಕಟವಾಗುವ ಸಾಧ್ಯತೆಯಿದೆ.