ಹುಬ್ಬಳ್ಳಿ: ಕೇಂದ್ರ ಸಚಿವರು ರಾಜ್ಯದಲ್ಲಿ ಮೂರ್ನಾಲ್ಕು ಜನರಿದ್ದಾರೆ. ದಲಿತ ಜನಾಂಗದ ನಾರಾಯಣಸ್ವಾಮಿ ರಾಜ್ಯ ಖಾತೆ ಸಚಿವರಾಗಿದ್ದಾರೆ. ಒಕ್ಕಲಿಗ ಸಮುದಾಯದ ಶೋಭಾ ಕರಂದ್ಲಾಜೆ ರಾಜ್ಯ ಖಾತೆ ಸಚಿವರಾಗಿದ್ದಾರೆ. ಲಿಂಗಾಯತರಾದ ಭಗವಂತ ಖೂಬಾ, ದಿ. ಸುರೇಶ್ ಅಂಗಡಿ ಕೂಡ ರಾಜ್ಯ ಖಾತೆಯನ್ನು ಪಡೆದುಕೊಂಡಿದ್ದರು. ಆದರೆ, ಪ್ರಲ್ಹಾದ್ ಜೋಶಿ ಮಾತ್ರ ಸಂಪುಟ ದರ್ಜೆ ಕೇಂದ್ರ ಸಚಿವರಾಗಿದ್ದಾರೆ. ಇಲ್ಲಿಯೇ ಇದರ ಸೂಕ್ಷ್ಮತೆಯನ್ನು ಜನರು ಅರ್ಥ ಮಾಡಿಕೊಳ್ಳಬೇಕು. ಯಾರಿಗೆ ಪ್ರಾಧಾನ್ಯತೆ ಕೊಟ್ಟಿದ್ದಾರೆ ಅನ್ನೋದನ್ನು ಜನರ ತಿಳಿವಳಿಕೆಗೆ, ಚರ್ಚೆಗೆ ಬಿಡುತ್ತೇನೆ. ಈ ಬಾರಿಯ ಚುನಾವಣೆಯಲ್ಲಿ (Karnataka Election) ಗೆಲುವು ನನ್ನದೇ ಎಂದು ಮಾಜಿ ಮುಖ್ಯಮಂತ್ರಿ, ಹುಬ್ಬಳ್ಳಿ-ಧಾರವಾಡ ಕೇಂದ್ರ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಜಗದೀಶ್ ಶೆಟ್ಟರ್ ಹೇಳಿದರು.
ಹುಬ್ಬಳ್ಳಿಯಲ್ಲಿ ಸೋಮವಾರ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಜಗದೀಶ್, ಗುಲಾಮಿ ಸಂಸ್ಕೃತಿಗೆ ಒಗ್ಗುವ, ಜೀ ಹುಜೂರ್ ಅನ್ನುವ ಶಾಸಕರು ಇರಬೇಕು ಅನ್ನೋದು ಬಿಜೆಪಿ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿ.ಎಲ್. ಸಂತೋಷ್ ನಿಲುವು ಎಂದು ಜಗದೀಶ್ ಶೆಟ್ಟರ್ ಕಟುವಾಗಿ ಟೀಕಿಸಿದರು. ಪಕ್ಷ ಕೆಲವರ ಹಿಡಿತದಲ್ಲಿ ಇರುವುದನ್ನು ಧಿಕ್ಕರಿಸಿ ನಾನು ಹೊರಗೆ ಬಂದೆ ಎಂದು ಹೇಳಿದರು.
ಕಾಂಗ್ರೆಸ್ ನಾಯಕರು ನನ್ನ ಜತೆ ಕೈಜೋಡಿಸಿ ಶಕ್ತಿ ತುಂಬುವ ಕೆಲಸ ಮಾಡಿದ್ದಾರೆ. ಅವರ ನಿರ್ದೇಶನದಂತೆ ರಾಜ್ಯ ಪ್ರವಾಸ ಮಾಡಿ ಮತಯಾಚನೆ ಮಾಡಿದ್ದೇನೆ. ಎಲ್ಲ ಕಡೆ ಜನರ ದೊಡ್ಡ ಬೆಂಬಲ ಕಾಂಗ್ರೆಸ್ ಪಕ್ಷಕ್ಕೆ ಸಿಗುತ್ತಿದೆ. ಹುಬ್ಬಳ್ಳಿ- ಧಾರವಾಡ ಕೇಂದ್ರ ಕ್ಷೇತ್ರದಲ್ಲಿ ಹಿಂದೆಂದಿಗಿಂತಲೂ ಹೆಚ್ಚಿನ ಜನರು ಬೆಂಬಲ ಸೂಚಿಸಿದ್ದಾರೆ. ಕಳೆದ ಆರು ಚುನಾವಣೆಗಳಿಗಿಂತಲೂ ಹೆಚ್ಚಿನ ಅಂತರದಿಂದ ಈ ಬಾರಿ ಗೆಲ್ಲುತ್ತೇನೆ ಎಂದು ಜಗದೀಶ್ ಶೆಟ್ಟರ್ ವಿಶ್ವಾಸ ವ್ಯಕ್ತಪಡಿಸಿದರು.
ಇದನ್ನೂ ಓದಿ: Inside Story: ರಾಜ್ಯಾದ್ಯಂತ ಸಿದ್ದರಾಮಯ್ಯ ಮಾಸ್ ಲೀಡರ್, ಆದರೆ ಸ್ವಕ್ಷೇತ್ರದಲ್ಲಿ ಗೆಲ್ಲಲು ಹರಸಾಹಸ! ಏಕೆ ಈ ಸ್ಥಿತಿ?
ನಾನು ಕಾಂಗ್ರೆಸ್ ಸೇರ್ಪಡೆ ಆದ ಮೇಲೆ ನನ್ನ ಮಹತ್ವ ಏನು ಎಂದು ಬಿಜೆಪಿಗೆ ಗೊತ್ತಾಗಿದೆ. ಈಗ ಚಿಂತೆಗೀಡಾಗಿ ಕೇಂದ್ರ ಮತ್ತು ಬಿಜೆಪಿ ನಾಯಕರು ನನ್ನನ್ನು ಸೋಲಿಸಲು ತಂತ್ರ ಮಾಡುತ್ತಿದ್ದಾರೆ. ಷಡ್ಯಂತ್ರ, ಕುತಂತ್ರ ಮಾಡಲಾಗುತ್ತಿದ್ದು, ಶೆಟ್ಟರ್ ಗೆದ್ದರೆ ಇತಿಹಾಸ ನಿರ್ಮಾಣ ಆಗುತ್ತದೆ ಎಂದು ಆತಂಕಗೊಂಡಿದ್ದಾರೆ.
ಸಂತೋಷ್ ವಿರುದ್ಧ ಧ್ವನಿ ಎತ್ತಿದ್ದ ಯಡಿಯೂರಪ್ಪ
ಯಡಿಯೂರಪ್ಪ ಅವರು ಮುಖ್ಯಮಂತ್ರಿಯಾಗಿ ಎರಡು ವರ್ಷದಲ್ಲಿಯೇ ಕೆಳಗೆ ಇಳಿಸಿದರು? ಹಾಗಾದರೆ ಅವರಿಂದ ರಾಜೀನಾಮೆ ಕೊಡಿಸಿದ್ದು ಏಕೆ? ವಯಸ್ಸಾಗಿದ್ದರೆ ಈಗೇಕೆ ಅವರನ್ನು ಚುನಾವಣೆಗೆ ಬಳಸಿಕೊಳ್ಳುತ್ತಿದ್ದೀರಿ? ಎಲ್ಲ ಕಡೆ ಪ್ರವಾಸ ಮಾಡಲು ಹೇಳಿದ್ದು ಏಕೆ? ಬಿಜೆಪಿ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಆಗಿರುವ ಬಿ.ಎಲ್. ಸಂತೋಷ್ ಅವರು ಯಡಿಯೂರಪ್ಪ ವಿರುದ್ಧ ಧ್ವನಿ ಎತ್ತಿದ್ದರು ಎಂದು ಜಗದೀಶ್ ಶೆಟ್ಟರ್ ಹೇಳಿದರು.
ಬಿ.ಎಲ್. ಸಂತೋಷ್ ಹೇಳಿಕೆ ಬಗ್ಗೆ ತನಿಖೆಯಾಗಲಿ
ಕೆ.ಎಸ್. ಈಶ್ವರಪ್ಪ ಅವರಿಂದ ಸಚಿವ ಸ್ಥಾನಕ್ಕೆ ರಾಜಿನಾಮೆ ತೆಗೆದುಕೊಂಡು ಮನೆಗೆ ಕಳಿಸಿದರು. ಈಗ ಬಿ.ಎಲ್. ಸಂತೋಷ್ ಅವರ ಹೇಳಿಕೆ ಬಗ್ಗೆ ಎಲ್ಲೆಡೆ ವೈರಲ್ ಆಗುತ್ತಿದೆ. ಲಿಂಗಾಯತರಿಲ್ಲದೆ ಪಕ್ಷ ಕಟ್ಟಬೇಕು ಎಂಬ ವಿಚಾರ ಎಲ್ಲ ಕಡೆ ಹರಡುತ್ತಿದೆ. ಈಗ ಅದನ್ನು ಫೇಕ್ ಎಂಬುದಾಗಿ ಬಿಂಬಿಸಲಾಗುತ್ತಿದೆ. ನಿಮ್ಮದೆ ಸರ್ಕಾರವಿದೆ, ಕೂಡಲೆ ತನಿಖೆ ನಡೆಸಿ ಕ್ರಮ ಕೈಗೊಳ್ಳಬಹುದಲ್ಲವಾ? ಎಂದು ಪ್ರಶ್ನೆ ಮಾಡಿದ ಜಗದೀಶ್ ಶೆಟ್ಟರ್, ಈ ಹಿಂದೆ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್‌ಕುಮಾರ್ ಕಟೀಲ್ ಆಡಿಯೊ ವೈರಲ್ ಆಗಿತ್ತು. ವೈರಲ್ ಆದ ತಕ್ಷಣ ಅದು ನನ್ನದಲ್ಲ ಫೇಕ್ ಆಡಿಯೊ ಅಂದರು. ಇನ್ನೂವರೆಗೂ ಆ ಆಡಿಯೊ ತನಿಖೆ ಆಗಿ ಸತ್ಯಾಸತ್ಯತೆ ಬಯಲಿಗೆ ಬಂದಿಲ್ಲ ಎಂದು ಹೇಳಿದರು.
ಕಾಂಗ್ರೆಸ್‌ಗೆ ಹೋಗಲು ಸಿದ್ಧವಾಗಿದ್ದ ಬೊಮ್ಮಾಯಿ
ಬಸವರಾಜ್ ಬೊಮ್ಮಾಯಿ ಬಿಜೆಪಿ ಸೇರಿದಾಗ ನಾವು, ಯಡಿಯೂರಪ್ಪ ಒಪ್ಪಿಗೆ ಕೊಟ್ಟೆವು. ಯಡಿಯೂರಪ್ಪನವರಿಗೆ ಹೊಸ ಪಕ್ಷ ಕಟ್ಟಲು ಪ್ರಚೋದನೆ ಕೊಟ್ಟವರು ಕೆಲವೇ ಕೆಲವರು. ಅವರಲ್ಲಿ ಬಸವರಾಜ ಬೊಮ್ಮಾಯಿ, ನಿರಾಣಿ ಮತ್ತು ಉದಾಸಿ ಇದ್ದಾರೆ. ನಂತರ ಉದಾಸಿ ಬಿಟ್ಟು ಯಾರೂ ಕೆಜೆಪಿಗೆ ಹೋಗಲಿಲ್ಲ. ಬಿಜೆಪಿ, ಕೆಜೆಪಿ ಡಿವೈಡ್ ಆದ ಮೇಲೆ ಬೊಮ್ಮಾಯಿ ಕಾಂಗ್ರೆಸ್ ಹೋಗುವ ಪ್ರಯತ್ನ ಮಾಡಿದ್ದರು. ಬೊಮ್ಮಾಯಿ ಕಾಂಗ್ರೆಸ್ ಹೋಗಲು ಪ್ರಯತ್ನಿಸಿದಾಗ ಬೊಮ್ಮಾಯಿಯವರ ಸಿದ್ಧಾಂತ ಎಲ್ಲಿ ಹೋಗಿತ್ತು? ತಾವು ಕೇಳಿದ ಕ್ಷೇತ್ರ ಕೊಟ್ಟಿದ್ದರೆ, ಕಾಂಗ್ರೆಸ್‌ಗೆ ಹೋಗುತ್ತಿದ್ದರು. ಕೊಡಲಿಲ್ಲವೆಂದು ಬಿಜೆಪಿಯಲ್ಲಿ ಉಳಿದುಕೊಂಡರು. ತಂದೆ ಎಸ್.ಆರ್. ಬೊಮ್ಮಾಯಿ ತತ್ವ ಸಿದ್ಧಾಂತವನ್ನು ಬಿಟ್ಟು ಅಧಿಕಾರಕ್ಕಾಗಿ ಬಿಜೆಪಿಗೆ ಬಸವರಾಜ ಬೊಮ್ಮಾಯಿ ಅವರು ಬಿಜೆಪಿಗೆ ಬಂದಿದ್ದಾರೆ ಎಂದು ಹೇಳಿದರು.
ಇದೇ ಏನು ನಿಮ್ಮ ಐಡಿಯಾಲಜಿ?
ಚಿತ್ತಾಪುರದಲ್ಲಿ ರೌಡಿಶೀಟರ್ ಮಣಿಕಂಠ ರಾಠೋಡ್‌ನನ್ನು ಕರೆದು ಟಿಕೆಟ್ ಕೊಟ್ಟಿದ್ದೀರಿ. ಇದು ನಿಮ್ಮ ಐಡಿಯಾಲಜಿ, ತತ್ವ ಏನು? ಆರು ಜನ ಸಚಿವರ ಮೇಲೆ ಸಿಡಿ ಕೇಸ್ ಇವೆ. ಸಿಡಿ ಕೇಸ್ ಇದ್ದರೂ ಟಿಕೆಟ್ ಕೊಡುತ್ತೀರಲ್ಲಾ? ಇದು ನಿಮ್ಮ ಐಡಿಯಾಲಜಿ ಏನು? ಶೆಟ್ಟರ್ ಬಗ್ಗೆ ಮಾತನಾಡುವ ನೈತಿಕತೆ ಬಿಜೆಪಿಯವರಿಗೆ ಇಲ್ಲ ಎಂದು ಕಿಡಿಕಾರಿದರು.
ಮೋದಿಗೆ ಯಾರ ಮೇಲೂ ಗೌರವ ಇಲ್ಲ
ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಬೆಂಗಳೂರಲ್ಲಿ ರೋಡ್ ಶೋ ಮಾಡಿದರು. ಎಲೆಕ್ಷನ್ ಕ್ಯಾಂಪೇನ್ ಮಾಡುವಾಗ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರನ್ನು ಕರೆದುಕೊಂಡು ಹೋಗಿಲ್ಲ. ಸದಾನಂದಗೌಡರನ್ನು ಕೆಳಗಿಳಿಸಿ ಕಳಿಸಿದ್ದಾರೆ. ಉಳಿದ ಸಮಾಜದ ವ್ಯಕ್ತಿಗಳ ಬಗ್ಗೆ ಇವರಿಗೆ ಏನು ನಡವಳಿಕೆ ಇದೆ ಎಂಬ ಬಗ್ಗೆ ಈಗ ಚರ್ಚೆ ಆಗುತ್ತಿದೆ. ಈ ಭಾಗದ ಜನರ ಪರಿಪೂರ್ಣ ಅಭಿವೃದ್ಧಿಗೆ ನಾನು ಚುನಾವಣೆಗೆ ನಿಲ್ಲುತ್ತಿದ್ದೇನೆ. ನನಗೆ ಯಾವುದೇ ಸ್ಥಾನಮಾನ ಬೇಡ ಎಂದು ಹೇಳಿದ್ದರೂ ಮುಗಿಸಲು ಷಡ್ಯಂತ್ರ ಮಾಡಿದರು. ಸ್ವಾಭಿಮಾನಕ್ಕೆ ಧಕ್ಕೆಯಾಗಿ ಹೊರಗೆ ಬಂದಿದ್ದೇನೆ ಎಂದು ಜಗದೀಶ್ ಶೆಟ್ಟರ್ ತಿಳಿಸಿದರು.
ಬೆಂಬಲಿಗರಿಂದ ಬಿಜೆಪಿಗೆ ಒಳ ಹೊಡೆತ
ಬಿಜೆಪಿಯಲ್ಲಿ ಬಹಳಷ್ಟು ನನ್ನ ಹಿಂಬಾಲಕರನ್ನು ಒತ್ತಾಯಪೂರ್ವಕವಾಗಿ ಹಿಡಿದು ಇಟ್ಟುಕೊಳ್ಳುತ್ತಿದ್ದಾರೆ. ನಮ್ಮ ಬೆಂಬಲಿಗರು ಒಳಗೊಳಗೆ ನನ್ನ ಪರವಾಗಿ ಕೆಲಸ ಮಾಡುತ್ತಿದ್ದಾರೆ. ಐಟಿ, ಇ.ಡಿ.ಯ ಅನಗತ್ಯ ಕಿರುಕುಳಕ್ಕೆ ಹೆದರಿ ಕೆಲವರು ಹೊರಗೆ ಬರುತ್ತಿಲ್ಲ. ಇದು ಒಳ ಹೊಡೆತದ ಚುನಾವಣೆಯಾಗಿದ್ದು, ನನ್ನ ಹಿತೈಷಿಗಳು ಬಿಜೆಪಿಗೆ ಒಳಹೊಡೆತ ಕೊಡಲಿದ್ದಾರೆ ಎಂದು ಜಗದೀಶ್ ಶೆಟ್ಟರ್ ಹೇಳಿದರು.
ವಿಜಯ ಸಂಕೇಶ್ವರ್ ಹೇಳಿಕೆ ಹಿಂದೆ ಒತ್ತಡವಿದೆ
ಉದ್ಯಮಿ ವಿಜಯ ಸಂಕೇಶ್ವರ್ ಹೇಳಿಕೆ ಹಿಂದೆ ಒತ್ತಡವಿದೆ. ಅವರ ಮೇಲೆ ಬೇರೆ ಬೇರೆ ರೀತಿ ಒತ್ತಡಗಳಿವೆ. ಹೀಗಾಗಿ ಹೇಳಿಕೆ ಕೊಡುತ್ತಿದ್ದಾರೆ. ಅದರ ಬಗ್ಗೆ ನಾನು ಹೆಚ್ಚು ಮಾತನಾಡುವುದಿಲ್ಲ. ವಿಧಾನಸಭೆ, ಲೋಕಸಭೆ ಚುನಾವಣೆಗಳು ಬೇರೆ ಬೇರೆ ರೀತಿ ನಡೆಯುತ್ತವೆ. ಈಗ ಫ್ಲಡ್‌ಗೇಟ್ ಓಪನ್ ಆಗುತ್ತಿದೆ, ಬಿಜೆಪಿ ಕೊಚ್ಚಿ ಹೋಗಲಿದೆ ಎಂದು ಜಗದೀಶ್ ಶೆಟ್ಟರ್ ಹೇಳಿದರು.
ಬಿಜೆಪಿ ವಿರುದ್ಧ ಜಗದೀಶ್ ಶೆಟ್ಟರ್ ಹೇಳಿದ್ದೇನು?
ಮರಳಿ ಬಿಜೆಪಿಗೆ ಹೋಗಲ್ಲ
ಪ್ರಲ್ಹಾದ್ ಜೋಶಿಯವರೇ ಪ್ರಾಮಾಣಿಕವಾಗಿ ರಾಜಕೀಯ ಮಾಡಿ. ನಮ್ಮ ಬೆಂಬಲಿಗರಿಗೆ ಫೋನ್ ಮಾಡಿ ಬೆದರಿಕೆ ಹಾಕುವುದು ಬಿಡಿ. ನಿಮ್ಮ ಧಮ್ಕಿ ಆಡಿಯೊವನ್ನು ನಾನು ಕೇಳಿಸಿಕೊಂಡಿದ್ದೇನೆ. ಅವು ಬಿಡುಗಡೆ ಆದ್ರೆ ಸರಿಹೋಗಲ್ಲ. ಹಿರಿಯರಿಗೆ ಫೋನ್ ಮಾಡಿ ಬೆಳಗ್ಗೆಯಿಂದ ಸಂಜೆವರೆಗೆ ಒತ್ತಡ ಹೇರಿದ್ದಾರೆ. ಕೇಂದ್ರ ಸಚಿವ ಜೋಶಿ ದೆಹಲಿಗೆ ಹೋಗದೆ ಇಲ್ಲೇ ಠಿಕಾಣಿ ಹೂಡಿದ್ದಾರೆ. ಸೋಲಿನ ಭಯಕ್ಕೆ ಜೋಶಿ ಇಲ್ಲಿಯೇ ಉಳಿದುಕೊಂಡಿದ್ದಾರೆ. ನಾನು ಕಾಂಗ್ರೆಸ್‌ನಲ್ಲೇ ಇರುತ್ತೇನೆ ಮರಳಿ ಬಿಜೆಪಿಗೆ ಹೋಗಲ್ಲ. ಮೋದಿ ಇಲ್ಲದೆ ಬಿಜೆಪಿ ಅಧಿಕಾರಕ್ಕೆ ಬರ್ತಿತ್ತಾ? ಉತ್ತರ ಕೊಡಿ ಎಂದು ಜಗದೀಶ್ ಶೆಟ್ಟರ್ ಪ್ರಶ್ನೆ ಮಾಡಿದರು.
ಇದನ್ನೂ ಓದಿ: Elephant Balarama : ಗಜರಾಜ ಬಲರಾಮನ ಸಾವಿಗೆ ಪ್ರಧಾನಿ ನರೇಂದ್ರ ಮೋದಿ ಸಂತಾಪ
ಬಿ.ಎಸ್. ಯಡಿಯೂರಪ್ಪ ರಾಜೀನಾಮೆಗೆ ಏನು ಕಾರಣ?
ನಾನು ಮುಖ್ಯಮಂತ್ರಿ ಸ್ಥಾನದ ಆಕಾಂಕ್ಷಿ ಅಲ್ಲ
ನಾನು ಮುಖ್ಯಮಂತ್ರಿ ಸ್ಥಾನದ ಆಕಾಂಕ್ಷಿ ಅಲ್ಲ. ಕಾಂಗ್ರೆಸ್‌ನಲ್ಲಿ ಸಾಕಷ್ಟು ಜನ ಆಕಾಂಕ್ಷಿಗಳಿದ್ದಾರೆ. ಸಿಎಂ ಯಾರಾಗಬೇಕು ಎಂದು ಪಾರ್ಟಿ ತೀರ್ಮಾನಿಸುತ್ತದೆ. ಐಟಿ, ಇಡಿ ಬೆದರಿಕೆ ನನಗೂ ಬರ್ತಿವೆ. ನಾನೇನು ಕಾನೂನು ಬಾಹಿರ ಆಸ್ತಿ ಮಾಡಿಲ್ಲ. ಯಾರೇ ಬರಲಿ ಭಯಪಡಲ್ಲ. ಜನ ಈ ಬಾರಿ ಕಾಂಗ್ರೆಸ್‌ಗೆ ಸ್ಪಷ್ಟ ಬಹುಮತ ಕೊಡುತ್ತಾರೆ ಎಂದು ಜಗದೀಶ್ ಶೆಟ್ಟರ್ ಹೇಳಿದರು.