Site icon Vistara News

Education Policy: ರಾಜ್ಯ ಶಿಕ್ಷಣ ನೀತಿ ಕರಡು ಸಿದ್ಧತೆಗೆ ಸಮಿತಿ ರಚಿಸಿದ ರಾಜ್ಯ ಸರ್ಕಾರ

study Books

ಬೆಂಗಳೂರು: ಕೇಂದ್ರ ಸರ್ಕಾರ ಜಾರಿ ಮಾಡಿರುವ ಹೊಸ ರಾಷ್ಟ್ರೀಯ ಶಿಕ್ಷಣ ನೀತಿ-2020 ಅನ್ನು ಕರ್ನಾಟಕದಲ್ಲಿ ರದ್ದು ಪಡಿಸಿ ʼರಾಜ್ಯ ಶಿಕ್ಷಣ ನೀತಿʼ (State Education Policy) ಜಾರಿ ಮಾಡುವುದಾಗಿ ರಾಜ್ಯ ಸರ್ಕಾರವು ಘೋಷಿಸಿತ್ತು. ಆ ನಿಟ್ಟಿನಲ್ಲಿ ಮೊದಲ ಹೆಜ್ಜೆ ಇಟ್ಟಿರುವ ಸರ್ಕಾರ, ರಾಜ್ಯ ಶಿಕ್ಷಣ ನೀತಿ ಕರಡು ಸಿದ್ಧಪಡಿಸಲು ಪ್ರೊ. ಸುಖ್‌ದೇವ್ ಥೋರಟ್ ಅವರ ಅಧ್ಯಕ್ಷತೆಯಲ್ಲಿ ಸಮಿತಿ ರಚಿಸಿ ಬುಧವಾರ ಆದೇಶ ಹೊರಡಿಸಿದೆ.

ಯುಜಿಸಿ ಮಾಜಿ ಅಧ್ಯಕ್ಷ, ಶಿಕ್ಷಣ ತಜ್ಞ ಪ್ರೊ. ಸುಖ್‌ದೇವ್ ಥೋರಟ್ ಅಧ್ಯಕ್ಷತೆಯ ಸಮಿತಿಯಲ್ಲಿ ನಿವೃತ್ತ ಐಎಎಸ್ ಅಧಿಕಾರಿಗಳು, ವಿಶ್ವವಿದ್ಯಾಲಯ ಕುಲಪತಿಗಳು, ವಿಶ್ರಾಂತ ಕುಲಪತಿಗಳು, ಶಿಕ್ಷಣ ತಜ್ಞರು ಸೇರಿ 15 ಸದಸ್ಯರಿದ್ದಾರೆ. ಇದರೊಂದಿಗೆ ಸಲಹಾ ಮಂಡಳಿಯನ್ನೂ ನೇಮಕ ಮಾಡಲಾಗಿದೆ.

ಪ್ರೊ. ಸುಖ್‌ದೇವ್ ಥೋರಟ್

ವಿದ್ಯಾರ್ಥಿಗಳಿಗೆ ನೈತಿಕ ಶಿಕ್ಷಣದ ಜತೆಗೆ ವೈಜ್ಞಾನಿಕ ಜ್ಞಾನ ನೀಡುವುದು, ಪ್ರಜಾಪ್ರಭುತ್ವ ಮೌಲ್ಯಗಳನ್ನು ಬೆಳೆಸುವುದು, ಕೌಶಲ್ಯ ಮತ್ತು ವೃತ್ತಿಪರ ಶಿಕ್ಷಣವನ್ನು ನೀಡಿ ಉದ್ಯೋಗವನ್ನು ಹೆಚ್ಚಿಸುವ ದೃಷ್ಟಿಯಿಂದ ಸಮಿತಿ ರಚನೆಗೆ ಸರ್ಕಾರ ಆದೇಶ ನೀಡಿದೆ.

ಎಸ್‌ಇಪಿ ಕರಡು ಸಮಿತಿಯ 15 ಸದಸ್ಯರು

1. ಸಂಜಯ್ ಕೌಲ್, ನಿವೃತ್ತ ಐಎಎಸ್ ಅಧಿಕಾರಿ
2. ಪ್ರೊ. ಎಸ್. ಜಾಫೆಟ್, ನಿವೃತ್ತ ಉಪಕುಲಪತಿ, ಬೆಂಗಳೂರು ವಿವಿ
3. ಪ್ರೊ. ಜೋಗನ್ ಶಂಕರ್, ನಿವೃತ್ತ ಉಪಕುಲಪತಿ, ಕುವೆಂಪು ವಿವಿ
4. ಡಾ. ಸುಧೀರ್ ಕೃಷ್ಣಸ್ವಾಮಿ, ಉಪಕುಲಪತಿ, ಬೆಂಗಳೂರಿನ ನ್ಯಾಷನಲ್ ಲಾ ಸ್ಕೂಲ್ ಆಫ್‌ ಇಂಡಿಯಾ
5. ಪ್ರೊ. ರಾಜೇಂದ್ರ ಚೆನ್ನಿ, ನಿವೃತ್ತ ಪ್ರಾಧ್ಯಾಪಕ, ಕುವೆಂಪು ವಿವಿ
6. ಡಾ. ನಟರಾಜ್ ಭೂದಾಳು, ನಿವೃತ್ತ ಪ್ರಧ್ಯಾಪಕ
7. ಪ್ರೊ.ಸುದಾಂಶು ಭೂಷಣ್, ವಿಭಾಗ ಮುಖ್ಯಸ್ಥರು, ಎನ್‌ಐಇಪಿಎ, ನವದೆಹಲಿ
8. ಪ್ರೊ. ಪ್ರಣತಿ ಪಾಂಡಾ, ವಿಭಾಗ ಮುಖ್ಯಸ್ಥರು, ಎನ್‌ಐಇಪಿಎ, ನವದೆಹಲಿ
9. ಡಾ.ಫುರ್ಕಾನ್ ಕಮರ್, ಜಾಮಿಯಾ ಮಿಲ್ಲಿಯಾ ವಿವಿ, ನವದೆಹಲಿ
10. ಡಾ. ಶರತ್ ಅನಂತಮೂರ್ತಿ, ಪ್ರಾಧ್ಯಾಪಕ, ಹೈದರಾಬಾದ್ ವಿವಿ
11. ಪ್ರಾಧ್ಯಾಪಕ ಎ. ನಾರಾಯಣ, ಅಜೀಂ ಪ್ರೇಮ್‌ಜಿ ವಿವಿ
12. ಡಾ. ವಿ.ಪಿ. ನಿರಂಜನಾರಾಧ್ಯ, ಶಿಕ್ಷಣ ತಜ್ಞ
13. ಡಾ. ಎಂ.ಎಸ್. ತಳವಾರ್, ನಿವೃತ್ತ ಪ್ರಧ್ಯಾಪಕ
14. ಡಾ. ಸಂತೋಷ್ ನಾಯ್ಕ್, ಪ್ರಾಧ್ಯಾಪಕ
15. ಡಾ. ವಿನಯ ಒಕ್ಕುಂದ, ಸಹ ಪ್ರಾಧ್ಯಾಪಕಿ

8 ವಿಷಯ ತಜ್ಞರ ನೇಮಕ (ಸಲಹೆಗಾರರು)

1. ಚಿಂತಕ ಯೋಗೇಂದ್ರ ಯಾದವ್
2. ಪ್ರೊ.ರಹಮತ್ ತರೀಕೆರೆ, ನಿವೃತ್ತ ಪ್ರಾಧ್ಯಾಪಕ, ಕನ್ನಡ ವಿವಿ
3. ಜಾನಕಿ ನಾಯರ್, ಇತಿಹಾಸ ತಜ್ಞರು
4. ಡಾ. ಎಸ್. ಚಂದ್ರಶೇಖರ ಶೆಟ್ಟಿ, ಮಾಜಿ ಕುಲಪತಿ, ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿವಿ
5. ಸೋನಮ್ ವಾಂಗ್ಚುಕ್, ಶಿಕ್ಷಣ ತಜ್ಞ
6. ಪ್ರೊ. ವಲೇರಿಯನ್ ರೊಡ್ರಿಗಸ್, ಜೆಎನ್‌ಯು ಪ್ರಾಧ್ಯಾಪಕ
7. ಪ್ರೊ.ಸಬಿಹಾ ಭೂಮಿಗೌಡ, ಮಾಜಿ ಉಪಕುಲಪತಿ, ಅಕ್ಕಮಹಾದೇವಿ ಮಹಿಳಾ ವಿವಿ
8. ಕರ್ನಾಟಕ ರಾಜ್ಯ ಉನ್ನತ ಶಿಕ್ಷಣ ಅಕಾಡೆಮಿಯ ನಿರ್ದೇಶಕರು

ಇದನ್ನೂ ಓದಿ | Education Department: ಶಾಲಾ ಶಿಕ್ಷಣ ಇಲಾಖೆ ಆಯುಕ್ತರ ಕಚೇರಿಗೆ ನೂತನ ವೆಬ್‌ಸೈಟ್

ಸಮಿತಿ ರಚನೆ ಬಗ್ಗೆ ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಸಿಎಂ ಸಿದ್ದರಾಮಯ್ಯ ಮಾಹಿತಿ ನೀಡಿದ್ದಾರೆ. ಕರ್ನಾಟಕ ರಾಜ್ಯ ಶಿಕ್ಷಣ ನೀತಿಯ ಕರಡು ಸಿದ್ಧಪಡಿಸಲು ಪ್ರೊ. ಸುಖ್‌ದೇವ್ ಥೋರಟ್ ಅವರ ಅಧ್ಯಕ್ಷತೆಯಲ್ಲಿ ರಾಜ್ಯ ಶಿಕ್ಷಣ ನೀತಿ ಸಮಿತಿಯನ್ನು ರಚಿಸಿ ಆದೇಶಿಸಲಾಗಿದೆ. ಈ ಸಮಿತಿಯು ವಿದ್ಯಾರ್ಥಿಗಳಲ್ಲಿ ವೈಜ್ಞಾನಿಕತೆ, ವೈಚಾರಿಕತೆ ಬೆಳೆಸುವ ಮತ್ತು ಅವರ ಮನೋವಿಕಾಸಕ್ಕೆ ಅಗತ್ಯವಾದ ಶಿಕ್ಷಣ ನೀಡಲು ಸೂಕ್ತ ಶಿಫಾರಸುಗಳನ್ನು ನೀಡಲಿದೆ ಎಂಬ ಭರವಸೆಯಿದೆ. ಕರ್ನಾಟಕ ರಾಜ್ಯ ಶಿಕ್ಷಣ ನೀತಿಯು ದೇಶಕ್ಕೆ ಮಾದರಿ ಶಿಕ್ಷಣ ನೀತಿಯಾಗಿ ಹೊರಹೊಮ್ಮಲಿ ಎಂದು ಹಾರೈಸುತ್ತೇನೆ ಎಂದು ತಿಳಿಸಿದ್ದಾರೆ.

Exit mobile version