ವಿಜಯನಗರ: ಕೊಟ್ಟೂರು ತಾಲೂಕಿನ ಕಾಳಾಪುರ ಗ್ರಾಮದಲ್ಲಿ ಕಲ್ಲು ತೂರಾಟ ಪ್ರಕರಣ (Stone Pelting) ಸಂಬಂಧ ಕೊಟ್ಟೂರು ಠಾಣೆಯಲ್ಲಿ ಮೂರು ಎಫ್‌ಐಆರ್ ದಾಖಲಾಗಿದ್ದು, 12 ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಹಾಗೆಯೇ ಶನಿವಾರ ಪ್ರಕರಣ ನಡೆದಾಗ ಪೊಲೀಸ್ ಪೇದೆ ಮೇಲೆ ಹಲ್ಲೆ ನಡೆಸಿ ಕರ್ತವ್ಯಕ್ಕೆ ಅಡ್ಡಿಪಡಿಸಿದ ಆರೋಪದಲ್ಲಿ ಒಬ್ಬ ವ್ಯಕ್ತಿ ವಿರುದ್ಧ ಪ್ರತ್ಯೇಕ ಪ್ರಕರಣ ದಾಖಲಾಗಿದೆ.
ಕೊಟ್ಟೂರು ಪಟ್ಟಣದಲ್ಲಿ ತರಳಬಾಳು ಹುಣ್ಣಿಮೆ ನಿಮಿತ್ತ ಶನಿವಾರ ಸಿರಿಗೆರೆ ಮಠದ ಭಕ್ತರು ಸಿರಿಗೆರೆಯಿಂದ ಕೊಟ್ಟೂರು ತನಕ ಶನಿವಾರ ಬೈಕ್ ರ‍್ಯಾಲಿ ಹಮ್ಮಿಕೊಂಡಿದ್ದರು. ಬೈಕ್ ರ‍್ಯಾಲಿಯಲ್ಲಿ ಕೆಲ ದುಷ್ಕರ್ಮಿಗಳು ಕಾಳಾಪುರ ಗ್ರಾಮಕ್ಕೆ ಬರುತ್ತಲೇ ಏಕಾಏಕಿ ಗ್ರಾಮಸ್ಥರ ಮನೆ ಮೇಲೆ ದಾಳಿಮಾಡಿದ್ದರು. ಕೊಟ್ಟೂರು ತಾಲೂಕು ಉಜ್ಜಿನಿ ಪೀಠ, ಚಿತ್ರದುರ್ಗ ಜಿಲ್ಲೆಯ ಸಿರಿಗೆರೆ ತರಳಬಾಳು ಮಠದ ಪೀಠದ ನಡುವಿನ ಭಿನ್ನಾಭಿಪ್ರಾಯ ಘಟನೆಗೆ ಕಾರಣವಾಗಿತ್ತು. ಘಟನೆಯಲ್ಲಿ ಹಲವರು ಗಾಯಗೊಂಡು, ನಾಲ್ಕು ಮನೆಗಳಿಗೆ ಹಾನಿಯಾಗಿತ್ತು.
ಇದನ್ನೂ ಓದಿ | Stone Pelting: ಕೊಟ್ಟೂರಿನಲ್ಲಿ ಕಲ್ಲು ತೂರಾಟ, ವಾಹನಗಳಿಗೆ ಬೆಂಕಿ; ನಾಲ್ವರಿಗೆ ಗಾಯ, 4 ಮನೆಗಳಿಗೆ ಹಾನಿ
ಸುಮಾರು 20-22 ಜನರಿಗೆ ಗಾಯ
ಕೊಟ್ಟೂರು ತಾಲೂಕಿನ ಕಾಳಾಪುರ ಗ್ರಾಮದಲ್ಲಿ ನಡೆದ ಗಲಾಟೆ ಪ್ರಕರಣದ ಬಗ್ಗೆ ವಿಜಯನಗರ ಜಿಲ್ಲಾಧಿಕಾರಿ ವೆಂಕಟೇಶ್ ಹಂಪಿಯಲ್ಲಿ ಪ್ರತಿಕ್ರಿಯಿಸಿದ್ದಾರೆ. ಕಾಳಾಪುರ ಗ್ರಾಮಕ್ಕೆ ನಾನು ಭೇಟಿ ನೀಡಿ ಪರಿಶೀಲಿಸಿದ್ದೇನೆ. ಸುಮಾರು 20-22 ಮಂದಿಗೆ ಗಾಯಗಳಾಗಿದ್ದು, ಹಾನಿಯಾಗಿರುವ ಮನೆಗಳಿಗೆ ಭೇಟಿ ಪರಿಶೀಲನೆ ನಡೆಸಲಾಗಿದೆ ಎಂದು ತಿಳಿಸಿದ್ದಾರೆ.
ಕಲ್ಲು ತೂರಾಟದಲ್ಲಿ ಎಷ್ಟು ಮನೆಗಳು ಹಾನಿಯಾಗಿವೆ, ಎಷ್ಟು ವಾಹನಗಳು ಹಾನಿಯಾಗಿವೆ ಎಂದು ಸಮೀಕ್ಷೆ ಮಾಡಲು ಸೂಚಿಸಲಾಗಿದೆ. ಎಸ್‌ಪಿ ಅವರು ಸ್ಥಳದಲ್ಲೇ ಇದ್ದು, ಪರಿಸ್ಥಿತಿ ನಿಯಂತ್ರಣದಲ್ಲಿದೆ. ಸುಮಾರು 20-22 ಜನರಿಗೆ ಗಾಯಗಳಾಗಿವೆ. ಕೆಲವರಿಗೆ ಸಣ್ಣ ಪುಟ್ಟ ಗಾಯಗಳಾಗಿವೆ, ಕೆಲವರು ಆಸ್ಪತ್ರೆಗೆ ಸೇರಿದ್ದಾರೆ. ಒಬ್ಬರನ್ನು ದಾವಣಗೆರೆ ಆಸ್ಪತ್ರೆಗೆ ರವಾನಿಸಲಾಗಿದ್ದು, ಅವರು ಚೇತರಿಸಿಕೊಂಡಿದ್ದಾರೆ ಎಂದು ಮಾಹಿತಿ ನೀಡಿದರು.