Site icon Vistara News

Reservation: ಒಬಿಸಿ ಮೀಸಲಾತಿ ಪುನರ್‌ ವರ್ಗೀಕರಿಸಿ ರಾಜ್ಯ ಸರ್ಕಾರ ಆದೇಶ; 2ಸಿ ಪ್ರವರ್ಗಕ್ಕೆ ಶೇ.6, 2ಡಿ ಪ್ರವರ್ಗಕ್ಕೆ ಶೇ.7 ಮೀಸಲಾತಿ

Establishment of Backward Classes Category-I Pinjara, Nadaf and 13 Other Castes Development Corporation

ಬೆಂಗಳೂರು: ರಾಜ್ಯದಲ್ಲಿ ಒಕ್ಕಲಿಗ ಮತ್ತು ವೀರಶೈವ ಪಂಚಮಸಾಲಿ ಮೀಸಲಾತಿ ಪ್ರಮಾಣವನ್ನು ತಲಾ ಶೇ.2ರಷ್ಟು ಹೆಚ್ಚಿಸಲು ಸಚಿವ ಸಂಪುಟ ನಿರ್ಧಾರ ಕೈಗೊಂಡ ಬೆನ್ನಲ್ಲೇ ಹಿಂದುಳಿದ ವರ್ಗಗಳಿಗೆ ಮೀಸಲಾತಿಯನ್ನು (Reservation) ಪುನರ್‌ ವರ್ಗೀಕರಿಸಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.

ಅತ್ಯಂತ ಹಿಂದುಳಿದ ಒಬಿಸಿ ಪ್ರವರ್ಗ-1ಕ್ಕೆ ಶೇ.4, ಪ್ರವರ್ಗ-2ಎ ಶೇ.15, ಪ್ರವರ್ಗ 2ಬಿ ಶೇ.0, ಅತೀ ಹಿಂದುಳಿದ ಪ್ರವರ್ಗ 2ಸಿಗೆ ಶೇ.6 ಹಾಗೂ ಪ್ರವರ್ಗ 2ಡಿಗೆ ಶೇ.7 ಮೀಸಲಾತಿ ಸೇರಿ ಒಟ್ಟು ಶೇ. 32ರಷ್ಟು ಮೀಸಲಾತಿ ನೀಡಿ ಆದೇಶ ಹೊರಡಿಸಲಾಗಿದೆ. ರಾಜ್ಯದ ಹಿಂದುಳಿದ ವರ್ಗಗಳಿಗೆ ಸಾಮಾಜಿಕ ನ್ಯಾಯ ಕಲ್ಪಿಸುವ ದೃಷ್ಟಿಯಿಂದ ಹಿಂದುಳಿದ ವರ್ಗಗಳಿಗೆ ಮೀಸಲಾತಿಯನ್ನು ಪುನರ್‌ ವರ್ಗೀಕರಿಸಲಾಗಿದೆ ಎಂದು ಹಿಂದುಳಿದ ವರ್ಗಗಳ ಇಲಾಖೆ ತಿಳಿಸಿದೆ.

ಈ ಹಿಂದೆ ಒಕ್ಕಲಿಗರು ಮತ್ತು ಪಂಚಮಸಾಲಿಗಳಿಗೆ 2ಸಿ ಮತ್ತು 2 ಡಿ ಎಂಬ ಎರಡು ಹೊಸ ಪ್ರವರ್ಗಗಳನ್ನು ಸೃಷ್ಟಿಸಲಾಗಿತ್ತು. ಇವರಿಗೆ ಕೇಂದ್ರ ಸರ್ಕಾರ ಮೇಲ್ವರ್ಗದ ಬಡವರಿಗೆ ನಿಗದಿಪಡಿಸಿದ ಇಡಬ್ಲ್ಯುಎಸ್‌ ಶೇ. 10 ಮೀಸಲಾತಿಯಲ್ಲಿ ಅವಕಾಶ ನೀಡಲು ನಿರ್ಧರಿಸಲಾಗಿತ್ತು. ಆದರೆ, ಮಾ.24ರಂದು ನಡೆದ ರಾಜ್ಯ ಸಚಿವ ಸಂಪುಟ ಸಭೆಯಲ್ಲಿ ಒಕ್ಕಲಿಗರಿಗೆ ಮತ್ತು ವೀರಶೈವ ಪಂಚಮಸಾಲಿಗಳಿಗೆ ಮೀಸಲಾತಿಯನ್ನು ತಲಾ ಶೇ.2ರಷ್ಟು ಹೆಚ್ಚಿಸಲು ತೀರ್ಮಾನಿಸಲಾಗಿತ್ತು. ಜತೆಗೆ ಇತರ ಹಿಂದುಳಿದ ವರ್ಗದಲ್ಲಿ ಧಾರ್ಮಿಕ ಅಲ್ಪ ಸಂಖ್ಯಾತರಿಗೆ ಮೀಸಲಾತಿ ನೀಡುತ್ತಿದ್ದ 2ಬಿ ಪ್ರವರ್ಗ ರದ್ದು ಮಾಡಲಾಗಿತ್ತು.

ಹೊಸ ಮಾದರಿಯಲ್ಲಿ ಒಬಿಸಿಯಲ್ಲಿ 4 ಪ್ರವರ್ಗಗಳನ್ನು ಮಾಡಲಾಗಿದೆ. ಧಾರ್ಮಿಕ ಅಲ್ಪಸಂಖ್ಯಾತರಿಗೆ ಇದ್ದ ಮೀಸಲಾತಿಯನ್ನು ರದ್ದು ಮಾಡಿ ಅವರಿಗಿದ್ದ ಶೇ.4ರಷ್ಟು ಮೀಸಲಾತಿಯನ್ನು ಒಕ್ಕಲಿಗ ಮತ್ತು ಲಿಂಗಾಯತರಿಗೆ ಹಂಚಲಾಗಿದೆ. ಹೀಗಾಗಿ ಧಾರ್ಮಿಕ ಅಲ್ಪಸಂಖ್ಯಾತರು ಇನ್ನು ಮುಂದೆ ಮೇಲ್ವರ್ಗದ ಬಡವರಿಗೆ ಮೀಸಲಿಟ್ಟ ʼಆರ್ಥಿಕವಾಗಿ ಹಿಂದುಳಿದ ವರ್ಗʼಗಳ (ಇಡಬ್ಲ್ಯುಎಸ್‌) ಶೇ.10 ಮೀಸಲಾತಿಯಲ್ಲಿ ಅವಕಾಶಗಳನ್ನು ಪಡೆಯಬೇಕಾಗಿದೆ.

ಸಂತಸ ವ್ಯಕ್ತಪಡಿಸಿದ ವಚನಾನಂದ ಸ್ವಾಮೀಜಿ

ಮೂರು ದಶಕಗಳ ಪಂಚಮಸಾಲಿ ಸಮುದಾಯದ ಹೋರಾಟಕ್ಕೆ ಮತ್ತೊಂದು ಸ್ಪಷ್ಟತೆ ದೊರೆತಿದೆ. 2ಡಿ ಪ್ರವರ್ಗಕ್ಕೆ ಶೇ. 7 ರಷ್ಟು ಮೀಸಲಾತಿಯನ್ನು ನೀಡುವ ಬಗ್ಗೆ ಸಚಿವ ಸಂಪುಟ ಸಭೆಯಲ್ಲಿ ನಿರ್ಧರಿಸಿದ್ದು ಒಂದು ಹಂತವಾದರೆ, ಮೀಸಲಾತಿಯನ್ನು ಪುನರ್‌ ವರ್ಗೀಕರಿಸಿ ಮೀಸಲಾತಿ ಪ್ರಮಾಣದ ಬಗ್ಗೆ ಅಧಿಕೃತ ಆದೇಶವನ್ನು ಸರ್ಕಾರ ಹೊರಡಿಸಿದೆ ಎಂದು ಹರಿಹರದ ವೀರಶೈವ ಲಿಂಗಾಯತ ಪಂಚಮಸಾಲಿ ಪೀಠಾಧ್ಯಕ್ಷರಾದ ಶ್ರೀ ವಚನಾನಂದ ಸ್ವಾಮೀಜಿ ತಿಳಿಸಿದ್ದಾರೆ.

ಹರಿಹರ ವೀರಶೈವ ಲಿಂಗಾಯತ ಪಂಚಮಸಾಲಿ ಜಗದ್ಗುರು ಪೀಠದ ನೇತೃತ್ವದ ಹೋರಾಟಕ್ಕೆ ಮತ್ತೊಂದು ಯಶಸ್ಸು ದೊರೆತಿರುವುದು ಸಂತಸದ ವಿಷಯ. ಹರಿಹರ ಪೀಠ ಇದನ್ನು ತುಂಬು ಹೃದಯದಿಂದ ಸ್ವಾಗತಿಸುತ್ತದೆ. ಹಾಗೆಯೇ, ಕೇಂದ್ರ ಓಬಿಸಿ ಪಟ್ಟಿಯಲ್ಲಿ ಸ್ಥಾನ ದೊರಕಿಸಿ ಕೊಡುವ ನಿಟ್ಟಿನಲ್ಲಿ ಪ್ರಯತ್ನ ಮುಂದುವರೆಯಲಿದೆ ಎಂದು ಹೇಳಿದ್ದಾರೆ.

Exit mobile version