ಬೆಂಗಳೂರು: ಚುನಾವಣೆಗೂ ಮುನ್ನ ಘೋಷಿಸಿದ್ದ ಐದು ಗ್ಯಾರಂಟಿಗಳಲ್ಲೊಂದಾದ ಅನ್ನ ಭಾಗ್ಯ ಯೋಜನೆಯು ರಾಜ್ಯ ಸರ್ಕಾರಕ್ಕೆ ಕಗ್ಗಂಟಾಗಿ ಪರಿಣಮಿಸಿದೆ. ಎಲ್ಲವೂ ಸುಸೂತ್ರವಾಗಿ ನಡೆಯುತ್ತಿದೆ ಎನ್ನುತ್ತಿರುವಾಗಲೇ ಎಫ್‌ಸಿಐಗೆ ಕೇಂದ್ರ ಸರ್ಕಾರ ಬರೆದ ಪತ್ರವು ಯೋಜನೆಗೆ ಸಂಕಷ್ಟ ತಂದೊಡ್ಡಿದೆ. ಇದೇ ವೇಳೆ ರಾಜ್ಯ ಸರ್ಕಾರವು ಅನುಸರಿಸಿದ ಸಂಘರ್ಷದ ಮಾರ್ಗದಿಂದಾಗಿ ಪರಿಸ್ಥಿತಿ ಮತ್ತಷ್ಟು ಬಿಗಡಾಯಿಸಿತೇ ಎಂಬ ಮಾತುಗಳು ಕೇಳಿಬರುತ್ತಿವೆ.
ಅನ್ನಭಾಗ್ಯ ಯೋಜನೆಯನ್ನು ಜುಲೈ 1 ರಿಂದ ಜಾರಿ ಮಾಡುವುದಾಗಿ ಸಿದ್ದರಾಮಯ್ಯ ಘೋಷಣೆ ಮಾಡಿದ್ದರು. ಅದಕ್ಕಾಗಿ ಕೇಂದ್ರ ಸರ್ಕಾರದ ವ್ಯಾಪ್ತಿಯ ಭಾರತೀಯ ಆಹಾರ ನಿಗಮವನ್ನೂ(ಎಫ್‌ಸಿಐ) ಸಂಪರ್ಕಿಸಿದ್ದರು. ರಾಜ್ಯದ ಅಗತ್ಯಕ್ಕೆ ತಕ್ಕಷ್ಟು ಅಕ್ಕಿ ನೀಡುವುದಾಗಿ ಎಫ್‌ಸಿಐ ಕೂಡ ಒಪ್ಪಿಗೆ ನೀಡಿತ್ತು. ಆದರೆ ಮಾರನೆಯ ದಿನವೇ ಎಫ್‌ಸಿಐಗೆ ಪತ್ರ ಬರೆದಿದ್ದ ಕೇಂದ್ರ ಸರ್ಕಾರ, ಮಾರುಕಟ್ಟೆಯಲ್ಲಿ ಅಕ್ಕಿ ಹಾಗೂ ಗೋಧೀಯ ದರ ಹೆಚ್ಚಾಗುತ್ತಿದೆ. ಇದನ್ನು ನಿಯಂತ್ರಿಸುವ ಸಲುವಾಗಿ ಮುಕ್ತ ಮಾರುಕಟ್ಟೆಯಲ್ಲಿ ಹರಾಜು ಮಾಡಲು ಆರಂಭಿಸಿ. ಹಾಗೂ ರಾಜ್ಯಗಳಿಗೆ ನೀಡುತ್ತಿರುವ ಅಕ್ಕಿಯನ್ನಯ ಸ್ಥಗಿತಗೊಳಿಸಿ ಎಂದು ಆದೇಶಿಸಿತ್ತು. ರಾಜ್ಯಗಳಿಗೆ ನೇರವಾಗಿ ಅಕ್ಕಿ ಕೊಡಬೇಡಿ ಎಂದು ಕೇಂದ್ರ ಹೇಳಿತ್ತಾದರೂ ಮುಕ್ತ ಮಾರುಕಟ್ಟೆಯಲ್ಲಿ ಹರಾಜಿನಲ್ಲಿ ಭಾಗವಹಿಸಿ ಅಕ್ಕಿ ಖರೀದಿಸುವ ಅವಕಾಶ ರಾಜ್ಯ ಸರ್ಕಾರಕ್ಕೆ ಈಗಲೂ ಇದೆ.
ಸಂಘರ್ಷದ ಮಾರ್ಗ
ಎಫ್‌ಸಿಐನಿಂದ ಅಕ್ಕಿ ನಿರಾಕರಣೆ ಆದ ಕೂಡಲೆ ಕೇಂದ್ರ ಸರ್ಕಾರವನ್ನು ಸಂಪರ್ಕಿಸಿ ಪರಿಸ್ಥಿತಿ ತಿಳಿಗೊಳಿಸಬಹುದಿತ್ತು. ಆದರೆ ಸಿದ್ದರಾಮಯ್ಯ ಅವರು ನೇರವಾಗಿ ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ಆರಂಭಿಸಿದರು. ಕೇಂದ್ರ ಸರ್ಕಾರವು ಅಕ್ಕಿ ವಿಚಾರದಲ್ಲಿ ರಾಜಕೀಯ ಮಾಡುತ್ತಿದೆ. ಧ್ವೇಷದ ರಾಜಕಾರಣ ಮಾಡುತ್ತಿದೆ ಎಂದು ಹರಿಹಾಯ್ದರು. ಆನಂತರದಲ್ಲಿ ತೆಲಂಗಾಣ, ಛತ್ತೀಸ್‌ಗಢ ಸೇರಿ ಕೆಲ ರಾಜ್ಯಗಳನ್ನು ಸಂಪರ್ಕಿಸಲಾಯಿತು. ಆದರೆ ರಾಜ್ಯಗಳು ಅಷ್ಟು ಪ್ರಮಾಣದ ಅಕ್ಕಿಯನ್ನು ಪ್ರತಿ ತಿಂಗಳು ಒದಗಿಸುವ ಬದ್ಧತೆಯನ್ನು ತೋರುವುದು ಕಷ್ಟವಾದ್ಧರಿಂದ ಮೀನಮೇಷ ಎಣಿಸುತ್ತಿವೆ. ಇನ್ನು ಕೇಂದ್ರ ಸರ್ಕಾರದ ವ್ಯಾಪ್ತಿಯ ಇನ್ನಿತರೆ ಏಜೆನ್ಸಿಗಳಾದ ನಾಫೇಡ್ ಸೇರಿ ಅನೇಕ ಕಡೆ ರಾಜ್ಯ ಸರ್ಕಾರ ಮಾತುಕತೆ ನಡೆಸಿದೆ. ಆದರೆ ಅಲ್ಲಿಂದಲೂ ಇಲ್ಲಿವರೆಗೆ ಗ್ಯಾರಂಟಿ ಸಿಕ್ಕಿಲ್ಲ.
ಇದೆಲ್ಲದರ ನಂತರ ಕೇಂದ್ರ ಆಹಾರ ಸಚಿವ ಪೀಯೂಷ್ ಗೋಯೆಲ್ ಅವರನ್ನು ಭೇಟಿ ಮಾಡಲು ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಕೆ.ಎಚ್. ಮುನಿಯಪ್ಪ ತೆರಳಿದ್ದಾರೆ. ಮಂಗಳವಾರವಷ್ಟೆ ಜವಳಿ ಸಚಿವ ಡಾ. ಶಿವಾನಂದ ಪಾಟೀಲ್ ಭೇಟಿಗೆ ಅವಕಾಶ ನೀಡಿದ್ದ ಪೀಯೂಷ್ ಗೋಯೆಲ್, ಮೂರು ದಿನವಾದರೂ ಮುನಿಯಪ್ಪ ಅವರನ್ನು ಭೇಟಿ ಮಾಡಿಲ್ಲ. ಬುಧವಾರ ಬೆಳಗ್ಗೆ ರಾಜ್ಯ ಸಚಿವರನ್ನು ಭೇಟಿ ಮಾಡಲು ಸಮಯ ನಿಗದಿಯಾಗಿತ್ತಾದರೂ ಅದು ನಂತರದಲ್ಲಿ ರದ್ದಾಗಿದೆ. ಇದರಿಂದ ಮುನಿಯಪ್ಪ ವ್ಯಘ್ರರಾಗಿದ್ದಾರೆ. ಕೇಂದ್ರ ಸಚಿವರು ಭೇಟಿಗೂ ಅವಕಾಶ ನೀಡದೆ ರಾಜ್ಯದ ವಿರುದ್ಧ ಧ್ವೇಷದ ರಾಜಕಾರಣ ಮಾಡುತ್ತಿದ್ದಾರೆ ಎಂದು ಹರಿಹಾಯ್ದಿದ್ದಾರೆ.
ಕೇಂದ್ರ ಗೃಹಸಚಿವ ಅಮಿತ್ ಶಾ ಅವರನ್ನು ಭೇಟಿಯಾದ ಸಿದ್ದರಾಮಯ್ಯ ಈ ವಿಚಾರವನ್ನು ಪ್ರಸ್ತಾಪಿಸಿದ್ದಾರೆ. ಬುಧವಾರ ರಾತ್ರಿ ನಡೆದ ಮಾತುಕತೆ ವೇಳೆ ಇದನ್ನು ಹೇಳಿದ್ದಾರೆ. ಆದರೆ ಅವರಿಂದಲೂ ಯಾವುದೇ ಖಚಿತ ಭರವಸೆ ಇಲ್ಲಿವರೆಗೆ ಸಿಕ್ಕಿಲ್ಲ. ನವದೆಹಲಿ ಪ್ರವಾಸದಲ್ಲಿ ಯಾವುದೇ ಗಣನೀಯ ಫಲ ಸಿಗದ ಹಿನ್ನೆಲೆಯಲ್ಲಿ ಸಿಎಂ ಸಿದ್ದರಾಮಯ್ಯ ಹಾಗೂ ಸಚಿವ ಕೆ.ಎಚ್. ಮುನಿಯಪ್ಪ ಕರ್ನಾಟಕಕ್ಕೆ ವಾಪಸಾಗಿದ್ದಾರೆ. ಹೊರಡುವ ಮುನ್ನ ನವದೆಹಲಿಯಲ್ಲಿ ಸಿದ್ದರಾಮಯ್ಯ ಪ್ರತಿಕ್ರಿಯೆ ನೀಡಿದ್ದಾರೆ.
ಬೆಂಗಳೂರಿಗೆ ಹೊರಡುವ ಮುನ್ನ ನವದೆಹಲಿಯ ಕರ್ನಾಟಕ ಭವನದಲ್ಲಿ ಮಾತನಾಡಿದ ಸಿದ್ದರಾಮಯ್ಯ, ಅಕ್ಕಿ ವಿತರಣೆ ಬಗ್ಗೆ ರಾಜಕೀಯ ಅಥವಾ ದ್ವೇಷದ ರಾಜಕಾರಣ ಮಾಡುವುದು ಬೇಡ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರಿಗೆ ತಿಳಿಸಿದ್ದೇನೆ. ಬುಧವಾರ ರಾತ್ರಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರನ್ನು ಭೇಟಿ ಮಾಡಿದ ಸಂದರ್ಭದಲ್ಲಿ ಎಫ್.ಸಿ.ಐ ಅಕ್ಕಿ ನೀಡುವ ವಿಚಾರದಲ್ಲಿ ಒಪ್ಪಿಗೆ ಪತ್ರವನ್ನು ನೀಡಿ ಮರುದಿನವೇ ಅಕ್ಕಿ ವಿತರಣೆಯನ್ನು ರಾಜ್ಯಗಳಿಗೆ ಸ್ಥಗಿತಗೊಳಿಸಿಗಿರುವ ವಿಚಾರವನ್ನು ಗಮನಕ್ಕೆ ತರಲಾಗಿದೆ. ಸಂಬಂಧಪಟ್ಟ ಮಂತ್ರಿಗಳಿಗೆ ಮಾತನಾಡುತ್ತೇನೆ ಎಂದು ಅಮಿತ್ ಶಾ ಅವರು ಭರವಸೆ ನೀಡಿದ್ದಾರೆ ಎಂದರು. ಆದರೆ ಅಕ್ಕಿ ನೀಡುವ ಕುರಿತು ಯಾವುದೇ ಭರವಸೆಯ ಮಾತುಗಳು ಕೇಳಿಬರಲಿಲ್ಲ.
ಬೆಂಗಳೂರಿಗೆ ಆಗಮಿಸಿದ ನಂತರ ಮಾತನಾಡಿದ ಕೆ.ಎಚ್. ಮುನಿಯಪ್ಪ ಅಸಹಾಯಕತೆ ತೋಡಿಕೊಂಡಿದ್ದಾರೆ. ಆದಷ್ಟು ಬೇಗ ಅನ್ನ ಭಾಗ್ಯ ಜಾರಿ ಮಾಡ್ತೇವೆ. ದೇವರು ಆದಷ್ಟು ಬೇಗ ದಾರಿ ತೋರಿಸಲಿ ಅಂತ ಬೇಡಿಕೊಂಡಿದ್ದೇನೆ. ನಿನ್ನೆ ಪೀಯೂಷ್ ಗೋಯಲ್ ಟೈಂ ಕೊಡ್ತೀವಿ ಅಂತ ಟೈಂ ಕೊಡಲಿಲ್ಲ. ಬಡವರ ಅಕ್ಕಿ ವಿಚಾರದಲ್ಲಿ ಆಟ ಆಡ್ತಿದ್ದಾರೆ ರಾಜಕೀಯ ಮಾಡ್ತಿದ್ದಾರೆ. ಪಿಯುಷ್ ಗೋಯಲ್ ಅವರ ಕಚೇರಿಗೆ ನಮ್ಮ ಆಫೀಸಿಂದ ಸಂಪರ್ಕ ಮಾಡಿದ್ರು. ರಾಜ್ಯದ ಸಚಿವರೂ ಕೂಡ ಇವತ್ತು ಸಮಯ ಕೊಡ್ತೀವಿ ಅಂತ ಹೇಳಿ ಕೊನೆಗೆ ಸಮಯ ಕೊಡದೇ ನಿರಾಕರಿಸಿದರು. ಕೇಂದ್ರ ಆಹಾರ ಸಚಿವರು ಊರಲಿಲ್ಲ ಊರಲ್ಲಿಲ್ಲ ಅಂತ ಮಾತ್ರ ಹೇಳಿ ಭೇಟಿಗೆ ನಿರಾಕರಿಸಿದ್ದಾರೆ.
ಇವೆಲ್ಲವನ್ನೂ ನೋಡಿದರೆ ಅವರ ಮನಸ್ಥಿತಿ ಬಡವರಿಗೆ ಸಹಾಯ ಮಾಡುವಂತಿಲ್ಲ. ಕೇಂದ್ರ ಸರ್ಕಾರ ಕೊಡಲ್ಲ ಅಂತ ಹೇಳಿದ್ದಕ್ಕೆ ನಮ್ಮದೇ ಆದ ವ್ಯವಸ್ಥೆ ಮಾಡಿಕೊಂಡಿದ್ದೇವೆ. ಜುಲೈ 1 ರಂದು ಅಕ್ಕಿ ಕೊಡುವುದಕ್ಕೆ ಆಗದಿರಬಹುದು. ಆದರೆ ಆಗಸ್ಟ್ 1 ರ ಮೊದಲು ಅಕ್ಕಿ ಕೊಟ್ಟೇ ಕೊಡ್ತೇವೆ. ಛತ್ತೀಸ್‌ಗಢ 1.5 ಲಕ್ಷ ಮೆಟ್ರಿಕ್ ಟನ್ ಕೊಡಲು ಆಗಬಹುದು. ಪಂಜಾಬ್‌ನವರು ಕೊಡ್ತೀವಿ ಅಂದಿದ್ದಾರೆ. ಆದರೆ ಟ್ರಾನ್ಸಪೋರ್ಟೇಷನ್ ಚಾರ್ಜ್ ಜಾಸ್ತಿ ಆಗತ್ತೆ ಅಂತ ನಾವು ಬೇರೆ ವ್ಯವಸ್ಥೆ ಮಾಡ್ತಿದ್ದೇವೆ ಎಂದಿದ್ದಾರೆ.
ರಾಜ್ಯ ಹಾಗೂ ಕೇಂದ್ರ ಸರ್ಕಾರದ ನಡುವಿನ ಹಗ್ಗಜಗ್ಗಾಟದಲ್ಲಿ ಅನ್ನಭಾಗ್ಯ ಯೋಜನೆ ವಿಳಂಬವಾಗುತ್ತಿದ್ದು, ಇದು ಮುಂದಿನ ಲೋಕಸಭೆ ಚುನಾವಣೆ ಫಲಿತಾಂಶದ ಮೇಲೆಯೂ ಪರಿಣಾಮ ಬೀರಬಹುದು ಎಂಬ ಮಾತುಗಳು ರಾಜಕೀಯ ವಲಯದಲ್ಲಿ ಕೇಳಿಬರುತ್ತಿವೆ.
2-3 ತಿಂಗಳು ತಡ
ಜುಲೈ 1ರಿಂದ ಅನ್ನಭಾಗ್ಯ ಯೋಜನೆಯನ್ನು ಜಾರಿ ಮಾಡುವುದಾಗಿ ಸಿದ್ದರಾಮಯ್ಯ ಘೋಷಣೆ ಮಾಡಿದ್ದರು. ಆದರೆ ಇದೀಗ ಉಂಟಾಗಿರುವ ಗೊಂದಲದಿಂದ ಅದು ಸಾಧ್ಯವಿಲ್ಲ ಎನ್ನಲಾಗುತ್ತಿದೆ. ಇನ್ನೂ ನಾಫೆಡ್, ಎನ್‌ಸಿಸಿಎಫ್, ಭಂಡಾರದಿಂದ ಕೊಟೇಷನ್ ಬರಬೇಕು. ಕೊಟೇಷನ್‌ಗೆ ಸರ್ಕಾರದ ಒಪ್ಪಿಗೆ ನೀಡಬೇಕು. ಇದಾದ ಮೇಲೆ ಟೆಂಡರ್ ಪ್ರಕ್ರಿಯೆ ಆಗಬೇಕು. ಎಲ್ಲಾ ಪ್ರತಿಕ್ರಿಯೆ ಮುಗಿದು ಹೆಚ್ಚುವರಿ ಅಕ್ಕಿ ಫಲಾನುಭವಿಗಳ ಕೈ ಸೇರಬೇಕು. ಆದ್ದರಿಂದ ಹೆಚ್ಚುವರಿ ಅಕ್ಕಿ ಸಿಗುವುದು 2-3 ತಿಂಗಳು ತಡ ಆಗುತ್ತದೆ ಎನ್ನಲಾಗಿದೆ.
ಇದನ್ನೂ ಓದಿ: CM Siddaramaiah: ರಾಜ್ಯಕ್ಕೆ ಅಕ್ಕಿಗಾಗಿ ಮುಂದುವರಿದ ಜಟಾಪಟಿ, ಸಿಗದ ಕೇಂದ್ರ ಆಹಾರ ಸಚಿವ, ಅನ್ನಭಾಗ್ಯ ಫಲಾನುಭವಿಗಳು ಅತಂತ್ರ