Site icon Vistara News

Monish K: ಅಪಘಾತದಲ್ಲಿ ರಾಜ್ಯಮಟ್ಟದ ಫುಟ್‌ಬಾಲ್‌ ಆಟಗಾರ ಮೋನೀಶ್ ಸಾವು

Monish

ಬೆಂಗಳೂರು: ರಸ್ತೆ ಅಪಘಾತದಲ್ಲಿ ರಾಜ್ಯಮಟ್ಟದ ಫುಟ್‌ಬಾಲ್‌ ಆಟಗಾರ ಮೋನೀಶ್‌ (27) (Monish K) ಮೃತಪಟ್ಟಿದ್ದಾರೆ. ಕೆ.ಆರ್.ಪುರಂ ಸಂಚಾರ ಠಾಣೆ ವ್ಯಾಪ್ತಿಯ ರಾಮಮೂರ್ತಿ ನಗರ ಮೇಲ್ಸೇತುವೆ ಬಳಿ ಶನಿವಾರ ತಡರಾತ್ರಿ ದ್ವಿಚಕ್ರ ವಾಹನದಲ್ಲಿ ಹೋಗುತ್ತಿದ್ದಾಗ ಲಾರಿ ಡಿಕ್ಕಿಯಾಗಿ ಮೋನೀಶ್‌ ಕೊನೆಯುಸಿರೆಳೆದಿದ್ದಾರೆ.

ಬಾಬುಸಾಪಾಳ್ಯ ನಿವಾಸಿಯಾಗಿದ್ದ ಮೋನೀಶ್ ಅವರು ದ್ವಿಚಕ್ರ ವಾಹನದಲ್ಲಿ ಸಾಗುತ್ತಿದ್ದ ವೇಳೆ ಲಾರಿ ಡಿಕ್ಕಿಯಾಗಿ ಗಂಭೀರವಾಗಿ ಗಾಯಗೊಂಡಿದ್ದರು. ಹೀಗಾಗಿ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಅವರು ಮೃತಪಟ್ಟಿದ್ದಾರೆ. ಕೆ.ಆರ್. ಪುರ ಸಂಚಾರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

ಪರಿಕ್ರಮ ಎಫ್.ಸಿ, ಡೆಕ್ಕನ್ ಎಫ್.ಸಿ, ಯಂಗ್ ಚಾಲೆಂಜರ್ಸ್ ಎಫ್.ಸಿ ಸೇರಿದಂತೆ ವಿವಿಧ ಕ್ಲಬ್‌ಗಳ ಪರ‌ ಕಣಕ್ಕಿಳಿದಿದ್ದ ಮೋನೀಶ್, ಆಲ್ ಇಂಡಿಯಾ ಫುಟ್‌ಬಾಲ್‌ ‌ಫೆಡರೇಶನ್ (ಎಐಎಫ್ಎಫ್) – ಡಿ ನಿಂದ 2019ರಲ್ಲಿ ಕೋಚಿಂಗ್ ಲೈಸೆನ್ಸ್ ಪಡೆದಿದ್ದರು.

ಪ್ರಸ್ತುತ ಬೆಂಗಳೂರು ಡಿಸ್ಟ್ರಿಕ್ಟ್ ಫುಟ್‌ಬಾಲ್‌ ಅಸೋಸಿಯೇಷನ್ (ಬಿಡಿಎಫ್ಎ) – ಎ ಡಿವಿಷನ್ ಲೀಗ್ ಚಾಂಪಿಯನ್‌ಶಿಪ್‌ನಲ್ಲಿ ಬೆಂಗಳೂರು ಈಗಲ್ಸ್ ಎಫ್.ಸಿ ಪರ ಆಡುತ್ತಿದ್ದರು.

ಸಿಎಂ ಸಿದ್ದರಾಮಯ್ಯ ಸಂತಾಪ

ಫುಟ್‌ಬಾಲ್‌ ಆಟಗಾರ ಮೊನೀಶ್.ಕೆ ಅವರ ನಿಧನಕ್ಕೆ ಸಿಎಂ ಸಿದ್ದರಾಮಯ್ಯ ಸಂತಾಪ ಸೂಚಿಸಿದ್ದಾರೆ. ರಾಜ್ಯದ ಖ್ಯಾತ ಫುಟ್‌ಬಾಲ್‌ ಆಟಗಾರ ಮೊನೀಶ್.ಕೆ ಅವರ ನಿಧನದ ಸುದ್ದಿ ಕೇಳಿ ಬೇಸರವಾಯಿತು. ನಿನ್ನೆ ರಾತ್ರಿ ಸಂಭವಿಸಿದ ಅಪಘಾತದಲ್ಲಿ ತೀವ್ರವಾಗಿ ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಅವರು ಗುಣಮುಖರಾಗುತ್ತಾರೆಂದು ನಂಬಿದ್ದೆ, ಈಗ ಆ ನಂಬಿಕೆ ಹುಸಿಯಾಗಿದೆ. ಕ್ರೀಡಾ ಬದುಕಿನಲ್ಲಿ ಇನ್ನಷ್ಟು ಎತ್ತರಕ್ಕೆ ಬೆಳೆಯಬೇಕಿದ್ದ ಯುವ ಪ್ರತಿಭೆಯೊಂದು ಹೀಗೆ ಆರಂಭದಲ್ಲೇ ಅಂತ್ಯ ಕಂಡಿದ್ದು ಅತ್ಯಂತ ದುಃಖದ ವಿಚಾರ. ಮೃತ ಯುವಕನ ಆತ್ಮಕ್ಕೆ ಚಿರಶಾಂತಿ ಸಿಗಲಿ ಎಂದು ಪ್ರಾರ್ಥಿಸುತ್ತೇನೆ ಎಂದು ತಿಳಿಸಿದ್ದಾರೆ.

ಇದನ್ನೂ ಓದಿ | ಬೀದಿ ದೀಪ ಸರಿ‌ಪಡಿಸುವಾಗ ವಿದ್ಯುತ್ ಸ್ಪರ್ಶಿಸಿ ವ್ಯಕ್ತಿ ಸಾವು; ಕಂಬದಲ್ಲೇ ನೇತಾಡಿದ ಶವ

ರೈಡ್‌ ಕ್ಯಾನ್ಸಲ್‌ ಮಾಡಿ ಮಹಿಳೆ ಮೇಲೆ ಆಟೊ ಚಾಲಕನ ಅಮಾನುಷ ಹಲ್ಲೆ

ಬೆಂಗಳೂರು: ಮಹಿಳಾ ಪ್ರಯಾಣಿಕಳ ಜತೆ ಆಟೋ ಚಾಲಕ ಅನುಚಿತವಾಗಿ ವರ್ತಿಸಿ ಹಲ್ಲೆ ನಡೆಸಿರುವ ಘಟನೆ ನಗರದ ಬೆಳ್ಳಂದೂರಿನಲ್ಲಿ ನಡೆದಿದೆ. ಈ ಬಗ್ಗೆ ದೂರು ಪಡೆದ ಪೊಲೀಸರು ಆಟೋ ಚಾಲಕನಿಗಾಗಿ ಶೋಧ ನಡೆಸುತ್ತಿದ್ದಾರೆ.

ವೈಟ್ ಫೀಲ್ಡ್ ಸಮೀಪದ ತೂಬರಹಳ್ಳಿಗೆ ತೆರಳಲು ಮಹಿಳೆ ಶನಿವಾರ ಆಟೋ ಬುಕ್ ಮಾಡಿದ್ದರು. ಬೆಳಗ್ಗೆ 8.30ಕ್ಕೆ ಆಟೋ ಸ್ಥಳಕ್ಕೆ ಬಂದ ನಂತರ ರೈಡ್‌ ಕ್ಯಾನ್ಸಲ್ ಆಗಿದೆ. ಹೀಗಾಗಿ ಚಾಲಕ ಸಿಟ್ಟಿಗೆದ್ದು ಮಹಿಳೆ ಜತೆ ಗಲಾಟೆ ಮಾಡಿ ರಸ್ತೆಯಲ್ಲಿ ಎಳೆದಾಡಿ ಹಲ್ಲೆ ನಡೆಸಿದ್ದಾನೆ.

ಆಟೋ ಚಾಲಕನ ದುಂಡಾವರ್ತನೆ ತೋರಿದ್ದರಿಂದ ಮಹಿಳೆ ಕೆಳಗೆ ಬಿದ್ದಿದ್ದಾರೆ. ಈ ವೇಳೆ ಆಟೋ ಚಾಲಕ ಅಲ್ಲಿದ್ದ ಪರಾರಿಯಾಗಿದ್ದಾನೆ. ಘಟನೆಯ ಸಂಪೂರ್ಣ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಘಟನೆ ಸಂಬಂಧ ಯಾವುದೇ ದೂರು ದಾಖಲಿಸದೇ ಮಹಿಳೆ ಊರಿಗೆ ತೆರಳಿದ್ದಾರೆ.

ಇದನ್ನೂ ಓದಿ | Self Harming : ಕೈ ಹಾಗೂ ಕತ್ತು ಕೊಯ್ದುಕೊಂಡು ನೇಣಿಗೆ ಶರಣಾದ ಯುವಕ

ಮಹಿಳೆಯ ಸ್ನೇಹಿತನಿಂದ ಪೊಲೀಸರಿಗೆ ದೂರು

ಮಹಿಳೆ ಮೇಲೆ ಆಟೋ ಚಾಲಕ ಹಲ್ಲೆ ನಡೆಸಿರುವುದಕ್ಕೆ ಸಾಮಾಜಿಕ ಜಾಲತಾಣದಲ್ಲಿ ಬೇಸರ ಹೊರಹಾಕಿರುವ ಮಹಿಳೆಯ ಸ್ನೇಹಿತ ರಾಜೇಶ್‌ ಪ್ರಧಾನ್‌ ಅವರು, ರ‍್ಯಾಪಿಡೋ ಆಟೋ ರೈಡ್‌ ಸುರಕ್ಷಿತವೇ? ಇದು ನ್ಯಾಯವೇ? ಹಲ್ಲೆಗೊಳಗಾದ ಮಹಿಳೆ ನಮ್ಮ ಸ್ನೇಹಿತರಾಗಿದ್ದು, ನಾವು ಅಸಹಾಯಕರಾಗಿದ್ದೇವೆ. ಆಕೆ ಟ್ರೈನ್‌ಗೆ ಹೋಗಬೇಕಿದ್ದರಿಂದ ದೂರು ದಾಖಲಿಸಲು ಸಾಧ್ಯವಾಗಿಲ್ಲ ಎಂದು ಪೊಲೀಸರಿಗೆ ದೂರು ಸಲ್ಲಿಸಿದ್ದಾರೆ. ಇದಕ್ಕೆ ಪ್ರತಿಕ್ರಿಯೆ ನೀಡಿರುವ ವೈಟ್‌ಫೀಲ್ಡ್‌ ಡಿಸಿಪಿ, ಪ್ರಕರಣದಲ್ಲಿ ಅಗತ್ಯ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದ್ದಾರೆ.

Exit mobile version