ಬೆಂಗಳೂರು: ಟೆಸ್ಲಾ ಸಿಇಒ ಮತ್ತು ಸ್ಥಾಪಕ ಎಲಾನ್ ಮಸ್ಕ್ ಅವರು ಭಾರತದಲ್ಲಿ ತಮ್ಮ ಉದ್ದಿಮೆಯನ್ನು ಬೆಳೆಸಲು ಆಸಕ್ತಿ ವಹಿಸಿದ್ದಾರೆ. ಈ ಸಂಬಂಧ ಪ್ರಧಾನಿ ನರೇಂದ್ರ ಮೋದಿಯವರ ಜತೆಗೆ ಮಾತುಕತೆ ನಡೆಸಿದ್ದಾರೆ. ಈ ನಡುವೆ ಕಾಂಗ್ರೆಸ್ ನೇತೃತ್ವದ ಕರ್ನಾಟಕ ರಾಜ್ಯ ಸರ್ಕಾರವು ರಾಜ್ಯದಲ್ಲಿ ಎಲೆಕ್ಟ್ರಿಕ್ ಕಾರು (Tesla CEO Elon Musk ) ಉತ್ಪಾದನೆ ಘಟಕ ಸ್ಥಾಪನೆಗೆ ಆಹ್ವಾನಿಸಿದೆ.
ರಾಜ್ಯದಲ್ಲಿ ಎಲೆಕ್ಟ್ರಿಕ್ ಕಾರುಗಳ ಉತ್ಪಾದನಾ ಘಟಕವನ್ನು ಸ್ಥಾಪಿಸಲು ಸಂಪೂರ್ಣ ನೆರವು ನೀಡುವುದಾಗಿ ಸರ್ಕಾರ ಭರವಸೆ ನೀಡಿದೆ. ವಾಣಿಜ್ಯ, ಕೈಗಾರಿಕೆ ಮತ್ತು ಮೂಲಸೌಕರ್ಯ ಸಚಿವ ಎಂಬಿ ಪಾಟೀಲ್ ಅವರು ಶುಕ್ರವಾರ ಮಾಡಿರುವ ಟ್ವೀಟ್‌ನಲ್ಲಿ, ಭಾರತದಲ್ಲಿ ಟೆಸ್ಲಾದ ವಿಸ್ತರಣೆಗೆ ಕರ್ನಾಟಕ ಪ್ರಶಸ್ತ ತಾಣವಾಗಿದೆ. ಸಂಶೋಧನೆ, ತಂತ್ರಜ್ಞಾನ ಅಭಿವೃದ್ಧಿಯಲ್ಲಿ ಮುಂಚೂಣಿಯಲ್ಲಿರುವ ಕರ್ನಾಟಕವು ಟೆಸ್ಲಾಗೆ ಅಗತ್ಯ ಸೌಲಭ್ಯಗಳನ್ನು ನೀಡಲಿದೆ. ಸ್ಟಾರ್‌ಲಿಂಕ್ ಸೇರಿದಂತೆ ಟೆಸ್ಲಾದ ಯೋಜನೆಗೆ ಸಹಕರಿಸಲಿದೆ ಎಂದು ತಿಳಿಸಿದ್ದಾರೆ.
#Karnataka: The Ideal Destination for #Tesla's Expansion into #India
— M B Patil (@MBPatil) June 23, 2023
As a #progressive state & a thriving hub of #innovation & #technology, Karnataka stands ready to support and provide the necessary facilities for Tesla and other ventures of @elonmusk, including #Starlink.… pic.twitter.com/XUBk4c1Cnw
ಕರ್ನಾಟಕವು ಮುಂದಿನ 2 ದಶಕಗಳಲ್ಲಿ ತಂತ್ರಜ್ಞಾನ ಮತ್ತು ಉತ್ಪಾದನೆಯ ಪ್ರಮುಖ ತಾಣವಾಗಲು ಆದ್ಯತೆ ನೀಡಿದೆ. ಟೆಸ್ಲಾ ಕಂಪನಿಯು ಕರ್ನಾಟಕದಲ್ಲಿ ತನ್ನ ಘಟಕ ಸ್ಥಾಪಿಸಿದರೆ ಅನೂಹ್ಯ ಸಾಧ್ಯತೆ ಮತ್ತು ಅವಕಾಶಗಳು ಕಾದಿವೆ. ಹೀಗಾಗು ಕರ್ನಾಟಕ ಪ್ರಶಸ್ತ ತಾಣವಾಗಿದೆ ಎಂದು ತಿಳಿಸಿದ್ದಾರೆ.
ಜಗತ್ತಿನ ನಂ.1 ಸಿರಿವಂತ ಉದ್ಯಮಿ ಎಲಾನ್ ಮಸ್ಕ್ ಅವರ ಸ್ಯಾಟಲೈಟ್ ಬ್ರಾಡ್ ಬ್ಯಾಂಡ್ ಕಂಪನಿ ಸ್ಟಾರ್‌ಲಿಂಕ್, ಭಾರತದ ಮಾರುಕಟ್ಟೆ ಪ್ರವೇಶಕ್ಕೆ ಉತ್ಸುಕವಾಗಿದೆ. ಆದರೆ ಇದಕ್ಕೆ ಏಷ್ಯಾದ ನಂ.1 ಉದ್ಯಮಿ, ರಿಲಯನ್ಸ್ ಜಿಯೊದ ಸ್ಥಾಪಕಾಧ್ಯಕ್ಷ ಮುಕೇಶ್ ಅಂಬಾನಿ ತೀವ್ರ ವಿರೋಧಿಸುತ್ತಿದ್ದಾರೆ. (Battle of billionaires) ಪ್ರಧಾನಿ ನರೇಂದ್ರ ಮೋದಿಯವರ ಅಮೆರಿಕ ಭೇಟಿಯ ವೇಳೆ ಮಂಗಳವಾರ ಎಲಾನ್ ಮಸ್ಕ್ ಅವರು ತಮ್ಮ ಇಂಟರ್‌ನೆಟ್ ಬ್ರಾಡ್ ಬ್ಯಾಂಡ್ ಕಂಪನಿ ಸ್ಟಾರ್‌ಲಿಂಕ್ ವಹಿವಾಟನ್ನು ಭಾರತಕ್ಕೆ ವಿಸ್ತರಿಸಲು ಬಯಸಿದ್ದಾರೆ. ಇದರಿಂದ ಇಂಟರ್‌ನೆಟ್ ಸಂಪರ್ಕ ಇಲ್ಲದಿರುವ ಅಥವಾ ಹೈಸ್ಪೀಡ್ ಇಂಟರ್‌ನೆಟ್ ಸೇವೆ ಇಲ್ಲದಿರುವ ಕಡೆಗಳಲ್ಲೂ ಒದಗಿಸಬಹುದು.
ಮೋದಿ-ಮಸ್ಕ್ ಮಾತುಕತೆಯ ವೇಳೆ, ಈ ವಿಚಾರದಲ್ಲಿ ಮುಕೇಶ್ ಅಂಬಾನಿಯವರ ಆಕ್ಷೇಪ ಇದೆ ಎಂಬುದು ಪ್ರಸ್ತಾಪವಾಗಿಲ್ಲ. ಇದರೊಂದಿಗೆ ಭಾರತದಲ್ಲಿ ಬ್ರಾಡ್ ಬ್ಯಾಂಡ್ ಇಂಟರ್‌ನೆಟ್ ಸೇವೆ ಬಿಸಿನೆಸ್ ವಲಯದಲ್ಲಿ ಅಂಬಾನಿಯವರ ರಿಲಯನ್ಸ್ ಜಿಯೊ ಮತ್ತು ಮಸ್ಕ್ ಅವರ ಸ್ಟಾರ್ ಲಿಂಕ್ ನಡುವೆ ಸ್ಪರ್ಧೆ ಏರ್ಪಟ್ಟಿದೆ.
ಭಾರತದದಲ್ಲಿ ಸ್ಪೆಕ್ಟ್ರಮ್ ಅನ್ನು ಹರಾಜು ಮಾಡಬಾರದು. ಅದು ನಿಸರ್ಗದ ಸಂಪತ್ತಾಗಿರುವುದರಿಂದ ಕಂಪನಿಗಳ ನಡುವೆ ಹಂಚಬೇಕು. ಕಂಪನಿಗಳಿಗೆ ಲೈಸೆನ್ಸ್ ಮಾತ್ರ ವಿತರಿಸಬೇಕು ಎಂದು ಸ್ಟಾರ್‌ಲಿಂಕ್ ಪ್ರತಿಪಾದಿಸಿದೆ. ಸ್ಪೆಕ್ಟ್ರಮ್ ಹರಾಜಿನಿಂದ ಕಂಪನಿಗಳಿಗೆ ಟೆಲಿಕಾಂ ಸೇವೆ ದುಬಾರಿಯಾಗುತ್ತದೆ. ಭೌಗೋಳಿಕ ಮಿತಿ ಹಾಕಿದಂತಾಗುತ್ತದೆ ಎಂದು ಸ್ಟಾರ್‌ಲಿಂಕ್ ಹೇಳಿದೆ. ಆದರೆ ಇದಕ್ಕೆ ರಿಲಯನ್ಸ್ ಜಿಯೊ ಆಕ್ಷೇಪ ವ್ಯಕ್ತಪಡಿಸಿದೆ.
ವಿದೇಶಿ ಟೆಲಿಕಾಂ ಕಂಪನಿ ಮಾರುಕಟ್ಟೆಗೆ ಬಂದರೆ ಮುಕೇಶ್ ಅಂಬಾನಿಯವರ ರಿಲಯನ್ಸ್ ಜಿಯೊಗೆ ಪ್ರತಿಸ್ಪರ್ಧೆ ಸೃಷ್ಟಿಯಾಗಲಿದೆ. ರಿಲಯನ್ಸ್ ಜಿಯೊ 43 ಕೋಟಿ ಬಳಕೆದಾರರನ್ನು ಹೊಂದಿದೆ. 80 ಲಕ್ಷ ವೈರ್ಡ್ ಬ್ರಾಡ್ ಬ್ಯಾಂಡ್ ಸಂಪರ್ಕಗಳನ್ನು ಹೊಂದಿದೆ. ಮಾರುಕಟ್ಟೆಯಲ್ಲಿ 25% ಪಾಲನ್ನು ತನ್ನದಾಗಿಸಿದೆ.