Site icon Vistara News

ರಾಜ್ಯಾದ್ಯಂತ ಮಳೆ ಆರ್ಭಟ: ಹೈ ಅಲರ್ಟ್‌ ಘೋಷಣೆ, ದಕ್ಷಿಣ ಕನ್ನಡದಲ್ಲಿ ಶಾಲೆಗಳಿಗೆ ರಜೆ

ರಾಜ್ಯಾದ್ಯಂತ ಮಳೆರಾಯನ ಆರ್ಭಟದ

ಬೆಂಗಳೂರು: ರಾಜ್ಯದ ಕರಾವಳಿ ತಾಲೂಕುಗಳು, ವಿಜಯನಗರ, ಮಂಡ್ಯ ಸೇರಿ ರಾಜ್ಯಾದ್ಯಂತ ಗುರುವಾರ ಮಳೆ ಆರ್ಭಟ ಜೋರಾಗಿತ್ತು. ಹಲವಾರು ಕಡೆಗಳಲ್ಲಿ ಹವಾಮಾನ ಇಲಾಖೆ ಮನ್ನೆಚ್ಚರಿಕೆ ಕ್ರಮವಾಗಿ ಹೈ ಅಲರ್ಟ್‌ ಘೋಷಿಸಿದೆ. ದಕ್ಷಿಣ ಕನ್ನಡದಲ್ಲಿ ಶುಕ್ರವಾರ ಶಾಲಾ ಕಾಲೇಜುಗಳಿಗೆ ರಜೆ ಘೋಷಣೆ ಮಾಡಲಾಗಿದೆ.

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲಾದ್ಯಂತ ಭಾರೀ ಮಳೆ‌ಯಾಗಿದೆ. ಮಳೆಯಿಂದ ರಾಷ್ಟ್ರೀಯ ಹೆದ್ದಾರಿ ಸೇರಿದಂತೆ ತಗ್ಗು ಪ್ರದೇಶಗಳು ಜಲಾವೃತವಾಗಿವೆ. ಮಳೆ ನೀರು ನಿಂತ ಪರಿಣಾಮ ಹೆದ್ದಾರಿ 73 ಹಾಗೂ 66ರಲ್ಲಿ ವಾಹನ ಸವಾರರು ಪರದಾಡಬೇಕಾಯಿತು. ಮಂಗಳೂರು ನಗರ ವ್ಯಾಪ್ತಿಯ ಕೊಟ್ಟಾರ, ಪಡೀಲ್, ಅಳಪೆ ಮೊದಲಾದ ಪ್ರದೇಶಗಳಲ್ಲಿ ಮನೆಗಳಿಗೆ ನೀರು ಹೋಗಿ ಸಮಸ್ಯೆಯನ್ನು ಉಂಟುಮಾಡಿದೆ.

ಜಿಲ್ಲಾಧಿಕಾರಿ ಡಾ.ಕೆ.ವಿ. ರಾಜೇಂದ್ರ ಅವರು ಶಿಕ್ಷಣ ಇಲಾಖೆಯ ಅಧಿಕಾರಿಗಳಿಗೆ ತಮ್ಮ ವ್ಯಾಪ್ತಿಯ ಶಾಲಾ ಮಕ್ಕಳ ಬಗ್ಗೆ ಕಟ್ಟೆಚ್ಚರ ವಹಿಸಿ ಎಂದು ಸೂಚಿಸಿದ್ದರು. ಶಾಲೆಗೆ ಬಂದ ಮಕ್ಕಳನ್ನು ಸುರಕ್ಷಿತವಾಗಿ ಮನೆಗೆ ತಲುಪಿಸಲೂ ಸೂಚನೆ ನೀಡಿದ್ದರು.

ರಾಜ್ಯಾದ್ಯಂತ ಮಳೆರಾಯನ ಆರ್ಭಟದ

ಪುತ್ತೂರು ತಾಲೂಕಿನ ಕಾಸರಗೋಡು ಸಂಪರ್ಕ ರಸ್ತೆಯಲ್ಲಿ ಸೇತುವೆ ಮುಳುಗಡೆಯಾಗಿ ರಸ್ತೆ ಸಂಚಾರ ಸ್ಥಗಿತಗೊಂಡಿದೆ. ಪುತ್ತೂರು ಪರ್ಲಡ್ಕ ಪಾಣಾಜೆ ರಸ್ತೆಯ ಚೆಲ್ಯಡ್ಕ ಸೇತುವೆ ಬೆಳಗಿನ ಜಾವದಿಂದಲೇ ಮುಳುಗಡೆಯಾಗಿದೆ. ಹೀಗಾಗಿ ಈ ರಸ್ತೆಯಲ್ಲಿ ಸಾಗುವ ವಾಹನಗಳನ್ನು ಪರ್ಯಾಯ ರಸ್ತೆ ಮೂಲಕ ಕಳುಹಿಸಲಾಗುತ್ತಿದೆ. ಮುಳುಗು ಸೇತುವೆ ಎಂದೆ ಹೆಸರಾಗಿರುವ ಈ ಸೇತುವೆ ಮಳೆಗಾಲದಲ್ಲಿ ಸಾಮಾನ್ಯವಾಗಿ ನಾಲ್ಕೈದು ಬಾರಿ ಮುಳುಗಡೆ ಆಗುತ್ತದೆ.

ರಾಜ್ಯಾದ್ಯಂತ ಮಳೆರಾಯನ ಆರ್ಭಟದ

ಉಡುಪಿಯಲ್ಲಿ 24 ಗಂಟೆಯಯಲ್ಲಿ 82 ಮಿ.ಮೀ. ಮಳೆ ಆಗಿದೆ. ಕುಂದಾಪುರ ತಾಲೂಕಿನಲ್ಲಿ ಅತೀ ಹೆಚ್ಚು ಮಳೆಯಾಗಿದೆ. ಸಮುದ್ರ- ನದಿಪಾತ್ರದ ಜನರು ಕಟ್ಟೆಚ್ಚರ ವಹಿಸಲು ಸೂಚನೆ ನೀಡಲಾಗಿದೆ. ಜಿಲ್ಲೆಯಲ್ಲಿ ನಿರಂತರವಾಗಿ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ಅವಶ್ಯಕತೆ ಇರುವ ಶಾಲೆಗಳಿಗೆ ರಜೆ ಘೋಷಿಸಲು ಶಾಲಾ ಮುಖ್ಯಸ್ಥರಿಗೆ ಸಂಪೂರ್ಣ ಅಧಿಕಾರ ನೀಡಲಾಗಿದೆ ಎಂದು ಜಿಲ್ಲಾಧಿಕಾರಿ ಕೂರ್ಮಾ ರಾವ್ ತಿಳಿಸಿದ್ದಾರೆ.

ಶುಕ್ರವಾರ ಶಾಲೆಗಳಿಗೆ ರಜೆ

ಶುಕ್ರವಾರವೂ ಭಾರೀ ಮಳೆಯಾಗುವ ಮುನ್ಸೂಚನೆ ಇರುವ ಕಾರಣ ದಕ್ಷಿಣ ಕನ್ನಡದ ಶಾಲಾ ಕಾಲೇಜುಗಳಿಗೆ ಜಿಲ್ಲಾಧಿಕಾರಿ ಡಾ.ಕೆ.ವಿ. ರಾಜೇಂದ್ರ ರಜೆ ಘೋಷಿಸಿದ್ದಾರೆ. ಗುರುವಾರ ತಡವಾಗಿ ರಜೆ ಘೋಷಿಸಿದ್ದರಿಂದ ಕೆಲವೆಡೆ ಮಕ್ಕಳು ಮನೆಗೆ ತೆರಳಲು ಸಮಸ್ಯೆ ಉಂಟಾಯಿತು. ಶುಕ್ರವಾರ ಈ ಸಮಸ್ಯೆ ಆಗದಂತೆ ಮೊದಲೆ ರಜೆ ಘೋಷಣೆ ಮಾಡಲಾಗಿದೆ.

ಉತ್ತರ ಕನ್ನಡದಲ್ಲೂ ಮಳೆ

ಉತ್ತರಕನ್ನಡ ಜಿಲ್ಲೆಯ ಕರಾವಳಿ ತಾಲೂಕುಗಳಾದ ಕಾರವಾರ, ಅಂಕೋಲಾ, ಕುಮಟಾ, ಹೊನ್ನಾವರ, ಭಟ್ಕಳದಲ್ಲಿ ಎಡೆಬಿಡದೇ ಮಳೆ ಸುರಿಯುತ್ತಿದೆ.

ಕಾರವಾರ 14.6 ಮಿ.ಮೀ, ಅಂಕೋಲಾ 23.6 ಮಿ.ಮೀ, ಕುಮಟಾ 37.8 ಮಿ.ಮೀ, ಹೊನ್ನಾವರ 43.4 ಮಿ.ಮೀ, ಭಟ್ಕಳ 48.2 ಮಿ.ಮೀ ಹೀಗೆ ಜಿಲ್ಲೆಯಲ್ಲಿ ಕಳೆದ 24 ಗಂಟೆಗಳಲ್ಲಿ ಒಟ್ಟು 235.8 ಮಿ.ಮೀ ಮಳೆ ಸುರಿದಿದೆ. ಘಟ್ಟದ ಮೇಲಿನ ತಾಲೂಕುಗಳಲ್ಲೂ ನಿರಂತರವಾಗಿ ಮಳೆ ಸುರಿಯುತ್ತಿರುವ ಪರಿಣಾಮ ಹಳ್ಳ-ಕೊಳ್ಳಗಳು ತುಂಬಿ ಹರಿಯುತ್ತಿದೆ. ಕರಾವಳಿಯಲ್ಲಿ ಎರಡು ದಿನಗಳ ಕಾಲ ಹವಾಮಾನ ಇಲಾಖೆ ಆರೆಂಜ್ ಅಲರ್ಟ್ ಹಾಗೂ ಜುಲೈ 1 ರಿಂದ 3ರ ವರೆಗೆ ಯೆಲ್ಲೋ ಅಲರ್ಟ್ ಘೋಷಣೆ ಮಾಡಿದೆ.

ರಾಜ್ಯಾದ್ಯಂತ ಮಳೆರಾಯನ ಆರ್ಭಟದ

ಮಂಡ್ಯ: ಮಂಡ್ಯದ ವಿವಿಧೆಡೆ ಸುರಿದ ಭಾರಿ ಮಳೆ ಸುರಿಯುತ್ತಿರುವ ಪರಿಣಾಮ ಮಳೆಯಿಂದ ವಾಹನ ಸಂಚಾರ ಅಸ್ತವ್ಯಸ್ತವಾಗಿತ್ತು. ಗುರುವಾರ ರಾತ್ರಿ ಮತ್ತು ಶುಕ್ರವಾರ ಮತ್ತಷ್ಟು ಹೆಚ್ಚಿನ ಪ್ರಮಾಣದಲ್ಲಿ ಮಳೆ ಬೀಳುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಸೂಚನೆ ನೀಡಿದೆ.

ವಿಜಯನಗರ: ಹೊಸಪೇಟೆಯಲ್ಲಿ ಸರಿಸುಮಾರು ಒಂದು ಗಂಟೆ ಸುರಿದ ಭಾರೀ ಮಳೆಯಿಂದ ಕೆಲ ರಸ್ತೆಗಳು ಕೆರೆಯಂತಾಗಿವೆ. ಪಟೇಲ್ ನಗರ, ಬಸವೇಶ್ವರ ಬಡಾವಣೆ ರಸ್ತೆಗಳು ಜಲಾವೃತವಾಗಿದ್ದು, ಒಳ ಚರಂಡಿ ನೀರು ರಸ್ತೆಗೆ ನುಗ್ಗಿ ಅವಾಂತರ ಸೃಷ್ಟಿಸಿದೆ. ಮಳೆ ನೀರು ರಸ್ತೆಗೆ ನುಗ್ಗಿದದ್ರಿಂದ ವಾಹನ ಸವಾರರ ಪರದಾಡಬೇಕಾಯಿತು.

ಹೊಸಪೇಟೆ ತಾಲೂಕಿನ‌ ವಿಶ್ವವಿಖ್ಯಾತ ಹಂಪಿಯಲ್ಲಿ ಆಗಮನವಾಗಿದೆ. ಹಂಪಿ‌ ಸುತ್ತಮುತ್ತದ ಸ್ಮಾರಕಗಳು ಮಳೆ ನೀರಿನಲ್ಲಿ ಮುಳುಗಿ ಹೋಗಿವೆ. ಮಳೆ ನಿಂತು ಹೋದಮೇಲೆ ಗೋಪುರಗಳ ಪ್ರತಿಬಿಂಬ ನೀರಿನಲ್ಲಿ ಕಾಣಿಸುತ್ತಿದೆ.

ರಾಜ್ಯಾದ್ಯಂತ ಮಳೆರಾಯನ ಆರ್ಭಟದ

ಮಳೆಯಿಂದ ಉಂಟಾದ ಸಣ್ಣ ಸಣ್ಣ ಝರಿಗಳ ಮಧ್ಯೆ ಹೆಚ್ಚಾದ ಹಂಪಿಯ ಸೌಂದರ್ಯವು ಮತ್ತಷ್ಟು ಹೆಚ್ಚಾಗಿದೆ. ಸ್ಥಳೀಯರು ಈ ದ್ರಶ್ಯವನ್ನು ಕ್ಯಾಮೆರಾದಲ್ಲಿ ಸೆರೆ ಹಿಡಿದ್ದಿದ್ದಾರೆ.

ಇದನ್ನೂ ಓದಿ: Weather Report | ರಾಜ್ಯಾದ್ಯಂತ ಗುರುವಾರ ಭಾರಿ ಮಳೆ ಸಾಧ್ಯತೆ; ಹವಾಮಾನ ಇಲಾಖೆ ಮುನ್ಸೂಚನೆ

Exit mobile version