ಬೆಂಗಳೂರು: ರಾಜ್ಯದಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರಿಗೆ ಶಿಕ್ಷಣ ಮತ್ತು ಉದ್ಯೋಗದಲ್ಲಿ ಮೀಸಲಾತಿ (SCST Reservation) ಹೆಚ್ಚಳ ಮಾಡಲು ಜಾರಿಗೆ ತಂದಿರುವ ಕಾಯಿದೆಯನ್ನು ಸಂವಿಧಾನದ 9ನೇ ಶೆಡ್ಯೂಲ್‌ನಲ್ಲಿ ಸೇರ್ಪಡೆಗೆ ಪ್ರಸ್ತಾವನೆಯನ್ನು ಕೇಂದ್ರಕ್ಕೆ ಕಳುಹಿಸಲಾಗಿದೆ. ಈ ಕುರಿತು ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ವಂದಿತಾ ಶರ್ಮಾ ಅವರು ಕೇಂದ್ರ ಗೃಹ ಇಲಾಖೆ ಕಾರ್ಯದರ್ಶಿಯವರಿಗೆ ಪತ್ರ ಬರೆದಿದ್ದಾರೆ.
ಕರ್ನಾಟಕ ಅನುಸೂಚಿತ ಜಾತಿ ಮತ್ತು ಅನುಸೂಚಿತ ಪಂಗಡಗಳ (ಶೈಕ್ಷಣಿಕ ಸಂಸ್ಥೆಗಳಲ್ಲಿನ ಸ್ಥಾನಗಳು ಮತ್ತು ರಾಜ್ಯಾಧೀನ ಸೇವೆಗಳಲ್ಲಿನ ನೇಮಕಾತಿ ಅಥವಾ ಹುದ್ದೆಗಳಲ್ಲಿ ಮೀಸಲಾತಿ) ಕಾಯ್ದೆ 2022ನ್ನು ಸಂವಿಧಾನದ 9ನೇ ಶೆಡ್ಯೂಲ್ ನಲ್ಲಿ ಸೇರ್ಪಡೆ ಮಾಡುವುದು ಅಗತ್ಯವಾಗಿದ್ದು ಈ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಲಾಗಿದೆ. ಈ ಕಾಯ್ದೆಯನ್ವಯ ರಾಜ್ಯದಲ್ಲಿ ಪರಿಶಿಷ್ಟ ಜಾತಿಯವರಿಗೆ ಮೀಸಲಾತಿ ಪ್ರಮಾಣ ಶೇ. 15ರಿಂದ ಶೇ. 17ಕ್ಕೆ ಹಾಗೂ ಪರಿಶಿಷ್ಟ ಪಂಗಡದವರಿಗೆ ಶೇ. 3ರಿಂದ ಶೇ. 7ಕ್ಕೆ ಹೆಚ್ಚಿಸಲಾಗಿದೆ.
ಮೀಸಲಾತಿ ಹೆಚ್ಚಳ ಕುರಿತ ಕಾಯ್ದೆಯನ್ನು ಸಂವಿಧಾನದ 9ನೆ ಶೆಡ್ಯೂಲ್ ಗೆ ಸೇರಿಸುವ ಕುರಿತ ಪ್ರಸ್ತಾವನೆಯನ್ನು ಕೇಂದ್ರ ಸರ್ಕಾರಕ್ಕೆ ಸಲ್ಲಿಸಿದ್ದು, ಅವಕಾಶ ವಂಚಿತ ಸಮುದಾಯಗಳ ಕುರಿತು ನಮ್ಮ ಸರ್ಕಾರದ ಬದ್ಧತೆಗೆ ಇದು ನಿದರ್ಶನ ವಾಗಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ತಿಳಿಸಿದ್ದಾರೆ.
ರಾಜ್ಯದಲ್ಲಿ ಪರಿಶಿಷ್ಟ ಜಾತಿಗೆ ಮೀಸಲಾತಿ ಪ್ರಮಾಣ ಶೇ. 2 ಮತ್ತು ಪರಿಶಿಷ್ಟ ಪಂಗಡವರ ಮೀಸಲಾತಿ ಪ್ರಮಾಣ ಶೇ. 4 ಹೆಚ್ಚಾಗಿದೆ. ಹೀಗಾಗಿ ಒಟ್ಟಾರೆ ಮೀಸಲಾತಿ ಪ್ರಮಾಣ ಸುಪ್ರೀಂಕೋರ್ಟ್ ನಿರ್ದೇಶಿತ ಗರಿಷ್ಠ ಮಿತಿ ಶೇ. 50ರ ಬದಲು ಶೇ. 56 ಆಗಿದೆ. ಇದನ್ನು ಯಾರಾದರೂ ಸುಪ್ರೀಂಕೋರ್ಟ್‌ನಲ್ಲಿ ಪ್ರಶ್ನಿಸಬಹುದಾಗಿದೆ. ಇಂದ್ರಾ ಸಾಹ್ನಿ ಪ್ರಕರಣದಲ್ಲಿ ಇದನ್ನು ಪ್ರಶ್ನಿಸಬಹುದಾಗಿದೆ.
ಇದರಿಂದ ರಕ್ಷಣೆ ಪಡೆಯಲು ಇರುವ ಅವಕಾಶವೆಂದರೆ, ಈ ಏರಿಕೆಯಲ್ಲಿ ಸಂವಿಧಾನದ 9ನೇ ಶೆಡ್ಯೂಲ್‌ನಲ್ಲಿ ಸೇರಿಸುವುದು. ಅತ್ಯಂತ ಅಗತ್ಯದ ಸಂದರ್ಭದಲ್ಲಿ ಕಾನೂನು ಉಲ್ಲಂಘಿಸಿದರೂ ರಕ್ಷಣೆ ನೀಡುವ ಅವಕಾಶ 9ನೇ ಶೆಡ್ಯೂಲ್‌ನಲ್ಲಿದೆ.
ಪ್ರಸ್ತಾವನೆ ಬಂದಿಲ್ಲ ಎಂದಿದ್ದರು ಕೇಂದ್ರ ಸಚಿವರು
ರಾಜ್ಯದಲ್ಲಿ ಎಸ್‌ಸಿ ಎಸ್‌ಟಿ ಮೀಸಲಾತಿ ಕಾಯಿದೆ ತಿದ್ದುಪಡಿ ಆಗಿ ಬಹು ಸಮಯವೇ ಆಗಿದ್ದರೂ ಇನ್ನೂ 9ನೇ ಶೆಡ್ಯೂಲ್‌ಗೆ ಸೇರಿಸುವ ಬಗ್ಗೆ ಕೇಂದ್ರಕ್ಕೆ ಪ್ರಸ್ತಾವನೆ ಬಂದಿಲ್ಲ ಎಂದು ಕೇಂದ್ರ ಸಚಿವ ನಾರಾಯಣ ಸ್ವಾಮಿ ಇತ್ತೀಚೆಗೆ ಪ್ರಶ್ನೆಯೊಂದಕ್ಕೆ ಉತ್ತರ ನೀಡಿದ್ದರು. ರಾಜ್ಯ ಸರ್ಕಾರ ಕಾನೂನು ತಜ್ಞರ ಜತೆ ಚರ್ಚಿಸಿ ತೀರ್ಮಾನ ಕೈಗೊಳ್ಳುವಲ್ಲಿ ವಿಳಂಬವಾಗಿದೆ ಎಂದು ಹೇಳಲಾಗಿದೆ.
ಇದನ್ನೂ ಓದಿ : SCST Reservation: ಮತ್ತೆ ಮತ್ತೆ ಅವರೇ ಮೀಸಲಾತಿ ಲಾಭ ಪಡೆಯುತ್ತಿದ್ದಾರೆ; ಸೋಷಿಯಲ್ ಆಡಿಟಿಂಗ್ ಆಗಬೇಕು ಎಂದ ಸಿಎಂ ಬೊಮ್ಮಾಯಿ