Site icon Vistara News

Stone Pelting: ಕೊಟ್ಟೂರಿನಲ್ಲಿ ಕಲ್ಲು ತೂರಾಟ, ವಾಹನಗಳಿಗೆ ಬೆಂಕಿ; ನಾಲ್ವರಿಗೆ ಗಾಯ, 4 ಮನೆಗಳಿಗೆ ಹಾನಿ

Stone Pelting

#image_title

ವಿಜಯನಗರ/ಬಳ್ಳಾರಿ: ವಿಜಯನಗರ ಜಿಲ್ಲೆಯ ಕೊಟ್ಟೂರು ತಾಲೂಕು ಉಜ್ಜಿನಿ ಪೀಠದ ಭಕ್ತರು, ಚಿತ್ರದುರ್ಗ ಜಿಲ್ಲೆಯ ಸಿರಿಗೆರೆ ತರಳಬಾಳು ಪೀಠದ ಭಕ್ತರ ನಡುವೆ ಮಾರಾಮಾರಿ ನಡೆದಿದೆ. ಕಲ್ಲುತೂರಾಟ (Stone Pelting) ಹಾಗೂ ವಾಹನಗಳಿಗೆ ಬೆಂಕಿ ಹಚ್ಚಿದ್ದರಿಂದ ಇಬ್ಬರು ಮಹಿಳೆಯರು, ಪೊಲೀಸ್ ಪೇದೆ ಸೇರಿ ನಾಲ್ವರಿಗೆ ಗಾಯಗಳಾಗಿವೆ. ಜತೆಗೆ ನಾಲ್ಕು ಮನೆಗಳಿಗೆ ಹಾನಿಯಾಗಿದೆ.

ಕಾಳಾಪುರ ಗ್ರಾಮದ ಬಸಕ್ಕ ಸೇರಿ ನಾಲ್ವರು ಗಾಯಗೊಂಡಿದ್ದಾರೆ. ಈ ಸಂದರ್ಭದಲ್ಲಿ ಪೊಲೀಸ್ ಪೇದೆ ಲಿಂಗಯ್ಯ ಅವರಿಗೆ ಸಣ್ಣಪುಟ್ಟ ಗಾಯವಾಗಿದೆ. ಮನೆಯಲ್ಲಿದ್ದವರಿಗೆ ಬಂದು ಹೊಡೆದಿದ್ದಾರೆಂದು ಗಾಯಾಳುಗಳು ಆರೋಪಿಸಿದ್ದಾರೆ.

ಕೊಟ್ಟೂರು ಪಟ್ಟಣದಲ್ಲಿ ಹಮ್ಮಿಕೊಂಡಿರುವ ತರಳಬಾಳು ಹುಣ್ಣಿಮೆ ನಿಮಿತ್ತ ಸಿರಿಗೆರೆ ಮಠದ ಭಕ್ತರು ಸಿರಿಗೆರೆಯಿಂದ ಕೊಟ್ಟೂರು ತನಕ ಶನಿವಾರ ಬೈಕ್ ರ‍್ಯಾಲಿ ಹಮ್ಮಿಕೊಂಡಿದ್ದರು. ಬೈಕ್ ರ‍್ಯಾಲಿಯಲ್ಲಿ ಕೆಲ ದುಷ್ಕರ್ಮಿಗಳು ಕಾಳಾಪುರ ಗ್ರಾಮಕ್ಕೆ ಬರುತ್ತಲೇ ಏಕಾಏಕಿ ಗ್ರಾಮಸ್ಥರ ಮನೆ ಮೇಲೆ ದಾಳಿಮಾಡಿದ್ದಾರೆ ಎಂದು ಹೇಳಲಾಗಿದೆ.

ದಾಳಿಯ ವೇಳೆ ದುಷ್ಕರ್ಮಿಗಳು ಗ್ರಾಮಸ್ಥರ ಮೇಲೆ ಮಾರಣಾಂತಿಕ ಹಲ್ಲೆ ಮಾಡಿದ್ದಾರೆ ಎನ್ನಲಾಗಿದೆ. ವಿಷಯ ತಿಳಿದು ತಕ್ಷಣ ಸ್ಥಳಕ್ಕೆ ಬಂದ ಪೊಲೀಸರು ಗ್ರಾಮದಲ್ಲಿ ನಿಷೇಧಾಜ್ಞೆ ಜಾರಿಮಾಡಿ, ದುಷ್ಕರ್ಮಿಗಳ ಪತ್ತೆ ಕಾರ್ಯ ಆರಂಭಿಸಿದ್ದಾರೆ.

ಸಿರಿಗೆರೆ ಮಠದ ಭಕ್ತರು ಹಮ್ಮಿಕೊಂಡ ಬೈಕ್ ರ‍್ಯಾಲಿ ಕಾಳಾಪುರ ಪ್ರವೇಶ ಮಾಡಿದಾಗ ಬೈಕ್ ರ‍್ಯಾಲಿಯಲ್ಲಿ ಪಾಲ್ಗೊಂಡವರು ಹಾಗೂ ಕಾಳಾಪುರ ಗ್ರಾಮಸ್ಥರ ನಡುವೆ ವಾಗ್ವಾದ ನಡೆದಿದೆ. ಈ ವೇಳೆ ಆಕ್ರೋಶಗೊಂಡ ಬೈಕ್ ರ‍್ಯಾಲಿಯಲ್ಲಿ ಬಂದವರು ದಾಳಿ ನಡೆಸಿದ್ದಾರೆ. ಮನೆ ಮುಂದೆ ನಿಲ್ಲಿಸಿದ ಬೈಕ್ ಜಖಂ ಮಾಡಲಾಗಿದೆ. ಮನೆಯ ಬಾಗಿಲು, ಕಿಟಕಿ ಮುರಿದುಹಾಕಿದ್ದಾರೆ ಎಂದು ಮೂಲಗಳಿಂದ ತಿಳಿದು ಬಂದಿದೆ.

ಸದ್ಯ ಕಾಳಾಪುರದಲ್ಲಿ ಶಾಂತಿ ಸುವ್ಯವಸ್ಥೆ ಇದೆ. ಯಾವುದೇ ಸಮಸ್ಯೆ ಇಲ್ಲ. ಗ್ರಾಮದಲ್ಲಿ ಪೊಲೀಸ್ ಸಿಬ್ಬಂದಿ ಮೀಸಲು ಪೊಲೀಸ್ ಪಡೆ ನಿಯೋಜನೆ ಮಾಡಲಾಗಿದೆ ಎಂದು ಪೊಲೀಸ್ ಅಧಿಕಾರಿಗಳ ಮೂಲಗಳು ತಿಳಿಸಿವೆ.

ಉಜ್ಜಿನಿಯ ಮರಳುಸಿದ್ದೇಶ್ವರ ದೇವಸ್ಥಾನ ಸಾಧು ಸದ್ಧರ್ಮ ಜನಾಂಗದ ಆರಾಧ್ಯ ದೈವವಾಗಿದೆ. ಉಜ್ಜಿನಿಯಲ್ಲಿರುವ ದೇವಸ್ಥಾನ ಸಾಧು ಸದ್ಧರ್ಮ ಜನಾಂಗಕ್ಕೆ ಸೇರಬೇಕು ಎಂಬ ಹೋರಾಟ ನಿರಂತರವಾಗಿ ನಡೆದುಕೊಂಡು ಬಂದಿದೆ. ಇದೀಗ ಕೊಟ್ಟೂರಿನಲ್ಲಿಯೇ ತರಳಬಾಳು ಹುಣ್ಣಿಮೆ ಹಮ್ಮಿಕೊಂಡಿರುವ ಹಿನ್ನೆಲೆಯಲ್ಲಿ ವಿಚಾರ ಮುನ್ನೆಲೆಗೆ ಬಂದಿದೆ.

ಕಾಳಾಪುರದಲ್ಲಿ ಉಜ್ಜಿನಿಯ ದೇವಸ್ಥಾನಕ್ಕೆ ಸಂಬಂಧಪಟ್ಟಂತೆ ೯ ಪಾದುಕೆಗಳು ಇದ್ದು, ಭರತ ಹುಣ್ಣಿಮೆ ವೇಳೆ ನಡೆಯುವ ಧಾರ್ಮಿಕ ಕಾರ್ಯಕ್ರಮದ ಭಾಗವಾಗಿ ಇಲ್ಲಿ ಮಹತ್ತರ ಪೂಜಾ ವಿಧಿ ವಿಧಾನ ನಡೆಯುತ್ತಿವೆ. ಇದೇ ಕಾರಣಕ್ಕೆ ಕೆಲವರು ದಾಳಿಮಾಡಿದ್ದಾರೆ ಎನ್ನಲಾಗಿದೆ. ಮಾರಾಮಾರಿಗೆ ವ್ಯಾಪಕ ವಿರೋಧ ವ್ಯಕ್ತವಾಗಿದೆ‌.

ಪರಿಸ್ಥಿತಿ ನಿಯಂತ್ರಣದಲ್ಲಿದೆ: ಡಿಸಿ ವೆಂಕಟೇಶ

ಕಾಳಪುರ ಗ್ರಾಮದಲ್ಲಿ ಕಲ್ಲು ತೂರಾಟ ಹಿನ್ನೆಲೆಯಲ್ಲಿ ನಾಲ್ಕು ಜನರಿಗೆ ಸಣ್ಣ ಪುಟ್ಟ ಗಾಯ ಆಗಿದೆ‌. ಎಸ್ಪಿ ಘಟನಾ ಸ್ಥಳಕ್ಕೆ ಹೋಗಿದ್ದಾರೆ. ಸದ್ಯಕ್ಕೆ ಪರಿಸ್ಥಿತಿಯನ್ನು ಹತೋಟಿಗೆ ತರಲಾಗಿದೆ‌ ಎಂದು ವಿಜಯನಗರ ಡಿಸಿ ವೆಂಕಟೇಶ ಹೇಳಿದ್ದಾರೆ.

ತರಳಬಾಳು ಹುಣ್ಣಿಮೆ ಹಿನ್ನೆಲೆಯಲ್ಲಿ ಬೈಕ್ ರ‍್ಯಾಲಿ ನಡೆಯುತ್ತಿತ್ತು. ರ‍್ಯಾಲಿ ವೇಳೆ ಉಜ್ಜನಿ ಮತ್ತು ಕಾಳಪುರ ಗ್ರಾಮಸ್ಥರ ಮಧ್ಯೆ ಸಂಘರ್ಷ ಆಗಿದೆ. ನಾಲ್ಕು ಜನರಿಗೆ ಗಾಯವಾಗಿದ್ದು, ಅವರನ್ನು ಆಸ್ಪತ್ರೆಗೆ ಶಿಫ್ಟ್ ಮಾಡಲಾಗಿದೆ. ಮುಂಜಾಗ್ರತಾ ಕ್ರಮವಾಗಿ 144 ನಿಷೇಧಾಜ್ಞೆ ಜಾರಿ ಮಾಡಲಾಗಿದೆ. ಮನೆಗಳಿಗೆ ನುಗ್ಗಿ ಕಲ್ಲು ತೂರಾಟ, ಬೈಕ್‌ಗಳಿಗೆ ಬೆಂಕಿ ಹಚ್ಚಿರುವ ಕುರಿತು ಎಸ್ಪಿ ಮಾಹಿತಿ ಕಲೆ ಹಾಕುತ್ತಿದ್ದಾರೆ ಎಂದು ಮಾಹಿತಿ ನೀಡಿದ್ದಾರೆ.

ಇದನ್ನೂ ಓದಿ | Assault Case: ಚಿಕ್ಕತ್ತೂರಿನಲ್ಲಿ ರಾಜಕೀಯ ದ್ವೇಷಕ್ಕೆ ಎರಡು ಗುಂಪುಗಳ ನಡುವೆ ಹೊಡೆದಾಟ

Exit mobile version