Site icon Vistara News

BY Vijayendra : ಈ ಕಾರಣಕ್ಕೆ ವಿಜಯೇಂದ್ರ ಪದಗ್ರಹಣ ಸಮಾರಂಭಕ್ಕೆ ಹೋಗಿಲ್ಲವೆಂದ ಎಸ್‌ಟಿಎಸ್‌!

ST Somashekhar statement on BY Vijayendra

ಬೆಂಗಳೂರು: ನನ್ನ ಕ್ಷೇತ್ರದ ಕುಂಬಳಗೋಡಿನಲ್ಲಿ ಪೊಲೀಸ್ ಠಾಣೆ (Kumbalgodu Police Station) ಉದ್ಘಾಟನೆ ಕಾರ್ಯಕ್ರಮ ಮೊದಲೇ ನಿಗದಿಯಾಗಿತ್ತು. ಮೊದಲಿಗೆ ನವೆಂಬರ್‌ 16 ಎಂದು ಹೇಳಲಾಗಿತ್ತು. ಕೊನೆಗೆ ನವೆಂಬರ್‌ 15ಕ್ಕೇ ಕಾರ್ಯಕ್ರಮ ನಡೆಸುವುದಾಗಿ ಸೂಚಿಸಿದರು. ಹಾಗಾಗಿ ನನಗೆ ಬಿಜೆಪಿ ರಾಜ್ಯಾಧ್ಯಕ್ಷರಾಗಿ ಬಿ.ವೈ. ವಿಜಯೇಂದ್ರ (BY Vijayendra) ಪದಗ್ರಹಣ ಮಾಡಿದ ಸಮಾರಂಭಕ್ಕೆ ಹೋಗಲು ಆಗಿಲ್ಲ ಎಂದು ಮಾಜಿ ಸಚಿವ, ಯಶವಂತಪುರ ಬಿಜೆಪಿ ಶಾಸಕ ಎಸ್.ಟಿ. ಸೋಮಶೇಖರ್ (ST Somashekar) ಹೇಳಿದರು.

ಈ ಬಗ್ಗೆ ಮಾಧ್ಯಮದವರೊಂದಿಗೆ ಮಾತನಾಡಿದ ಎಸ್.ಟಿ. ಸೋಮಶೇಖರ್‌, ಪೊಲೀಸ್ ಠಾಣೆ ಉದ್ಘಾಟನೆಗೆ ಮೊದಲೇ ಪ್ಲ್ಯಾನ್ ಆಗಿತ್ತು. ನನ್ನ ಕ್ಷೇತ್ರದ್ದೇ ಕಾರ್ಯಕ್ರಮ ಇದ್ದಿದ್ದರಿಂದ ನನಗೆ ಹೋಗಲು ಆಗಲಿಲ್ಲ. ನಮ್ಮ ಕ್ಷೇತ್ರಕ್ಕೆ ಇಂದು ಗೃಹ ಸಚಿವರು ಬರುತ್ತಿದ್ದಾರೆ. ಸಚಿವರ ಕಾರ್ಯಕ್ರಮ ಮುಗಿದ ಬಳಿಕ ನಾನು ಪಕ್ಷದ ಕಾರ್ಯಕ್ರಮಕ್ಕೆ ಹೋಗುತ್ತೇನೆ ಎಂದು ಹೇಳಿದರು.

ಬಿಜೆಪಿಯಿಂದ ದೂರ ಉಳಿಯುತ್ತಿಲ್ಲ

ನಾನು ಬಿಜೆಪಿಯಿಂದ ದೂರ ಉಳಿಯುತ್ತಿಲ್ಲ. ನನ್ನ ಕ್ಷೇತ್ರದ ಕೆಲಸ ಮಾಡುತ್ತಿದ್ದೇನೆ. ಬಿ.ವೈ. ವಿಜಯೇಂದ್ರ ಅವರ ಆಯ್ಕೆ ಸರಿಯಾಗಿದೆ‌. ಇಂದಿನ ಸ್ಥಿತಿಗೆ ಅವರ ಆಯ್ಕೆ ನೂರಕ್ಕೆ ನೂರರಷ್ಟು ಸರಿಯಾಗಿದೆ. ಈ ಹಿಂದೆ ವಿಜಯೇಂದ್ರ ಅವರು ಬಿಜೆಪಿ ಉಪಾಧ್ಯಕ್ಷರಾಗಿದ್ದರು. ಅವರಿಗೆ ಅನುಭವ ಇದೆ. ಎಲ್ಲ ಜಿಲ್ಲೆಯ ನಾಯಕರ ಪರಿಚಯ ಅವರಿಗೆ ಇದೆ. ಹೀಗಾಗಿ ಮುಂದಿನ ಚುನಾವಣೆಗೆ ಇದು ಒಳ್ಳೆಯ ಬೆಳವಣಿಗೆಯಾಗಿದೆ ಎಂದು ಎಸ್.ಟಿ. ಸೋಮಶೇಖರ್‌ ಹೇಳಿದರು.

ವಿಜಯೇಂದ್ರ ಆಯ್ಕೆ ಕುಟುಂಬ ರಾಜಕಾರಣ ಅಲ್ಲ

ಇದು ಕುಟುಂಬ ರಾಜಕೀಯ ಅಲ್ಲ. ಬಿ.ಎಸ್. ಯಡಿಯೂರಪ್ಪ ಅವರು ಚುನಾವಣೆಗೆ ನಿಲ್ಲಲ್ಲ ಎಂದ ಮೇಲೆ ಅವರ ಮಗನಿಗೆ ಅಧಿಕಾರ ನೀಡಿದ್ದಾರೆ.‌ ವಿಜಯೇಂದ್ರ ಅವರು ಬಿಜೆಪಿಗಾಗಿ ದುಡಿದಿದ್ದಾರೆ. ಈಗ ಎಂಎಲ್‌ಎ ಆಗಿದ್ದಾರೆ. ಹೀಗಾಗಿ ಅವರಿಗೆ ಅಧ್ಯಕ್ಷ ಸ್ಥಾನವನ್ನು ನೀಡಿದ್ದಾರೆ ಎಂದು ಎಸ್.ಟಿ. ಸೋಮಶೇಖರ್‌ ಸಮರ್ಥನೆ ಮಾಡಿಕೊಂಡರು.

ಕಾಂಗ್ರೆಸ್ ಸರ್ಕಾರದ ಕಾರ್ಯಕ್ರಮ ಮಾಡಬಾರದಾ?

ನನ್ನನ್ನು ಯಾರು ಬೇಕಿದ್ದರೂ ಕಡೆಗಣಿಸಲಿ ಬಿಡಲಿ, ಕ್ಷೇತ್ರದ ಜನ ನನ್ನನು ಕಡೆಗಣಿಸಿಲ್ಲ. ಗ್ಯಾರಂಟಿ ಯೋಜನೆಗಳ ಬಗ್ಗೆ‌ 40 ಮಂದಿ ಮಹಿಳೆಯರ ಮೂಲಕ ಗ್ಯಾರಂಟಿ ತಲುಪುತ್ತಿರುವ ಬಗ್ಗೆ ಪರಿಶೀಲನೆ ನಡೆಸುತ್ತಿದ್ದೇನೆ. ಇದು ಕೆಲವರಿಗೆ ಸಹಿಸಲು ಸಾಧ್ಯವಾಗುತ್ತಿಲ್ಲ. ಸರ್ಕಾರಿ ಯೋಜನೆಗಳು ಜನರಿಗೆ ತಲುಪಬೇಕು ಎಂಬ‌ ದೃಷ್ಟಿಯಷ್ಟೇ ನನ್ನದು. ಈ ಹಿಂದೆ ಮೈಸೂರು ಉಸ್ತುವಾರಿ ಸಚಿವನಾಗಿದ್ದ ವೇಳೆ ಕೇವಲ ಮೂರು ಕ್ಷೇತ್ರದಲ್ಲಷ್ಟೆ ಬಿಜೆಪಿ ಇತ್ತು. ಹೀಗಿದ್ದರೂ, ಉಳಿದ ಕ್ಷೇತ್ರಗಳಲ್ಲಿಯೂ ಕೆಲಸ ಮಾಡುತ್ತಿದ್ದೆ. ಅದೇ ರೀತಿ ಈಗಲೂ ನಡೆಯುತ್ತಿದೆ. ಬಿಜೆಪಿಯಲ್ಲಿ ನಾನು ಗೆದ್ದಿದ್ದೇನೆ. ಹಾಗಾಗಿ ಕಾಂಗ್ರೆಸ್ ಸರ್ಕಾರದ ಕಾರ್ಯಕ್ರಮ ಮಾಡಬಾರದಾ? ಎಂದು ಎಸ್.ಟಿ. ಸೋಮಶೇಖರ್ ಪ್ರಶ್ನೆ‌ ಮಾಡಿದರು.

ಆ ಹೇಳಿಕೆ ವೈಯಕ್ತಿಕವಲ್ಲ

ಎಸ್.ಎಂ. ಕೃಷ್ಣ ಅವರು ಬಿಜೆಪಿ ಸೇರಿದ್ದರು. ಅವರಿಗೆ ನೀಡಿದ್ದ ಆಶ್ವಾಸನೆಗಳನ್ನು ಬಿಜೆಪಿ ಈಡೇರಿಸಿಲ್ಲ. ಈ ಹಿಂದೆ ಸಚಿವರಾಗಿದ್ದ ಶಂಕರ್, ಬಿ.ಸಿ.ನಾಗೇಶ್ ಸೇರಿದಂತೆ ಅನೇಕರಿಗೆ ಯಾವ ಸೌಲಭ್ಯ ನೀಡಿಲ್ಲ. ಮೊದಲು ಜಾಮೂನು ನೀಡಿ ಬಳಿಕ ವಿಷ ನೀಡುತ್ತಾರೆ ಎಂಬ ಹೇಳಿಕೆ ನನ್ನೊಂದಿಗೆ ಬಿಜೆಪಿ ಸೇರಿದ್ದ 17 ಮಂದಿಗೆ ಸೇರಿಸಿ ನೀಡಿದ್ದಾಗಿತ್ತು. ಈ ಹೇಳಿಕೆ ವೈಯಕ್ತಿಕವಾಗಿರಲಿಲ್ಲ. ನನಗೆ ಮಂತ್ರಿ ಸ್ಥಾನ ನೀಡಿದ್ದರು. ಏಳೆಂಟು ಜನರಿಗೆ ಸ್ಥಾನ ಸಿಕ್ಕಿರಲಿಲ್ಲ‌ ಎಂದು ಎಸ್.ಟಿ. ಸೋಮಶೇಖರ್‌ ತಿಳಿಸಿದರು.

ಇದನ್ನೂ ಓದಿ: BY Vijayendra : ವಿಜಯೇಂದ್ರ ಪದಗ್ರಹಣಕ್ಕೆ ಒಕ್ಕೊರಲ ಮಂತ್ರ; ಘಟಾನುಘಟಿ ನಾಯಕರಿಂದ ಶುಭ ಹಾರೈಕೆ

ಧರ್ಮಸ್ಥಳದಲ್ಲಿ ಕುಳಿತು ವಿಶ್ವನಾಥ್‌ ಬುಕ್‌ ಬರೆಯಲಿ!

ಎಂಎಲ್‌ಸಿ ಎಚ್. ವಿಶ್ವನಾಥ್ ಅವರು ತಮ್ಮ ಪುಸ್ತಕದಲ್ಲಿ ಸಮ್ಮಿಶ್ರ ಸರ್ಕಾರ ಉರುಳುವಾಗ ಕೆಲ ಶಾಸಕರು ಹಣ ಪಡೆದ ಬಗ್ಗೆ ಉಲ್ಲೆಖ ಮಾಡುವುದಾಗಿ ‌ಉಲ್ಲೇಖ ಮಾಡಿರುವ ಬಗ್ಗೆ ಪ್ರತಿಕ್ರಿಯೆ ನೀಡಿದ ಎಸ್.ಟಿ. ಸೋಮಶೇಖರ್‌, ಬುಕ್ ನಲ್ಲಿ ಯಾಕೆ? ಧರ್ಮಸ್ಥಳ, ಚಾಮುಂಡಿ ಬೆಟ್ಟದಲ್ಲಿ ಕುಳಿತುಕೊಳ್ಳಲಿ. ಅಲ್ಲೇ ಬುಕ್ ಬರೆದು, ಓದಲಿ. ಅವರು ಚಾಮುಂಡಿ ಬೆಟ್ಟಕ್ಕೆ ಹೆಚ್ಚಾಗಿ ಹೋಗುತ್ತಾರಲ್ಲ. ಅಲ್ಲಿಯೇ ಕುಳಿತು ಬುಕ್ ಓದಲಿ. ಅವರಿಗೂ ಬಿಜೆಪಿಯಲ್ಲಿ ಮಂತ್ರಿ ಸ್ಥಾನ ಸಿಗಲಿಲ್ಲ ಅಲ್ಲವೇ? ಎಂದು ತಿರುಗೇಟು ನೀಡಿದರು.

Exit mobile version