Site icon Vistara News

Compassionate Employment : ಸರ್ಕಾರಿ ನೌಕರಿಯಲ್ಲಿ ʼಅನುಕಂಪʼ ತೋರದ ಸರ್ಕಾರ! ನೇಮಕಾತಿಗೆ ತಡೆ

Vidhanasoudha

ಬೆಂಗಳೂರು: ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ (Rural Development and Panchayat Raj Department) ನೇಮಕಾತಿಗೆ ಸಂಬಂಧಪಟ್ಟಂತೆ ರಾಜ್ಯ ಸರ್ಕಾರ (Karnataka State Government) ಮಹತ್ವದ ನಿರ್ಧಾರವನ್ನು ಕೈಗೊಂಡಿದೆ. ಈ ಇಲಾಖೆಯಲ್ಲಿ ಅನುಕಂಪ ಆಧಾರಿತ ನೌಕರಿ (Compassionate Employment) ನೇಮಕಾತಿಗಳಿಗೆ ತಡೆ ನೀಡಲಾಗಿದೆ. ಮುಂದಿನ ಆದೇಶದವರೆಗೆ ನೇಮಕಾತಿ ಪ್ರಕ್ರಿಯೆಯನ್ನು ನಡೆಸದಂತೆ ಆದೇಶದಲ್ಲಿ ಸೂಚಿಸಲಾಗಿದೆ.

ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಅಧೀನ ಕಾರ್ಯದರ್ಶಿ (ಸೇವೆಗಳು-ಬಿ & ಸಿ) ಬಾಲಪ್ಪ ಅವರು ಈ ಆದೇಶವನ್ನು ಹೊರಡಿಸಿದ್ದು, ಪ್ರಾದೇಶಿಕ ಆಯುಕ್ತರ ಕಚೇರಿಗಳಿಂದ ಸ್ವೀಕೃತವಾಗುತ್ತಿರುವ ಅನುಕಂಪದ ನೇಮಕಾತಿ ಪ್ರಸ್ತಾವನೆಗಳನ್ನು ತಡೆಹಿಡಿಯುವುದು. ಮು೦ದಿನ ನಿರ್ದೇಶನದವರೆಗೆ ಯಥಾಸ್ಥಿತಿಯನ್ನು ಕಾಯ್ದುಕೊಳ್ಳಬೇಕು ಎಂದು ಸೂಚಿಸಿದ್ದಾರೆ.

ಏಕೆ ಈ ನಿರ್ಧಾರ?

ಜಿಲ್ಲಾ ಪಂಚಾಯತ್‌ ಹಾಗೂ ತಾಲೂಕು ಪಂಚಾಯತ್‌ ಕಚೇರಿಗಳಲ್ಲಿ ಅನುಕಂಪದ ಆಧಾರದ ಮೇಲೆ ಹುದ್ದೆಗಳನ್ನು ನೀಡುವುದು ನಿಯಮಾನುಸಾರ ಸರಿಯಾದರೂ, ಅರ್ಹತೆ ಇಲ್ಲದೆ ಸೇರಿಸಿಕೊಂಡರೆ ಒಟ್ಟಾರೆ ವ್ಯವಸ್ಥೆಯಲ್ಲಿ ಗುಣಮಟ್ಟ ಕುಸಿಯುವ ಸಾಧ್ಯತೆ ಇರುತ್ತದೆ. ಅಲ್ಲದೆ, ಅನುಕಂಪದ ಆಧಾರದಲ್ಲಿಯೇ ನೇಮಕಾತಿ ನಡೆದರೆ ನೇರ ನೇಮಕಾತಿಯಲ್ಲಿ ನೌಕರಿ ನೀಡಲು ಅವಕಾಶವೇ ಇರುವುದಿಲ್ಲ. ಹೀಗಾಗಿ ಇಂತಹ ಸಂದರ್ಭದಲ್ಲಿ ಅನುಕಂಪದ ಆಧಾರದಲ್ಲಿ ಶೇಕಡಾವಾರು ಪ್ರಮಾಣ ಅಥವಾ ನಿರ್ದಿಷ್ಟ ಪ್ರಮಾಣಕ್ಕೆ ಸೀಮಿತಗೊಳಿಸಿ ನೇಮಕಾತಿ ನಡೆಸುವ ಸಂಬಂಧ ಸರ್ಕಾರಕ್ಕೆ ಈಗಾಗಲೇ ಪ್ರಸ್ತಾಪ ಹೋಗಿದ್ದು, ಅದು ಮೊದಲು ಇತ್ಯರ್ಥವಾಗಲಿ ಎಂಬ ವಿಚಾರವನ್ನು ಆದೇಶದಲ್ಲಿ ಉಲ್ಲೇಖಿಸಲಾಗಿದೆ.

ಅನುಕಂಪದ ಆಧಾರದಲ್ಲಿ ಅರ್ಹತೆ ಇಲ್ಲದವರೂ ನೇಮಕವಾಗುತ್ತಾರೆ. ಇದರಿಂದಾಗಿ ಸರ್ಕಾರಿ ಕಾರ್ಯ ಚಟುವಟಿಕೆಯು ಕುಂಠಿತವಾಗುವುದಲ್ಲದೆ, ನಾಗರಿಕರ ಸೇವೆಯಲ್ಲಿ ವ್ಯತ್ಯಯವಾಗುವ ಆತಂಕವಿದೆ ಎಂಬ ವಿಚಾರವು ಹಲವು ವರ್ಷಗಳಿಂದ ಚರ್ಚೆಯಲ್ಲಿತ್ತು. ಈ ಹಿನ್ನೆಲೆಯಲ್ಲಿ ಅನುಕಂಪದ ಆಧಾರದಲ್ಲಿ ಯಾವ ರೀತಿಯಾಗಿ, ಎಷ್ಟು ಪ್ರಮಾಣದಲ್ಲಿ ಉದ್ಯೋಗವನ್ನು ನೀಡಬಹುದು ಎಂಬ ಬಗ್ಗೆ ಸರ್ಕಾರಕ್ಕೆ ಆಂತರಿಕವಾಗಿ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದು ತಿಳಿದುಬಂದಿದೆ.

ಆದೇಶದಲ್ಲೇನಿದೆ?

ಜಿಲ್ಲಾ ಪಂಚಾಯತ್ ಹಾಗೂ ತಾಲೂಕು ಪಂಚಾಯತ್ ಕಚೇರಿಗಳಲ್ಲಿ ನೇರ ನೇಮಕಾತಿ ಕೋಟಾದಡಿ ಗಣನೀಯ ಪ್ರಮಾಣದ ಗ್ರೂಪ್-ಸಿ ಹುದ್ದೆಗಳು ಖಾಲಿ ಇರುವುದನ್ನು ಗಮನಿಸಿ, ಸದರಿ ಹುದ್ದೆಗಳನ್ನು ನೇರ ನೇಮಕಾತಿ ಮೂಲಕ ಭರ್ತಿ ಮಾಡಲು ಇನ್ನೂ ಹೆಚ್ಚಿನ ಕಾಲಾವಕಾಶ ಬೇಕಾಗಿರುವುದನ್ನು ಗಮನಿಸಿ, ಎಲ್ಲ ಪ್ರಾದೇಶಿಕ ಆಯುಕ್ತರ ಕಚೇರಿಗಳಿಗೆ ಪತ್ರ ಬರೆಯಲಾಗಿದೆ.

ತಮ್ಮ ಕಛೇರಿಗಳಲ್ಲಿ ಅನುಕಂಪದ ನೇಮಕಾತಿ ಕುರಿತು ಬಾಕಿ ಇರುವ ಪ್ರಸ್ತಾವನೆಗಳ ಪೈಕಿ ಪ್ರ.ದ.ಸ, ಶೀಘ್ರಲಿಪಿಗಾರರು ಮತ್ತು, ದ್ವಿ.ದ.ಸ ಹುದ್ದೆಗಳಿಗೆ ಅನುಕಂಪದ ನೇಮಕಾತಿ ಪ್ರಸ್ತಾವನೆಗಳನ್ನು ಜಿಲ್ಲಾ ಪಂಚಾಯತ್‌ಗಳಲ್ಲಿ ನೇರ ನೇಮಕಾತಿ ಕೋಟಾದಡಿ ಖಾಲಿ ಇರುವ ಹುದ್ದೆಗಳ ಎದುರು ನೇಮಕ ಮಾಡಲು ಅನುವಾಗುವಂತೆ ನೌಕರರ ಇಚ್ಛೆಗನುಗುಣವಾಗಿ ಸಂಬಂಧಿಸಿದ ಜಿಲ್ಲಾ ಪಂಚಾಯತ್‌ಗಳಿಗೆ ಕಳುಹಿಸುವಂತೆ ತಿಳಿಸಲಾಗಿತ್ತು ಎಂದು ಹೇಳಿದೆ.

ಎಲ್ಲ ಜಿಲ್ಲಾ ಪಂಚಾಯತ್‌ಗಳಿಗೆ ಬರೆದ ಪತ್ರದಲ್ಲಿ, ಅನುಕಂಪದ ನೇಮಕಾತಿ ಕುರಿತು, ಪ್ರಾದೇಶಿಕ ಆಯುಕ್ತರ ಕಛೇರಿಯಿಂದ ಪ್ರಸ್ತಾವನೆ ಸ್ವೀಕೃತವಾದಲ್ಲಿ ಅಂತಹ ಪ್ರಸ್ತಾವನೆಗಳನ್ನು ಅನುಕಂಪದ ನೇಮಕಾತಿ ನಿಯಮಗಳ ಅನುಸಾರ ವಿವರವಾಗಿ ಪರಿಶೀಲಿಸಿ, ಅನುಕಂಪದ ನೇಮಕಾತಿಗೆ ಅರ್ಹವೆಂದು ಕಂಡು ಬರುವ ಅಭ್ಯರ್ಥಿಗಳನ್ನು ನೇರ ನೇಮಕಾತಿ ಕೋಟಾದಡಿ ಖಾಲಿ ಇರುವ ಹುದ್ದೆಯ ಎದುರು ಪರಿಗಣಿಸಿ, ಅಂತಹ ಅಭ್ಯರ್ಥಿಯನ್ನು ನೇಮಕ ಮಾಡಲು ಕ್ರಮವಹಿಸಬಹುದೆಂದು ತಿಳಿಸಲಾಗಿತ್ತು ಎಂದು ತಿಳಿಸಿದೆ.

ನೇರ ನೇಮಕಾತಿ ಹುದ್ದೆಗೆ ಸಮಸ್ಯೆ

ಇತ್ತೀಚಿನ ಬೆಳವಣಿಗೆಯಂತೆ ಪ್ರಾದೇಶಿಕ ಆಯುಕ್ತರ ಕಚೇರಿಗಳಿಂದ ಸ್ವೀಕೃತವಾಗುವ ಅನುಕಂಪದ ನೇಮಕಾತಿ ಪ್ರಸ್ತಾವನೆಗಳನ್ನು ಆಧರಿಸಿ, ಹೆಚ್ಚಿನ ಸಂಖ್ಯೆಯಲ್ಲಿ ಜಿಲ್ಲಾ ಪಂಚಾಯಿತಿಗಳು ಅನುಕಂಪದ ಆಧಾರದ ಮೇಲೆ ನೇಮಕಾತಿ ಆದೇಶ ನೀಡುತ್ತಿರುವುದು ಸರ್ಕಾರದ ಗಮನಕ್ಕೆ ಬಂದಿರುತ್ತದೆ. ಹೀಗೆಯೇ ಮುಂದುವರಿದಲ್ಲಿ, ಜಿಲ್ಲಾ ಪಂಚಾಯತ್ ಹಾಗೂ ತಾಲೂಕು ಪಂಚಾಯತ್‌ ಕಚೇರಿಗಳಲ್ಲಿ ನೇರ-ನೇಮಕಾತಿ ಖೋಟಾದಡಿ ಖಾಲಿ ಇರುವ ಎಲ್ಲ ಹುದ್ದೆಗಳನ್ನು ಅನುಕಂಪದ ಆಧಾರದ ಮೇಲೆಯೇ ಭರ್ತಿ ಮಾಡಬಹುದಾದ ಸಂದರ್ಭ ಉಂಟಾಗುತ್ತದೆ.

ಗುಣಮಟ್ಟ ಕುಸಿಯುವ ಸಾಧ್ಯತೆ

ಈ ರೀತಿ ಆದಲ್ಲಿ ಜಿಲ್ಲಾ ಪಂಚಾಯತ್‌ ಹಾಗೂ ತಾಲೂಕು ಪಂಚಾಯತ್‌ ಕಚೇರಿಗಳ ಕಾರ್ಯನಿರ್ವಹಣೆಯ ಗುಣಮಟ್ಟ ಕುಸಿಯುವ ಸಾಧ್ಯತೆ ಇರುವುದಲ್ಲದೇ, ಜಿಲ್ಲಾ ಪಂಚಾಯತ್‌ ಹಾಗೂ ತಾಲೂಕು ಪಂಚಾಯತ್‌ಗಳಲಿ ಕಾರ್ಯನಿರ್ವಹಿಸುವ ಸಂದರ್ಭದಲ್ಲಿ ಮರಣ ಹೊಂದುವ ನೌಕರರ ಕುಟುಂಬದ ಸದಸ್ಯರಿಗೆ ನೇಮಕಾತಿ ನೀಡಲು ಹುದ್ದೆಗಳು ಲಭ್ಯವಾಗದ ಸನ್ನಿವೇಶ ನಿರ್ಮಾಣವಾಗುತ್ತದೆ ಎಂದು ವಿವರಣೆ ನೀಡಲಾಗಿದೆ.

ಈ ಅಂಶಗಳನ್ನು ಗಮನಿಸಿ, ಪ್ರಾದೇಶಿಕ ಆಯುಕ್ತರ ಕಚೇರಿಯಿಂದ ಸ್ವೀಕೃತವಾಗುವ ಪ್ರಸ್ತಾವನೆಗಳನ್ನು ಆಧರಿಸಿ ಮಾಡುವ ಅನುಕಂಪದ ನೇಮಕಾತಿಯನ್ನು ಒಂದು ನಿರ್ದಿಷ್ಟ ಪ್ರಮಾಣಕ್ಕೆ ಸೀಮಿತಗೊಳಿಸುವುದು ಅಗತ್ಯವೆಂದು ನಿರ್ಣಯಿಸಿ, ಈ ಸಂಬಂಧದ ಪ್ರಸ್ತಾವನೆಯು ಪರಿಶೀಲನೆಯಲ್ಲಿರುತ್ತದೆ.

ಇದನ್ನೂ ಓದಿ: Roof collapse : ಅಯ್ಯೋ..! ಆಸ್ಪತ್ರೆ ವಾರ್ಡ್‌ನಲ್ಲಿದ್ದ ಬಾಣಂತಿ- ಶಿಶು ಮೇಲೆ ಕುಸಿದ ಚಾವಣಿ!

ಆದ್ದರಿಂದ ಈ ವಿಷಯದ ಕುರಿತು ಸರ್ಕಾರದಿಂದ ಮುಂದಿನ ನಿರ್ದೇಶನ ನೀಡುವವರೆಗೆ ಪ್ರಾದೇಶಿಕ ಆಯುಕ್ತರ ಮುಖಾಂತರ ಸ್ವೀಕೃತವಾಗಿರುವ/ ಕೃತವಾಗುವ ಅನುಕಂಪದ ನೇಮಕಾತಿ ಪ್ರಸ್ತಾವನೆಗಳ ಕುರಿತು ಯಾವುದೇ ಕ್ರಮ ವಹಿಸದಂತೆ ಹಾಗೂ ಈಗಾಗಲೇ ಪರಿಶೀಲನೆಯಲ್ಲಿರುವ ಪ್ರಸ್ತಾವನೆಗಳನ್ನು ಯಾವ ಹಂತದಲ್ಲಿದೆಯೋ ಅದೇ ಹಂತಕ್ಕೆ ಬಾಕಿ ಇಡುವಂತೆ ತಿಳಿಸಲಾಗಿದೆ.

Exit mobile version