ಬೆಂಗಳೂರು: ಮಹತ್ವದ ಬೆಳವಣಿಗೆಯೊಂದರಲ್ಲಿ, ಭ್ರಷ್ಟಾಚಾರ ನಿಗ್ರಹ ದಳವನ್ನು ರದ್ದುಪಡಿಸಿ ರಾಜ್ಯ ಹೈಕೋರ್ಟ್ ನೀಡಿದ್ದ ಮಹತ್ವದ ಆದೇಶವನ್ನು ಪ್ರಶ್ನಿಸಿ ರಾಜ್ಯ ಸರಕಾರ ಸುಪ್ರೀಂಕೋರ್ಟ್ ಮೆಟ್ಟಿಲೇರಿದೆ. ಮುಖ್ಯ ನ್ಯಾಯಮೂರ್ತಿ ಎ.ವಿ. ರಮಣ ನೇತೃತ್ವದ ಪೀಠದಲ್ಲೇ ಈ ಅರ್ಜಿ ವಿಚಾರಣೆ ನಡೆಯಲಿದೆ.
ಕಳೆದ ಆಗಸ್ಟ್ ೧೧ರಂದು ರಾಜ್ಯ ಹೈಕೋರ್ಟ್ ನೀಡಿದ ಮಹತ್ವದ ತೀರ್ಪಿನಲ್ಲಿ ಎಸಿಬಿಯ ರಚನೆ ಮತ್ತು ಅಸ್ತಿತ್ವವನ್ನೇ ಪ್ರಶ್ನಿಸಿ ಅದನ್ನು ರದ್ದುಪಡಿಸಿತ್ತು. ಎಸಿಬಿ ಕೈಯಲ್ಲಿರುವ ಎಲ್ಲ ಪ್ರಕರಣಗಳನ್ನು ಲೋಕಾಯುಕ್ತಕ್ಕೆ ಶಿಫ್ಟ್ ಮಾಡುವಂತೆ ಸೂಚನೆ ನೀಡಿತ್ತು. ಈ ಹಿಂದೆ ಸಿದ್ದರಾಮಯ್ಯ ಅವರು ಅಧಿಕಾರದಲ್ಲಿದ್ದಾಗ ಎಸಿಬಿಯನ್ನು ರಚಿಸಲಾಗಿತ್ತು. ಲೋಕಾಯುಕ್ತದ ಶಕ್ತಿಯನ್ನು ಕುಂದಿಸುವುದಕ್ಕಾಗಿಯೇ ಭ್ರಷ್ಟಾಚಾರ ನಿಗ್ರಹ ದಳದ ರಚನೆಯಾಗಿದೆ ಎಂಬ ಆರೋಪ ಎದುರಾಗಿತ್ತು.
ರಾಜ್ಯ ಹೈಕೋರ್ಟ್ ತನ್ನ ತೀರ್ಪಿನಲ್ಲಿ ಭ್ರಷ್ಟಾಚಾರ ನಿಗ್ರಹ ದಳದ ಹಲವು ಕರ್ಮಕಾಂಡಗಳನ್ನು ಉಲ್ಲೇಖಿಸಿ ಅದು ನ್ಯಾಯಸಮ್ಮತವಾಗಿ ನಡೆದುಕೊಳ್ಳುತ್ತಿಲ್ಲ. ಸೀಮಿತ ಅಧಿಕಾರ ಹೊಂದಿರುವ ಈ ವ್ಯವಸ್ಥೆ ಮೇಲ್ಮಟ್ಟದ ಭ್ರಷ್ಟಾಚಾರವನ್ನು ನಿಯಂತ್ರಿಸುವುದು ಸಾಧ್ಯವಿಲ್ಲ ಎಂಬ ಅಭಿಪ್ರಾಯವನ್ನು ವ್ಯಕ್ತಪಡಿಸಿತ್ತು. ಈ ಹಿನ್ನೆಲೆಯಲ್ಲಿ ಎಸಿಬಿಯನ್ನು ಲೋಕಾಯುಕ್ತದ ಜತೆ ವಿಲೀನಗೊಳಿಸಿ, ಅದನ್ನು ಬಲಗೊಳಿಸಿ ಎಂದು ಸೂಚಿಸಿತ್ತು.
ನಿಜವೆಂದರೆ, ಭಾರತೀಯ ಜನತಾ ಪಕ್ಷ ತನ್ನ ಪ್ರಣಾಳಿಕೆಯನ್ನು ಎಸಿಬಿಯನ್ನು ರದ್ದುಪಡಿಸುವ ವಾಗ್ದಾನವನ್ನು ನೀಡಿತ್ತು. ಹೀಗಾಗಿ, ಹೈಕೋರ್ಟ್ ಆದೇಶ ಅದಕ್ಕೆ ಅನುಕೂಲಕರವಾಗಿಯೇ ಇರಲಿದೆ ಎಂದು ಭಾವಿಸಲಾಗಿತ್ತು. ಕಾಂಗ್ರೆಸ್ ಪಕ್ಷ ಸರಕಾರ ಈ ಬಗ್ಗೆ ಸೂಕ್ತ ತೀರ್ಮಾನವನ್ನು ಕೈಗೊಳ್ಳಲಿದೆ ಎಂದು ಹೇಳಿ ಜಾರಿಕೊಂಡಿತ್ತು.
ಇಷ್ಟೆಲ್ಲದರ ನಡುವೆ ಈಗ ರಾಜ್ಯ ಸರಕಾರ, ರಾಜ್ಯ ಹೈಕೋರ್ಟ್ ಆದೇಶವನ್ನು ಪ್ರಶ್ನಿಸಿ ಸುಪ್ರೀಂಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿದೆ. ರಾಜ್ಯ ಸರಕಾರದ ಈ ಅರ್ಜಿಯನ್ನು ವಿಚಾರಣೆಗೆ ಎತ್ತಿಕೊಳ್ಳುವುದಾಗಿ ಸುಪ್ರೀಂಕೋರ್ಟ್‌ನ ಪೀಠ ಹೇಳಿದೆ. ಯಾವಾಗ ವಿಚಾರಣೆಗೆ ಬರಲಿದೆ, ಸರಕಾರ ಸಲ್ಲಿಸಿರುವ ಅರ್ಜಿಯಲ್ಲಿ ಏನಿದೆ ಎನ್ನುವ ವಿಚಾರ ಇನ್ನೂ ಸ್ಪಷ್ಟವಾಗಿಲ್ಲ.
ಪರಿಶೀಲಿಸಿ ಕ್ರಮ ಕೈಗೊಳ್ಳುವುದಾಗಿ ಹೇಳಿದ್ದರು ಬೊಮ್ಮಾಯಿ
ಆಗಸ್ಟ್ ೧೧ರಂದು ಹೈಕೋರ್ಟ್ ತೀರ್ಪನ್ನು ಬಿಜೆಪಿ ಮತ್ತು ಕಾಂಗ್ರೆಸ್‌ಗಳೆರಡೂ ಸ್ವಾಗತಿಸಿದ್ದವು. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ತೀರ್ಪನ್ನು ಸರಕಾರ ಸ್ವಾಗತಿಸುತ್ತದೆ. ಕಾನೂನು ತಜ್ಞರ ಜತೆಗೆ ಚರ್ಚಿಸಿ ಮುಂದಿನ ಹೆಜ್ಜೆ ಇಡುವುದಾಗಿ ಹೇಳಿದ್ದರು. ಬಿಜೆಪಿ ತನ್ನ ಪ್ರಣಾಳಿಕೆಯನ್ನು ಎಸಿಬಿ ರದ್ದತಿ ಭರವಸೆ ನೀಡಿದ್ದನ್ನು ನೆನಪಿಸಿದ್ದರು.
ಸಂತೋಷ್ ಹೆಗ್ಡೆ ಎಚ್ಚರಿಕೆ
ಈ ಮಧ್ಯೆ ಸುಪ್ರೀಂಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿ ಮತ್ತು ಲೋಕಾಯುಕ್ತ ಮುಖ್ಯಸ್ಥರೂ ಆಗಿದ್ದ ಜ. ಸಂತೋಷ್ ಹೆಗ್ಡೆ ಅವರು ರಾಜ್ಯ ಹೈಕೋರ್ಟ್‌ನ ಆದೇಶ ಸರಿಯಾಗಿದೆ. ಲೋಕಾಯುಕ್ತದ ಶಕ್ತಿಯನ್ನು ಕುಂದಿಸಿ, ರಾಜಕಾರಣಿಗಳ ಕೈಗೊಂಬೆಯಂತಿರುವ ಎಸಿಬಿ ರಚನೆ ಸೂಕ್ತವಲ್ಲ ಎಂದು ಹೇಳಿದ್ದರು. ಜತೆಗೆ ಯಾರಾದರೂ ಇದನ್ನು ಪ್ರಶ್ನಿಸಿ ಸುಪ್ರೀಂಕೋರ್ಟ್‌ಗೇನಾದರೂ ಹೋದರೆ ಅವರಿಗೆ ಚುನಾವಣೆಯಲ್ಲಿ ಇದು ಹೊಡೆತ ನೀಡಲಿದೆ ಎಂದು ಎಚ್ಚರಿಸಿದ್ದರು.
ಶಿವಕುಮಾರ್ ಹೇಳೋದೇನು?
ʻನಾನು ಹೈಕೋರ್ಟ್ ತೀರ್ಪನ್ನು ಸ್ವಾಗತಿಸಿದ್ದೇನೆ. ಅದನ್ನು ಪ್ರಶ್ನಿಸಿರುವ ರಾಜ್ಯ ಸರಕಾರದ ಕ್ರಮದ ಬಗ್ಗೆ ನನಗೆ ಮಾಹಿತಿ ಇಲ್ಲ. ಇದು ತುಂಬ ಸೂಕ್ಷ್ಮ ವಿಚಾರ. ತಿಳಿದು ಮಾತನಾಡುತ್ತೇನೆʼʼ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಹೇಳಿದ್ದಾರೆ.
ಇದನ್ನೂ ಓದಿ| ಎಸಿಬಿ ರದ್ದುಗೊಳಿಸಿ ಹೈಕೋರ್ಟ್ ಮಹತ್ವದ ತೀರ್ಪು; ಎಲ್ಲ ಕೇಸ್ ಲೋಕಾಯುಕ್ತಕ್ಕೆ ಶಿಫ್ಟ್