ಬೆಂಗಳೂರು: ರಾಜ್ಯ ಸರ್ಕಾರದ ಐದು ಗ್ಯಾರಂಟಿಗಳಲ್ಲೊಂದಾದ (Congress Guarantee) ಅನ್ನ ಭಾಗ್ಯ ಯೋಜನೆಗೆ ಅಗತ್ಯ ಅಕ್ಕಿಯನ್ನು ನೀಡುವಂತೆ ಕೇಂದ್ರ ಸರ್ಕಾರಕ್ಕೆ ಕರ್ನಾಟಕ ಮತ್ತೆ ಮೊರೆಯಿಟ್ಟಿದೆ. ಕೇಂದ್ರ ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಪೀಯೂಷ್ ಗೋಯೆಲ್ ಅವರ ಅಧ್ಯಕ್ಷತೆಯಲ್ಲಿ ವಿವಿಧ ರಾಜ್ಯಗಳ ಆಹಾರ ಸಚಿವರ ಸಭೆಯಲ್ಲಿ ಭಾಗವಹಿಸಿದ ಕೆ.ಎಚ್. ಮುನಿಯಪ್ಪ ಈ ಮನವಿ ಮಾಡಿದ್ದಾರೆ.
ಕೇಂದ್ರ ಸರ್ಕಾರದ ಅಧೀನದ ಭಾರತೀಯ ಆಹಾರ ನಿಗಮವು ಕರ್ನಾಟಕಕ್ಕೆ ಅಗತ್ಯವಾದ ಮಾಸಿಕ 2.2 ಲಕ್ಷ ಮೆಟ್ರಿಕ್ ಟನ್ ಅಕ್ಕಿಯನ್ನು ಕೊಡುವುದಾಗಿ ಲಿಖಿತವಾಗಿ ಒಪ್ಪಿಕೊಂಡಿತ್ತು. ಆದರೆ ದೇಶದಲ್ಲಿ ಗೋಧಿ ಹಾಗೂ ಅಕ್ಕಿಯ ದರವನ್ನು ನಿಯಂತ್ರಿಸುವ ಸಲುವಾಗಿ ರಾಜ್ಯಗಳಿಗೆ ಧಾನ್ಯಗಳನ್ನು ನೀಡದಂತೆ ಕೇಂದ್ರ ಸರ್ಕಾರ ಎಫ್‌ಸಿಐಗೆ ಆನಂತರದಲ್ಲಿ ಪತ್ರ ಬರೆದಿತ್ತು. ಇದರ ವಿರುದ್ಧ ಕಾಂಗ್ರೆಸ್ ಸರ್ಕಾರ ವಾಗ್ದಾಳಿ ನಡೆಸುತ್ತಲೇ ಬಂದಿದೆ.
ಸಭೆಯ ನಂತರ ಮಾಧ್ಯಮಗಳೊಂದಿಗೆ ಮಾತನಾಡಿದ ಮುನಿಯಪ್ಪ, ಕೇಂದ್ರದ ಆಹಾರ ಸಚಿವರು ಈ ದಿನ ದೇಶದ ಎಲ್ಲಾ ರಾಜ್ಯದ ಆಹಾರ ಸಚಿವರ ಜೊತೆ ಸಭೆ ಕರೆದಿದ್ದರು. ಅದರಂತೆ ನಾವು ಬೇರೆ ಬೇರೆ ರಾಜ್ಯದ ಸಚಿವರು ಸಭೆಯಲ್ಲಿ ಭಾಗಿಯಾಗಿದ್ದೆವು. ಹಲವು ವಿಚಾರಗಳ ಬಗ್ಗೆ ಚರ್ಚೆ ಮಾಡಿದ್ದೇವೆ. ಮುಖ್ಯವಾಗಿ ರಾಜ್ಯಗಳಿಗೆ ಇದ್ದ ಅಧಿಕಾರವನ್ನ ಕೇಂದ್ರ ಸರ್ಕಾರ ಕಸಿದುಕೊಂಡಿದೆ. ಇವರೇ ಕೊಟ್ಟ ಅಧಿಕಾರ, ಇವ್ರೇ ವಾಪಸ್ ಪಡೆದುಕೊಂಡಿದ್ದಾರೆ.
ದೇಶಕ್ಕೆ 135 ಲಕ್ಷ ಮೆಟ್ರಿಕ್ ಟನ್ ಅಕ್ಕಿ ಬೇಕು. 265 ಲಕ್ಷ ಮೆಟ್ರಿಕ್ ಟನ್ ಕೇಂದ್ರದ ಬಳಿ ಸ್ಟಾಕ್ ಇದೆ. ಆದರೆ ನಾವು ಕೇಳಿದ್ರೆ ಮಾತ್ರ ಅಕ್ಕಿ ಕೊಡ್ತಾ ಇಲ್ಲಾ. ನಮಗೆ ಅಕ್ಕಿ ಬೇಕು ಎಂದರೂ ಕೊಡೋಕೆ ಆಗೋಲ್ಲ ಅಂತಿದ್ದಾರೆ.
ನರೇಗಾ ಯೋಜನೆ, ಸಾಲ ಮನ್ನಾ ಸೇರಿ ಬಹುತೇಕ ಯೋಜನೆ ಮಾಡಿದ್ದು UPA ಸರ್ಕಾರ. ಭಾರತದಲ್ಲಿ ಯಾರೂ ಸಹ ಹಸಿವಿನಿಂದ ಮಲಗಬಾರದು ಅಂತ ಫುಡ್ ಸೆಕ್ಯೂರಿಟಿ ಬಿಲ್ ತರಲಾಗಿತ್ತು. ಬಿಜೆಪಿ ಸರ್ಕಾರ ಬಂದಮೇಲೆ ಈ ಕಾನೂನುಗಳನ್ನ ಹೇಗೆ ಉಪಯೋಗಿಸಬೇಕು ಅಂತ ಗೊತ್ತಿಲ್ಲ. ಈ ಕಾನೂನುಗಳನ್ನ ಬಿಜೆಪಿ ಸರ್ಕಾರ ಸಹ ಬಂದ್ ಮಾಡಿದೆ.
ನಾವು ರಾಗಿ ಜೋಳ ಸಂಗ್ರಹ ಮಾಡುತ್ತೇವೆ. ಅದಕ್ಕೆ ಬೇಕಾದ ವ್ಯವಸ್ಥೆ ರಾಜ್ಯದಲ್ಲಿ ಇದೆ ಎಂದು ನಾನು ಹೇಳಿದ್ದೆ. ರಾಜ್ಯಗಳಿಗೆ ಅಕ್ಕಿ ಕೊಂಡುಕೊಳ್ಳುವ ಅವಕಾಶ ಬಂದ್ ಮಾಡಿದೆ. ಓಪನ್ ಮಾರ್ಕೆಟ್‌ಗೆ ಕೇಂದ್ರ ಸರ್ಕಾರ ಅಕ್ಕಿಯನ್ನ ಬಿಡುತ್ತಿದೆ. ನಾವು ಕೆ.ಜಿ. ಗೆ 34 ರೂ. ಕೊಡುತ್ತೇವೆಎಂದರೂ ಒಪ್ಪುತ್ತಿಲ್ಲ ಓಪನ್ ಮಾರ್ಕೆಟ್‌ಗೆ 31 ರು ಗೆ ವ್ಯಾಪಾರ ಮಾಡ್ತಿದ್ದಾರೆ. ಅಕ್ಕಿ ವಿಚಾರದಲ್ಲಿ ಕೇಂದ್ರ ಸರ್ಕಾರ ರಾಜಕೀಯ ಮಾಡ್ತಿದೆ.
ಒಟ್ಟಾರೆ 10 ಕೆ.ಜಿ. ನಾವು ಘೋಷಣೆ ಮಾಡಿದ್ದೇವೆ. ಕೇಂದ್ರ ಸರ್ಕಾರ 5 ಕೆ.ಜಿ. ಕೊಡುತ್ತಿದೆ,ಇನ್ನುಳಿದ 5 ಕೆ.ಜಿ. ನಾವು ಕೊಡಬೇಕಿತ್ತು, ಅದನ್ನು ಕೊಡುತ್ತೇವೆ. ಆದರೆ ಕೇಂದ್ರ ಇದಕ್ಕೆ ಸಹಾಯ ಮಾಡುತ್ತಿಲ್ಲ. ಈ ಬಗ್ಗೆ ತಮಿಳುನಾಡು, ರಾಜಸ್ಥಾನ ಸಹ ಮಾತಾಡಿವೆ. ಈಗಿರುವ ಬಿಜೆಪಿ ಸರ್ಕಾರದ ಮಂತ್ರಿಗಳು ಬಹಳ ಬುದ್ದಿವಂತರು ಇದ್ದಾರೆ. ಪೀಯೂಷ್ ಗೊಯಲ್ ಅವರು ತುಂಬಾ ಚೆನ್ನಾಗಿ ಉತ್ತರ ಕೊಡುತ್ತಾರೆ. ಉತ್ತಮ ಉತ್ತರ ನೀಡುತ್ತಾರೆ, ಆದರೆ ರಿಸಲ್ಟ್ ಮಾತ್ರ ಏನೂ ಇಲ್ಲ. ಯಾವ ರಾಜ್ಯಗಳಿಗೆ ಏನೂ ಬೇಕೋ ಅದುನ್ನ ಕೊಡದೇ ಅನ್ಯಾಯ ಮಾಡ್ತಿದ್ದಾರೆ ಎಂದು ಆಕ್ರೋಶ ಹೊರಹಾಕಿದರು.
ಇದನ್ನೂ ಓದಿ: Shivamogga News: ಅನ್ನಭಾಗ್ಯಕ್ಕಿಲ್ಲ ಅಕ್ಕಿ; ಕೇಂದ್ರ ಸರ್ಕಾರದ ವಿರುದ್ಧ ಜಿಲ್ಲಾ ಯುವ ಕಾಂಗ್ರೆಸ್ ಪ್ರತಿಭಟನೆ
ಜುಲೈ 15ಕ್ಕೆ ಚಾಲನೆ
ಮಾಸಿಕ 5 ಕೆ.ಜಿ. ಅಕ್ಕಿಯ ಬದಲಿಗೆ ತಲಾ 34 ರೂ.ನಂತೆ ಖಾತೆಗೆ 170 ರೂ. ನೀಡುವ ಕಾರ್ಯಕ್ಕೆ ಜುಲೈ 10ರಂದು ರಾಜ್ಯ ಸರ್ಕಾರ ಚಾಲನೆ ನೀಡಲಿದೆ. ವಿಧಾನಸೌಧದಲ್ಲಿ ಸಿಎಂ ಸಿದ್ದರಾಮಯ್ಯ ಅಧಿಕೃತವಾಗಿ ಚಾಲನೆ ನೀಡಲಿದ್ದಾರೆ. ಫಲಾನುಭವಿಗಳೊಂದಿಗೆ ಫ್ರೀಡಂ ಪಾರ್ಕ್‌ನಲ್ಲಿ ಸಿಎಂ ಸಿದ್ದರಾಮಯ್ಯ ಸಂವಾದ ನಡೆಸಲಿದ್ದಾರೆ. ಈಗಾಗಲೆ ಬ್ಯಾಂಕ್ ಖಾತೆ ಹೊಂದಿರುವ ಹಾಗೂ ಅದನ್ನು ಪಡಿತರ ಚೀಟಿಯೊಂದಿಗೆ ಲಿಂಕ್ ಮಾಡಿರುವವರಿಗೆ ಹಣ ವರ್ಗಾವಣೆ ಆರಂಬವಾಗಲಿದೆ. ನಾಲ್ಕೈದು ದಿನದಲ್ಲಿ ಎಲ್ಲರಿಗೂ ಹಣ ತಲುಪಲಿದೆ ಎನ್ನಲಾಗಿದೆ. ಅಕ್ಕಿ ದಾಸ್ತಾನು ದೊರೆಯುವವರೆಗೂ ಹಣವನ್ನು ನೀಡಲಾಗುತ್ತದೆ ಎಂದು ಸರ್ಕಾರ ಈಗಾಗಲೆ ತಿಳಿಸಿದೆ.