Site icon Vistara News

Zameer Ahmed Khan: ಜಮೀರ್‌ ಇಂಗ್ಲಿಷ್‌ ಪ್ರಮಾಣ; ಕನ್ನಡ ಕಲಿಯದ ಬಗ್ಗೆ ಮುಂದುವರಿದ ಕನ್ನಡಿಗರ ಆಕ್ರೋಶ

Zameer Ahmed Khan and narayana gowda

ಬೆಂಗಳೂರು: ಈ ಬಾರಿ ಕರ್ನಾಟಕದಲ್ಲಿ ಕಾಂಗ್ರೆಸ್‌ ಸರ್ಕಾರ ಅಸ್ತಿತ್ವಕ್ಕೆ ಬಂದಿದೆ. ಶನಿವಾರ ಸಿದ್ದರಾಮಯ್ಯ (Siddaramaiah) ಅವರು ನೂತನ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದರೆ, ಉಪ ಮುಖ್ಯಮಂತ್ರಿಯಾಗಿ ಡಿ.ಕೆ. ಶಿವಕುಮಾರ್‌ (DK Shivakumar) ಪ್ರಮಾಣ ಸ್ವೀಕರಿಸಿದ್ದರು. ಈ ವೇಳೆ 8 ಮಂದಿ ಸಚಿವರಾಗಿ ಪ್ರಮಾಣ ಪಡೆದಿದ್ದು, ಅವರಲ್ಲಿ ಜಮೀರ್‌ ಅಹಮದ್‌ ಖಾನ್‌ (Zameer Ahmed Khan) ಸಹ ಒಬ್ಬರು. ಆದರೆ, ಅವರು ಇಂಗ್ಲಿಷ್‌ನಲ್ಲಿ ಪ್ರಮಾಣ ವಚನ ತೆಗೆದುಕೊಂಡಿರುವುದು ಈಗ ಕನ್ನಡಿಗರ ಆಕ್ರೋಶಕ್ಕೆ ಕಾರಣವಾಗಿದೆ. ಹಳೇ ತಪ್ಪನ್ನೇ ಮತ್ತೆ ಮಾಡಿರುವುದರ ಬಗ್ಗೆ ಜನ ಕಿಡಿಕಾರಿದ್ದಾರೆ. ಈಗ ಅವರು ಕ್ಷಮೆ ಕೇಳದಿರುವ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕ ಟೀಕೆ ವ್ಯಕ್ತವಾಗುತ್ತಿದೆ.

ಸಚಿವರಾಗಿ ಇಂಗ್ಲಿಷ್‌ನಲ್ಲಿ ಪ್ರಮಾಣ ಸ್ವೀಕರಿಸಿದ್ದಕ್ಕೆ ಕನ್ನಡಿಗರು ವ್ಯಾಪಕವಾಗಿ ಕಿಡಿಕಾರಿದ್ದಾರೆ. ಕರವೇ ರಾಜ್ಯಾಧ್ಯಕ್ಷ ನಾರಾಯಣ ಗೌಡ ಸೇರಿ ಹಲವರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ಬಗ್ಗೆ ಟ್ವೀಟ್‌ ಮಾಡಿರುವ ಅವರು, ಸಚಿವ ಜಮೀರ್ ಅಹಮದ್‌ರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಈ ಹಿಂದೆಯೂ ಇಂಗ್ಲಿಷ್‌ನಲ್ಲೇ ಪ್ರಮಾಣ ವಚನ ಸ್ವೀಕರಿಸಿ, ಬಳಿಕ ವಿಧಾನಸಭೆಯಲ್ಲಿ ಕ್ಷಮೆಯಾಚನೆ ಮಾಡಿದ್ದ ವಿಚಾರದ ಬಗ್ಗೆ ಪತ್ರಿಕೆಯ ಫೋಟೊ ಹಾಕಿ ಕಿಡಿಕಾರಿದ್ದಾರೆ. ಈಗ ಅದೇ ತಪ್ಪು ಪುನರಾವರ್ತನೆಯಾಗಿರುವ ಬಗ್ಗೆ ಕರವೇ ರಾಜ್ಯಾಧ್ಯಕ್ಷ ನಾರಾಯಣಗೌಡ ಟ್ವೀಟ್ ಮಾಡಿ ಪ್ರಶ್ನೆ ಮಾಡಿದ್ದಾರೆ.

ಇದನ್ನೂ ಓದಿ: Weather Report: ಬೆಂಗಳೂರಿಗರೇ ಎಚ್ಚರ, ಇಂದು ಇರಲಿದೆ ಮಳೆ ಅಬ್ಬರ; ರಾಜ್ಯದ 16 ಕಡೆ ಯೆಲ್ಲೋ ಅಲರ್ಟ್‌

ನಾರಾಯಣಗೌಡ ಟ್ವೀಟ್‌

2005ರಲ್ಲಿ ಜಮೀರ್ ಅಹಮದ್ ಖಾನ್ ಮೊದಲ ಬಾರಿ ಶಾಸಕರಾಗಿ ಆಯ್ಕೆಯಾಗಿ ಸಚಿವರಾಗಿದ್ದರು. ಆಗ ಅವರು ಇಂಗ್ಲಿಷ್‌ನಲ್ಲಿ ಪ್ರಮಾಣ ವಚನ ಸ್ವೀಕರಿಸಿದ್ದರು. ವಿಧಾನಸಭಾ ಕಲಾಪ ನಡೆಯುವಾಗ ಕರವೇ ಕಾರ್ಯಕರ್ತರು ಅಲ್ಲೇ ಕರಪತ್ರ ಎಸೆದು ಪ್ರತಿಭಟಿಸಿದಾಗ ನನ್ನಿಂದ ತಪ್ಪಾಗಿದೆ ಎಂದಿದ್ದರು. 18 ವರ್ಷ ಕಳೆದರೂ ಅವರು ಕನ್ನಡ ಕಲಿತಿಲ್ಲವೇ?

ಕರ್ನಾಟಕ ಸರ್ಕಾರದ ಸಚಿವರಾಗಿ ಪ್ರಮಾಣವಚನ ಸ್ವೀಕರಿಸಿದ ಬಿ.ಝಡ್. ಜಮೀರ್ ಅಹ್ಮದ್ ಖಾನ್ ಅವರು ಇನ್ನೂ ಕನ್ನಡ ಕಲಿಯದಿರುವುದು ನಾಚಿಕೆಗೇಡು. ಎಲ್ಲ ಸಚಿವರೂ ಕನ್ನಡದಲ್ಲಿ ಪ್ರಮಾಣ ವಚನ ಸ್ವೀಕರಿಸಿದರೆ ಜಮೀರ್ ಅಹಮದ್ ಅವರು ಇಂಗ್ಲಿಷ್‌ನಲ್ಲಿ ಪ್ರಮಾಣ ವಚನ ಸ್ವೀಕರಿಸಿದರು. ರಾಜಕಾರಣಕ್ಕೆ ಬಂದು ಇಷ್ಟು ವರ್ಷಗಳಾದರೂ ಕನ್ನಡ ಕಲಿಯದಿರುವುದು ಎಷ್ಟು ಸರಿ? ಎಂದು ನಾರಾಯಣ ಗೌಡ ಪ್ರಶ್ನೆ ಮಾಡಿದ್ದಾರೆ.

ನೆಟ್ಟಿಗರ ಕಿಡಿ

ನಾರಾಯಣಗೌಡ ಅವರು ಈ ಟ್ವೀಟ್‌ ಮಾಡುತ್ತಿದ್ದಂತೆ ನೆಟ್ಟಿಗರು ಸಹ ಜಮೀರ್ ಅಹ್ಮದ್ ಖಾನ್ ಮೇಲೆ ಮುಗಿಬಿದ್ದಿದ್ದು, ತೀವ್ರವಾಗಿ ತರಾಟೆಗೆ ತೆಗೆದುಕೊಂಡಿದ್ದಾರೆ ನಾರಾಯಣಗೌಡ ಅವರ ಟ್ವೀಟ್‌ನಲ್ಲಿ ನೂರಾರು ಕಮೆಂಟ್‌ಗಳು ಬಂದಿವೆ. ಅಲ್ಲದೆ, ಕ್ಷಮೆ ಕೇಳಬೇಕು, ಕನ್ನಡವನ್ನು ಸರಿಯಾಗಿ ಕಲಿಯಬೇಕು ಎಂಬಿತ್ಯಾದಿ ಸಲಹೆಗಳೂ ಈ ವೇಳೆ ಕೇಳಿಬಂದಿವೆ.

ಇದನ್ನೂ ಓದಿ: Mutual fund investment : ಮ್ಯೂಚುವಲ್‌ ಫಂಡ್‌ನಲ್ಲಿ ಹೂಡಿಕೆ ಮಾಡಿ 12 ಕೋಟಿ ರೂ. ಗಳಿಸಲು ಸಾಧ್ಯವೇ?

ಕನ್ನಡ ಕಲಿಬೇಕು ಸಚಿವರೇ ಎಂದು ಶೌಕರ್‌ ಅಲಿ ಕಮೆಂಟ್‌ ಮಾಡಿದ್ದರೆ, ಭರತ್‌ ರೆಡ್ಡಿ ಎಂಬುವವರು, “ಕರ್ನಾಟಕದಲ್ಲಿ ಕನ್ನಡ ಓದಲು , ಬರೆಯಲು ಬಾರದ ವ್ಯಕ್ತಿ ಮಂತ್ರಿಯಾಗಲು ಅನರ್ಹ..!” ಎಂದು ಕಿಡಿಕಾರಿದ್ದಾರೆ.

ಶತ್ರುಗ್ನ ಎಂಬುವವರು ಟ್ವೀಟ್‌ ಮಾಡಿ, “ಇನ್ನು 20 ವರ್ಷಗಳಾದರೂ ಅವರು ಕನ್ನಡ ಕಲಿಯುವುದಿಲ್ಲ. ಕಾಂಗ್ರೆಸ್ ಪಕ್ಷ ಅವರಿಗೆ ಕನ್ನಡ ಕಲಿಯಲು ಹೇಳುವುದೂ ಇಲ್ಲ” ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಕರ್ನಾಟಕ ರಾಜ್ಯ ಸರ್ಕಾರಿ ನೌಕರರಿಗೆ ಕಡ್ಡಾಯ ಕನ್ನಡ ಪರೀಕ್ಷೆ ಪಾಸ್‌ ಮಾಡಿದರೆ ಮಾತ್ರ ಮುಂಬಡ್ತಿ. ಇದು ರಾಜಕಾರಣಿಗಳಿಗೆ ಅನ್ವಯವಾಗುತ್ತದೆಯೇ? ಕನ್ನಡ ಬರೆಯಲು, ಓದಲು ಬರದಿದ್ದರೆ ಮಂತ್ರಿ ಭಾಗ್ಯ ಕೊಡಬಾರದು ಎಂದು ದೀಪಕ್‌ ಎಂಬುವವರು ಟ್ವೀಟ್‌ ಮಾಡಿದ್ದಾರೆ.

ಕನ್ನಡದಲ್ಲಿ ಟ್ವೀಟ್‌ ಮಾಡಿದ್ದ ಜಮೀರ್‌- ನೆಟ್ಟಿಗರ ತರಾಟೆ

ಭಾರತೀಯ ಸಂವಿಧಾನದಲ್ಲಿ ನಿಜವಾದ ಶ್ರದ್ಧೆ ಮತ್ತು ನಿಷ್ಠೆ ಹೊಂದಿರುತ್ತೇನೆಂದು, ಭಾರತದ ಸಾರ್ವಭೌಮತ್ವ ಮತ್ತು ಅಖಂಡತೆಯನ್ನು ಎತ್ತಹಿಡಿಯುತ್ತೇನೆಂದು, ಸಚಿವನಾಗಿ ನನ್ನ ಕರ್ತವ್ಯಗಳನ್ನು ಶ್ರದ್ಧಾಪೂರ್ವಕವಾಗಿ ಮತ್ತು ಅಂತಃಕರಣಪೂರ್ವಕವಾಗಿ ನಿರ್ವಹಿಸುತ್ತೇನೆಂದು ದೇವರ ಮತ್ತು ನನ್ನ ತಾಯಿಯ ಹೆಸರಿನಲ್ಲಿ ಪ್ರಮಾಣ ಮಾಡಿದ್ದೇನೆ ಎಂದು ಸಚಿವ ಜಮೀರ್‌ ಅಹ್ಮದ್‌ ಖಾನ್‌ ಟ್ವೀಟ್‌ ಮಾಡಿದ್ದರು.

ಇದಕ್ಕೆ ನೆಟ್ಟಿಗರಿಂದ ತರಹೇವಾರು ಪ್ರತಿಕ್ರಿಯೆಗಳು ಬಂದಿವೆ. ಇದನ್ನು ಸ್ಟೇಜ್ ಮೇಲೆ ಹೇಳ್ಬೇಕು ತಾನೆ? ಎಂದು ಭಲೇ ಬಸವ ಎಂಬುವವರು ಟ್ವೀಟ್‌ ಮಾಡಿದ್ದಾರೆ. ಇನ್ನು ಆಕಾಶ್‌ ಆರ್.‌ ಪಾಟೀಲ್‌ ಎಂಬುವವರು ಕಮೆಂಟ್‌ ಮಾಡಿದ್ದು, “ಅಣ್ಣಪ್ಪ ಕನ್ನಡದಲ್ಲಿ ಟ್ವೀಟ್ ಮಾಡಿದ್ರೆ ತಮಗೆ ಕನ್ನಡಾಭಿಮಾನ ಇದೆ ಎಂದಲ್ಲ, 15 ವರ್ಷದ ಕೆಳಗೆ ಅದೇ ವೇದಿಕೆಯಲ್ಲಿ ಇಂಗ್ಲಿಷ್‌ನಲ್ಲಿ ಪ್ರಮಾಣವಚನ ಸ್ವೀಕರಿಸಿ ಸದನದಲ್ಲಿ ಕ್ಷಮೆ ಯಾಚಿಸಿದ್ದು ಯಾರು ಮರೆಯೋಲ್ಲ., ಇಷ್ಟು ವರ್ಷವಾದರೂ ಕನ್ನಡ ಕಲಿತಿಲ್ಲವೆಂದರೆ ನಾಚಿಕೆಯಾಗಬೇಕು ನಿಮಗೆ..” ಎಂದು ಹೇಳಿದ್ದಾರೆ.

ಇದನ್ನೂ ಓದಿ: Child Death: ನೆಲಮಂಗಲದಲ್ಲಿ ಟರ್ಪೆಂಟೈನ್ ಆಯಿಲ್ ಕುಡಿದು 2 ವರ್ಷದ ಮಗು ಸಾವು

ನಾಗಾರ್ಜುನ್‌ ಎಂಬುವವರು ಕಮೆಂಟ್‌ ಮಾಡಿ, “ಕನ್ನಡ ಲಿಪಿ ಸರಿಯಾಗಿ ಓದೋಕೆ ಬರಲ್ಲ ಅಂದ್ರೆ , ಅದನ್ನೇ ಓದೋಕೆ ಬರುವ ಭಾಷೆಯಲ್ಲಿ ಬರೆಸಿಕೊಂಡು ಅಚ್ಚುಕಟ್ಟಾಗಿ ಓದಬಹುದಿತ್ತು ಅಲ್ವಾ?” ಎಂದು ಪ್ರಶ್ನೆ ಮಾಡಿದ್ದಾರೆ.

Exit mobile version