ಬೆಂಗಳೂರು: ಮಾಜಿ ಸಚಿವ, ಯಶವಂತಪುರ ಶಾಸಕ ಎಸ್.ಟಿ. ಸೋಮಶೇಖರ್ (Yeshwanthpur MLA ST Somashekar) ಅವರು ಆಪರೇಷನ್ ಹಸ್ತಕ್ಕೆ (Operation Hasta ) ಒಳಪಟ್ಟಿದ್ದಾರೆಯೇ ಎಂಬ ಚರ್ಚೆ ದಟ್ಟವಾಗಿದೆ. ಅವರ ಇತ್ತೀಚಿನ ನಡೆ ಸಹ ಇದಕ್ಕೆ ಪುಷ್ಟೀಕರಣವನ್ನು ನೀಡುತ್ತದೆ. ಸಿಎಂ ಸಿದ್ದರಾಮಯ್ಯ (CM Siddaramaiah) ಹಾಗೂ ಡಿಸಿಎಂ ಡಿ.ಕೆ. ಶಿವಕುಮಾರ್ (DCM DK Shivakumar) ಭೇಟಿ ಸೇರಿದಂತೆ ಅವರ ಹಲವು ಹೇಳಿಕೆಗಳು, ಬೆಂಬಲಿಗರ ನಡೆ ರಾಜ್ಯ ರಾಜಕೀಯದಲ್ಲಿ (Karnataka Politics) ಹಲವು ಬದಲಾವಣೆಗಳಾಗುವ ಮುನ್ಸೂಚನೆಯನ್ನು ಕೊಡುತ್ತಿದೆ. ಈ ನಡುವೆ ಅವರ ಮುನಿಸನ್ನು ಶಮನ ಮಾಡುವ ನಿಟ್ಟಿನಲ್ಲಿ ಯಶವಂತಪುರ ಕ್ಷೇತ್ರದಲ್ಲಿ ಪಕ್ಷ ವಿರೋಧಿ ಚಟುವಟಿಕೆ ಮಾಡಿದ ಆರೋಪದ ಮೇರೆಗೆ ಇಬ್ಬರನ್ನು ಉಚ್ಚಾಟಿಸಲಾಗಿದೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಎಸ್‌ಟಿಎಸ್, ಇಬ್ಬರನ್ನು ಉಚ್ಚಾಟನೆ ಮಾಡಿದ ಕೂಡಲೇ ಒಳಗೆ ಮತ್ತು ಹೊರಗೆ ಇರುವ ಪರಿಸ್ಥಿತಿಗಳು ಬದಲಾಗುವುದಿಲ್ಲ ಎಂದು ಖಡಕ್ ಆಗಿಯೇ ಉತ್ತರ ಕೊಟ್ಟಿದ್ದಾರೆ.
ಆಪರೇಷನ್ ಹಸ್ತದ ಬಗ್ಗೆ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಯಾರನ್ನೂ ಉಚ್ಚಾಟನೆ ಮಾಡಿ ಎಂದು ನಾನು ಹೇಳಿಲ್ಲ. ನೆಮ್ಮದಿಯಾಗಿ ಕೆಲಸ ಮಾಡಲು ಅವಕಾಶ ನೀಡಿ ಎಂಬುದಷ್ಟೇ ನನ್ನ ಬೇಡಿಕೆ ಆಗಿದೆ. ಯಾರೋ ಇಬ್ಬರನ್ನು ಪಕ್ಷದಿಂದ ಕಿತ್ತೊಗೆದಾಕ್ಷಣ ಎಲ್ಲವೂ ಬದಲಾಗದು. ಬಿಜೆಪಿಯ ಎಲ್ಲ ವಾಟ್ಸಾಪ್ ಗ್ರೂಪಲ್ಲಿ ವಿಡಿಯೊಗಳನ್ನು ಹಾಕುತ್ತಿದ್ದಾರೆ. ಮಾಜಿ ಸಚಿವ ಕೆ.ಎಸ್. ಈಶ್ವರಪ್ಪ ಅವರು ವಲಸೆ ಬಂದವರಲ್ಲಿ ಇರುವವವರು ಇರುತ್ತಾರೆ. ಹೋಗುವವರು ಹೋಗುತ್ತಾರೆ ಎಂದೆಲ್ಲ ಹೇಳಿದ್ದಾರೆ. ಅಂತಹ ಹೇಳಿಕೆಗಳನ್ನು ನಿಲ್ಲಿಸಬೇಕು ಎಂಬುದು ನನ್ನ ವಾದವಾಗಿದೆ ಎಂದು ಎಸ್.ಟಿ. ಸೋಮಶೇಖರ್ ಹೇಳಿದರು.
ಇದನ್ನೂ ಓದಿ: Physical abuse : ಅಬ್ಬಾ ಇವನೆಂಥಾ ಕಾಮುಕ? ; ಅಕ್ಕ-ತಮ್ಮನ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿದ 21ರ ಯುವಕ
ಚುನಾವಣೆಗೆ ಮೊದಲು ಸೋಮಶೇಖರ್ ಈಗ ಹೋಗುತ್ತಾನೆ ಅಂತೆಲ್ಲ ಹೇಳಿದ್ದರು. ಬಿಜೆಪಿ ಬಿಡಲ್ಲ, ಕಾಂಗ್ರೆಸ್ ಹೋಗಲ್ಲ ಅಂತ ಹೇಳಿದ್ದೆ. ಈಗ ಸಿಎಂ ಸಿದ್ದರಾಮಯ್ಯ (CM Siddaramaiah) ಜತೆ ಮಾತನಾಡಿದ್ದೇ ತಪ್ಪಾ? ಸಿದ್ದರಾಮಯ್ಯ ಅವರ ಜತೆ ರಾಜಕಾರಣ ಮಾತನಾಡಿಲ್ಲ. ನಮ್ಮ ಕ್ಷೇತ್ರದ ವಿಚಾರದ ಬಗ್ಗೆ ಮಾತ್ರವೇ ಮಾತನಾಡಿದ್ದೇನೆ. ಅದಾದ ಮೇಲೆ ಸೋಮಶೇಖರ್ ಕಾಂಗ್ರೆಸ್ ಎಂಪಿಗೆ ಹೋಗುತ್ತಾನೆ. ಮಗ ಎಂಎಲ್‌ಎಗೆ ನಿಲ್ತಾನೆ
ಬಿಜೆಪಿಯಲ್ಲಿ ಅಪ್ಪ ಮಗನಿಗೆ ಟಿಕೆಟ್ ಕೊಡಲ್ಲ ಅಂತೆಲ್ಲ ಸುದ್ದಿಯಾಗಿದೆ. ಹೀಗಾಗಿ ಪಕ್ಷದ ಒಳಗೆ ಒಳ್ಳೆಯ ವಾತಾವರಣ ಸೃಷ್ಟಿ ಮಾಡಿ ಅಂತ ಮಾಜಿ ಸಚಿವ ಸಿ.ಟಿ. ರವಿ ಅವರಿಗೆ ಹೇಳಿದ್ದೇನೆ ಎಂದರು.
ಯಡಿಯೂರಪ್ಪ ಅವರನ್ನು ಹೊರತಾಗಿ ನಾನು ಏನೂ ಮಾಡಲ್ಲ
ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ ಅವರು ಕರೆದಿದ್ದ ಸಭೆಗೆ ಗೈರಾಗಿರುವ ಬಗ್ಗೆ ಪ್ರತಿಕ್ರಿಯೆ ನೀಡಿದ ಎಸ್.ಟಿ. ಸೋಮಶೇಖರ್, ಯಡಿಯೂರಪ್ಪ ಅವರು ನನ್ನ ಜತೆ ಮಾತನಾಡಿದ್ದಾರೆ. ನನಗೆ ತಡವಾಗಿ ಮೆಸೇಜ್ ಸಿಕ್ಕಿದೆ ಅಂತ ಹೇಳಿದೆ. ಯಡಿಯೂರಪ್ಪ ಅವರು ನಮ್ಮ ನಾಯಕರು. ನನ್ನನ್ನು ಬಿಜೆಪಿಗೆ ಕರೆತಂದವರು ಅವರೇ. ನನ್ನನ್ನು ಸಹಕಾರ ಸಚಿವನನ್ನಾಗಿ ಮಾಡಿ, ಮೈಸೂರು ಉಸ್ತುವಾರಿ ಕೂಡ ನೀಡಿದ್ದರು. ಯಡಿಯೂರಪ್ಪ ಅವರನ್ನು ಹೊರತಾಗಿ ನಾನು ಏನೂ ಮಾಡಲ್ಲ. ಬಾ ಮನೆಗೆ ಅಂತ ಕರೆದಿದ್ದಾರೆ. ಹೋಗಿ ಭೇಟಿಯಾಗಿ ಮಾತನಾಡುತ್ತೇನೆ. ದುಡುಕಿ ನಿರ್ಧಾರ ಮಾಡಬೇಡ ಅಂತ ಹೇಳಿದ್ದಾರೆ. ಏನಾಗಿದೆ ಅಂತ ಮಾಹಿತಿ ಕೊಡುತ್ತೇನೆ ಎಂದು ಹೇಳಿದರು.
ಕಾಂಗ್ರೆಸ್‌ನವರು ಸಂಪರ್ಕ ಮಾಡಿದ್ದಾರೆ
ಕಾಂಗ್ರೆಸ್ ಸೇರ್ಪಡೆ ಬಗ್ಗೆ ಮಾಧ್ಯಮದವರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಎಸ್.ಟಿ. ಸೋಮಶೇಖರ್, ನಾನು ಪ್ರಬಲ ನಾಯಕ ಅಲ್ಲ. ಯಶವಂತಪುರ ಕ್ಷೇತ್ರಕ್ಕೆ ಮಾತ್ರ ಸೀಮಿತ. ಯಶವಂತಪುರ ಹೊರತುಪಡಿಸಿ ಯಾವ ನಾಯಕನೂ ನಾನಲ್ಲ. ಸಮುದಾಯದ ಪ್ರಬಲ ನಾಯಕನೂ ಅಲ್ಲ. ಸಂಪರ್ಕ ಮಾಡುತ್ತಾರೆ ಅಂದರೆ ನಾನು ಕಾಂಗ್ರೆಸ್‌ನಲ್ಲಿ 20 ವರ್ಷ ಇದ್ದೆ. ಹಾಗಾಗಿ ನನ್ನ ಸಂಪರ್ಕ ಮಾಡಿದ್ದಾರೆ. ಕಳೆದ ಬಾರಿ ಚುನಾವಣೆ ಮೊದಲು ಸಂಪರ್ಕ ಮಾಡಿದ್ದರು. ನಾನು ಕಾಂಗ್ರೆಸ್‌ಗೆ ಹೋದೆನಾ? ಹೋಗಲಿಲ್ಲ. ಆದರೂ ನಾನು ಹೋಗುತ್ತಿರುವುದಾಗಿ ಕೆಲವು ಕ್ರಿಯೇಟ್ ಮಾಡುತ್ತಾರೆ. ಸೋಮಶೇಖರ್ ಹೋಗ್ತಾನೆ, ಈ ವಾರದಲ್ಲಿ ಹೋಗ್ತಾನೆ ಅಂತ ಸುದ್ದಿ ಹಬ್ಬಿಸಿದ್ದಾರೆ ಎಂದು ಹೇಳಿದರು.
ಬೆಂಬಲಿಗರು ಕಾಂಗ್ರೆಸ್ ಪಕ್ಷಕ್ಕೆ ಸೇರುವ ವಿಚಾರದ ಬಗ್ಗೆ ಪ್ರತಿಕ್ರಿಯೆ ನೀಡಿದ ಸಚಿವ ಎಸ್.ಟಿ ಸೋಮಶೇಖರ್, ನಮಗೆ ಟಿಕೆಟ್ ಕೊಡುತ್ತಾರೋ ಇಲ್ಲವೋ, ಡಿ ಲಿಮಿಟೇಷನ್ ಮಾಡುತ್ತಾರೋ ಇಲ್ಲವೋ ಅನ್ನೋದು. ಟಿಕೆಟ್ ಆಕಾಂಕ್ಷಿಗಳಿಗೆ ಅನುಮಾನ ಇದೆ. ಈಗಾಗಲೇ ಕೆಲವರ ಜತೆ ಮಾತನಾಡಿದ್ದೇನೆ. ಯಾರು ಹೋಗುತ್ತಾರೆ ಅವರೆಲ್ಲರಿಗೂ ಮಾತನಾಡಿದ್ದೇನೆ. ಯಾವ ಕ್ಯಾಟಗಿರಿ ಆದರೆ ಏನು ನೋಡೋಣ ಅಂತ ಹೇಳಿದ್ದೇನೆ ಎಂದು ತಿಳಿಸಿದರು.
ನಮ್ಮ ಅವಧಿಯಲ್ಲಿಯೇ ಬಿಬಿಎಂಪಿ ಚುನಾವಣೆ ನಡೆಸಲು ಬಿಬಿಎಂಪಿ ಸಮಸ್ಯೆ ಇತ್ತು. ಡಿ ಲಿಮಿಟೇಷನ್ ಸಮಸ್ಯೆ ಇತ್ತು, ವಾರ್ಡ್ ವಿಂಗಡಣೆ ಆಗಿತ್ತು. ಮೀಸಲಾತಿ ಸಮಸ್ಯೆ ಆಗಿ ಸುಪ್ರೀಂ ಕೋರ್ಟ್‌ಗೆ ಹೋಗಲಾಗಿತ್ತು. ಬಿಜೆಪಿ ಸರ್ಕಾರ ಚುನಾವಣೆ ಮಾಡಲು ರೆಡಿ ಇತ್ತು ಎಂದು ಎಸ್.ಟಿ ಸೋಮಶೇಖರ್ ಹೇಳಿದರು.
ಕ್ಷೇತ್ರದ ಬಗ್ಗೆ ಸಿಎಂ ಜತೆ ಚರ್ಚೆ ಮಾಡಿದ್ದೇನೆ
ಸಿಎಂ ಭೇಟಿ ವಿಚಾರದ ಬಗ್ಗೆ ಪ್ರತಿಕ್ರಿಯೆ ನೀಡಿದ ಎಸ್.ಟಿ. ಸೋಮಶೇಖರ್, ಸಿಎಂ ಭೇಟಿಗೆ ಮೊದಲೇ ಅವಕಾಶ ಕೇಳಿದ್ದೆ. ಕ್ಷೇತ್ರದ ಬಗ್ಗೆ ಸಿಎಂ ಸಿದ್ದರಾಮಯ್ಯ ಜತೆ ಚರ್ಚೆ ಮಾಡಿದ್ದೇನೆ. ಪೇಪರ್ಸ್ ತರಬೇಕು ಅಂತ ಹೇಳಿದ್ದರು. ಬಿಡಿಎ ಚೇರ್ಮನ್, ಕಾರ್ಪೋರೇಷನ್, ಕಮಿಷನರ್ ಕರೆಸಿ ಸಮಸ್ಯೆ ಬಗೆಹರಿಸುವುದಾಗಿ ಹೇಳಿದ್ದರು. ಹೀಗಾಗಿ ಅವರನ್ನು ಭೇಟಿ ಮಾಡಿದ್ದೇನೆ ಎಂದರು.
ತಮ್ಮ ಕ್ಷೇತ್ರಕ್ಕೆ 7.64 ಕೋಟಿ ಅನುದಾನ ಬಿಡುಗಡೆ ವಿಚಾರದ ಬಗ್ಗೆ ಪ್ರತಿಕ್ರಿಯೆ ನೀಡಿದ ಎಸ್.ಟಿ. ಸೋಮಶೇಖರ್, ನಮ್ಮ ಕ್ಷೇತ್ರದಲ್ಲಿ ಸಮಸ್ಯೆ ಆಗಿತ್ತು. ಒಂದೇ ಒಂದು ಬೋರ್ವೆಲ್ ಕೊರೆಸಲು ಆಗಿರಲಿಲ್ಲ. ಕುಡಿಯುವ ನೀರು ಕೊಡಲು ಆಗಿರಲಿಲ್ಲ. ಧರಣಿ ಕೂರುವುದಾಗಿ ಹೇಳಿದ್ದೆ. ಈ ಸಂಬಂಧ ಬಿಬಿಎಂಪಿ ಕಮಿಷನರ್ ಹಾಗೂ ರಾಕೇಶ್ ಸಿಂಗ್ ಅವರಿಗೂ ಮಾತನಾಡಿದ್ದೆ. ಗಾಡಿಯಲ್ಲಿ ನೀರು ಕೊಡುವುದಕ್ಕೂ ಸಮಸ್ಯೆ ಆಗಿತ್ತು. ಈ ಬಗ್ಗೆ ಡಿಸಿಎಂ ಡಿ.ಕೆ. ಶಿವಕುಮಾರ್ ಬಳಿಯೂ ಮಾತನಾಡಿದ್ದೆ. ಕೆಂಪೇಗೌಡ ಬಡಾವಣೆ ವೀಕ್ಷಣೆಗೆ ಬಂದಿದ್ದರು. ಆಗ ವಾಸ್ತವ ಸ್ಥಿತಿ ಹೇಳಿದ್ದೆ ಎಂದು ತಿಳಿಸಿದರು.
ಇದನ್ನೂ ಓದಿ: Gruha Lakshmi Scheme : ಆಗಸ್ಟ್ 30ಕ್ಕೆ ಗೃಹಲಕ್ಷ್ಮಿ ದುಡ್ಡು ಬರುತ್ತೆ, ನಿಮ್ಗೂ ಹಣ ಬೇಕೆಂದ್ರೆ ತಕ್ಷಣವೇ ಹೀಗೆ ಮಾಡಿ!
ಬೆಂಬಲಿಗರು ಬಿಜೆಪಿ ತೊರೆದು ಕಾಂಗ್ರೆಸ್ ಹೋದರೆ ಮುಂದೇನು? ಲೋಕಸಭಾ ಚುನಾವಣೆಗೆ ಸಮಸ್ಯೆ ಆಗುವುದಿಲ್ಲವೇ ಎಂಬ ಬಗ್ಗೆ ಪ್ರತಿಕ್ರಿಯೆ ನೀಡಿದ ಎಸ್.ಟಿ. ಸೋಮಶೇಖರ್, ಕಾರ್ಪೊರೇಷನ್ ವಾರ್ಡಿಗೆ ಹಲವರು ಆಕಾಂಕ್ಷಿಗಳು ಇದ್ದಾರೆ. ಹಲವು ಜಾತಿ, ಸಮುದಾಯದವರಿದ್ದಾರೆ. ಸಂಘಟನೆಗೆ ಸಮಸ್ಯೆ ಆಗಲ್ಲ. ಎಲ್ಲರಿಗೂ ಕ್ಯಾಟಗಿರಿ ಚೇಂಜ್ ಮಾಡಬಹುದು ಎಂಬ ಆತಂಕ ಇದೆ. ಇಲ್ಲಿ ಯಾವುದೇ ಸಮಸ್ಯೆ ಆಗಲ್ಲ ಎಂದು ಹೇಳಿದರು.