ಬೆಂಗಳೂರು: ಮತದಾನ ಪದ್ಧತಿಯಲ್ಲಿ ಹೊಸ ಪ್ರಯೋಗಕ್ಕೆ ಚುನಾವಣಾ ಆಯೋಗ ಚಿಂತನೆ ನಡೆಸಿದೆ. ರಾಜ್ಯದಲ್ಲಿ ಮೊಟ್ಟ ಮೊದಲ ಬಾರಿಗೆ ಬೆಂಗಳೂರಿನ ಬಿಬಿಎಂಪಿ ಚುನಾವಣೆಯಲ್ಲಿ ಇ-ವೋಟಿಂಗ್ ವಿಧಾನ ಅಳವಡಿಸಿಕೊಳ್ಳುವ ಬಗ್ಗೆ ಚರ್ಚೆ ನಡೆಯುತ್ತಿದೆ.
ರಾಜ್ಯ ಚುನಾವಣಾ ಆಯೋಗದ ಮುಂದೆ ಕೂತಲ್ಲೇ ಮತ ಚಲಾಯಿಸಲು ಅನುಕೂಲವಾಗುವ ವ್ಯವಸ್ಥೆ ಬಗ್ಗೆ ಆಲೋಚನೆ ಮೂಡಿದ್ದು, ಆನ್‌ಲೈನ್ ಮತದಾನ ನಡೆಸುವ ಬಗ್ಗೆ ಆಯೋಗ ಚಿಂತನೆ ಮಾಡಿದೆ. ಐಟಿ-ಬಿಟಿ ಉದ್ಯೋಗಿಗಳ ಗಮನ ಸೆಳೆಯಲು, ಚುನಾವಣೆಯಲ್ಲಿ ಮತದಾನದ ಪ್ರಮಾಣ ಹೆಚ್ಚಿಸಲು ಆನ್‌ಲೈನ್ ವೋಟಿಂಗ್ ಪದ್ಧತಿ ಅಳವಡಿಸಿಕೊಳ್ಳಲು ಚುನಾವಣೆ ಆಯೋಗ ಒಲವು ತೋರಿದೆ ಎನ್ನಲಾಗಿದೆ.
ಇದನ್ನೂ ಓದಿ | ವಿಸ್ತಾರ ವಿಶೇಷ | ನೌಕಾಪಡೆಗೆ ಛತ್ರಪತಿ ಶಿವಾಜಿ ಮಹಾರಾಜರ ಛಾಪು: ನೂತನ ಧ್ವಜ ಅನಾವರಣ
2010ರಲ್ಲಿ ದೇಶದಲ್ಲೇ ಮೊದಲ ಬಾರಿಗೆ ಗುಜರಾತ್‌ನಲ್ಲಿ ಆನ್‌ಲೈನ್‌ನಲ್ಲಿ ಮತದಾನದ ಹಕ್ಕನ್ನು ಚಲಾಯಿಸಲು ಚುನಾವಣಾ ಆಯೋಗ ಅವಕಾಶ ನೀಡಿತ್ತು. ಗುಜರಾತ್‌ನ ಗಾಂಧಿ ನಗರ ಮುನಿಸಿಪಲ್ ಕಾರ್ಪೋರೇಷನ್ ಚುನಾವಣೆ, ಅಹಮದಾಬಾದ್, ಸೂರತ್, ರಾಜ್‌ಕೋಟ್, ವಡೋದರಾ, ಭಾವನಗರ ಮತ್ತು ಜಾಮ್ ನಗರ ಸ್ಥಳೀಯ ಚುನಾವಣೆಯಲ್ಲಿ ಆನ್‌ಲೈನ್ ಮತದಾನ ಪದ್ಧತಿ ಅಳವಡಿಸಲಾಗಿತ್ತು. ಆನ್‌ಲೈನ್ ವೋಟಿಂಗ್‌ಗೆ ಗುಜರಾತ್ ಸರ್ಕಾರ 34 ಕೋಟಿ ಖರ್ಚು ಮಾಡಿತ್ತು. ಆದರೆ ಮತದಾರರಿಂದ ನೀರಸ ಪ್ರತಿಕ್ರಿಯೆ ವ್ಯಕ್ತವಾಯಿತು. ಗಾಂಧಿನಗರ ಪಾಲಿಕೆ ಚುನಾವಣೆಯಲ್ಲಿ ಶೇ.3 ಜನರು ಮಾತ್ರ ಆನ್‌ಲೈನ್‌ನಲ್ಲಿ ಹಕ್ಕನ್ನು ಚಲಾಯಿಸಿದ್ದರು.
ಈ ಬಗ್ಗೆ ರಾಜ್ಯ ಚುನಾವಣಾ ಆಯೋಗದ ಆಯುಕ್ತ ಬಸವರಾಜು ಮಾತನಾಡಿ, ಆನ್‌ಲೈನ್ ವೋಟಿಂಗ್ ಪದ್ಧತಿ ಹೊಸ ಪ್ರಯೋಗವಾಗಿದೆ. ಈ ಹಿಂದೆ ಗುಜರಾತ್‌ನಲ್ಲಿ ಈ ಪದ್ಧತಿ ಅಳವಡಿಸಿಕೊಳ್ಳಲಾಗಿತ್ತು. ಇದಕ್ಕಾಗಿ ಸಾಕಷ್ಟು ಸಿದ್ಧತೆ ಮಾಡಿಕೊಳ್ಳಬೇಕಾಗುತ್ತದೆ. ಬೆಂಗಳೂರಿನಲ್ಲಿ ಐಟಿ-ಬಿಟಿ ಉದ್ಯೋಗಿಗಳು ಹೆಚ್ಚು ಹಿನ್ನೆಲೆಯಲ್ಲಿ ಬೆಂಗಳೂರಿನಲ್ಲಿ ಇ-ವೋಟಿಂಗ್ ಸಿಸ್ಟಮ್ ಜಾರಿ ಬಗ್ಗೆ ಚರ್ಚೆ ಮಾಡುತ್ತಿದ್ದೇವೆ ಎಂದು ತಿಳಿಸಿದ್ದಾರೆ.
ಗುಜರಾತ್ ಚುನಾವಣೆಯಲ್ಲಿ ಇ-ವೋಟಿಂಗ್ ಚಲಾವಣೆಗೆ ಮತದಾರರಿಗೆ ವಿಶೇಷ ಲಾಗಿನ್ ಐಡಿ ಮತ್ತು ಪಾಸ್ ವರ್ಡ್ ನೀಡಲಾಗಿತ್ತು. ಇದಕ್ಕಾಗಿ ವೆಬ್‌ಸೈಟ್‌ನಲ್ಲಿ ಮತದಾರರು ಲಾಗಿನ್ ಆಗಿ, ವೋಟಿಂಗ್ ದಿನ ರಿಕ್ವೆಸ್ಟ್ ಕಳುಹಿಸಬೇಕು. ಮೊಬೈಲ್‌ಗೆ ಬರುವ ಕೋಡ್ ನಮೂದಿಸಿದ ನಂತರ ಇ-ಬ್ಯಾಲೇಟ್ ಪೇಪರ್ ತೆರೆಯುತ್ತ್ತದೆ. ಆಗ ಮತ ಚಲಾಯಿಸುವ ಅಭ್ಯರ್ಥಿ ಹೆಸರನ್ನು ಕ್ಲಿಕ್ ಮಾಡಿ ಮತ ಚಲಾಯಿಸಬೇಕು. ಗಾಂಧಿನಗರ ಪಾಲಿಕೆ ಚುನಾವಣೆಯಲ್ಲಿ ಕೇವಲ ಶೇ.3 ಮತದಾರರು ಇ-ವೋಟಿಂಗ್ ಮಾಡಿದ್ದರು ಎಂದು ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ | Modi in Mangalore | ವೀರತ್ವ + ವ್ಯಾಪಾರ = ಕರಾವಳಿ: ಪ್ರಧಾನಿ ಮೋದಿ ಬಣ್ಣನೆ