Site icon Vistara News

Ramulu effect| ಎಸ್‌ಟಿ ಸಮಾವೇಶದ ಮೂಲಕ ಭಾರತ್‌ ಜೋಡೋ, ಸಿದ್ದರಾಮೋತ್ಸವಕ್ಕೆ ಟಾಂಗ್‌: ರಾಮುಲುಗೆ ಪ್ರತಿಷ್ಠೆ

Ballary ST samavesha ramulu

ಶಶಿಧರ ಮೇಟಿ, ವಿಸ್ತಾರ ನ್ಯೂಸ್, ಬಳ್ಳಾರಿ
ಬಳ್ಳಾರಿಯಲ್ಲಿ ನವೆಂಬರ್‌ 20ರಂದು ಆಯೋಜಿಸಲಾಗಿರುವ ಬಿಜೆಪಿ ಎಸ್‍ಟಿ ಮೋರ್ಚಾ ನವಶಕ್ತಿ ಸಮಾವೇಶ ಸಾರಿಗೆ ಸಚಿವ ಶ್ರೀರಾಮುಲು ಪಾಲಿಗೆ ಒಂದು ಪ್ರತಿಷ್ಠೆಯ ಪ್ರಶ್ನೆಯಾಗಿದೆ. ಹೀಗಾಗಿ ಅವರು ಇದನ್ನು ಯಶಸ್ವಿಗೊಳಿಸಲು ದೊಡ್ಡ ಮಟ್ಟದಲ್ಲಿ ಯೋಜನೆ ಹಾಕಿಕೊಂಡಿದ್ದಾರೆ.

ಹೆಸರಿಗೆ ಇದು ಎಸ್‌ಟಿ ಸಮಾವೇಶವಾದರೂ ಹಲವು ವಿಷಯಗಳಿಗೆ ಸಂದೇಶ ನೀಡುವ ವೇದಿಕೆಯಾಗಲಿದೆ. ಬಿಜೆಪಿ ಎಸ್‌ಟಿ ಸಮುದಾಯದ ಮೀಸಲಾತಿ ಹೆಚ್ಚಳದ ಲಾಭ ಪಡೆದುಕೊಳ್ಳಲು ಇದನ್ನೊಂದು ಸಂಭ್ರಮಾಚರಣೆಯ ಸಮಾವೇಶವಾಗಿ ಪರಿವರ್ತಿಸಲು ನಿರ್ಧರಿಸಲಾಗಿದೆ. ಇದರ ಜತೆಗೆ ರಾಹುಲ್ ಗಾಂಧಿ ನೇತೃತ್ವದ ಭಾರತ್ ಜೋಡೊ ಯಾತ್ರೆ ಸಮಯದಲ್ಲಿ ಬಳ್ಳಾರಿಯಲ್ಲಿ ನಡೆದ ಬೃಹತ್ ಸಮಾವೇಶ ಮತ್ತು ದಾವಣಗೆರೆಯಲ್ಲಿ ನಡೆದ ಸಿದ್ದರಾಮೋತ್ಸವಕ್ಕೆ ಟಾಂಗ್ ನೀಡಲು ವಿರಾಟ್‌ ರೂಪದಲ್ಲಿ ಸಮಾವೇಶ ಆಯೋಜಿಸಲಾಗಿದೆ. ಹೀಗಾಗಿ ಇದನ್ನು ಶ್ರೀರಾಮುಲು ಅವರು ಬಹಳ ಮುತುವರ್ಜಿಯಿಂದ ಆಯೋಜಿಸುತ್ತಿದ್ದಾರೆ. ಸಮಾವೇಶದಲ್ಲಿ ಒಟ್ಟು ೧೦ ಲಕ್ಷಕ್ಕೂ ಅಧಿಕ ಕಾರ್ಯಕರ್ತರು ಭಾಗವಹಿಸಲಿದ್ದಾರೆ ಎಂದು ಈಗಾಗಲೇ ನಿರೀಕ್ಷಿಸಲಾಗಿದೆ.

೩೦೦೦ ಮುಖಂಡರು ಮತ್ತು ಕಾರ್ಯಕರ್ತರ ಬಳಕೆ
ಬಿಜೆಪಿ ಕಾರ್ಯಕ್ರಮ ಮತ್ತು ಸಮಾವೇಶದ ಸಿದ್ಧತೆಯಲ್ಲಿ ತನ್ನದೇ ಆದ ಪದ್ಧತಿಯನ್ನು ಅನುಸರಿಸುತ್ತದೆ. ಸಮಾವೇಶ ಯಶಸ್ವಿಗೆ ವಿವಿಧ ಸಮಿತಿಗಳನ್ನು ರಚಿಸಿದ್ದಾರೆ, ಇದಕ್ಕೆ ೩೦೦೦ ಬಿಜೆಪಿಯ ಎರಡನೇ ಹಂತದ ಮುಖಂಡರು ಮತ್ತು ಕಾರ್ಯಕರ್ತರನ್ನು ಬಳಸಿಕೊಂಡಿದೆ. ಒಂದೊಂದು ಜವಾಬ್ದಾರಿಯನ್ನು ಒಂದೊಂದು ಸಮಿತಿಗೆ ವಹಿಸಿಕೊಟ್ಟು ಸಮಾವೇಶದ ಯಶಸ್ಸಿಗೆ ಬೇಕಾಗುವ ಅಚ್ಚುಕಟ್ಟುತನದ ವ್ಯವಸ್ಥೆ ಮಾಡಲಾಗಿದೆ. ಬೂತ್ ಮಟ್ಟದ ಸಮಿತಿ, ಇದರ ಮೇಲೆ ಶಕ್ತಿಕೇಂದ್ರ, ಮಹಾಶಕ್ತಿಕೇಂದ್ರ, ಮಂಡಲ, ಜಿಲ್ಲೆ ಹೀಗೆ ವಿವಿಧ ಹಂತದಲ್ಲಿ ತಂಡಗಳನ್ನು ರಚನೆ ಮಾಡಿದೆ. ಇನ್ನು ಪ್ರತಿಯೊಂದು ಜಾತಿಗೆ ಒಂದೊಂದು ಮಹಾ ಪ್ರಮುಖರನ್ನು ನೇಮಿಸಲಾಗಿದೆ. ರಾಜ್ಯದ್ಯಂತ ಇದೇ ಕಾರ್ಯತಂತ್ರವನ್ನು ಬಿಜೆಪಿ ರೂಪಿಸಿದೆ.

ಸಿದ್ದರಾಮೋತ್ಸವ ಮತ್ತು ಜೋಡೋ ಸಮಾವೇಶಕ್ಕೆ ಟಾಂಗ್‌
ರಾಹುಲ್ ಗಾಂಧಿ ನೇತೃತ್ವದ ಭಾರತ ಜೋಡೋ ಯಾತ್ರೆಯಲ್ಲಿ ಗಣಿನಾಡಿನಲ್ಲಿ ಬೃಹತ್‌ ಸಮಾವೇಶ ಮಾಡುವ ಮೂಲಕ ಶ್ರೀರಾಮುಲು, ರೆಡ್ಡಿ ಸಹೋದರರು, ಬಿಜೆಪಿಗೆ ಟಾಂಗ್‌ ನೀಡುವ ಕೆಲಸ ಮಾಡಿದರು, ಸಿದ್ದರಾಮಯ್ಯ ಅವರು ದಾವಣಗೆರೆಯಲ್ಲಿ ಸಿದ್ದರಾಮೋತ್ಸವ ಮೂಲಕ ರಾಜಕೀಯ ವಲಯದಲ್ಲಿ ಸದ್ದು ಮಾಡಿದರು. ಈ ಎರಡು ಸಮಾವೇಶಕ್ಕೆ ಎಸ್‌ಟಿ ಮೋರ್ಚಾ ರಾಜ್ಯ ಸಮಾವೇಶ ಮಾಡುವ ಮೂಲಕ ಟಾಂಗ್‌ ನೀಡಲು ಶ್ರೀರಾಮುಲು ಮತ್ತು ಬಿಜೆಪಿ ಮುಂದಾಗಿದೆ. ಇತ್ತೀಚೆಗೆ ಸಿದ್ದರಾಮಯ್ಯ ಮತ್ತು ಶ್ರೀರಾಮುಲು ಮಧ್ಯೆ ವಾಕ್ಸಮರವು ತಾರಕಕ್ಕೇರುತ್ತಿದೆ, ಸಮಾವೇಶದಲ್ಲಿ ಅದು ಪ್ರತಿಧ್ವನಿಸುವ ಸಾಧ್ಯತೆ ಇದೆ. ಕಾಂಗ್ರೆಸ್‌ಗೆ ಟಾಂಗ್ ನೀಡುವಲ್ಲಿ ಸಮಾವೇಶವನ್ನು ಸಚಿವ ಶ್ರೀರಾಮುಲು ಸಮರ್ಥವಾಗಿ ಬಳಸಿಕೊಳ್ಳುವ ಸಾಧ್ಯತೆ ಇದೆ.

ವಾರ್‌ ರೂಮ್ ವ್ಯವಸ್ಥೆ
ನ.೧೧ರಂದು ಬಳ್ಳಾರಿ ಬಿಜೆಪಿ ಕಚೇರಿಯಲ್ಲಿ ವಾರ್ ರೂಮ್ ವ್ಯವಸ್ಥೆ ಮಾಡಲಾಗಿದೆ. ಬಳ್ಳಾರಿ ನಗರ ಶಾಸಕ ಜಿ.ಸೋಮಶೇಖರ್ ರೆಡ್ಡಿ ಚಾಲನೆ ನೀಡಿದರು. ಇಲ್ಲಿ ಸುಮಾರು ೫೦ ಜನರನ್ನು ನಿಯೋಜಿಸಲಾಗಿದೆ. ನಿತ್ಯವೂ ಬೆಳಗ್ಗೆ ೯ ಗಂಟೆಯಿಂದ ಸಂಜೆ ೭ ಗಂಟೆವರೆಗೆ ವಾರ್ ರೂಮ್‌ ಕೆಲಸ ನಿರ್ವಹಿಸುತ್ತಿದೆ. ೫೦ ಜನರಿಗೆ ಪತ್ಯೇಕವಾಗಿ ಮೊಬೈಲ್ ವ್ಯವಸ್ಥೆ ಮಾಡಲಾಗಿದೆ. ಪಕ್ಷದ ಮುಖಂಡರು, ಕಾರ್ಯಕರ್ತರ, ಸಾರ್ವಜನಿಕರ ಮೊಬೈಲ್‌ ನಂಬರ್ ಕೊಟ್ಟಿರುತ್ತಾರೆ. ವಾರ್‌ ರೂಮ್‌ನಿಂದ ನಿತ್ಯವೂ ಕಾಲ್ ಮಾಡಿಕೊಂಡು ದಿನದ ಬೆಳವಣಿಗೆ ಮಾಹಿತಿ ಪಡೆಯುತ್ತಾರೆ, ಸಮಾವೇಶಕ್ಕೆ ಆಗಮಿಸಲು ಮನವಿ ಮಾಡುತ್ತಾರೆ. ಈ ಮೂಲಕ ಎಸ್.ಟಿ. ಸಮಾವೇಶ ಯಶಸ್ಸಿಗೆ ಎಲ್ಲಾ ಪ್ರಯತ್ನ ಮಾಡುತ್ತಿದೆ.

೧೦೦ ಕಲಾತಂಡದಿಂದ ಸಮುದಾಯದ ಸಂಸ್ಕೃತಿ ದರ್ಶನ
೧೫೦ ಎಕರೆ ಪ್ರದೇಶದಲ್ಲಿ ನಡೆಯುವ ಸಮಾವೇಶಕ್ಕೆ ಜನರು ಬರಲು ಸಾವಿರಕ್ಕೂ ಹೆಚ್ಚು ಬಸ್‌ಗಳ ವ್ಯವಸ್ಥೆ, ಕ್ರೂಷರ್‌ ಸೇರಿದಂತೆ ಇತರ ವಾಹನಗಳ ವ್ಯವಸ್ಥೆ ಮಾಡಲಾಗಿದೆ. ಸುಮಾರು ಹತ್ತು ಲಕ್ಷ ಜನರು ಆಗಮಿಸುವ ನಿರೀಕ್ಷೆಯನ್ನು ಬಿಜೆಪಿಯವರು ಹೊಂದಿದ್ದಾರೆ.
ಸಮಾವೇಶದಲ್ಲಿ ಬಿಜೆಪಿಯ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ, ರಾಷ್ಟ್ರೀಯ ಎಸ್‌ಟಿ ಮೋರ್ಚಾ ಅಧ್ಯಕ್ಷ, ಸಿಎಂ ಬಸವರಾಜ ಬೊಮ್ಮಾಯಿ, ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ, ಬಿಜೆಪಿ ರಾಜ್ಯಾಧ್ಯಕ್ಷ ನಳೀನ್‌ಕುಮಾರ್‌ ಕಟೀಲ್‌ ಸೇರಿದಂತೆ ರಾಜ್ಯ ಮತ್ತು ಕೇಂದ್ರದ ಸಚಿವರು ಭಾಗವಹಿಸಲಿದ್ದಾರೆ.

೨೫೦ ಊಟದ ಕೌಂಟರ್‌ ವ್ಯವಸ್ಥೆ ಮಾಡಲಾಗಿದೆ, ಚಿಕ್ಕಮಂಗಳೂರು, ಚಾಮರಾಜನಗರ, ಉತ್ತರ ಕನ್ನಡ, ಚಿತ್ರದುರ್ಗ ಸೇರಿದಂತೆ ಸುಮಾರು ೧೦೦ಕ್ಕೂ ಹೆಚ್ಚು ಎಸ್‌ ಟಿ ಸಮುದಾಯ ಸಾಂಸ್ಕೃತಿಕ ಕಲಾ ತಂಡಗಳು ಭಾಗವಹಿಸಲಿವೆ. ಇದರಿಂದಾಗಿ ಸಮುದಾಯ ಕಲೆ, ಸಂಸ್ಕೃತಿಗಳ ಅನಾವರಣವಾಗುವ ಸಾಧ್ಯತೆ ಇದೆ. ಸುಮಾರು ೨೫ ಕಡೆಗಳಲ್ಲಿ ಪಾರ್ಕಿಂಗ್‌ ವ್ಯವಸ್ಥೆ ಮಾಡಲಾಗಿದೆ ಎಂದು ಪಕ್ಷದ ಮೂಲಗಳು ತಿಳಿಸಿವೆ.

ಸಮಾವೇಶಕ್ಕೆ ಸಕಲ ಸಿದ್ಧತೆ ಎಂದ ಸಿದ್ದೇಶ್‌
ಎಸ್ಟಿ ಮೀಸಲಾತಿ ಹೆಚ್ಚಳಕ್ಕೆ ಕಾರಣವಾಗಿರುವ ರಾಜ್ಯ ಮತ್ತು ಕೇಂದ್ರ ಸರಕಾರಕ್ಕೆ ಸಮಾವೇಶದ ಮೂಲಕ ಕೃತಜ್ಞತೆ ಸಲ್ಲಿಸುತ್ತಿದ್ದೇವೆ, ಈಗಾಗಲೇ ಸಮಾವೇಶಕ್ಕೆ ಬೇಕಾಗುವ ಸಕಲ ಸಿದ್ಧತೆಯನ್ನು ಮಾಡಿಕೊಂಡಿದ್ದೇವೆ, ಎಸ್ಟಿ ಸಮುದಾಯ ೧೦೦ಕ್ಕೂ ಹೆಚ್ಚು ಕಲಾ ತಂಡಗಳು ಕಲೆಯ ಪ್ರದರ್ಶನ ಸಮಾವೇಶದಲ್ಲಿ ಮಾಡಲಾಗುತ್ತಿದೆ ಎಂದು ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಸಿದ್ದೇಶ್‌ ಹೇಳಿದ್ದಾರೆ.

ಇದನ್ನೂ ಓದಿ | BJP Samavesha | ಬಳ್ಳಾರಿ ಎಸ್‍ಟಿ ಮೋರ್ಚಾ ನವಶಕ್ತಿ ಸಮಾವೇಶಕ್ಕೆ 10 ಲಕ್ಷ ಜನ ಸೇರಿಸಲು ಬಿಜೆಪಿ ಪ್ಲ್ಯಾನ್‌

Exit mobile version