ಮೈಸೂರು: ರಾಜ್ಯ ಸರ್ಕಾರ ಅತಿ ಶೀಘ್ರದಲ್ಲೇ ಪತಗೊಳ್ಳಲಿದೆ. ನಾನು ವರ್ಷ, ತಿಂಗಳ ಮಾತನಾಡುತ್ತಿಲ್ಲ. ಕೆಲವೇ ದಿನಗಳಲ್ಲಿ ಸರ್ಕಾರ ಪತನವಾಗಲಿದೆ. ಸರ್ಕಾರದ ಪತನಕ್ಕೆ ಕ್ಷಣಗಣನೆ ಆರಂಭವಾಗಿದ್ದು, ಯಾವ ಕ್ಷಣದಲ್ಲಾದರೂ ಈ ಸರ್ಕಾರ ಬಿದ್ದು ಹೋಗಬಹುದು. ಆಗ ಮತ್ತೊಮ್ಮೆ ಚುನಾವಣೆಗೆ ಹೋಗುವುದು ಸರಿಯಾದ ಮಾರ್ಗ. ಹೊಸ ಸರ್ಕಾರ ಜನರಿಂದ ಆಯ್ಕೆಯಾದರೆ ಉತ್ತಮ ಎಂದು ಮಾಜಿ ಸಚಿವ ಕೆ. ಎಸ್. ಈಶ್ವರಪ್ಪ ಹೇಳಿದರು.
ದಕ್ಷಿಣ ಪದವೀಧರರ ಕ್ಷೇತ್ರದ ಚುನಾವಣೆ ಹಿನ್ನೆಲೆಯಲ್ಲಿ ನಗರದ ಬಿಜೆಪಿ ಕಚೇರಿಯಲ್ಲಿ ನಡೆದ ಆಕಾಂಕ್ಷಿಗಳ ಸಭೆಯಲ್ಲಿ ಮಾತನಾಡಿದರು. ಇದೇ ವೇಳೆ ಕಾಂಗ್ರೆಸ್ ಹೈಕಮಾಂಡ್ ಎಚ್ಚರಿಕೆ ಬಳಿಕವೂ ರಾಜ್ಯ ಕಾಂಗ್ರೆಸ್ ನಾಯಕರು ಹೇಳಿಕೆ ನೀಡುತ್ತಿರುವ ವಿಚಾರಕ್ಕೆ ಪ್ರತಿಕ್ರಿಯಿಸಿ, ಕಾಂಗ್ರೆಸ್ ಹೈಕಮಾಂಡ್‌ಗೆ ತಾಕತ್ ಇದ್ದರೆ ಪಕ್ಷದ ಶಿಸ್ತು ಉಲ್ಲಂಘಿಸಿದವರ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಲಿ ಎಂದು ಸವಾಲು ಹಾಕಿದರು.
ಸಿಎಂ ಹುದ್ದೆ ವಿಚಾರದಲ್ಲಿ ಯಾರು ಬಹಿರಂಗ ಹೇಳಿಕೆ ನೀಡದಂತೆ ಹೈಕಮಾಂಡ್ ಎಚ್ಚರಿಕೆ ನೀಡಿತ್ತು. ಹೈ ಕಮಾಂಡ್ ನಾಯಕರು ವಾಪಸ್ ಹೋಗುತ್ತಿದ್ದಂತೆ ಕಾಂಗ್ರೆಸ್ ನಾಯಕರು ಬಹಿರಂಗ ಹೇಳಿಕೆ ನೀಡಿದ್ದಾರೆ. ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ. ಶಿವಕುಮಾರ್, ಸಚಿವರಾದ ಪರಮೇಶ್ವರ್, ಪ್ರಿಯಾಂಕ್ ಖರ್ಗೆ, ರಾಜಣ್ಣ ಬಹಿರಂಗ ಹೇಳಿಕೆ ನೀಡಿದ್ದಾರೆ. ಕಾಂಗ್ರೆಸ್ ಹೈಕಮಾಂಡ್‌ಗೆ ತಾಕತ್ ಇದ್ದರೇ ಇವರೆಲ್ಲರ ಮೇಲೆ ಶಿಸ್ತು ಕ್ರಮ ಕೈಗೊಳ್ಳಲಿ ಎಂದು ಸವಾಲ್ ಹಾಕಿದರು.
ಇದನ್ನೂ ಓದಿ | CM Siddaramaiah : ನಾನೇ 5 ವರ್ಷ ಸಿಎಂ ಹೇಳಿಕೆಗೆ ಯು ಟರ್ನ್ ಹೊಡೆದ ಸಿದ್ದರಾಮಯ್ಯ!
ರಾಜ್ಯದಲ್ಲಿ ಅಸ್ತಿತ್ವದಲ್ಲಿರುವುದು ಕಾಂಗ್ರೆಸ್ ಸರ್ಕಾರವಲ್ಲ, ಸಮ್ಮಿಶ್ರ ಸರ್ಕಾರ ಎಂದು ವಾಗ್ದಾಳಿ ನಡೆಸಿದ ಅವರು,
ಜಾತಿ ಗಣತಿ ವರದಿ ಬಿಡುಗಡೆ ವಿಚಾರದಲ್ಲಿ ಸಿದ್ದರಾಮಯ್ಯ, ಡಿ.ಕೆ. ಶಿವಕುಮಾರ್ ನಡುವೆ ಸಮನ್ವಯತೆಯಿಲ್ಲ. ಸಿದ್ದರಾಮಯ್ಯ ಜಾತಿಗಣತಿ ವರದಿ ಬಿಡುಗಡೆಗೆ ಸಿದ್ಧ ಎತ್ತಿದ್ದಾರೆ. ಡಿ.ಕೆ. ಶಿವಕುಮಾರ್ ಜಾತಿ ಗಣತಿ ವರದಿ ಬಿಡುಗಡೆ ಮಾಡುವುದಿಲ್ಲ ಎಂದು ಹೇಳುತ್ತಿದ್ದಾರೆ. ಈ ವಿಚಾರದಲ್ಲಿ ಇಬ್ಬರೂ ಒಂದೊಂದು ರೀತಿ ಹೇಳುತ್ತಿದ್ದಾರೆ. ಇವರಿಬ್ಬರ ನಡುವೆಯೇ ಹೊಂದಾಣಿಕೆಯಿಲ್ಲ. ಹಾಗಾಗಿ ರಾಜ್ಯದಲ್ಲಿರುವುದು ಸಮ್ಮಿಶ್ರ ಸರ್ಕಾರ
ಎಂದು ಲೇವಡಿ ಮಾಡಿದರು.
ಸಿಎಂ ಸಿದ್ದರಾಮಯ್ಯಗೆ ಸುಳ್ಳು ಹೇಳುವುದರಲ್ಲಿ ನೋಬಲ್ ಪ್ರಶಸ್ತಿ ನೀಡಬೇಕು
ರಾಜ್ಯದಲ್ಲಿ ಐದು ವರ್ಷ ನಾನೇ ಸಿಎಂ ಎಂಬ ಸಿದ್ದರಾಮಯ್ಯ ಹೇಳಿಕೆ ಬಗ್ಗೆ ಪ್ರತಿಕ್ರಿಯಿಸಿ, ಸಿಎಂ ದಿನಕ್ಕೊಂದು ಹೇಳಿಕೆ ನೀಡುತ್ತಿದ್ದಾರೆ. ಆರಂಭದಲ್ಲಿ ನಾನೇ ಸಿಎಂ ಎಂದು ಹೇಳಿದ್ದರು. ವಿರೋಧ ವ್ಯಕ್ತವಾಗುತ್ತಿದ್ದಂತೆ ಹೈಕಮಾಂಡ್ ಹೇಳಿದಂತೆ ಕೇಳುತ್ತೇನೆ ಎಂದರು. ಇದೇ ಮೊದಲ ಬಾರಿ ಅವರು ಸುಳ್ಳು ಹೇಳುತ್ತಿಲ್ಲ, ಅವರಿಗೆ ನೋಬಲ್ ಪ್ರಶಸ್ತಿ ನೀಡಬೇಕು ಎಂದು ವ್ಯಂಗ್ಯವಾಡಿದರು.
ಐದು ವರ್ಷ ಸಿಎಂ ಆಗಬೇಕು ಅಂತ ಯಾರೂ ಹೇಳಿರಲಿಲ್ಲ. ಆರಂಭದಲ್ಲಿ ಎಂಬಿ ಪಾಟೀಲ್ ಒಬ್ಬರೇ ಹೇಳಿದ್ದರು. ಸಿಎಂ ಸಿದ್ದರಾಮಯ್ಯ ಐದು ವರ್ಷ ಸಿಎಂ ಅಂತ ಹೇಳಿದಾಗಲೇ ಅವನತಿ ಆರಂಭವಾಗುತ್ತೆ ಎಂದಿದ್ದೆ. ಅಂತಹ ಆರಂಭ ಈಗ ಆಗಿದೆ. ರಾಮನಗರ ಶಾಸಕ ಇಕ್ಬಾಲ್, ಡಿಕೆಶಿ ಸಿಎಂ ಆಗಬೇಕು ಅಂತ ಹೇಳಿದ್ದಾರೆ. ಹಾದಿ ಬೀದಿಯಲ್ಲಿ ಹೋಗುವವರ ಮಾತು ಕೇಳಲ್ಲ ಅಂತ ಅದಕ್ಕೆ ಸಿಎಂ ಪ್ರತಿಕ್ರಿಯೆ ನೀಡಿದ್ದಾರೆ. ಇದಕ್ಕೆ ಪ್ರತಿಯಾಗಿ ನಾನು ಹಾದಿ ಬೀದಿಯನಲ್ಲ. ಸಿಎಂ ಆದವರು ಈ ರೀತಿ ಮಾತನಾಡಬಾರದು. ಒಬ್ಬ ಎಂಎಲ್‌ಎ ನೇರವಾಗಿ ಸಿಎಂ ವಿರುದ್ಧ ಮಾತನಾಡುತ್ತಾರೆ. ಇದು ಎಂಎಲ್‌ಎ ಸಿಎಂಗೆ ಕೊಡುತ್ತಿರುವ ಉತ್ತರ. ಎಂಎಲ್‌ಎ ತಿರುಗಿ ಬಿದ್ದಾಗ ಸಿಎಂಗೆ ಹೈಕಮಾಂಡ್ ನೆನಪಾಯಿತು. ನಾನು ಹೇಳೆ ಇಲ್ಲ ಅಂತ ಸುಳ್ಳು ಹೇಳುತ್ತಾರೆ. ಸಿಎಂ ಸಿದ್ದರಾಮಯ್ಯ ಸುಳ್‌ರಾಮಯ್ಯ,
ಸುಳ್ಳಿನ ಸರದಾರ. ಅವರ ಮಾತು ಕೇಳಿಕೊಂಡು ಯುವಕರು ದಾರಿ ತಪ್ಪುತ್ತಿದ್ದಾರೆ. ಶೀಘ್ರದಲ್ಲೇ ಸಿಎಂ ಖುರ್ಚಿ ಹೋಗುವುದು ಸತ್ಯ ಎಂದು ಹೇಳಿದರು.
ಜಾತಿಗಣತಿ ವಿಚಾರದ ಬಗ್ಗೆ ಪ್ರತಿಕ್ರಿಯಿಸಿ, ನಾನು ಸಿಎಂ ಆದಾಗ ಬಿಡುಗಡೆ ಮಾಡುತ್ತೇನೆ ಅಂತ ನೂರು ಸರಿ ಹೇಳಿದ್ದಾರೆ. ಈವಾಗ ನವೆಂಬರ್ ತಿಂಗಳಲ್ಲಿ ಬಿಡುಗಡೆ ಮಾಡುತ್ತೇನೆ ಎನ್ನುತ್ತಿದ್ದಾರೆ. ಇವರಿಗೆ ಸಾಧು ಸಂತರ ಶಾಪ ತಟ್ಟುತ್ತದೆ. ಹಿಂದುಳಿದ, ದಲಿತರನ್ನು ಮತ ಬ್ಯಾಂಕ್ ಆಗಿ ಬಳಸಿಕೊಂಡರು. ಚುನಾವಣೆ ನಂತರ ಅವರನ್ನು ಸಂಪೂರ್ಣವಾಗಿ ಕಣೆಗಣಿಸಿದರು. ಒಕ್ಕಲಿಗರ ಸ್ವಾಮೀಜಿ ನಿರ್ಮಲಾನಂದ ಶ್ರೀ ಕೂಡ ಹೇಳಿದ್ದಾರೆ. ಕಾಂತರಾಜ ವರದಿ ಅವೈಜ್ಞಾನಿಕ. ಇದಕ್ಕೆ ಬೆಲೆ ಇಲ್ಲ, ಬೆಲೆ ನೀಡಬೇಡಿ ಎಂದು ಬಹಳ ಸತ್ಯವಾದ ಮಾತು ಹೇಳಿದ್ದಾರೆ. ಇದಕ್ಕೆ ಸಿಎಂ ಏನು ಉತ್ತರ ಕೊಡುತ್ತಾರೆ ಪ್ರಶ್ಮಿಸಿದ್ದಾರೆ.
ಒಂದು ಕಡೆ ಡಿಸಿಎಂ ಕೂಡ ಇದನ್ನು ಒಪ್ಪುತ್ತಿಲ್ಲ. ಸಿಎಂ ಒಂದು ದಿಕ್ಕು, ಡಿಸಿಎಂ ಒಂದು ದಿಕ್ಕು.
ಸಿಎಂ ಪೂರ್ವ ಆದರೆ, ಡಿಸಿಎಂ ಪಶ್ಚಿಮ. ಇದು ಕಾಂಗ್ರೆಸ್ ಸರ್ಕಾರವೋ? ಸಮ್ಮಿಶ್ರ ಸರ್ಕಾರವೋ?
ಹಿಂದುಳಿದ ಸಾಧು ಸಂತರ ಶಾಪ ತಟ್ಟದೇ ಬಿಡಲ್ಲ. ಸರ್ಕಾರ ಬೀಳಲು ಕೌಂಡ್ ಡೌನ್ ಆರಂಭವಾಗಿದೆ. ವರ್ಗಾವಣೆ ದಂಧೆಯಲ್ಲಿ ಲೂಟಿ ಮಾಡುವಾಗಲೇ ನಾನು ಹೇಳಿದ್ದೆ. ಸರ್ಕಾರ ಶೀಘ್ರ ಉರುಳುತ್ತದೆ ಎಂದಿದ್ದೆ. ಕರ್ನಾಟಕದಲ್ಲೂ ಅಜಿತ್ ಪವಾರ್ ರೀತಿಯಂತಹವರು ಹುಟ್ಟಿಕೊಳ್ಳುತ್ತಾರೆ ಅಂದಿದ್ದೆ. ಅದೇ ರೀತಿ ವಿರೋಧಿಗಳ ಪಟ್ಟಿಯೇ ನಿರ್ಮಾಣವಾಗಿದೆ. ಸರ್ಕಾರ ತಿಂಗಳು, ವರ್ಷ ಅಂತ ಹೇಳಲ್ಲ. ದಿನಗಟ್ಟಲೆ ಸರ್ಕಾರ ಬೀಳಲಿದೆ ಎಂದು ಹೇಳಿದರು.
ಬಿಜೆಪಿ- ಜೆಡಿಎಸ್ ಮೈತ್ರಿ ವಿಚಾರಕ್ಕೆ ಪ್ರತಿಕ್ರಿಯಿಸಿ, ಮೈತ್ರಿ ಕೇವಲ ಲೋಕಸಭಾ ಚುನಾವಣೆಗೆ ಮಾತ್ರ ಸೀಮಿತ. ಬೇರೆ ಯಾವ ಚುನಾವಣೆಗೂ ಅಪ್ಲೈ ಆಗಲ್ಲ. ವಿಧಾನ ಪರಿಷತ್ ಚುನಾವಣೆ, ಸ್ಥಳೀಯ ಚುನಾವಣೆಗೆ ಇದು ಅನ್ವಯಿಸಲ್ಲ. ಹೊಂದಾಣಿಕೆಗಳು ಕೆಲವು ವೇಳೆ ಅನುಕೂಲ ಆಗಲಿದೆ. ಕೆಲವು ಕಡೆಗಳಲ್ಲಿ ಅನಾನುಕೂಲ ಆಗಲಿದೆ. ಮಂಡ್ಯ, ಹಾಸನ ಸ್ವಲ್ಪ ವೀಕ್ ಇದ್ದೇವೆ. ಹೊಂದಾಣಿಕೆಯಿಂದ ಅನುಕೂಲ ಆಗಲಿದೆ. ಈ ಬಾರಿ 28ಕ್ಕೆ 28 ಸ್ಥಾನ ಗೆಲ್ಲುತ್ತೇವೆ ಎಂದು ತಿಳಿಸಿದರು.
ಇದನ್ನೂ ಓದಿ | Karnataka Politics : ಬ್ರೇಕ್ ಫಾಸ್ಟ್ ಮೀಟಿಂಗ್‌ನಲ್ಲಿ ಸಚಿವರಿಗೆ ಸಿಎಂ, ಡಿಸಿಎಂ ಕ್ಲಾಸ್!
ವಿಶ್ವನಾಥ್ ತಾವೊಬ್ಬರೇ ಸತ್ಯ ಹರಿಶ್ಚಂದ್ರ ಎನ್ನುತ್ತಾರೆ. ಸುಮ್ಮನೆ ಆಪಾದನೆ ಮಾಡಬಾರದು. ವಿಶ್ವನಾಥ್ ನನ್ನ ಆತ್ಮೀಯ ಸ್ನೇಹಿತ. ಆಪರೇಷನ್ ಕಮಲದ ವೇಳೆ ಹಣ ಪಡೆದ ವಿಚಾರಕ್ಕೆ ಕಿಡಿ ಕಾಡಿದ ಅವರು, ಹಣ ಪಡೆದವರು ಎಷ್ಟು? ಎಲ್ಲಿ ಅಂತ ಹೇಳಲಿ ಎಂದು ತಾಕೀತು ಮಾಡಿದರು.