Site icon Vistara News

Stabbing Case: ಬಿಜೆಪಿ ಕಾರ್ಯಕರ್ತರಿಗೆ ಚೂರಿ ಇರಿತ ಪ್ರಕರಣ; ಐವರು ಆರೋಪಿಗಳ ಬಂಧನ

Stabbing Case

ಮಂಗಳೂರು: ಬಿಜೆಪಿ ವಿಜಯೋತ್ಸವ ಮೆರವಣಿಗೆ ವೇಳೆ ಇಬ್ಬರು ಕಾರ್ಯಕರ್ತರಿಗೆ ಚೂರಿ ಇರಿತ ಪ್ರಕರಣ ಸಂಬಂಧ ಐವರು ಆರೋಪಿಗಳನ್ನು ಕೊಣಾಜೆ ಠಾಣೆ ಪೊಲೀಸರು ಬಂಧಿಸಿದ್ದಾರೆ. ಸಿಸಿಟಿವಿ ದೃಶ್ಯಗಳ ಆಧಾರದಲ್ಲಿ ಐವರನ್ನು ಪೊಲೀಸರು ಸೆರೆಹಿಡಿದ್ದಾರೆ. ಇದೇ ಪ್ರಕರಣದಲ್ಲಿ ಮಸೀದಿ ಎದುರು ಪ್ರಚೋದನಕಾರಿ ಘೋಷಣೆ ಕೂಗಿದ ಆರೋಪದಡಿ ಬಿಜೆಪಿ ಕಾರ್ಯಕರ್ತರ ಮೇಲೂ ಪೊಲೀಸರು ಎಫ್‌ಐಆರ್ ದಾಖಲಿಸಿದ್ದಾರೆ.

ಶಾಕೀರ್(28), ಅಬ್ದುಲ್ ರಜಾಕ್(40), ಅಬೂಬಕ್ಕರ್ ಸಿದ್ದಿಕ್(35), ಸವಾದ್(18) ಹಾಗೂ ಹಫೀಝ್(24) ಬಂಧಿತ ಅರೋಪಿಗಳು. ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಬೋಳಿಯಾರು ಎಂಬಲ್ಲಿ ಭಾನುವಾರ ರಾತ್ರಿ ನರೇಂದ್ರ ಮೋದಿ ಮೂರನೇ ಬಾರಿ ಪ್ರಧಾನಿಯಾಗಿ ಪ್ರಮಾಣ ವಚನ ಸ್ವೀಕರಿಸಿದ ಹಿನ್ನೆಲೆಯಲ್ಲಿ ಆಯೋಜಿಸಲಾಗಿದ್ದ ವಿಜಯೋತ್ಸವ ಕಾರ್ಯಕ್ರಮ ಮುಗಿಸಿಕೊಂಡು ಮನೆಗೆ ಹೋಗುತ್ತಿದ್ದ ಬೋಳಿಯಾರಿನ ಬಿಜೆಪಿ ಕಾರ್ಯಕರ್ತರಾದ ಹರೀಶ್ ‌ಹಾಗೂ ನಂದ ಕುಮಾರ್‌ಗೆ ದುಷ್ಕರ್ಮಿಗಳು ಚಾಕುವಿನಿಂದ ಇರಿದಿದ್ದರು.

ಮೂವರು ಬಿಜೆಪಿ ಕಾರ್ಯಕರ್ತರು ಬೋಳಿಯಾರ್ ಮಸೀದಿಯ ಮುಂದೆ ಹೋಗುವಾಗ ಘೋಷಣೆಗಳನ್ನು ಕೂಗಿದ್ದಾರೆ ಎಂದು ಕೆಲ ಬೈಕ್‌ಗಳಲ್ಲಿ 20-25 ಮುಸ್ಲಿಂ ಯುವಕರ ತಂಡ ಅವರನ್ನು ಹಿಂಬಾಲಿಸಿ, ಹಲ್ಲೆ ನಡೆಸಿತ್ತು. ಇದೇ ವೇಳೆ ಕೃಷ್ಣ ಕುಮಾರ್ ಎಂಬಾತನಿಗೆ ಹಿಗ್ಗಾಮುಗ್ಗಾ ಹಲ್ಲೆ ಮಾಡಲಾಗಿತ್ತು. ಪ್ರಕರಣಕ್ಕೆ ಸಂಬಂಧಿಸಿ ಇದೀಗ ಐವರನ್ನು ಪೊಲೀಸರು ಬಂಧಿಸಿದ್ದಾರೆ. ಇನ್ನುಳಿದ ಆರೋಪಿಗಳಿಗಾಗಿ ಹುಡುಕಾಟ ನಡೆಸಲಾಗುತ್ತಿದೆ.

ಪ್ರಚೋದನಕಾರಿ ಘೋಷಣೆ; ಬಿಜೆಪಿ ಕಾರ್ಯಕರ್ತರ ವಿರುದ್ಧವೂ ಪ್ರಕರಣ

ಮಂಗಳೂರು: ಚೂರಿ ಇರಿತ ಪ್ರಕರಣ ಸಂಬಂಧ ಬಿಜೆಪಿ ಕಾರ್ಯಕರ್ತರ ವಿರುದ್ಧವೂ ಪ್ರಕರಣ ದಾಖಲಾಗಿದೆ. ಮಸೀದಿ ಎದುರು ಪ್ರಚೋದನಕಾರಿ ಘೋಷಣೆ ಕೂಗಿದ ಆರೋಪದಡಿ ಕೊಣಾಜೆ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ. ಬೋಳಿಯಾರ್ ಜುಮ್ಮಾ ಮಸೀದಿ ಅಧ್ಯಕ್ಷ ಪಿ.ಕೆ.ಅಬ್ದುಲ್ಲ ನೀಡಿದ ದೂರಿನಡಿ ಸುರೇಶ್, ವಿನಯ್, ಸುಭಾಷ್, ರಂಜಿತ್ ಹಾಗೂ ಧನಂಜಯ್ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.

ಇದನ್ನೂ ಓದಿ | Hebbe Waterfalls : ಪ್ರಾಣ ಕಸಿದ ಸೆಲ್ಫಿ ಕ್ರೇಜ್; ಫಾಲ್ಸ್‌ನಲ್ಲಿ ಕಾಲು ಜಾರಿ ಬಿದ್ದ ಪ್ರವಾಸಿಗ ಸಾವು

ನೆನ್ನೆ ರಾತ್ರಿ 8.50 ರ ಸುಮಾರಿಗೆ ಕೆಲ ಯುವಕರು ಮಸೀದಿ ಎದುರು ಪ್ರಚೋದನಕಾರಿ ಘೋಷಣೆ ಕೂಗಿದ್ದಾರೆಂದು ದೂರು ನೀಡಲಾಹಿದೆ. ಮಸೀದಿ ಬಳಿ ನಿಂತಿದ್ದವರಿಗೂ ಕೆಟ್ಟ ಶಬ್ದಗಳಲ್ಲಿ ನಿಂದಿಸಿದ ಆರೋಪದಲ್ಲಿ ಐಪಿಸಿ 143, 147, 148, 153A, 504, 506, 149ರಡಿ ಐವರ ವಿರುದ್ಧ ಪ್ರಕರಣ ದಾಖಲಾಗಿದೆ.

Exit mobile version