| ವಿವೇಕ ಮಹಾಲೆ, ಶಿವಮೊಗ್ಗ
ಶಿವಮೊಗ್ಗ ಜಿಲ್ಲೆಯಲ್ಲಿ ರಾಜ್ಯ ಹೆದ್ದಾರಿ (State Highway Scam) ಉನ್ನತೀಕರಣ ಕಾಮಗಾರಿಯಲ್ಲಿ ಬಹು ದೊಡ್ಡ ಅವ್ಯವಹಾರ ನಡೆದಿದೆ. 224 ಕೋಟಿ ರೂಪಾಯಿಗಳ ಅಂದಾಜು ವೆಚ್ಚದ ಬೃಹತ್ ಕಾಮಗಾರಿಯಲ್ಲಿ ನಕಲಿ ಅಳತೆ ಸೃಷ್ಟಿಸಿ ಅಕ್ರಮವಾಗಿ ಬಿಲ್ ಮಾಡಿ ಸರ್ಕಾರಕ್ಕೆ ಮೋಸ ಎಸಗಲಾಗಿದೆ.
ಮೂರು ವರ್ಷಗಳ ಹಿಂದೆಯೇ ಅಕ್ರಮದ ವಿರುದ್ಧ ಲೋಕಾಯುಕ್ತಕ್ಕೆ ದೂರು ದಾಖಲಾಗಿದ್ದರೂ ಆರೋಪಿತ ಅಧಿಕಾರಿಗಳು ನಿರಾತಂಕವಾಗಿ ಸೇವೆಯಲ್ಲಿ ಮುಂದುವರಿದಿದ್ದಾರೆ. ಇದೀಗ ತನಿಖೆ ನಡೆದು 7 ಅಧಿಕಾರಿಗಳು ಕರ್ತವ್ಯಲೋಪ ಎಸಗಿದ್ದಾರೆಂದು ಲೋಕಾಯುಕ್ತ ತನಿಖಾ ವರದಿ ಸಲ್ಲಿಸಿದ್ದರೂ ಇವರ ವಿರುದ್ಧ ಯಾವುದೇ ಕ್ರಮವಾಗಿಲ್ಲ.
224 ಕೋಟಿ ರೂ.ಗಳ ಕಾಮಗಾರಿ
ಶಿಕಾರಿಪುರ-ಆನವಟ್ಟಿ-ಹಾನಗಲ್ ರಾಜ್ಯ ಹೆದ್ದಾರಿಯ ಅಭಿವೃದ್ಧಿ ಕಾಮಗಾರಿಯ 194.76 ಕೋಟಿ ರೂ.ಗಳ ಪರಿಷ್ಕೃತ ಅಂದಾಜುಪಟ್ಟಿಗೆ 7 ವರ್ಷಗಳ ಹಿಂದೆ ಟೆಂಡರ್ ಆಹ್ವಾನಿಸಲಾಗಿತ್ತು. 2015ರ ಜೂನ್ 9ರಂದು ನಿಗದಿತ ಮೊತ್ತಕ್ಕಿಂತ ಶೇ.15.38ರಷ್ಟು ಹೆಚ್ಚಳಕ್ಕೆ ಅಂದರೆ 224,70,77,333 ರೂ.ಗಳ ಬೃಹತ್ ಮೊತ್ತಕ್ಕೆ ಟೆಂಡರ್ ಅನುಮೋದಿಸಿ, ದಿನಾಂಕ 6-7-2015ರಂದು ಕರಾರುಪತ್ರ ಮಾಡಿಕೊಳ್ಳಲಾಗಿತ್ತು. ಅದರಂತೆ ಕಾಮಗಾರಿ ಪೂರ್ಣಗೊಳಿಸಲಾಗಿದೆ ಎಂದು ಸಂಪೂರ್ಣ ಬಿಲ್ ಕೂಡ ಪಾವತಿಸಲಾಗಿದೆ.
ಲೋಕಾಯುಕ್ತಕ್ಕೆ ಸಲ್ಲಿಕೆಯಾಯ್ತು ದೂರು
71.63 ಕಿಮೀ ಉದ್ದದ ಈ ಹೆದ್ದಾರಿ ಅಭಿವೃದ್ಧಿ ಕಾಮಗಾರಿಯಲ್ಲಿ ಭ್ರಷ್ಟಾಚಾರದ ವಾಸನೆ ಬಡಿದಿದ್ದು, ಈ ಕಾಮಗಾರಿಯಲ್ಲಿ ನಕಲಿ ಅಳತೆ ಸೃಷ್ಟಿಸಿ ಅಕ್ರಮವಾಗಿ ಬಿಲ್ ಮಾಡಲಾಗಿದೆ ಎಂದು ಸೊರಬ ತಾಲೂಕಿನ ಪಿ.ಜಿ.ರಾಜಪ್ಪ ಎಂಬುವವರು 3 ವರ್ಷಗಳ ಹಿಂದೆ ಲೋಕಾಯುಕ್ತಕ್ಕೆ ದೂರು ಸಲ್ಲಿಸಿದ್ದರು. 2019ರ ಜ.6ರಂದು ದಾಖಲಿಸಿದ ದೂರಿನಲ್ಲಿ ಮೂವರು ಅಧಿಕಾರಿಗಳ ವಿರುದ್ಧ ಅಧಿಕಾರ ದುರುಪಯೋಗ, ಕರ್ತವ್ಯ ನಿರ್ಲಕ್ಷತನ, ಸ್ವಜನಪಕ್ಷಪಾತ, ಭಷ್ಟಾಚಾರ ಆರೋಪವನ್ನು ಹೊರಿಸಲಾಗಿತ್ತು. ಕರ್ನಾಟಕ ರಾಜ್ಯ ಹೆದ್ದಾರಿ ಅಭಿವೃದ್ಧಿ ಯೋಜನೆಯ ಶಿಕಾರಿಪುರ ಉಪ ವಿಭಾಗದ ಅಂದಿನ ಎಇಇ ಎಚ್.ಎಂ. ವಾಸುದೇವ, ಶಿವಮೊಗ್ಗ ವಿಭಾಗ ಕಚೇರಿಯ ಅಂದಿನ ಇಇ ಎಚ್.ಎಸ್.ಆನಂದ ಮತ್ತು ಲೋಕೋಪಯೋಗಿ ಇಲಾಖೆಯ ಬೆಂಗಳೂರು ಯೋಜನಾ ಘಟಕದ ಯೋಜನಾ ನಿರ್ದೇಶಕರ ವಿರುದ್ಧ ದೂರು ನೀಡಲಾಗಿತ್ತು.
ದೂರಿನಲ್ಲಿರುವ ಆರೋಪವೇನು?
- ಹೆದ್ದಾರಿಯುದ್ದಕ್ಕೂ ಎಡ-ಬಲಗಳಲ್ಲಿ ಬರುವ ಜಂಕ್ಷನ್ ಕಾಮಗಾರಿಯಲ್ಲಿ ಭ್ರಷ್ಟಾಚಾರ
- ಅಧಿಕಾರಿಗಳು ಮತ್ತು ಗುತ್ತಿಗೆದಾರರು ಶಾಮೀಲಾಗಿ ಸುಳ್ಳು ಅಳತೆ ದಾಖಲು ಮಾಡಿ ಸರ್ಕಾರದ ಬೊಕ್ಕಸಕ್ಕೆ ನಷ್ಟ
- ಸರ್ಕಾರಿ ಕರ್ತವ್ಯ ನಿರ್ವಹಣೆಯಲ್ಲಿ ಅಧಿಕಾರ ದುರುಪಯೋಗ
- ಬಿಲ್ ನೀಡಿದ ಅಳತೆಗೂ, ಮಾಡಿದ ಕಾಮಗಾರಿಗೂ ಹೊಂದಾಣಿಕೆಯಿಲ್ಲ
- ಸ್ಥಳಕ್ಕೆ ಹೋಗಿ ಕಾಮಗಾರಿ ವೀಕ್ಷಿಸದೆ ಕಚೇರಿಯಲ್ಲೇ ಕುಳಿತು ಬಿಲ್ ಸೃಷ್ಟಿ
ಕಡತಕ್ಕೆ ಧೂಳು, ಆರೋಪಿತರು ಸೇಫ್
2019ರಲ್ಲಿಯೇ ಲೋಕಾಯುಕ್ತದಲ್ಲಿ ದೂರು ದಾಖಲಾಗಿದ್ದರೂ ಕಡತಕ್ಕೆ ಮೂರು ವರ್ಷಗಳವರೆಗೆ ಮುಕ್ತಿಯೇ ಸಿಗಲಿಲ್ಲ. ಇತ್ತ ಆರೋಪ ಹೊತ್ತ ಅಧಿಕಾರಿಗಳ ಮೇಲೂ ಯಾವುದೇ ಕ್ರಮವಾಗಲಿಲ್ಲ. ಬದಲಾಗಿ ಅವರಿಗೆ ಬೇಕೆಂದಲ್ಲಿ ವರ್ಗಾವಣೆ, ಪದೋನ್ನತಿ ಸಿಕ್ಕಿದ್ದು, ಅಧಿಕಾರಾವಧಿಯಲ್ಲಿ ಸಿಗುವ ಎಲ್ಲ ಪುರಸ್ಕಾರಗಳೂ ಲಭ್ಯವಾಗಿದೆ. ಇವರಲ್ಲಿ ಕೆಲವರು ಈಗ ನಿವೃತ್ತಿ ಹೊಂದಿದ್ದಾರೆ.
ಅಂತೂ ನಿಶ್ಚಯವಾಯ್ತು ಮುಹೂರ್ತ
ಸುಮಾರು ಮೂರು ವರ್ಷಗಳ ಕಾಲ ಧೂಳು ಹಿಡಿದಿದ್ದ ಕಡತಕ್ಕೆ ಕೊನೆಗೂ ಮುಕ್ತಿ ಸಿಕ್ಕಿದೆ. ಆರಂಭದಲ್ಲಿ ದೂರುದಾರ ಉಲ್ಲೇಖಿಸಿದ್ದ ಮೂವರು ಆರೋಪಿತರೊಂದಿಗೆ ಇನ್ನೂ ನಾಲ್ಕು ಅಧಿಕಾರಿಗಳ ವಿರುದ್ಧ ಆರೋಪ ಹೊರಿಸಲಾಗಿದೆ. ಹೆಚ್ಚುವರಿಯಾಗಿ ಕೆಶಿಪ್‌ನ ಅಂದಿನ ಎಇಇಗಳಾದ ಬಿ.ಇ.ಅಣ್ಣಪ್ಪ, ಜಿ.ಯು.ಲೋಕೇಶ್, ನಿವೃತ್ತ ಎಸ್ಇ, ಕೆಶಿಪ್‌ನ ಅಂದಿನ ಇಇ ವೈ.ಎನ್.ಜಗದೀಶ್, ಮತ್ತೊಬ್ಬ ನಿವೃತ್ತ ಅಂದಿನ ಇಇ ಶಿವಪ್ರಕಾಶ ಕೆ.ಎಂ. ಅವರನ್ನು ಪ್ರತಿವಾದಿಗಳನ್ನಾಗಿ ಮಾಡಲಾಗಿದ್ದು, ಕಳೆದ ವರ್ಷ ನ.10ರಂದು ಉಪಲೋಕಾಯುಕ್ತರು ತಾಂತ್ರಿಕ ವಿಭಾಗದ ಮುಖ್ಯ ಇಂಜಿನಿಯರ್‌ಗೆ ಪತ್ರ ಬರೆದು ದೂರಿನ ತನಿಖೆ ನಡೆಸುವಂತೆ ಸೂಚಿಸಿದ್ದರು. ಅದರಂತೆ ಮುಖ್ಯ ಇಂಜಿನಿಯರ್ ಆದೇಶದಂತೆ ಎಇಇ ಆರ್.ರವಿಶಂಕರ್ ತನಿಖೆ ಕೈಗೊಂಡಿದ್ದರು. ಕಳೆದ ಮಾ.28 ಮತ್ತು 29ರಂದು ಎರಡು ದಿನಗಳ ಕಾಲ ದೂರುದಾರ, ಆರೋಪಿತರು ಮತ್ತು ಸ್ಥಳೀಯ ಹಾಲಿ ಅಧಿಕಾರಿಗಳ ಸಮ್ಮುಖದಲ್ಲಿಯೇ ಸ್ಥಳ ಪರಿಶೀಲನೆಯೂ ನಡೆದಿದೆ.
ಬಯಲಾಯ್ತು ಕೋಟಿ ಕೋಟಿ ಭ್ರಷ್ಟಾಚಾರ
ಮೂರು ದಿನಗಳ ಕಾಲ ತನಿಖೆ ಕೈಗೊಂಡ ಆರ್. ರವಿಶಂಕರ್, ಕಳೆದ ಮೇ 5ರಂದು 18 ಪುಟಗಳ ತನಿಖಾ ವರದಿ ಸಲ್ಲಿಸಿದ್ದಾರೆ. ಕೋಟಿ ಕೋಟಿ ಅವ್ಯವಹಾರ ನಡೆದಿರುವುದು ತನಿಖೆ ವೇಳೆ ದೃಢಪಟ್ಟಿದ್ದು, 16 ಕೋಟಿ ರೂ.ಗೂ ಹೆಚ್ಚವರಿ ಹಣ ಲಪಟಾಯಿಸಿರುವುದಾಗಿ ವರದಿಯಲ್ಲಿ ನಮೂದಿಸಲಾಗಿದೆ. ಕೈಗೊಂಡ ಕಾಮಗಾರಿಗಿಂತ ಹೆಚ್ಚುವರಿಯಾಗಿ IPC31 ಬಿಲ್‌ನಲ್ಲಿ 1,05,260 ರೂ. ಲಪಟಾಯಿಸಲಾಗಿದೆ. ಗ್ರ್ಯಾನ್ಯುಲಾರ್ ಸಬ್-ಬೇಸ್ ಲೇಯರ್ (Granular sub-base(GSB) layer) ನಲ್ಲಿ 16 ಸೆಂ.ಮೀ. ಗಾತ್ರದಲ್ಲಿ (ದಪ್ಪ) ನಿರ್ಮಿಸಲಾಗಿದೆ. ಆದರೆ, 20 ಸೆಂ.ಮೀ. ಬಳಸಿದ್ದಾಗಿ ವಿವಿಧ ಬಿಲ್ಲುಗಳಲ್ಲಿ ನಮೂದಿಸಲಾಗಿದೆ. ಅಂದರೆ, 4 ಸೆಂ.ಮೀ. ಅಧಿಕ ಪ್ರಮಾಣದಲ್ಲಿ ದಪ್ಪ ತೋರಿಸಿ 3,54,22,920 ರೂ.ವನ್ನು ಹೆಚ್ಚುವರಿಯಾಗಿ ಪಾವತಿ ಮಾಡಿಸಿಕೊಳ್ಳಲಾಗಿದೆ. ಅಲ್ಲದೆ, ಡೆನ್ಸ್ ಗ್ರೇಡೆಡ್ ಬಿಟುಮಿನಸ್ ಮಕಡಮ್ ಲೇಯರ್ (Dense graded bituminous macadum (DBM) layer) ಗೆ ಸಂಬಂಧಪಟ್ಟಂತೆ 50 ಮಿಮೀ ದಪ್ಪ ಹಾಕಿದ್ದರೂ, 65 ಮಿ.ಮೀ. ದಪ್ಪ ತೋರಿಸಿ 7,76,57,940 ರೂ. ಹೆಚ್ಚುವರಿ ಹಣವನ್ನು ಪಾವತಿ ಮಾಡಿಸಿಕೊಳ್ಳಲಾಗಿದೆ.
ಇನ್ನೊಂದೆಡೆ ಕೂಡ ಡಿಬಿಎಂ ಲೇಯರ್ ಹಾಕುವಾಗ 58 ಮಿ.ಮೀ. ದಪ್ಪವನ್ನು ಮಾಡಿದ್ದರೂ 75 ಮಿಮೀ ದಪ್ಪವನ್ನು ಬಿಲ್‌ನಲ್ಲಿ ನಮೂದಿಸಿ 5,08,04,670 ರೂ. ಹೆಚ್ಚುವರಿ ಹಣವನ್ನು ಪಡೆದುಕೊಳ್ಳಲಾಗಿದೆ. ಹೀಗೆ, ಹೆಚ್ಚುವರಿಯಾಗಿ 16,39,90,790 ರೂಪಾಯಿಯನ್ನು ಲಪಟಾಯಿಸಿರುವುದು ತನಿಖಾ ವರದಿಯಿಂದ ತಿಳಿದುಬಂದಿದೆ. ದೂರುದಾರ ತಿಳಿಸಿರುವಂತೆ ಏಳೂ ಜನ ಅಧಿಕಾರಿಗಳು ಕರ್ತವ್ಯ ಲೋಪ ಎಸಗಿದ್ದಾರೆ ಎಂದು ತನಿಖಾಧಿಕಾರಿ ತಮ್ಮ ಅಭಿಪ್ರಾಯವನ್ನು ವರದಿಯಲ್ಲಿ ಉಲ್ಲೇಖಿಸಲಾಗಿದೆ.
ಸರ್ಕಾರದ ಶ್ರೀರಕ್ಷೆ?
ತಾಂತ್ರಿಕ ವಿಭಾಗದ ತನಿಖಾಧಿಕಾರಿಯಿಂದ ವರದಿ ಸಲ್ಲಿಕೆಯಾಗಿ ಮೂರು ತಿಂಗಳಾಗುತ್ತಾ ಬಂದಿದೆ. ಆದರೆ, ಭಷ್ಟಾಚಾರದ ಆರೋಪ ಹೊತ್ತವರ ಮೇಲೆ ಮಾತ್ರ ಯಾವುದೇ ಕ್ರಮವಾಗಿಲ್ಲ. ಈ ಎಲ್ಲ ಬೆಳವಣಿಗೆಗಳನ್ನು ಗಮನಿಸಿದರೆ, ಸರ್ಕಾರವೇ ಭ್ರಷ್ಟರ ರಕ್ಷಣೆಗೆ ಮುಂದಾಗಿದೆಯೇ ಎಂಬ ಅನುಮಾನ ಮೂಡುವುದರಲ್ಲಿ ಸಂಶಯವಿಲ್ಲ.
ದೂರುದಾರರು ಹೇಳೋದೇನು?
ಮೂರು ವರ್ಷಗಳ ಹಿಂದೆ ಸಲ್ಲಿಸಿದ್ದ ದೂರಿಗೆ ಇನ್ನೂ ಮುಕ್ತಿ ಸಿಕ್ಕಿಲ್ಲ. ಕೊನೆಗೂ ಲೋಕಾಯುಕ್ತ ತನಿಖೆ ಮುಗಿದಿದೆ. ಅಧಿಕಾರಿಗಳು ಅಕ್ರಮ ಎಸಗಿರುವುದು ಸಾಬೀತಾಗಿದೆ. ಇನ್ನಾದರೂ ಸರ್ಕಾರ ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕು. ಸರ್ಕಾರದ ಬೊಕ್ಕಸಕ್ಕೆ ಆಗಿರುವ ನಷ್ಟವನ್ನು ಅವರಿಂದಲೇ ವಸೂಲಿ ಮಾಡಬೇಕು ಎಂದು ದೂರುದಾರರಾದ ಪಿ.ಜಿ.ರಾಜಪ್ಪ ವಿಸ್ತಾರ ನ್ಯೂಸ್‌ಗೆ ತಿಳಿಸಿದ್ದಾರೆ.
ಇದನ್ನೂ ಓದಿ | ಭ್ರಷ್ಟಾಚಾರ: ಬೆಕ್ಕಿಗೆ ನಾನೇ ಗಂಟೆ ಕಟ್ಟುತ್ತೇನೆ ಎಂದ ಹೈಕೋರ್ಟ್ ನ್ಯಾಯಮೂರ್ತಿ ಹೇಳಿಕೆ ವೈರಲ್