ಬೆಂಗಳೂರು/ದೇವನಹಳ್ಳಿ: ನಮಗೆ ಇದುವರೆಗೂ ಯಾರೂ ಕೂಡ ದೂರು ನೀಡಿಲ್ಲ. ಬೆಂಗಳೂರಿನಲ್ಲಿ ಆಗಲೀ ಅಥವಾ ಬೇರೆ ಯಾವುದೇ ಜಿಲ್ಲೆಗಳಿಂದಲೂ ನಮಗೆ ಸರ್ಕಾರದಿಂದ ಕಾಮಗಾರಿ ಬಿಲ್ ಬಾಕಿ ಬಗ್ಗೆ ದೂರು ಬಂದಿಲ್ಲ. ಸರ್ಕಾರ ಬಂದು ಮೂರು ತಿಂಗಳು ಆಗಿದೆ ಅಷ್ಟೇ. ಇನ್ನೂ ಏನೂ ಕೆಲಸ ಮಾಡಿಲ್ಲ. ಕೆಲಸ ಮಾಡದೆ ಹೇಗೆ ಆರೋಪ ಮಾಡುವುದು? ನಮ್ಮ ಹೋರಾಟ ಮೂರು ವರ್ಷದ್ದು, ಈ ಸರ್ಕಾರ ಬಂದು ಎರಡು ತಿಂಗಳು ಮಾತ್ರ ಆಗಿದೆ. ಇನ್ನು ಡಿಸಿಎಂ ಡಿ.ಕೆ. ಶಿವಕುಮಾರ್ (DCM DK Shivakumar) ಹಾಗೆಲ್ಲ 15 ಪರ್ಸೆಂಟ್ ಕೇಳಲ್ಲ ಎಂದು ಕರ್ನಾಟಕ ರಾಜ್ಯ ಗುತ್ತಿಗೆದಾರರ ಸಂಘದ ಅಧ್ಯಕ್ಷ ಕೆಂಪಣ್ಣ (Kempanna) ಹೇಳುವ ಮೂಲಕ ಸರ್ಕಾರದ ಪರವಾಗಿ ಬ್ಯಾಟ್ ಬೀಸಿದ್ದಾರೆ. ರಾಜ್ಯ ರಾಜಕೀಯದಲ್ಲಿ (Karnataka Politics) ಸಾಕಷ್ಟು ಸಂಚಲನವನ್ನು ಉಂಟು ಮಾಡಿದ್ದ ಈ ಪ್ರಕರಣಕ್ಕೆ ಈಗ ಮತ್ತೊಂದು ಟ್ವಿಸ್ಟ್ ಸಿಕ್ಕಿದಂತೆ ಆಗಿದೆ.
ಬಿಬಿಎಂಪಿ ಗುತ್ತಿಗೆದಾರರ ಸಂಘವು ಡಿಸಿಎಂ ಡಿ.ಕೆ. ಶಿವಕುಮಾರ್ 15 ಪರ್ಸೆಂಟ್ ಕಮಿಷನ್ ಕೇಳಿದ್ದಾರೆಂದು ರಾಜ್ಯಪಾಲರಿಂದ ಹಿಡಿದು ಸಚಿವರು, ಬಿಜೆಪಿ ನಾಯಕರು ಸೇರಿ ಹಲವರಿಗೆ ಮನವಿ ಕೊಟ್ಟಿತ್ತು. ಆದರೆ, ಈ ಸಂಬಂಧ ತಮಗೆ ಈ ವರೆಗೆ ಯಾವುದೇ ದೂರು ಬಂದಿಲ್ಲ ಎಂದು ಹೇಳುವ ಮೂಲಕ ಇದಕ್ಕೂ ತಮಗೂ ಸಂಬಂಧವೇ ಇಲ್ಲವೆಂಬ ರೀತಿಯಲ್ಲಿ ಪರೋಕ್ಷ ಸಂದೇಶವನ್ನು ಕೆಂಪಣ್ಣ ರವಾನೆ ಮಾಡಿದ್ದಾರೆ.
ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಗುತ್ತಿಗೆದಾರರ ಸಂಘದ ಅಧ್ಯಕ್ಷ ಕೆಂಪಣ್ಣ ಮಾತನಾಡಿ, ನಾನು ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿ.ಕೆ. ಶಿವಕುಮಾರ್ ಅವರ ಬಳಿ ಮಾತನಾಡಿದ್ದೇನೆ. ಅವರು ಬೇರೆ ರೀತಿ ನಿಮಗೆ ಸೇರಬೇಕಾದ ಬಿಲ್ ವ್ಯವಸ್ಥೆ ಮಾಡಲು ನೋಡುತ್ತೇವೆ ಎಂದು ಹೇಳಿದ್ದಾರೆ. ಪ್ರತಿ ತಿಂಗಳು ಪೇಮೆಂಟ್ ಮಾಡುತ್ತೇವೆ ಎಂದು ಹೇಳಿದ್ದಾರೆ ಎಂದು ಹೇಳಿದರು.
15% ವಿಚಾರ ನನಗೆ ಗೊತ್ತೇ ಇಲ್ಲ!
15% ವಿಚಾರ ನನಗೆ ಗೊತ್ತಿಲ್ಲ. ಡಿ.ಕೆ. ಶಿವಕುಮಾರ್ ಅವರು ನನಗೆ ಗೊತ್ತಿರುವುದರಿಂದ ಅವರು ಆ ರೀತಿ ಮಾಡಲ್ಲ. 15 % ಕೊಡಿ ಎಂದು ಅವರು ಮಾತನಾಡುವುದೂ ಇಲ್ಲ. ಕೆಂಪಣ್ಣ ಕಾಂಗ್ರೆಸ್ ಪರ ಎಂದು ನನಗೆ ಹೇಳುತ್ತಿದ್ದರು. ಈಗ ಎಲ್ಲ ಮಾತನಾಡುತ್ತಿದ್ದಾರೆ, ಅವರು ಯಾರು? ಬಿಜೆಪಿಯವರು ಎತ್ತಿ ಕಟ್ಟುತ್ತಿದ್ದಾರೆ ಎಂಬುದು ನನ್ನ ಅನಿಸಿಕೆ. 15% ಬೇಡಿಕೆ ಇಟ್ಟಿದ್ದರೆ ತನಿಖೆ ಆಗಲಿ ಎಂದು ಕೆಂಪಣ್ಣ ಹೇಳಿದರು.
ಬಿಜೆಪಿ ಮನವಿ ನೀಡಿರುವ ಬಿಬಿಎಂಪಿ ಗುತ್ತಿಗೆದಾರರ ಸಂಘ
ಈ ನಡುವೆ ಗುರುವಾರ ಬಿಜೆಪಿ ನಾಯಕರನ್ನು ಭೇಟಿಯಾಗಿರುವ ಬಿಬಿಎಂಪಿ ಗುತ್ತಿಗೆದಾರರ ಸಂಘವು, ತಮ್ಮ ಹೋರಾಟಕ್ಕೆ ಬೆಂಬಲ ನೀಡಿ ಎಂದು ಮನವಿ ಮಾಡಿದ್ದಾರೆ. ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಹಾಗೂ ಮಾಜಿ ಸಚಿವ ಆರ್. ಅಶೋಕ್‌ಗೆ ಮನವಿ ಸಲ್ಲಿಸಿದ್ದಾರೆ. ಇನ್ನು ಬಿಜೆಪಿ ಸಹ ಈ ವಿಚಾರವನ್ನು ರಾಷ್ಟ್ರೀಯ ಮಟ್ಟಕ್ಕೆ ತೆಗೆದುಕೊಂಡು ಹೋಗಲು ತೀರ್ಮಾನಿಸಿದೆ.