ಬೆಂಗಳೂರು: ಪ್ರಜಾಪ್ರಭುತ್ವದ ಹಬ್ಬಕ್ಕೆ ಕರುನಾಡೇ ಸನ್ನದ್ಧವಾಗಿದೆ. ಬುಧವಾರ ಸೂರ್ಯ ಉದಯಿಸುತ್ತಲೇ, ಕರ್ನಾಟಕದಲ್ಲಿ ಹೊಸ ಸರ್ಕಾರದ ಉದಯಕ್ಕೆ ನಾಡಿನ ಮತದಾರರು ನಾಂದಿ ಹಾಡಲಿದ್ದಾರೆ. ಚುನಾವಣೆ ಆಯೋಗವು ಕೂಡ ಶಾಂತಿಯುತ ಹಾಗೂ ಪಾರದರ್ಶಕ ಮತದಾನಕ್ಕಾಗಿ ಸಕಲ ರೀತಿಯಲ್ಲಿ ಸನ್ನದ್ಧವಾಗಿದೆ. ಮಸ್ಟರಿಂಗ್ ಸೆಂಟರ್‌ಗಳಿಂದ ವಿವಿಪ್ಯಾಟ್‌ಗಳು ಮತಗಟ್ಟೆಗಳಿಗೆ ತೆರಳಿವೆ. ಸುಸೂತ್ರ ಹಾಗೂ ಸಮರ್ಥವಾಗಿ ಚುನಾವಣೆ ನಡೆಸಲು ನುರಿತ ಸಿಬ್ಬಂದಿಯ ಪಡೆಯೇ ಸಿದ್ಧವಾಗಿದೆ. ಹಾಗಾದರೆ, ರಾಜ್ಯಾದ್ಯಂತ ಚುನಾವಣೆ ಆಯೋಗವು ಹೇಗೆ ಸಿದ್ಧತೆ ಕೈಗೊಂಡಿದೆ? ಯಾವ ರೀತಿಯ ಭದ್ರತೆ ಇದೆ? ಸಿಬ್ಬಂದಿಗೆ ಹೇಗೆ ತರಬೇತಿ ನೀಡಲಾಗಿದೆ? ರಾಜ್ಯದಲ್ಲಿರುವ ಮತದಾರರು ಎಷ್ಟು ಎಂಬುದು ಸೇರಿ ವಿವಿಧ ಮಾಹಿತಿ ಇಲ್ಲಿದೆ.
58,545 ಮತಗಟ್ಟೆ, ಬೆಳಗ್ಗೆ 7 ಗಂಟೆಯಿಂದ ಮತದಾನ
ರಾಜ್ಯಾದ್ಯಂತ ಬೆಳಗ್ಗೆ 7 ಗಂಟೆಯಿಂದಲೇ ಮತದಾನ ಆರಂಭವಾಗಲಿದ್ದು, ಮತಗಟ್ಟೆಗಳಲ್ಲಿ ಮತದಾನಕ್ಕೆ ಎಲ್ಲ ಸಿದ್ಧತೆ ಮಾಡಿಕೊಳ್ಳಲಾಗಿದೆ. ರಾಜ್ಯಾದ್ಯಂತ 58,545 ಮತಗಟ್ಟೆಗಳಿವೆ. ಇವುಗಳಲ್ಲಿಯೇ ಪಿಂಕ್ ಮತಗಟ್ಟೆ, ಯುವ ಮತದಾರರ ಮತಗಟ್ಟೆ, ಸಿರಿಧಾನ್ಯ ಮತಗಟ್ಟೆ, ವಿಶೇಷ ಚೇತನ ಮತಗಟ್ಟೆ, ಸಂಸ್ಕೃತಿ ಮತಗಟ್ಟೆ, ಪರಿಸರ(ಹಸಿರು ಬಣ್ಣದ) ಮತಗಟ್ಟೆ, ವಿಜ್ಞಾನ ಮತ್ತು ತಂತ್ರಜ್ಞಾನ ಮತಗಟ್ಟೆ, ಮಾಜಿ ಸೈನಿಕ ಮತಗಟ್ಟೆ, ತೃತೀಯ ಲಿಂಗಿ ಮತಗಟ್ಟೆ, ಕ್ರೀಡಾ ಮತಗಟ್ಟೆ ಸೇರಿ ಹಲವು ಮತಗಟ್ಟೆಗಳನ್ನು ವಿಭಾಗ ಮಾಡಲಾಗಿದೆ.
ಒಟ್ಟು ಮತದಾರರು ಎಷ್ಟು?
ರಾಜ್ಯದಲ್ಲಿ 5,30,85,566 ಸಾಮಾನ್ಯ ಮತದಾರರಿದ್ದು, 47,488 ಸೇವಾ ಮತದಾರರು ಸೇರಿ ಒಟ್ಟು 5,31,33,054 ಮತದಾರರಿದ್ದಾರೆ. ಇವರಲ್ಲಿ ಪುರುಷರು 2,67,28,053 ಇದ್ದರೆ, ಮಹಿಳಾ ಮತದಾರರ ಸಂಖ್ಯೆ 2,64,00,074 ಇದೆ. ಒಟ್ಟು ಮತದಾರರ ಪೈಕಿ 571,281 ವಿಶೇಷ ಚೇತನರಿದ್ದರೆ, 3,35,387 ಪುರುಷರಿದ್ದರೆ, 2,35,833 ಮಹಿಳೆಯರಿದ್ದಾರೆ. ಇತರೆ 61 ಮತದಾರರಿದ್ದಾರೆ. ಇನ್ನು ಇದೇ ಮೊದಲ ಬಾರಿಗೆ ಮತದಾನ ಮಾಡುವವರ ಸಂಖ್ಯೆ 11,71,558 ಇದೆ. ಇವರಲ್ಲಿ 6,45,140 ಯುವಕರಾದರೆ, 5,26,237 ಯುವತಿಯರಾಗಿದ್ದಾರೆ.
ಕಣದಲ್ಲಿರುವ ಅಭ್ಯರ್ಥಿಗಳು ಎಷ್ಟು?
ರಾಜ್ಯದಲ್ಲಿ 2,615 ಅಭ್ಯರ್ಥಿಗಳು ಕಣದಲ್ಲಿದ್ದಾರೆ. ಇವರಲ್ಲಿ 2,430 ಪುರುಷರು, 184 ಮಹಿಳೆಯರು ಹಾಗೂ ಒಬ್ಬ ಮಂಗಳಮುಖಿ ಸ್ಪರ್ಧಿಸಿದ್ದಾರೆ. ಚುನಾವಣೆಯಲ್ಲಿ ಸ್ಪರ್ಧಿಸಲು 3,432 ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿದ್ದರು. ಇವರಲ್ಲಿ 573 ನಾಮಪತ್ರಗಳನ್ನು ತಿರಸ್ಕರಿಸಿದರೆ, 517 ಜನ ನಾಮಪತ್ರ ಹಿಂಪಡೆದಿದ್ದಾರೆ.
ಇದನ್ನೂ ಓದಿ: Karnataka Election 2023: ಚುನಾವಣೆ ಅಶಯ: ಕಳೆಯಿಲ್ಲದ ಕರಾವಳಿ ಕರ್ನಾಟಕ ಹೊಳೆಯುವುದು ಹೇಗೆ?
ಎರಡೆರಡು ಕಡೆ ಮತಯಂತ್ರ ಬಳಕೆ ಏಕೆ?
ರಾಜ್ಯದ 16 ವಿಧಾನಸಭೆ ಕ್ಷೇತ್ರಗಳಲ್ಲಿ ಎರಡೆರಡು ಮತಯಂತ್ರಗಳನ್ನು ಬಳಸಲಾಗುತ್ತಿದೆ. 15ಕ್ಕಿಂತ ಹೆಚ್ಚಿನ ಅಭ್ಯರ್ಥಿಗಳು ಸ್ಪರ್ಧಿಸಿರುವ ಕ್ಷೇತ್ರಗಳಲ್ಲಿ ಎರಡು ಮತಯಂತ್ರಗಳನ್ನು ಬಳಸಲಾಗುತ್ತಿದೆ. ರಾಜಾಜಿನಗರ, ಹೊಸಕೋಟೆ, ಯಲಹಂಕ, ಬ್ಯಾಟರಾಯನಪುರ, ಬಳ್ಳಾರಿ ನಗರ, ಹನೂರು, ಗೌರಿಬಿದನೂರು, ಚಿಕ್ಕಮಗಳೂರು, ಚಿತ್ರದುರ್ಗ, ಹುಬ್ಬಳ್ಳಿ-ಧಾರವಾಡ ಸೆಂಟ್ರಲ್, ಕೋಲಾರ, ಗಂಗಾವತಿ, ಶ್ರೀರಂಗಪಟ್ಟಣ, ಕೃಷ್ಣರಾಜ, ನರಸಿಂಹರಾಜ, ರಾಯಚೂರಿನಲ್ಲಿ ಎರಡು ಮತಯಂತ್ರಗಳನ್ನು ಬಳಸಲಾಗುತ್ತಿದೆ.
ಬಿಗಿ ಬಂದೋಬಸ್ತ್
ಶಾಂತಿಯುತ ಮತದಾನಕ್ಕಾಗಿ ಮತಗಟ್ಟೆಗಳ ಸುತ್ತ ಭಾರಿ ಬಂದೋಬಸ್ತ್ ಮಾಡಲಾಗಿದೆ. ರಾಜ್ಯಾದ್ಯಂತ ಸುಗಮ ಮತದಾನಕ್ಕಾಗಿ 46,421 ಪೇದೆಗಳು, 27,990 ಹೋಮ್ ಗಾರ್ಡ್‌ಗಳು, 5,803 ಎಎಸ್‌ಐ, 2,610 ಪಿಎಸ್‌ಐ, 991 ಪಿಐ ಹಾಗೂ 304 ಡಿವೈಎಸ್‌ಪಿಗಳನ್ನು ನಿಯೋಜಿಸಲಾಗದೆ. ಸೂಕ್ಷ್ಮ ಮತಗಳಲ್ಲಿ ಇನ್ನೂ ಹೆಚ್ಚಿನ ಭದ್ರತೆ ಒದಗಿಸಲಾಗಿದೆ.
ಬೆಳಗ್ಗೆಯೇ ಮತ ಚಲಾಯಿಸಿ, ಇದು ವಿಸ್ತಾರ ಕಳಕಳಿ
ಬೆಳಗ್ಗೆ 7 ಗಂಟೆಗೇ ಮತದಾನ ಆರಂಭವಾಗುವ ಕಾರಣ 10-11 ಗಂಟೆಯೊಳಗೆ ಮತದಾನ ಮಾಡುವುದು ಒಳಿತು. ಬೇಸಿಗೆ ಕಾರಣ ಮಧ್ಯಾಹ್ನ ಬಿಸಿಲಲ್ಲಿ ಮತಗಟ್ಟೆಗೆ ತೆರಳುವುದು ಕಷ್ಟ ಎನಿಸುತ್ತದೆ. ಇನ್ನು ಸಾಯಂಕಾಲ ಹೆಚ್ಚಿನ ಜನ ಮತ ಹಾಕುವುದರಿಂದ ದೊಡ್ಡ ಸಾಲು ಇರುತ್ತದೆ. ಮಳೆ ಬರುವ ಸಾಧ್ಯತೆಯೂ ಇರುತ್ತದೆ. ಹಾಗಾಗಿ, ಬೆಳಗ್ಗೆಯೇ ಹಕ್ಕು ಚಲಾಯಿಸಿ ಎಂಬುದು ವಿಸ್ತಾರ ಕಳಕಳಿಯಾಗಿದೆ.