ಚಿತ್ರದುರ್ಗ: ರಾಜ್ಯ ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ ಕರ್ನಾಟಕಕ್ಕೆ (Karnataka Election 2023) ಅಮಿತ್ ಶಾ, ಯೋಗಿ ಆದಿತ್ಯನಾಥ್, ರಾಹುಲ್ ಗಾಂಧಿ, ಪ್ರಿಯಾಂಕಾ ವಾದ್ರಾ ಸೇರಿ ಹಲವು ನಾಯಕರು ಆಗಮಿಸುತ್ತಿದ್ದು, ಅಬ್ಬರದ ಪ್ರಚಾರ ಕೈಗೊಳ್ಳುತ್ತಿದ್ದಾರೆ. ಅದೇ ರೀತಿ, ಪ್ರಿಯಾಂಕಾ ವಾದ್ರಾ ಅವರು ಚಿತ್ರದುರ್ಗ, ಹಿರಿಯೂರಿನಲ್ಲಿ ಅಭ್ಯರ್ಥಿಗಳ ಪರವಾಗಿ ಪ್ರಚಾರ ಕೈಗೊಂಡಿದ್ದಾರೆ. ಇದೇ ವೇಳೆ ಅವರು, ಕಾಡುಗೊಲ್ಲ ಸಮುದಾಯಕ್ಕೆ ಎಸ್‌ಟಿ ಮೀಸಲಾತಿ ಒದಗಿಸಲಾಗುವುದು ಎಂದು ಸಮುದಾಯದ ಮುಖಂಡರಿಗೆ ಭರವಸೆ ನೀಡಿದ್ದಾರೆ.
ಹಿರಿಯೂರಿನಲ್ಲಿ ಕಾಡುಗೊಲ್ಲ ಮುಖಂಡರ ಜತೆ ಪ್ರಿಯಾಂಕಾ ವಾದ್ರಾ ಸಂವಾದ ನಡೆಸಿದರು. ಸಂವಾದದ ಸ್ಥಳಕ್ಕೆ ಪ್ರಿಯಾಂಕಾ ಭೇಟಿ ನೀಡುತ್ತಲೇ, ಸಮುದಾಯದವರು ಮೀಸಲಾತಿ ಕೋರಿ ಮನವಿ ಸಲ್ಲಿಸಿದರು. ಇದಾದ ಬಳಿಕ ಮಾತನಾಡಿದ ವಾದ್ರಾ, ಮೀಸಲಾತಿ ಕಲ್ಪಿಸುವುದಾಗಿ ಭರವಸೆ ನೀಡಿದರು. “ನನಗೆ ಕಾಡುಗೊಲ್ಲ ಸಮುದಾಯದ ಬಗ್ಗೆ ಅತೀವವಾದ ಪ್ರೀತಿ ಇದೆ. ನಿಮಗೆ ಎಸ್‌ಟಿ ಮೀಸಲಾತಿ ಕಲ್ಪಿಸುವ ಹೊಣೆ ನಮ್ಮದು” ಎಂದರು.
ಕಾಡುಗೊಲ್ಲರಿಂದ ಮನವಿ
ಕಾಡುಗೊಲ್ಲ ಸಮುದಾಯವು ಸ್ವಾಭಿಮಾನ ಹೊಂದಿರುವ ಸಮುದಾಯವಾಗಿದೆ. ಯಾರ ಹತ್ತಿರವೂ ಬೇಡದೆ, ಶ್ರಮವಹಿಸಿ ದುಡಿಯುವ ವರ್ಗವಾಗಿದೆ. ನಮ್ಮ ಸರ್ಕಾರ ಅಧಿಕಾರಕ್ಕೆ ಬಂದರೆ ಮೀಸಲಾತಿ ನೀಡುತ್ತೇನೆ. ನೀವು ಇಷ್ಟು ಹಿಂದೆ ಉಳಿದಿರುವುದು ಬಿಜೆಪಿ ಸರ್ಕಾರಕ್ಕೆ ತಿಳಿದಿಲ್ಲವೇ? ಹಿಂದುಳಿದ ವರ್ಗಗಳನ್ನು ಬಿಜೆಪಿ ತುಳಿಯುತ್ತಿದೆ. ನಿಮ್ಮ ಕಷ್ಟಗಳನ್ನು ನಿಮ್ಮ ಸಹೋದರಿ ಹತ್ತಿರ ಹೇಳಿಕೊಂಡಿದ್ದೀರಿ. ನಿಮ್ಮ ಬೇಡಿಕೆಗಳನ್ನು ಈಡೇರಿಸುವುದು ನನ್ನ ಕರ್ತವ್ಯ ಎಂದು ಹೇಳಿದರು.
ರಾಜ್ಯದಲ್ಲಿ ಈ ಬಾರಿ ಕಾಂಗ್ರೆಸ್ ಪಕ್ಷವನ್ನು ಅಧಿಕಾರಕ್ಕೆ ತನ್ನಿ. ಎಸ್‌ಟಿ ಮೀಸಲಾತಿಗೆ ಸೇರಿಸುವ ಕೆಲಸ ಮಾಡುತ್ತೇವೆ. ನಿಮ್ಮನ್ನು ಭೇಟಿ ಮಾಡಿದ್ದು ಖುಷಿ ತಂದಿದೆ. ಮುಂದಿನ ದಿನಗಳಲ್ಲಿ ನಿಮ್ಮ ಬೇಡಿಕೆಗಳನ್ನು ಈಡೇರಿಸುತ್ತೇವೆ ಎಂದು ಹಿರಿಯೂರಿನಲ್ಲಿ ಪ್ರಿಯಾಂಕಾ ವಾದ್ರಾ ಭರವಸೆ ನೀಡಿದರು.
ಇದನ್ನೂ ಓದಿ: Karnataka Election 2023: ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಯಾರಾಗ್ತಾರೆ ಸಿಎಂ; ಏನಂದ್ರು ಪ್ರಿಯಾಂಕಾ ಗಾಂಧಿ?