ಬೆಂಗಳೂರು: ರಾಜ್ಯ ಸರ್ಕಾರದ ಪಶು ಸಂಗೋಪನೆ ಇಲಾಖೆ ವತಿಯಿಂದ ಜಾರಿಗೊಳಿಸುತ್ತಿರುವ ಪುಣ್ಯಕೋಟಿ ದತ್ತು ಯೋಜನೆಗೆ ರಾಜ್ಯ ಸರ್ಕಾರಿ ನೌಕರರು ಒಂದು ದಿನದ ವೇತನವನ್ನು ನೀಡಿದ್ದಾರೆ.
ನೌಕರರ ೊಂದು ದಿನದ ವೇತನದ ಒಟ್ಟು 100 ಕೋಟಿ ರೂ. ಮೊತ್ತವನ್ನು ಸರ್ಕಾರಕ್ಕೆ ದೇಣಿಗೆ ನೀಡುವ ಪತ್ರವನ್ನು ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಸಿ. ಎಸ್. ಷಡಾಕ್ಷರಿ ಹಾಗೂ ಸರ್ಕಾರಿ ನೌಕರರ ಸಂಘದ ಪದಾಧಿಕಾರಿಗಳು ಶುಕ್ರವಾರ ಹಸ್ತಾಂತರಿಸಿದರು.
ಮುಖ್ಯಮಂತ್ರಿ ಬೊಮ್ಮಾಯಿ ಇತ್ತೀಚೆಗೆ ಸಮಾರಂಭವೊಂದರಲ್ಲಿ ಮಾಡಿದ ಮನವಿಗೆ ಸ್ಪಂದಿಸಿದ ನೌಕರರ ಸಂಘವು ರಾಜ್ಯ ಸರ್ಕಾರಿ ನೌಕರರು ಮತ್ತು ಸರ್ಕಾರದ ಇತರ ಸಂಸ್ಥೆಗಳ ನೌಕರರು ಸ್ವ-ಇಚ್ಛೆಯಿಂದ ದೇಣಿಗೆ ನೀಡಲು ಮುಂದಾಗಿದ್ದರು. ಗ್ರೂಪ್ ಎ ಅಧಿಕಾರಿಗಳು 11,000 ರೂ., ಗ್ರೂಪ್ ಬಿ ಅಧಿಕಾರಿಗಳು 4000 ರೂ. ಹಾಗೂ ಸಿ ವೃಂದದ ನೌಕರರು 400 ರೂ. ದೇಣಿಗೆಯನ್ನು ಒಂದು ಬಾರಿಗೆ ಪಾವತಿಸಲು ಸಮ್ಮತಿಸಿದ್ದಾರೆ. ಇದನ್ನು ಅಕ್ಟೋಬರ್ ಹಾಗೂ ನವೆಂಬರ್ ತಿಂಗಳ ವೇತನದಲ್ಲಿ ಕಟಾಯಿಸುವಂತೆ ಕೋರಿದ್ದಾರೆ. ಈ ಮೊತ್ತವು ಸುಮಾರು 80 ರಿಂದ 100 ಕೋಟಿ ರೂ. ಎಂದು ಅಂದಾಜಿಸಲಾಗಿದೆ.
ನೌಕರರ ಸಂಘದ ಈ ನಿರ್ಧಾರಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ ಸಿಎಂ ಬೊಮ್ಮಾಯಿ, ರಾಜ್ಯ ಸರ್ಕಾರದ ಗೋಶಾಲೆಗಳಲ್ಲಿ ಒಂದು ಲಕ್ಷಕ್ಕೂ ಹೆಚ್ಚು ಮುದಿ ಗೋವುಗಳು ಆಶ್ರಯ ಪಡೆದಿವೆ. ಇವುಗಳ ಸಮರ್ಪಕ ಪಾಲನೆ ಪೋಷಣೆ ನಮ್ಮೆಲ್ಲರ ಕರ್ತವ್ಯವೂ ಹೌದು. ಈ ಪುಣ್ಯದ ಕೆಲಸದಲ್ಲಿ ಸರ್ಕಾರಿ ನೌಕರರು ಸ್ವಯಂ ಪ್ರೇರಣೆಯಿಂದ ಕೈಜೋಡಿಸಲು ಮುಂದಾಗಿರುವುದು ಅಭಿನಂದನಾರ್ಹ ಎಂದು ತಿಳಿಸಿದರು.
ಬರ, ಪ್ರವಾಹ, ಕೋವಿಡ್ 19 ಮುಂತಾದ ಸಂಕಷ್ಟದ ಸಂದರ್ಭಗಳಲ್ಲಿ ಸರ್ಕಾರಿ ನೌಕರರು ಅತ್ಯಂತ ಬದ್ಧತೆಯಿಂದ ಕಾರ್ಯನಿರ್ವಹಿಸಿದ್ದಾರೆ ಎಂದು ಶ್ಲಾಘಿಸಿದ ಸಿಎಂ, ಹಿಂದೆ ಭರವಸೆ ನೀಡಿದಂತೆ, ಈ ತಿಂಗಳಲ್ಲಿಯೇ ವೇತನ ಆಯೋಗ ರಚಿಸಲಾಗುವುದು. ನೌಕರರಿಗೆ ವೇತನ, ಭತ್ಯೆಗಳೊಂದಿಗೆ, ಅತ್ಯುತ್ತಮ ಕಾರ್ಯ ನಿರ್ವಹಣೆಗೆ ಪ್ರೋತ್ಸಾಹಕಗಳನ್ನು ನೀಡುವುದು, ಸರ್ಕಾರಿ ನೌಕರರ ಕಾರ್ಯ ನಿರ್ವಹಣೆಯಲ್ಲಿ ತಂತ್ರಜ್ಞಾನದ ಅಳವಡಿಕೆ ಮೊದಲಾದ ಅಂಶಗಳ ಕುರಿತು ಪರಿಶೀಲಿಸಲಾಗುವುದು ಎಂದು ತಿಳಿಸಿದರು.
ಪಶುಸಂಗೋಪನಾ ಸಚಿವ ಪ್ರಭು ಚವ್ಹಾಣ್, ಮುಖ್ಯಮಂತ್ರಿಯವರ ಪ್ರಧಾನ ಕಾರ್ಯದರ್ಶಿ ಎನ್. ಮಂಜುನಾಥ್ ಪ್ರಸಾದ್, ಆರ್ಥಿಕ ಇಲಾಖೆ ಕಾರ್ಯದರ್ಶಿ ಪಿ.ಸಿ. ಜಾಫರ್, ಪಶುಪಾಲನೆ ಮತ್ತು ಪಶುವೈದ್ಯಕೀಯ ಇಲಾಖೆಯ ಕಾರ್ಯದರ್ಶಿ ಸಲ್ಮಾ ಫಾಹಿಂ ಮತ್ತು ಸರ್ಕಾರ ನೌಕರರ ಸಂಘದ ಪದಾಧಿಕಾರಿಗಳು ಉಪಸ್ಥಿತರಿದ್ದರು.
ಇದನ್ನೂ ಓದಿ | ಸರ್ಕಾರಿ ನೌಕರರಿಗೆ ದಸರಾ ಗಿಫ್ಟ್: ಅಕ್ಟೋಬರ್‌ನಲ್ಲಿ 7ನೇ ವೇತನ ಆಯೋಗ ರಚನೆ ಎಂದ ಸಿಎಂ