ಬೆಂಗಳೂರು: ತುಮಕೂರು ಜಿಲ್ಲೆ ಕೊರಟಗೆರೆ ತಾಲೂಕಿನ ಭೈರೇನಹಳ್ಳಿಯಲ್ಲಿ ಶುಕ್ರವಾರ ಚುನಾವಣೆ (Karnataka Election) ಪ್ರಚಾರ ಮಾಡುವಾಗ ದುಷ್ಕರ್ಮಿಯೊಬ್ಬ ಕಾಂಗ್ರೆಸ್ ನಾಯಕ, ಮಾಜಿ ಡಿಸಿಎಂ ಡಾ.ಜಿ.ಪರಮೇಶ್ವರ್ ಮೇಲೆ ಕಲ್ಲೆಸೆದಿದ್ದು, ಅವರ ತಲೆಗೆ ಗಂಭೀರ ಗಾಯವಾಗಿದೆ. ತುಮಕೂರಿನ ಸಿದ್ಧಾರ್ಥ ಆಸ್ಪತ್ರೆಯಲ್ಲಿ ಅವರಿಗೆ ಚಿಕಿತ್ಸೆ ನೀಡಲಾಗಿದ್ದು, ಸದ್ಯ ಮನೆಯಲ್ಲಿ ವಿಶ್ರಾಂತಿ ಪಡೆಯುತ್ತಿದ್ದಾರೆ. ಇದರ ಬೆನ್ನಲ್ಲೇ, ಕಲ್ಲೆಸೆತ ಪ್ರಕರಣಕ್ಕೆ ಸಂಬಂಧಿಸಿದಂತೆ ಬಿಜೆಪಿ ವಿರುದ್ಧ ಕಾಂಗ್ರೆಸ್ ಆಕ್ರೋಶ ವ್ಯಕ್ತಪಡಿಸಿದೆ. “ದಲಿತ ನಾಯಕರ ಮೇಲೆ ಬಿಜೆಪಿಗೆ ಏಕಿಷ್ಟು ಸಿಟ್ಟು” ಎಂದು ಕಾಂಗ್ರೆಸ್ ಪ್ರಶ್ನಿಸಿದೆ.
“ಜಿ.ಪರಮೇಶ್ವರ್ ಅವರ ಮೇಲೆ ಷಡ್ಯಂತ್ರ ರೂಪಿಸಿ ಕಲ್ಲು ತೂರಿದ ಘಟನೆಯು ಕರ್ನಾಟಕವೇ ತಲೆತಗ್ಗಿಸುವಂಥದ್ದಾಗಿದೆ. ವಿರೋಧ ಪಕ್ಷಗಳ ನಾಯಕರ ಮೊದಲಿಂದಲೂ ಮೇಲೆ ವ್ಯವಸ್ಥಿತವಾಗಿ ದಾಳಿ ನಡೆಸಲಾಗುತ್ತಿದೆ. ಇದು ಅಮಿತ್ ಶಾ ಅವರ “ಗಲಭೆ ನಡೆಯುತ್ತದೆ” ಎಂಬ ಎಚ್ಚರಿಕೆಯ ಹಿಂದಿನ ಪೂರ್ವಭಾವಿ ತಯಾರಿಗಳೇ? ದಲಿತ ನಾಯಕರ ಮೇಲೆ ಬಿಜೆಪಿಗೆ ಏಕಿಷ್ಟು ದ್ವೇಷ” ಎಂದು ಟ್ವಿಟರ್‌ನಲ್ಲಿ ಕಾಂಗ್ರೆಸ್ ಪ್ರಶ್ನಿಸಿದೆ.
ಬಿಜೆಪಿ ವಿರುದ್ಧ ಕಾಂಗ್ರೆಸ್ ಆಕ್ರೋಶ
ರಾಜ್ಯದ ಸರ್ಕಾರದ ವಿರುದ್ಧವೂ ಕಾಂಗ್ರೆಸ್ ಆಕ್ರೋಶ ವ್ಯಕ್ತಪಡಿಸಿದೆ. “ಗೃಹ ಸಚಿವ ಆರಗ ಜ್ಞಾನೇಂದ್ರ ಅವರೇ, ಕಾನೂನು ಸುವ್ಯವಸ್ಥೆಯನ್ನು ಯಾವ ಹಂತಕ್ಕೆ ತಂದಿಟ್ಟಿದ್ದೀರಿ? ಸಿದ್ದರಾಮಯ್ಯ ಅವರ ಮೇಲೆ ಮೊಟ್ಟೆ ದಾಳಿ ಮಾಡಿದವರ ವಿರುದ್ಧ ಕ್ರಮ ತೆಗೆದುಕೊಂಡಿಲ್ಲ. ಡಾ.ಜಿ.ಪರಮೇಶ್ವರ್ ಅವರಿಗೆ ಸೂಕ್ತ ರಕ್ಷಣೆ ಇಲ್ಲ. ಇದೆಲ್ಲವೂ ಬಿಜೆಪಿಯ ವೈಫಲ್ಯವೋ, ಷಡ್ಯಂತ್ರವೋ? ಅಮಿತ್ ಶಾ ಅವರ ನಿರ್ದೇಶನದಂತೆ “ಗಲಭೆಯುಕ್ತ ಕರ್ನಾಟಕ” ಮಾಡಲು ತಯಾರಿಯೇ” ಎಂದು ತರಾಟೆಗೆ ತೆಗೆದುಕೊಂಡಿದೆ.
ಗೃಹ ಸಚಿವರ ವಿರುದ್ಧವೂ ಆಕ್ರೋಶ
ಇದನ್ನೂ ಓದಿ: Karnataka Election: ಮಾಜಿ ಡಿಸಿಎಂ ಡಾ.ಜಿ.ಪರಮೇಶ್ವರ್ ಮೇಲೆ ಕಲ್ಲೆಸೆತ; ತಲೆಗೆ ಗಂಭೀರ ಗಾಯ
ಖಂಡಿಸುತ್ತೇನೆ ಎಂದ ಖರ್ಗೆ
ಪರಮೇಶ್ವರ್ ಮೇಲೆ ಕಲ್ಲೆಸೆದ ಪ್ರಕರಣದ ಕುರಿತು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಪ್ರತಿಕ್ರಿಯಿಸಿದ್ದಾರೆ. “ಚುನಾವಣೆಗಳಲ್ಲಿ ಕಲ್ಲು ಎಸೆಯುವುದು, ಹೆದರಿಸುವುದು ಸರಿಯಲ್ಲ. ಒಬ್ಬ ಅಭ್ಯರ್ಥಿಗೆ ಕಲ್ಲು ಎಸೆಯುವುದು, ಹೆದರಿಸುವುದು, ಭಾಷಣಕ್ಕೆ ಅಡ್ಡಿ ಪಡಿಸುವುದನ್ನು ನಾನು ಖಂಡಿಸುತ್ತೇನೆ. ಈ ರೀತಿ ನಡೆದುಕೊಂಡರೆ ಅವರಿಗೆ ಮತದಾರರು ಒಲಿಯುವುದಿಲ್ಲ. ಮತದಾರರು ಚಾಣಾಕ್ಷರಿದ್ದಾರೆ, ಪರಮೇಶ್ವರ್ ಅವರನ್ನು ಜನ ಈ ಬಾರಿ ಬಹುಮತದಿಂದ ಗೆಲ್ಲಿಸುತ್ತಾರೆ” ಎಂದು ಹೇಳಿದರು.