Site icon Vistara News

Human Trafficking: ಮಾನವ ಕಳ್ಳ ಸಾಗಣೆ ತಡೆಯಲು ಕೃತಕ ಬುದ್ಧಿಮತ್ತೆ ಮೊರೆ ಹೋದ ಸರ್ಕಾರ

human trafficking

ಬೆಳಗಾವಿ: ರಾಜ್ಯದಲ್ಲಿ ಹಲವು ಕಠಿಣ ಕ್ರಮಗಳ ನಡುವೆಯೂ ಮಾನವ ಕಳ್ಳ ಸಾಗಣೆ (Human Trafficking) ಅವ್ಯಾಹತವಾಗಿ ನಡೆಯುತ್ತಿದೆ. ಹೀಗಾಗಿ ಇದಕ್ಕೆ ಕಡಿವಾಣ ಹಾಕಲು ರಾಜ್ಯ ಸರ್ಕಾರ ಕೃತಕ‌ ಬುದ್ಧಿಮತ್ತೆ ಮೊರೆ ಹೋಗಿದೆ. ನಾಪತ್ತೆಯಾದ ಮಹಿಳೆ, ಮಕ್ಕಳ ಪತ್ತೆ‌ಗೆ ಮುಂಬರುವ ದಿನಗಳಲ್ಲಿ ಬಸ್, ರೈಲ್ವೆ ನಿಲ್ದಾಣಗಳಲ್ಲಿ ಕೃತಕ‌ ಬುದ್ಧಿಮತ್ತೆ ಆಧಾರಿತ ಕ್ಯಾಮೆರಾ, ಸ್ಕ್ಯಾನಿಂಗ್ ಪರಿಕರಗಳನ್ನು ಅಳವಡಿಸುವ ಮೂಲಕ ಮಾನವ ಕಳ್ಳ ಸಾಗಣಿಕೆ‌ಗೆ ಜಾಲ ಪತ್ತೆಗೆ ಬಿಗಿ ಕ್ರಮ ಕೈಗೊಳ್ಳಲು ಸರ್ಕಾರ ಮುಂದಾಗಿದೆ.

ಈ ಬಗ್ಗೆ ಡಿಸಿಎಂ ಡಿ.ಕೆ.ಶಿವಕುಮಾರ್‌ ಅವರು ಮಾಹಿತಿ ನೀಡಿದ್ದಾರೆ. ಅಧಿವೇಶನದಲ್ಲಿ ಶಾಸಕ ವಿ.ಸುನೀಲ್‌ ಕುಮಾರ್ ಅವರ ಗಮನ ಸೆಳೆವ ಸೂಚನೆಗೆ ಗೃಹ ಸಚಿವ ಡಾ ಜಿ ಪರಮೇಶ್ವರ ಅವರ ಪರವಾಗಿ ಉತ್ತರಿಸಿದ ಶಿವಕುಮಾರ್ ಅವರು,ನಾಪತ್ತೆಯಾದ ಮಹಿಳೆ, ಮಕ್ಕಳ ಪತ್ತೆ‌ಗೆ ಕಠಿಣ ಕ್ರಮ ವಹಿಸಲಾಗುವುದು ಎಂದು ತಿಳಿಸಿದ್ದಾರೆ.

ನಾಪತ್ತೆ ಪ್ರಕರಣಗಳು ವರದಿಯಾದ ತಕ್ಷಣ ರಾಜ್ಯದ ಎಲ್ಲಾ ಪೊಲೀಸ್ ಠಾಣೆಗಳಿಗೆ ಆರೋಪಿಗಳ ಹಾಗೂ ಅಪಹೃತ ಮಗುವಿನ ಬಗ್ಗೆ ಸುಳಿವು ಪಡೆದುಕೊಳ್ಳಲು, ಪೊಷಕರ ಒಪ್ಪಿಗೆ ಮೇರೆಗೆ ಮಾಧ್ಯಮಗಳಲ್ಲಿ ಪ್ರಕಟಣೆ ಹೊರಡಿಸಲಾಗುತ್ತಿದೆ. ಗಡಿ ಪ್ರದೇಶಗಳಲ್ಲಿ ಭಿತ್ತಿ ಪತ್ರಗಳನ್ನು ಅಂಟಿಸಲಾಗುತ್ತಿದೆ” ಎಂದು ಹೇಳಿದರು.

“ದಾಖಲೆಗಳ ಪ್ರಕಾರ 2021 ರಲ್ಲಿ 10,081, 2022 ರಲ್ಲಿ 11,021 ಹಾಗೂ‌ 2023 ರಲ್ಲಿ 11,193 ಮಹಿಳೆಯರು ನಾಪತ್ತೆಯಾಗಿದ್ದಾರೆ. ಇದನ್ನು ತಡೆಗಟ್ಟಲು ನಿರ್ಭಯ ನಿಧಿಯಡಿಯಲ್ಲಿ, 35 ಮಾನವ ಕಳ್ಳ ಸಾಗಾಣಿಕಾ ತಡೆ‌ ಘಟಕಗಳನ್ನ ಸ್ಥಾಪಿಸಲಾಗಿದೆ. ಜೊತೆಗೆ ಮಕ್ಕಳ ಮಾರಾಟ ಪ್ರಕರಣಗಳನ್ನೂ ಪತ್ತೆ ಹಚ್ಚಲು ಗಮನಹರಿಸಲಾಗಿದೆ” ಎಂದರು. ಪತ್ತೆಯಾಗದೆ ಬಾಕಿ‌ ಉಳಿದಿರುವ ಪ್ರಕರಣಗಳ ಬಗ್ಗೆ ಅಧಿಕಾರಿಗಳಿಂದ ಸಂಪೂರ್ಣ ಮಾಹಿತಿ ಪಡೆದು ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.

ಇದನ್ನೂ ಓದಿ | Belagavi Winter Session: ಬಿಬಿಎಂಪಿ ವಿಧೇಯಕಕ್ಕೆ ಮೇಲ್ಮನೆಯಲ್ಲೂ ಅನುಮೋದನೆ: 500 ಕೋಟಿ ರೂ. ಉಳಿತಾಯ!

ನಾಲ್ಕು ಏರ್‌ಪೋರ್ಟ್‌ಗಳಿಗೆ ಐತಿಹಾಸಿಕ ವ್ಯಕ್ತಿಗಳ ಹೆಸರು ನಾಮಕರಣ

ಶಿವಮೊಗ್ಗ ವಿಮಾನ ನಿಲ್ದಾಣ

ಬೆಳಗಾವಿ: ರಾಜ್ಯದ ನೂತನ ನಾಲ್ಕು ವಿಮಾನ ನಿಲ್ದಾಣಗಳಿಗೆ ಐತಿಹಾಸಿಕ ವ್ಯಕ್ತಿಗಳ ಹೆಸರು ನಾಮಕರಣ ಮಾಡಲು ರಾಜ್ಯ ಸರ್ಕಾರ ತೀರ್ಮಾನ ಮಾಡಿದೆ. ಈ ಕುರಿತ ನಿರ್ಣಯಕ್ಕೆ ವಿಧಾನಸಭೆಯಲ್ಲಿ (Belagavi Winter Session) ಸರ್ವಾನುಮತದ ಅಂಗೀಕಾರ ನೀಡಲಾಗಿದೆ. ಬೆಳಗಾವಿ, ಶಿವಮೊಗ್ಗ, ಹುಬ್ಬಳ್ಳಿ ಹಾಗೂ ವಿಜಯಪುರ ನಿಲ್ದಾಣಗಳಿಗೆ ನಾಮಕರಣ ಮಾಡಲು ಕೇಂದ್ರ ಸರ್ಕಾರಕ್ಕೆ ಶಿಫಾರಸು ಕಳುಹಿಸಲು ನಿರ್ಧರಿಸಲಾಗಿದೆ.

ಬೆಳಗಾವಿ ವಿಮಾನ ನಿಲ್ದಾಣಕ್ಕೆ ಕಿತ್ತೂರು ರಾಣಿ ಚೆನ್ನಮ್ಮ, ವಿಜಯಪುರ ವಿಮಾನ ನಿಲ್ದಾಣಕ್ಕೆ ಜಗಜ್ಯೋತಿ ಬಸವೇಶ್ವರ, ಶಿವಮೊಗ್ಗ ವಿಮಾನ ನಿಲ್ದಾಣಕ್ಕೆ ರಾಷ್ಟ್ರಕವಿ ಕುವೆಂಪು, ಹುಬ್ಬಳ್ಳಿ ವಿಮಾನ ನಿಲ್ದಾಣಕ್ಕೆ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಹೆಸರಿಡಲು ರಾಜ್ಯಸರ್ಕಾರ ತೀರ್ಮಾನ ಮಾಡಿದೆ.

ವಿಮಾನ ನಿಲ್ದಾಣಗಳಿಗೆ ನಾಮಕರಣ ವಿಚಾರವನ್ನು ಸಚಿವ ಎಂ.ಬಿ.ಪಾಟೀಲ್‌ ಅವರು ವಿಧಾನಸಭೆಯಲ್ಲಿ ಪ್ರಸ್ತಾಪಿಸಿದರು. ಈ ವೇಳೆ ಮಧ್ಯಪ್ರವೇಶ ಮಾಡಿದ ಶಾಸಕ ಸುನಿಲ್ ಕುಮಾರ್ ಅವರು, ಮಂಗಳೂರು ವಿಮಾನ ನಿಲ್ದಾಣಕ್ಕೆ ಕೋಟಿ ಚೆನ್ನಯ ಹೆಸರಿಡಿ ಎಂದು ಮನವಿ ಮಾಡಿದರು. ಈ ವೇಳೆ ವೀರ ರಾಣಿ ಅಬ್ಬಕ್ಕ ದೇವಿ ಹೆಸರೂ ಕೇಳಿ ಬರುತ್ತಿದೆ ಎಂದು ಸ್ಪೀಕರ್ ಖಾದರ್ ಹೇಳಿದರು. ಆಗ ಈ ನಾಲ್ಕು ಹೆಸರುಗಳನ್ನು ಸಂಪುಟ ಸಭೆಯಲ್ಲಿ ನಿರ್ಧಾರ ಮಾಡಲಾಗಿದೆ ಎಂದು ಸಚಿವ ಎಂ.ಬಿ.ಪಾಟೀಲ್‌ ಹೇಳಿದರು.

ಇದನ್ನೂ ಓದಿ | Karnataka Holiday List 2024: ರಾಜ್ಯದ ಸಾರ್ವತ್ರಿಕ ರಜಾ ದಿನಗಳ ಅಧಿಕೃತ ಪಟ್ಟಿ ಬಿಡುಗಡೆ

ಮೈಸೂರು ವಿಮಾನ ನಿಲ್ದಾಣಕ್ಕೆ ಟಿಪ್ಪು ಹೆಸರಿಡಿ

ಚರ್ಚೆಯಲ್ಲಿ ಅರವಿಂದ್ ಬೆಲ್ಲದ್ ಅವರು ಮಾತನಾಡಿ, ಸರ್ಕಾರದ ನಿರ್ಧಾರವನ್ನು ಹೃದಯಪೂರ್ವಕವಾಗಿ ಸ್ವಾಗತಿಸುತ್ತೇವೆ. ನೀವು ಶಿಫಾರಸು ಮಾಡಿ, ನಾವು ಹೆಸರನ್ನು ಅಂತಿಮ ಮಾಡಿಸುತ್ತೇವೆ ಎಂದರು. ಈ ವೇಳೆ ಮೈಸೂರು ವಿಮಾನ ನಿಲ್ದಾಣಕ್ಕೆ ಟಿಪ್ಪು ಸುಲ್ತಾನ್ ಹೆಸರಿಡಿ ಎಂದು ಕಾಂಗ್ರೆಸ್ ಶಾಸಕ ಪ್ರಸಾದ್ ಅಬ್ಬಯ್ಯ ಆಗ್ರಹಿಸಿದರು. ಇದಕ್ಕೆ ಬಿಜೆಪಿ ಸದಸ್ಯರು ತೀವ್ರ ಆಕ್ಷೇಪ ವ್ಯಕ್ತಪಡಿಸಿದರು. ಹೀಗಾಗಿ ಸದನದಲ್ಲಿ ಆಡಳಿತ-ವಿಪಕ್ಷ ಶಾಸಕರ ನಡುವೆ ಗದ್ದಲ ಶುರುವಾಯಿತು.

ನಂತರ ನಾಲ್ಕು ವಿಮಾನ ನಿಲ್ದಾಣಗಳಿಗೆ ಐತಿಹಾಸಿಕ ಪುರುಷರ ಹೆಸರಿಡಲು ಸರ್ವಾನುಮತದಿಂದ ನಿರ್ಣಯ ಮಾಡಲಾಗಿದೆ. ಕೇಂದ್ರಕ್ಕೆ ಶಿಫಾರಸು ಕಳುಹಿಸಲು ನಿರ್ಧಾರ ಮಾಡಲಾಗಿದೆ ನಿರ್ಣಯವನ್ನು ಸ್ಪೀಕರ್ ಯು.ಟಿ. ಖಾದರ್‌ ಓದಿದರು.

ಸ್ಮಾರಕಗಳ ಅಭಿವೃದ್ಧಿಗೆ ಒತ್ತಾಯ

ಮಹಾತ್ಮ ಗಾಂಧಿ ಅವರು ಬೆಳಗಾವಿಗೆ ಬಂದು‌ ನೂರು ವರ್ಷ ಕಳೆದ ಹಿನ್ನೆಲೆಯಲ್ಲಿ ಸ್ಮಾರಕಗಳ ಅಭಿವೃದ್ಧಿ ಮಾಡಬೇಕು ಎಂದು ಶಾಸಕ ಅಭಯ್ ಪಾಟೀಲ್ ಅವರು ಖಾಸಗಿ ಬಿಲ್ ಮೂಲಕ ಒತ್ತಾಯ ಮಾಡಿದರು. 200 ಕೋಟಿ ರೂ. ಅನುದಾನ ಬಿಡುಗಡೆಗೆ ಮನವಿ ಮಾಡಿದರು. ಇದಕ್ಕೆ ಸಚಿವ ಶಿವರಾಜ್ ತಂಗಡಗಿ ಉತ್ತರಿಸಿ, ಖಂಡಿತವಾಗಿ ಸ್ಮಾರಕಗಳ ಅಭಿವೃದ್ಧಿಗೆ ಸರ್ಕಾರ ಬದ್ಧವಾಗಿದೆ. ಕೇಂದ್ರ ಸರ್ಕಾರ ಕೂಡ ಈ ವಿಚಾರವಾಗಿ ಸಹಕಾರ ಕೊಡಬೇಕು ಎಂದರು. ನಂತರ ಸರ್ವಾನುಮತದಿಂದ ವಿಧಾನಸಭೆಯಲ್ಲಿ ಖಾಸಗಿ ಬಿಲ್ ಅಂಗೀಕಾರ ಮಾಡಲಾಯಿತು.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version