ಕಾರವಾರ: ಶಾಲೆಯ ಡೊನೇಷನ್ (Donations) ಪಾವತಿಸದ್ದಕ್ಕೆ ಮುಖ್ಯ ಶಿಕ್ಷಕಿಯೊಬ್ಬರು ಮಕ್ಕಳಿಗೆ ಪರೀಕ್ಷೆ ನಿರಾಕರಿಸಿ ಶಿಕ್ಷೆ ನೀಡಿದ್ದಾರೆ. ಉತ್ತರ ಕನ್ನಡ ಜಿಲ್ಲೆಯ ಕಾರವಾರದ ಸರ್ಕಾರಿ ಅನುದಾನಿತ ಸೇಂಟ್ ಮೈಕಲ್ ಕಾನ್ವೆಂಟ್ ಸ್ಕೂಲ್‌ನಲ್ಲಿ ಘಟನೆ ನಡೆದಿದೆ.
ಪೋಷಕರು ಡೊನೇಷನ್ ಭರಿಸದಿದ್ದಕ್ಕೆ ಮಕ್ಕಳಿಗೆ ಫಾರ್ಮೆಟಿವ್ ಅಸೈನ್ಮೆಂಟ್ ಎಂಬ ಪರೀಕ್ಷೆ ಬರೆಯಲು ನಿರಾಕರಿಸಿದ್ದಾರೆ. ಮಾತ್ರವಲ್ಲದೇ ಮುಖ್ಯ ಶಿಕ್ಷಕಿಯ ಕೊಠಡಿ ಬಳಿ ಚಪ್ಪಲಿ ಬಿಡುವ ಜಾಗದಲ್ಲಿ ಮಕ್ಕಳನ್ನು ನೆಲದ ಮೇಲೆ ಕೂರಿಸಿ ಶಿಕ್ಷೆ ನೀಡಿದ್ದಾರೆ. ಪ್ರತಿ ಮಕ್ಕಳ ಪೋಷಕರು ವರ್ಷಕ್ಕೆ 20 ಸಾವಿರ ರೂ. ಡೊನೇಷನ್ ನೀಡುತ್ತಿದ್ದಾರೆ. ಕಂತಿನ ಮೂಲಕ ಫೀಸ್ ನೀಡುವುದರಿಂದ ಕೆಲ ಪೋಷಕರು ಸಂಪೂರ್ಣ ಹಣ ತುಂಬಿರಲಿಲ್ಲ. ಹೀಗಾಗಿ 6, 7, 8ನೇ ತರಗತಿಯಲ್ಲಿ ಓದುತ್ತಿರುವ ಮಕ್ಕಳಿಗೆ ಪರೀಕ್ಷೆ ನಿರಾಕರಿಸಿದ್ದಾರೆ.
ಅನುದಾನಿತ ಶಾಲೆಯನ್ನು ಖಾಸಗಿ ಶಾಲೆಯಾಗಿ ಪರಿವರ್ತನೆ!
ಸೇಂಟ್ ಮೈಕಲ್ ಕಾನ್ವೆಂಟ್ ಪ್ರೌಢ ಶಾಲೆಯ ಮುಖ್ಯೋಪಾಧ್ಯಾಯರಾದ ಕ್ರಿಸ್ಟೀನಾ ಜೋಸೆಫ್ ಎಂಬುವವರು ಶಾಲೆಯಲ್ಲಿರುವ ಸಿಬ್ಬಂದಿಗಳನ್ನು ಏಕಾಏಕಿ ವರ್ಗಾವಣೆ ಮಾಡಿ, ಸರ್ಕಾರಿ ಅನುದಾನಿತ ಶಾಲೆಯನ್ನು ಖಾಸಗಿ ಶಾಲೆಯನ್ನಾಗಿ ಪರಿವರ್ತಿಸುತ್ತಿದ್ದಾರೆ ಎಂದು ಮಕ್ಕಳು ಪೋಷಕರು ಆರೋಪಿಸಿದ್ದಾರೆ.
ಶಾಲೆಯವರು ಪೋಷಕರಿಂದ ಹೆಚ್ಚಿನ ಶುಲ್ಕವನ್ನು ಪಡೆಯುತ್ತಿದ್ದಾರೆ. 2023-24ನೇ ಸಾಲಿನಲ್ಲಿ ಪ್ರತಿ ವಿದ್ಯಾರ್ಥಿಗೆ 19,000 ರೂ. ಶಾಲಾ ಶುಲ್ಕವನ್ನು ಪಡೆದಿದ್ದು, ಎನ್.ಸಿ.ಸಿ. ಮಕ್ಕಳಿಂದ ಹಣವನ್ನು ವಸೂಲಿ ಮಾಡುತ್ತಿದ್ದಾರೆ. ಆಡಳಿತ ಮಂಡಳಿಯು ಶಾಲಾ ಮಕ್ಕಳ ಏಳಿಗೆಯ ಕಡೆ ಗಮನ ಕೊಡದೆ ಹಣ ಗಳಿಕೆಯಲ್ಲಿ ತೊಡಗಿದೆ ಎಂದು ಆರೋಪಿಸಲಾಗಿದೆ.
ಇದನ್ನೂ ಓದಿ: COVID Subvariant JN.1: ಬೆಂಗಳೂರಿನಲ್ಲಿ ಮೂವರಿಗೆ ಕೊರೊನಾ?; ಕ್ರಿಸ್ಮಸ್, ಹೊಸ ವರ್ಷಕ್ಕೆ ನಿರ್ಬಂಧ?
ಪಾಲಕರ ಸಹಿ ದುರ್ಬಳಕೆ
ಹಿಂದೊಮ್ಮೆ ವಾರ್ಷಿಕ ಸಭೆಯನ್ನು ಕರೆದು, ವಿದ್ಯಾರ್ಥಿಗಳಿಗೆ ಆನ್ ಲೈನ್ ಕ್ಲಾಸ್ ಮಾಡಬೇಕೇ? ಅಥವಾ ಆಫ್‌ಲೈನ್ ಕ್ಲಾಸ್ ತೆಗೆದುಕೊಳ್ಳಬೇಕೆ ಎಂಬ ವಿಷಯದ ಕುರಿತು ಚರ್ಚಿಸಿದ್ದಾರೆ. ಬಳಿಕ ಪಾಲಕರ ಅಭಿಪ್ರಾಯ ಪಡೆಯಲು ಸಭೆ ಕರೆದು 508 ಪಾಲಕರ ಸಹಿ ಪಡೆದುಕೊಂಡಿದ್ದಾರೆ. ನಂತರ ವಿಷಯ ಬದಲಿಸಿ ಪಾಲಕರ ಸಹಿಗಳನ್ನು ದುರ್ಬಳಕೆ ಮಾಡಿಕೊಂಡಿದ್ದಾರೆ ಎನ್ನಲಾಗಿದೆ.
ಶಾಲೆಯನ್ನು ಅನುದಾನ ರಹಿತ ಶಾಲೆಯನ್ನಾಗಿ ಮಾಡಲು ಏಕಪಕ್ಷೀಯವಾಗಿ ನಿರ್ಧಾರ ಕೈಗೊಂಡಿದ್ದಾರೆ. ಇದರಿಂದಾಗಿ ಶಾಲೆಯ ಮಕ್ಕಳಿಗೆ ಅನ್ಯಾಯವಾಗಿದೆ. ಸರ್ಕಾರದಿಂದ ದೊರಕುವಂತಹ ಬಿಸಿ ಊಟ, ಶೂ ಸಾಕ್ಸ್, ಉಚಿತ ಪಠ್ಯಪುಸ್ತಕ, ಮೊಟ್ಟೆ, ಬಾಳೆಹಣ್ಣು, ಹಾಗೂ ಹಿಂದುಳಿದ ವರ್ಗದ ಮಕ್ಕಳ ಎಲ್ಲ ಸೌಲಭ್ಯಗಳಿಂದ ಮಕ್ಕಳನ್ನು ವಂಚಿತರನ್ನಾಗಿ ಮಾಡಿದ್ದಾರೆ ಎಂದು ಪೋಷಕರು ದೂರಿದ್ದಾರೆ.
ಕಾರಣ ಕೇಳಿ ನೋಟಿಸ್ ಜಾರಿ
ಶಿಕ್ಷಣ ಇಲಾಖೆಯು ಪೋಷಕರ ದೂರುಗಳನ್ನು ಸ್ವೀಕರಿಸಿದೆ. ಶಾಲೆಯನ್ನು ಶಾಶ್ವತ ಅನುದಾನರಹಿತವಾಗಿ ಪರಿವರ್ತಿಸಿದ ಸರ್ಕಾರದ ಆದೇಶವನ್ನು ಹಿಂಪಡೆದು ಸರ್ಕಾರದ ಸಹಾಯಾನುದಾನ ಮುಂದುವರೆಸುವಂತೆ ಪೋಷಕರು ಮನವಿ ಮಾಡಿದ್ದಾರೆ.
ಸೇಂಟ್ ಮೈಕಲ್ ಕಾನ್ವೆಂಟ್ ಶಾಲೆಯಲ್ಲಿ ವಿದ್ಯಾರ್ಥಿಗಳಿಂದ ನಿಯಮ ಬಾಹಿರವಾಗಿ ಹೆಚ್ಚುವರಿ ಶುಲ್ಕ ವಸೂಲಾತಿ ಮಾಡಲಾಗುತ್ತಿದೆ. ಜತೆಗೆ ವಿದ್ಯಾರ್ಥಿಗಳ ಪಾಲಕರ ಗಮನಕ್ಕೆ ತರದೇ, ಸಭೆಯನ್ನು ಕರೆಯದೇ, ಶಾಲೆಯ ಆಡಳಿತ ಮಂಡಳಿಯ ಸಭೆಯಲ್ಲಿ ವಿಷಯ ಮಂಡಿಸಿ ಠರಾವು ಪಾಸು ಮಾಡದೇ, ಇಲಾಖೆಗೆ ತಪ್ಪು ಮಾಹಿತಿ ನೀಡಿ ಅನುದಾನಿತ ಪ್ರೌಢ ಶಾಲೆಯನ್ನು ಅನುದಾನ ರಹಿತವಾಗಿ ಪರಿವರ್ತಿಸಿಕೊಂಡಿದೆ.
ಹೀಗಾಗಿ ನಿಯಮ ಬಾಹಿರವಾಗಿ ವಸೂಲಿ ಮಾಡುತ್ತಿರುವ ಹೆಚ್ಚುವರಿ ಶುಲ್ಕವನ್ನು ಈ ಕೂಡಲೇ ನಿಲ್ಲಿಸುಂತೆ ಇಲಾಖೆ ಸೂಚಿಸಿದೆ. ಸರ್ಕಾರ ಹಾಗೂ ಇಲಾಖೆ ನಿಗದಿಪಡಿಸಿದ ದರದಂತೆ ನಿಯಮಾನುಸಾರ ಶುಲ್ಕ ಪಡೆದು, ರಶೀದಿ ನೀಡುವಂತೆ ಸೂಚಿಸಲಾಗಿದೆ.
2023-24ನೇ ಶೈಕ್ಷಣಿಕ ಸಾಲಿನ ಅಂತ್ಯದವರೆಗೆ ಶಾಲೆಯಲ್ಲಿ ಈ ಹಿಂದಿನಂತೆ ನಡೆಸಲಾಗುತ್ತಿದ್ದ ಮಧ್ಯಾಹ್ನದ ಬಿಸಿ ಊಟದ ವ್ಯವಸ್ಥೆಯನ್ನು ಸ್ವತಃ ಶಾಲಾ ಆಡಳಿತ ಮಂಡಳಿಯವರೇ ಸರ್ಕಾರಕ್ಕೆ ಹಾಗೂ ಪಾಲಕರಿಗೆ ಯಾವುದೇ ರೀತಿಯ ಆರ್ಥಿಕ ಹೊರೆಯಾಗದಂತೆ ಮುಂದುವರಿಸುವಂತೆ ಇಲಾಖೆಯು ಎಚ್ಚರಿಕೆ ನೀಡಿದೆ. ತಪ್ಪಿದ್ದಲ್ಲಿ ಮೂರು ಶಾಲೆಗಳ ವಿರುದ್ಧ ಶಿಕ್ಷಣ ಕಾಯ್ದೆ 1983 ಸೆಕ್ಷನ್ 39ರ ಅಡಿಯಲ್ಲಿ ಶಿಸ್ತು ಕ್ರಮಕೈಗೊಳ್ಳಲಾಗುವುದು ಎಂದು ಆದೇಶಿಸಲಾಗಿದೆ. ಆದರೆ ಇದ್ಯಾವುದನ್ನೂ ಪಾಲಿಸದ ಶಾಲೆಯ ವಿರುದ್ಧ ಕಾರಣ ಕೇಳಿ ನೋಟಿಸ್ ಜಾರಿ ಮಾಡಲಾಗಿದೆ.
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ. ಜತೆಗೆ ರಾಜ್ಯದ ಇನ್ನಷ್ಟು ಸುದ್ದಿಗಾಗಿ ಈ ಲಿಂಕ್ ಕ್ಲಿಕ್ ಮಾಡಿ