Site icon Vistara News

Steel production | 4-5 ವರ್ಷಗಳಲ್ಲಿ ಕರ್ನಾಟಕ ವಿಶ್ವದ ಅತಿ ದೊಡ್ಡ ಉಕ್ಕು ಉತ್ಪಾದಿಸುವ ರಾಜ್ಯವಾಗಲಿದೆ: ಸಿಎಂ

Steel production

ಬೆಂಗಳೂರು: ಕರ್ನಾಟಕದಲ್ಲಿ ಅತಿ ದೊಡ್ಡ ಕಬ್ಬಿಣ ಮತ್ತು ಉಕ್ಕು ಕಾರ್ಖಾನೆ ಇದ್ದು, ಮುಂದಿನ 4-5 ವರ್ಷಗಳಲ್ಲಿ ವಿಶ್ವದ ಅತಿ ದೊಡ್ಡ ಉಕ್ಕು ಉತ್ಪಾದನೆ (Steel production) ಮಾಡುವ ರಾಜ್ಯವಾಗಲಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.

ಭಾರತ ಸರ್ಕಾರದ ಕಲ್ಲಿದ್ದಲು ಮತ್ತು ಗಣಿ ಸಚಿವಾಲಯದಿಂದ ನಗರದಲ್ಲಿ ಶನಿವಾರ ಹಮ್ಮಿಕೊಂಡಿದ್ದ ವಾಣಿಜ್ಯ ಕಲ್ಲಿದ್ದಲು ಗಣಿ ಹರಾಜು ಮತ್ತು ಗಣಿಗಾರಿಕೆ ವಲಯದಲ್ಲಿನ ಅವಕಾಶಗಳ ಕುರಿತ ಹೂಡಿಕೆದಾರರ ಸಮಾವೇಶದಲ್ಲಿ ಮಾತನಾಡಿದರು.

ಒಡಿಶಾ ಗಣಿಗಾರಿಕೆಯ ರಾಜ್ಯವಾಗಿದೆ. ಅಲ್ಲಿ ಗಣಿಗಾರಿಕೆ ಪ್ರಮುಖ ಉದ್ಯಮ, ಅದನ್ನು ಬೇರೆ ರಾಜ್ಯಗಳಿಗೆ ಹೋಲಿಕೆ ಮಾಡುವುದು ಸರಿಯಲ್ಲ. ಅಲ್ಲಿನ ನೀತಿಗಳನ್ನೇ ಇತರ ರಾಜ್ಯಗಳಿಗೆ ಅನ್ವಯಿಸುವುದು ಕೂಡ ಸೂಕ್ತವಲ್ಲ. ರಾಜ್ಯದಲ್ಲಿರುವ ಗುಣಮಟ್ಟದ ಗಣಿಗಳಿಂದ ಮಾತ್ರ ಉತ್ಪಾದನೆ ಸಾಧ್ಯವಾಗಲಿದೆ. ಇಂಧನ, ಗಣಿ ಹಾಗೂ ಉಕ್ಕು ಸಚಿವಾಲಯಗಳು ತಂತ್ರಜ್ಞಾನವನ್ನು ಬಳಕೆ ಮಾಡಬೇಕು ಹಾಗೂ ಬೇಡಿಕೆಯಲ್ಲಿರುವ ಖನಿಜಗಳ ಉತ್ಪಾದನೆಗೆ ತೊಡಗಬೇಕು ಎಂದು ಸಿಎಂ ಹೇಳಿದರು.

ಇದನ್ನೂ ಓದಿ | CT Ravi v/s Siddaramaiah | ಸಿದ್ರಾಮುಲ್ಲಾ ಖಾನ್‌ ಹೇಳಿಕೆ ಸರಿ: ಸಿ.ಟಿ. ರವಿ ಬೆಂಬಲಕ್ಕೆ ನಿಂತ ಅಶ್ವತ್ಥನಾರಾಯಣ

ನಿಯಮಗಳ ಸರಳೀಕರಣ
ಅನೇಕ ಗಣಿ ಕಂಪನಿಗಳು ಕೋಲಾರ ಚಿನ್ನದ ಗಣಿಯನ್ನು ಮರು ಆರಂಭಿಸಲು ಮನವಿ ಸಲ್ಲಿಸಿವೆ. ಗಣಿ ನೀತಿಯಲ್ಲಿ
ರಾಜ್ಯ ಸರ್ಕಾರ ನಿಯಮಗಳನ್ನು ಸರಳೀಕರಣಗೊಳಿಸಿದೆ‌. ಗಣಿ ಉದ್ಯಮಿಗಳು ರಾಜ್ಯದ ಗಣಿಗಾರಿಕೆ ಕ್ಷೇತ್ರದಲ್ಲಿ ಹೆಚ್ಚಿನ ಹೂಡಿಕೆ ಮಾಡುವ ಮೂಲಕ ರಾಜ್ಯದ ಆದಾಯ ವೃದ್ಧಿಗೆ ಕೊಡುಗೆ ನೀಡಬೇಕು. ವೈಜ್ಞಾನಿಕವಾಗಿ ಗಣಿಗಾರಿಕೆ ಮಾಡದಿದ್ದರೆ, ಉತ್ಪಾದನೆ ಹೆಚ್ಚಳ ಆಗುವುದಿಲ್ಲ ಹಾಗೂ ಭವಿಷ್ಯಕ್ಕೆ ಉಳಿಯುವುದೂ ಇಲ್ಲ. ಅನ್ವೇಷಣೆ ಮಾಡಿದರೆ ದೇಶ ಹಾಗೂ ದೇಶದ ಆರ್ಥಿಕತೆಗೆ ಹಾಗೂ ಸಮಾಜಕ್ಕೆ ಒಳ್ಳೆಯದಾಗುತ್ತದೆ.‌ ಶೋಷಣೆ ಮಾಡಿದರೆ ಭವಿಷ್ಯದಿಂದ ಕಳವು ಮಾಡಿದಂತಾಗುತ್ತದೆ ಎಂದು ಸಿಎಂ ಬೊಮ್ಮಾಯಿ ಹೇಳಿದರು.

ಇಂಧನ ದೇಶದ ಅಭಿವೃದ್ಧಿಗೆ ಪೂರಕವಾಗಿದೆ. ನವೀಕರಿಸಬಹುದಾದ ಇಂಧನ ಕ್ಷೇತ್ರದ ಇತಿಮಿತಿಗಳನ್ನು ಮೀರಿ ಬೆಳೆಯುತ್ತಿದೆ. ಕರ್ನಾಟಕ 2.5 ಲಕ್ಷ ಕೋಟಿ ರೂ ಮುಂದಿನ 3 ವರ್ಷದಲ್ಲಿ ನವೀಕರಣ‌ ಇಂಧನದಲ್ಲಿ ಬಂಡವಾಳ ಹೂಡಿಕೆ ಮಾಡಲಿದೆ. ಕರ್ನಾಟಕ ಅತಿ ಹೆಚ್ಚು ನವೀಕರಿಸಬಹುದಾದ ಇಂಧನ ಉತ್ಪಾದಿಸುವ ರಾಜ್ಯವಾಗಿದೆ. ಹೈಡ್ರೋಜನ್ ಇಂಧನ ಹಾಗೂ ಕಡಲಿನಿಂದ ಅಮೋನಿಯಾ ಉತ್ಪಾದನೆಗೆ 2 ಲಕ್ಷ ಕೋಟಿ ರೂ.ಗಳ ಹೂಡಿಕೆ ಆಗುತ್ತಿದೆ. ಸಮೃದ್ಧ ಗಣಿಮೂಲಗಳನ್ನು ಹೊಂದಿರುವ ರಾಜ್ಯ ನಮ್ಮದು. ಚಿನ್ನ, ಬ್ರೋಮೈಡ್, ನಿಕಲ್ ಮುಂತಾದ ಖನಿಜಗಳನ್ನು ಹೊಂದಿದೆ. ನಾವು ಉತ್ತಮ ಗಣಿ ನೀತಿ ಹೊಂದಿದ್ದೇವೆ. ಸರ್ಕಾರ ಹೂಡಿಕೆದಾರರ ಜತೆಗೆ ಹೆಗಲಿಗೆ ಹೆಗಲು ಕೊಟ್ಟು ನಿಲ್ಲಲಿದೆ ಎಂದು ಸಿಎಂ ಭರವಸೆ ನೀಡಿದರು.

ಕಲ್ಲಿದ್ದಲು ಹಾಗೂ ಕಬ್ಬಿಣ ಮತ್ತು ಉಕ್ಕು ಅತ್ಯಂತ ಮಹತ್ವದ ಗಣಿ ಉದ್ಯಮಗಳಾಗಿವೆ. ಕಲ್ಲಿದ್ದಲು ಗಣಿಗಾರಿಕೆಯಲ್ಲಿ ದೇಶದಲ್ಲಿ ಉತ್ತಮ ಸಾಧನೆ ಮಾಡಿದ್ದು, ಕೇಂದ್ರ ಗಣಿ ಸಚಿವ ಪ್ರಲ್ಹಾದ್‌ ಜೋಶಿ ಅವರ ನೇತೃತ್ವದಲ್ಲಿ ನಾಲ್ಕೈದು ವರ್ಷಗಳಲ್ಲಿ ಕಲ್ಲಿದ್ದಲಿನ ಉತ್ಪಾದನೆ ಹೆಚ್ಚಾಗಿದೆ. 500 ಮಿಲಿಯನ್ ಮೆಟ್ರಿಕ್ ಟನ್ ಉತ್ಪಾದನೆಯನ್ನು ಮುಂದಿನ 3- 4 ವರ್ಷಗಳಲ್ಲಿ ಮಾಡಲಿದ್ದು, ಉತ್ಪಾದನೆ ಶೀಘ್ರವೇ ಪ್ರಾರಂಭವಾಗಲಿದೆ. ಕಲ್ಲಿದ್ದಲು ಗಣಿಗಾರಿಕೆಯ ಇತಿಹಾಸದಲ್ಲಿಯೇ ಇದು ಅತ್ಯಂತ ಹೆಚ್ಚಿನ ಉತ್ಪಾದನೆಯಾಗಲಿದೆ. ಇದಕ್ಕಾಗಿ ಅವರನ್ನು ಅಭಿನಂದಿಸುವುದಾಗಿ ಸಿಎಂ ಬೊಮ್ಮಾಯಿ ತಿಳಿಸಿದರು.

ಗಣಿಗಾರಿಕೆಯಲ್ಲಿ ಗರಿಷ್ಠ ಉತ್ಪಾದನೆ
ಭಾರತ 5 ಟ್ರಿಲಿಯನ್ ಡಾಲರ್ ಆರ್ಥಿಕತೆಯನ್ನು ಸಾಧಿಸಲು ಇದು ನಮಗೆ ಸಹಾಯಕವಾಗಲಿದೆ. ಭಾರತವನ್ನು ಆರ್ಥಿಕತೆಯ ಶಕ್ತಿ ಕೇಂದ್ರವಾಗಿಸಲು ಕಲ್ಲಿದ್ದಲು ಗಣಿಗಾರಿಕೆಯಲ್ಲಿ ಗರಿಷ್ಠ ಉತ್ಪಾದನೆಯನ್ನು ನಿಗದಿತ ಸಮಯದಲ್ಲಿ ಮಾಡಬೇಕಿದೆ. ಕಬ್ಬಿಣ ಮತ್ತು ಉಕ್ಕಿನ ಗಣಿಗಾರಿಕೆ ವಿಚಾರದಲ್ಲಿ ಸುಪ್ರೀಂ ಕೋರ್ಟ್ ಕೆಲವು ಮಾರ್ಗಸೂಚಿಗಳನ್ನು‌ ನೀಡಿದ್ದು, ಅದರಂತೆ ಗಣಿಗಾರಿಕೆ ನಡೆಸಲು ಅವಕಾಶ ನೀಡಲಾಗುತ್ತಿದೆ. ಹರಾಜು ಪ್ರಕ್ರಿಯೆಯನ್ನು ದಕ್ಷ ಹಾಗೂ ಪಾರದರ್ಶಕವಾಗಿ ಕೈಗೊಳ್ಳಲು ಸೂಚಿಸಲಾಗಿದೆ. ಹರಾಜು ಪ್ರಕ್ರಿಯೆಯನ್ನು ದೊಡ್ಡ ಮಟ್ಟದಲ್ಲಿ ಕೈಗೊಳ್ಳುವ ಭರವಸೆ ಇದೆ. 16 ಬ್ಲಾಕ್‌ಗಳ ಹರಾಜು ಪ್ರಕ್ರಿಯೆ ತಕ್ಷಣದಲ್ಲಿ ಆಗಲಿದ್ದು ಇನ್ನೂ 25 ಬ್ಲಾಕ್‌ಗಳ ಹರಾಜು ಶೀಘ್ರವೇ ಆಗಲಿದೆ ಎಂದರು.

ಕೇಂದ್ರ ಕಲ್ಲಿದ್ದಲು ಸಚಿವ ಪ್ರಲ್ಹಾದ್‌ ಜೋಶಿ, ಗಣಿ ಮತ್ತು ಭೂವಿಜ್ಞಾನ ಸಚಿವ ಹಾಲಪ್ಪ ಆಚಾರ್, ಕೇಂದ್ರ ಕಲ್ಲಿದ್ದಲು ಮತ್ತು ಗಣಿ ಇಲಾಖೆ ಕಾರ್ಯದರ್ಶಿ ಅಮೃತ್ ಲಾಲ್ ಮೀನಾ, ಸಂಜಯ್ ಮೊದಲಾದವರು ಉಪಸ್ಥಿತರಿದ್ದರು.

ಇದನ್ನೂ ಓದಿ | ಧಖCT Ravi | ದೇಶದ್ರೋಹಿಗಳ ಪಾಲಿಗೆ ನರೇಂದ್ರ ಮೋದಿ ಭಸ್ಮಾಸುರ, ಉಳಿದವರಿಗೆ ಕಲ್ಪವೃಕ್ಷ, ಕಾಮಧೇನು ಎಂದ ಸಿಟಿ ರವಿ

Exit mobile version