| ಮಹಲಿಂಗೇಶ್ ಹಿರೇಮಠ, ವಿಸ್ತಾರ ನ್ಯೂಸ್, ಗದಗ
ಗದಗ ಜಿಲ್ಲೆಯಲ್ಲಿ ಬೇರೆ ಜಿಲ್ಲೆಗಳಿಗೆ ಹೋಲಿಸಿದರೆ ಪಕ್ಷಗಳ ಪ್ರಯೋಗಗಳು, ಹೊಸ ಹೊಸ ಅಭ್ಯರ್ಥಿಗಳು, ರಾಜಕೀಯ ತಂತ್ರಗಳು, ಹೆಚ್ಚಿನ ಬಂಡಾಯ ಅಭ್ಯರ್ಥಿಗಳ ಸ್ಪರ್ಧೆ ಕಡಿಮೆಯೇ. ಹಾಗಂತ, ರಾಜಕೀಯ ಮೇಲಾಟ, ವಿಧಾನಸಭೆ ಚುನಾವಣೆಯ ಕಾವು, ತಂತ್ರ-ಪ್ರತಿತಂತ್ರ, ಅಬ್ಬರದ ಪ್ರಚಾರಕ್ಕೇನೂ ಕಡಿಮೆ ಇಲ್ಲ. ಗದಗ ಜಿಲ್ಲೆಯ ನಾಲ್ಕು ಕ್ಷೇತ್ರಗಳ ಪೈಕಿ ಬಿಜೆಪಿಯ ಪ್ರಾಬಲ್ಯ ಜಾಸ್ತಿ ಇದ್ದರೂ, ಕಮಲ ಪಾಳಯಕ್ಕೆ ಕಾಂಗ್ರೆಸ್ ನೀಡುತ್ತಿರುವ ಪೈಪೋಟಿ ಏನೂ ಕಡಿಮೆ ಇಲ್ಲ. ಗದಗ ಜಿಲ್ಲೆಯಲ್ಲಿ ಜೆಡಿಎಸ್ ಲೆಕ್ಕಕ್ಕೆ ಇಲ್ಲದಿದ್ದರೂ, ಬಿಜೆಪಿಗೆ ಕಾಂಗ್ರೆಸ್ ಪೈಪೋಟಿ ನೀಡುವುದು ಪಕ್ಕಾ ಆಗಿದೆ. ಹಾಗಾಗಿ, ನಾಲ್ಕಕ್ಕೆ ನಾಲ್ಕೂ ಕ್ಷೇತ್ರಗಳಲ್ಲಿ ಬಿಜೆಪಿ ಹಾಗೂ ಕಾಂಗ್ರೆಸ್ ಮಧ್ಯೆ ನೇರ ಪೈಪೋಟಿ ಇದೆ. ಸಾಂಪ್ರದಾಯಿಕ ಎದುರಾಳಿಗಳ ಮಧ್ಯೆ ಸೆಣಸಾಟ ಇದೆ. ಹಾಗಾದರೆ, ಈ ಬಾರಿ ವಿಧಾನಸಭೆ ಚುನಾವಣೆಯಲ್ಲಿ ಗದಗದ ರಾಜಕೀಯ ಸ್ಥಿತಿ ಹೇಗಿದೆ? ಯಾವ ಕ್ಷೇತ್ರದಲ್ಲಿ ಯಾರ ಪ್ರಾಬಲ್ಯವಿದೆ ಎಂಬುದರ ಸಂಕ್ಷಿಪ್ತ ಮಾಹಿತಿ ಇಲ್ಲಿದೆ.
ಕಳೆದ ಚುನಾವಣೆ ಫಲಿತಾಂಶ
ಒಟ್ಟು ಕ್ಷೇತ್ರ: 4 (ಗದಗ, ಶಿರಹಟ್ಟಿ, ರೋಣ, ನರಗುಂದ)
ಬಿಜೆಪಿ: 3
ಕಾಂಗ್ರೆಸ್: 1
ಗದಗ: ‘ಜಾತಿ’ ಲೆಕ್ಕಾಚಾರದಲ್ಲಿ ಯಾರಿಗೆ ಹೆಚ್ಚು ‘ಮತ’?
ಮುದ್ರಣ ಕಾಶಿ ಗದಗ ಮತ ಕ್ಷೇತ್ರದಲ್ಲಿ ಈ ಬಾರಿಯೂ ಕಾಂಗ್ರೆಸ್ ಹಾಗೂ ಬಿಜೆಪಿ ಅಭ್ಯರ್ಥಿಗಳ ಮಧ್ಯೆ ನೇರ ಹಣಾಹಣಿ ಏರ್ಪಟ್ಟಿದೆ. 2018ರ ಚುನಾವಣೆಯಲ್ಲಿ ಕಾಂಗ್ರೆಸ್ಸಿನ ಹಾಲಿ ಶಾಸಕ ಎಚ್.ಕೆ.ಪಾಟೀಲ್ ಎದುರು ಸ್ಪರ್ಧಿಸಿ ಕೇವಲ 1868 ಮತಗಳ ಅಂತರದಲ್ಲಿ ಸೋಲು ಕಂಡಿದ್ದ ಅನಿಲ್ ಮೆಣಸಿನಕಾಯಿ, ಈಗ ಮತ್ತೊಮ್ಮೆ ಬಿಜೆಪಿ ಅಭ್ಯರ್ಥಿಯಾಗಿ ಅದೃಷ್ಟ ಪರೀಕ್ಷೆಗೆ ಇಳಿದಿದ್ದಾರೆ. ಕ್ಷೇತ್ರದಲ್ಲಿ ಬಿರುಸಿನ ಪ್ರಚಾರ ಕೈಗೊಂಡು, ಪಾಟೀಲರ ಗೆಲುವಿಗೆ ಬ್ರೇಕ್ ಹಾಕಲು ಯತ್ನಿಸುತ್ತಿದ್ದಾರೆ.
ಬಿಜೆಪಿ ಪ್ರಮುಖ ಟಿಕೆಟ್ ಆಕಾಂಕ್ಷಿಗಳಾಗಿದ್ದ ರಾಜು ಕುರಡಗಿ, ನಾಗೇಶ ಹುಬ್ಬಳ್ಳಿ ಮತ್ತು ಶರಣ್ ಪಾಟೀಲ್ ಅವರು ಟಿಕೆಟ್ ಕೈ ತಪ್ಪಿದ್ದಕ್ಕೆ ಅಸಮಾಧಾನಗೊಂಡಿದ್ದರು. ಆದರೆ, ಅನಿಲ್ ಮೆಣಸಿನಕಾಯಿ ಅವರು ಖುದ್ದಾಗಿ ಆಕಾಂಕ್ಷಿಗಳನ್ನು ಭೇಟಿ ಮಾಡಿ ವಿಶ್ವಾಸಕ್ಕೆ ತೆಗೆದುಕೊಂಡ ನಂತರ ಆಕಾಂಕ್ಷಿಗಳು ಮುನಿಸು ಬಿಟ್ಟು ಒಗ್ಗಟ್ಟು ಪ್ರದರ್ಶಿಸುತ್ತಿದ್ದಾರೆ. ಅದರಲ್ಲೂ ರಾಜು ಕುರಡಗಿ ಸಕ್ರಿಯವಾಗಿ ಪ್ರಚಾರದಲ್ಲಿ ತೊಡಗಿದ್ದಾರೆ. ನಗರಸಭೆ ಮಾಜಿ ಅಧ್ಯಕ್ಷ ಶಿವಣ್ಣ ಮುಳಗುಂದ ಬಿಜೆಪಿ ಸೇರ್ಪಡೆಯಾಗಿರುವದು ಬೆಟಗೇರಿ ಭಾಗದಲ್ಲಿ ಬಲ ಬಂದಿದೆ ಎಂದು ಕಾರ್ಯಕರ್ತರು ಹೇಳುತ್ತಿದ್ದಾರೆ. ಆದರೆ, ಕ್ಷೇತ್ರದಲ್ಲಿ ನಿರ್ಣಾಯಕ ಸಮುದಾಯದ ಮತಗಳ ವಿಭಜನೆ ಸಾಧ್ಯತೆ ಇದ್ದರೂ ಲಿಂಗಾಯತರ ನಂತರ ಅತಿ ಹೆಚ್ಚಿನ ಸಂಖ್ಯೆಯಲ್ಲಿರುವ ಮುಸ್ಲಿಮರು ಎಚ್.ಕೆ.ಪಾಟೀಲ ಬೆಂಬಲಕ್ಕೆ ನಿಲ್ಲಲಿದ್ದಾರೆ ಎಂಬುದು ಬೆಂಬಲಿಗರ ಅಭಿಪ್ರಾಯವಾಗಿದೆ.
ಕಳೆದ ಚುನಾವಣೆ ಫಲಿತಾಂಶ
ಎಚ್.ಕೆ.ಪಾಟೀಲ್- ಕಾಂಗ್ರೆಸ್- 77,699
ಅನಿಲ್ ಮೆಣಸಿನಕಾಯಿ -ಬಿಜೆಪಿ- 75,831
ಗದಗ ಕ್ಷೇತ್ರದಲ್ಲಿ ಆಂತರಿಕವಾಗಿದ್ದ ಜಾತಿ ರಾಜಕಾರಣ ಈಗ ಬಹಿರಂಗಗೊಂಡಿದೆ. ನಿರ್ಣಾಯಕ ಮತಗಳನ್ನು ಹೊಂದಿರುವ ಪಂಚಮಸಾಲಿ ಸಮುದಾಯದ ನಾಯಕರು ಕೈ-ಕಮಲ ಪಕ್ಷದಲ್ಲಿ ಗುರುತಿಸಿಕೊಂಡಿದ್ದಾರೆ. ಕಾಂಗ್ರೆಸ್ ಬೆಂಬಲಿತ ಪಂಚಮಸಾಲಿ ಸಮಾಜ, ಬಿಜೆಪಿ ಬೆಂಬಲಿತ ಪಂಚಮಸಾಲಿ ಸಮುದಾಯ ಎನ್ನುವ ಗುಂಪುಗಳು ಸಮಾವೇಶಗಳನ್ನು ನಡೆಸಿ ತಮ್ಮ ಪಕ್ಷ ನಿಷ್ಠೆ ತೋರಿಸಿವೆ. ಇನ್ನು ಬಿಜೆಪಿ ವೋಟ್ ಬ್ಯಾಂಕ್ ಎಂದೇ ಬಿಂಬಿಸಲಾಗಿದ್ದ ಎಸ್‌ಎಸ್‌ಕೆ ಸಮಾಜದ ಕೆಲವರು ಕಾಂಗ್ರೆಸ್ ಪರ ಇದ್ದಾರೆ. ಒಳಮೀಸಲು ಘೋಷಣೆಯಿಂದ ಕೆಳ ಸಮುದಾಯದ ಜನರ ಮತಗಳು ಛಿದ್ರವಾಗಿವೆ. ಆದರೂ, ಎಚ್.ಕೆ.ಪಾಟೀಲ್ ಅವರ ಮತಗಳು ಕದಲುವುದು ಕಷ್ಟ ಎಂಬ ಅಭಿಪ್ರಾಯ ಕೇಳಿಬರುತ್ತಿದೆ. ಆದರೆ, ಹಾಲುಮತ ಸಮುದಾಯದ ಮತಗಳೂ ವಿಭಜನೆಯಾಗಿದ್ದು, ಜಾತಿ ಸಮೀಕರಣದ ನಾಡಿಮಿಡಿತ ಯಾರಿಗೂ ಅರ್ಥವಾಗದಂತಾಗಿದೆ.
ನರಗುಂದ: ಬಂಡಾಯ ನೆಲದಲ್ಲಿ ಯಾರಿಗೆ ಜಯ?
ಬಂಡಾಯದ ನೆಲ ನರಗುಂದ ಮತಕ್ಷೇತ್ರದಲ್ಲಿ ಈ ಬಾರಿಯೂ ಬೆಜೆಪಿ ಕಾಂಗ್ರೆಸ್ ಮಧ್ಯೆ ನೇರ ಹಣಾಹಣಿ ಏರ್ಪಟ್ಟಿದೆ. ಹಾಲಿ ಶಾಸಕ, ಲೋಕೋಪಯೋಗಿ ಇಲಾಖೆ ಸಚಿವ ಸಿ.ಸಿ.ಪಾಟೀಲ್ ಮತ್ತು ಮಾಜಿ ಶಾಸಕ ಬಿ.ಆರ್.ಯಾವಗಲ್ ನಡುವಿನ ಫೈಟ್ ರೋಚಕವಾಗುತ್ತಿದೆ. ಈವರೆಗೆ ಒಟ್ಟು 5 ಬಾರಿ ಶಾಸಕರಾಗಿರುವ ಕಾಂಗ್ರೆಸ್ ಅಭ್ಯರ್ಥಿ ಬಿ.ಆರ್.ಯಾವಗಲ್ ಮತ್ತು ಒಟ್ಟಾರೆ 3 ಬಾರಿ ಶಾಸಕರಾಗಿರುವ ಬಿಜೆಪಿ ಅಭ್ಯರ್ಥಿ ಸಿ.ಸಿ.ಪಾಟೀಲ್ ಈಗ ಮತ್ತೊಮ್ಮೆ ಮುಖಾಮುಖಿಯಾಗಿದ್ದಾರೆ. ಈವರೆಗೆ ಒಟ್ಟಾರೆ 5 ಪ್ರತಿಸ್ಪರ್ಧಿಗಳಾಗಿ ಚುನಾವಣೆ ಎದುರಿಸಿದ್ದು, ಮೂರು ಬಾರಿ ಸಿ.ಸಿ.ಪಾಟೀಲ್ ಮತ್ತು ಎರಡು ಬಾರಿ ಬಿ.ಆರ್.ಯಾವಗಲ್ ಅವರು ವಿಧಾನಸಭೆ ಪ್ರವೇಶಿಸಿದ್ದಾರೆ.
ಬಿಜೆಪಿ ಅಭ್ಯರ್ಥಿ ಸಿ.ಸಿ.ಪಾಟೀಲ್ ಅವರಿಗೆ ಪಕ್ಷದ ಕಾರ್ಯಕರ್ತರು, ಮುಖಂಡರು ಮತ್ತು ಕುಟುಂಬದ ಬಲ ಇದೆ. ಹಿರಿಯ ಪುತ್ರ ಉಮೇಶಗೌಡ ಪಾಟೀಲ್ ಸಹಿತ ಮೂವರು ಪುತ್ರರು, ಸೊಸೆಯಂದಿರು ಪ್ರತ್ಯೇಕ ತಂಡಗಳಲ್ಲಿ ಚುನಾವಣೆ ಪ್ರಚಾರ ನಡೆಸುತ್ತಿದ್ದಾರೆ. ಇತ್ತ ಬಿ.ಆರ್.ಯಾವಗಲ್ ಪರ ಪುತ್ರರಾದ ವಿವೇಕ ಯಾವಗಲ್, ಸಂತೋಷ ಮತ್ತು ಪ್ರವೀಣ ಸಕ್ರಿಯರಾಗಿ ಪ್ರಚಾರದಲ್ಲಿ ತೊಡಗಿಸಿಕೊಂಡಿದ್ದಾರೆ. ಕಾಂಗ್ರೆಸ್ ಟಿಕೆಟ್ ವಂಚಿತ ಆಕಾಂಕ್ಷಿಗಳ ಪೈಕಿ ಡಾ.ಸಂಗಮೇಶ ಕೊಳ್ಳಿ ಹೊರತುಪಡಿಸಿ ಇನ್ನುಳಿದ ಆಕಾಂಕ್ಷಿಗಳು ಯಾವಗಲ್ ಪರ ಕೆಲಸ ಮಾಡುತ್ತಿದ್ದಾರೆ.
1957ರಿಂದ 1983ರವರೆಗೆ ನರಗುಂದ ಕಾಂಗ್ರೆಸ್ ಕೋಟೆಯಾಗಿತ್ತು. ಆದರೆ 1983 ಮತ್ತು 1985ರಲ್ಲಿ ಯಾವಗಲ್ ಜನತಾ ಪಕ್ಷದಿಂದ ಸ್ಪರ್ಧಿಸಿ ಕಾಂಗ್ರೆಸ್ ಓಟಕ್ಕೆ ಬ್ರೆಕ್ ಹಾಕಿದರು. 1989ರ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಎದುರು ಸೋಲು ಕಂಡರೂ 1984ರಲ್ಲಿ ಮತ್ತೆ ಜನತಾ ದಳದಿಂದ ಸ್ಪರ್ಧಿಸಿ ಗೆಲುವು ಸಾಧಿಸಿದರು. 1999ರಲ್ಲಿ ಕಾಂಗ್ರೆಸ್‌ನಿಂದ ಸ್ಪರ್ಧಿಸಿದ ಬಿ.ಆರ್.ಯಾವಗಲ್, ಜೆಡಿಎಸ್ ಅಭ್ಯರ್ಥಿ ಸಿ.ಸಿ.ಪಾಟೀಲ ಅವರನ್ನು ಸೋಲಿಸಿದರು. 2004 ಮತ್ತು 2008 ರಲ್ಲಿ ಸಿ.ಸಿ.ಪಾಟೀಲ್ ಅವರು ಬಿಜೆಪಿಯಿಂದ ಯಾವಗಲ್ ವಿರುದ್ಧ ಜಯ ದಾಖಲಿಸಿ ನರಗುಂದ ಕ್ಷೇತ್ರದಲ್ಲಿ ಮೊಟ್ಟ ಮೊದಲ ಬಾರಿಗೆ ಬಿಜೆಪಿ ಕಮಲ ಅರಳುವಂತೆ ಮಾಡಿದರು. 2013ರಲ್ಲಿ ಸಿ.ಸಿ.ಪಾಟೀಲ್ ಅವರು ಬಿ.ಆರ್.ಯಾವಗಲ್ ಎದುರು ಸೋಲು ಕಂಡರೂ, 2018ರಲ್ಲಿ ಮತ್ತೊಮ್ಮೆ ಜಯ ದಾಖಲಿಸಿದರು.
ಕಳೆದ ಚುನಾವಣೆ ಫಲಿತಾಂಶ
ಸಿ.ಸಿ.ಪಾಟೀಲ್- ಬಿಜೆಪಿ- 73,045
ಬಿ.ಆರ್.ಯಾವಗಲ್- ಕಾಂಗ್ರೆಸ್- 65,066
ಸಿ.ಸಿ.ಪಾಟೀಲ್ ಮತ್ತು ಬಿ.ಆರ್.ಯಾವಗಲ್ ಪೈಪೋಟಿ ಮಧ್ಯೆಯೂ ಮಹದಾಯಿ, ಕಳಸಾ ಬಂಡೂರಿ ಯೋಜನೆ ಜಾರಿಗಾಗಿ ನಿರಂತರ ಹೋರಾಟ ನಡೆಸಿದ ರೈತ ಸೇನಾ ಸಂಸ್ಥಾಪಕ ವಿರೇಶ ಸೊಬರದಮಠ ಸ್ವಾಮಿಜಿ ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದಾರೆ. ಅದರ ಜತೆಗೆ ಜೆಡಿಎಸ್‌ನಿಂದ ರುದ್ರಗೌಡ ಪಾಟೀಲ್, ಆಮ್ ಆದ್ಮಿ ಪಕ್ಷದಿಂದ ರಾಮಪ್ಪ ಹೂವಣ್ಣವರ ಸಹಿತ ಒಟ್ಟು 14 ಅಭ್ಯರ್ಥಿಗಳು ಕಣದಲ್ಲಿದ್ದು, ಮೇ 10ರಂದು ಅಭ್ಯರ್ಥಿಗಳ ಭವಿಷ್ಯ ನಿರ್ಧಾರವಾಗಲಿದೆ. ನರಗುಂದ ಕ್ಷೇತ್ರದ ಚುನಾವಣೆಯಲ್ಲಿ ಜಾತಿ ರಾಜಕಾರಣ ಸಾಕಷ್ಟು ಮಹತ್ವ ಪಡೆದುಕೊಂಡಿದೆ. ಲಿಂಗಾಯತ ಸಮುದಾಯದ ಸಿ.ಸಿ.ಪಾಟೀಲ್ ಮತ್ತು ರೆಡ್ಡಿ ಸಮಯದಾಯದ ಬಿ.ಆರ್.ಯಾವಗಲ್ ಮಧ್ಯದ ಚುನಾವಣೆ ಲಿಂಗಾಯತ ವರ್ಸಸ್ ರೆಡ್ಡಿ ಫೈಟ್ ಎನ್ನುವಂತಾಗಿದೆ. ಕ್ಷೇತ್ರದಲ್ಲಿ ಲಿಂಗಾಯತರು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಯಾರಿಗೆ ಎಷ್ಟು ಲಾಭ-ನಷ್ಟ ಎನ್ನುವುದಕ್ಕೆ ಫಲಿತಾಂಶದವರೆಗೆ ಕಾಯಬೇಕಾಗಿದೆ.
ರೋಣ: ಸಾಂಪ್ರದಾಯಿಕ ಸಮರದ ಮಧ್ಯೆ ಯಾರಿಗೆ ಗೆಲುವು?
ಜಿಲ್ಲೆಯ ಅತಿ ದೊಡ್ಡ ವಿಧಾನಸಭೆ ಕ್ಷೇತ್ರವಾಗಿರುವ ರೋಣದಲ್ಲಿ ಬಿಜೆಪಿ ಹಾಲಿ ಶಾಸಕ ಕಳಕಪ್ಪ ಬಂಡಿ ಹಾಗೂ ಕಾಂಗ್ರೆಸ್ ಮಾಜಿ ಶಾಸಕ ಜಿ.ಎಸ್.ಪಾಟೀಲ್ ನಡುವಿನ ಕದನ ಭಾರಿ ಕುತೂಹಲಕ್ಕೆ ಕಾರಣವಾಗಿದೆ. ಈವರೆಗೂ ತಲಾ ಮೂರು ಬಾರಿ ವಿಧಾನಸಭೆ ಪ್ರವೇಶಿಸಿರುವ ಜಿ.ಎಸ್.ಪಾಟೀಲ್ ಮತ್ತು ಕಳಕಪ್ಪ ಬಂಡಿ ಮತ್ತೊಮ್ಮೆ ಮುಖಾಮುಖಿಯಾಗಿದ್ದಾರೆ. ಒಟ್ಟಾರೆ ನಾಲ್ಕು ಚುನಾವಣೆಯಲ್ಲಿ ಎದುರಾಳಿಗಳಾಗಿ ಸ್ಪರ್ಧಿಸಿರುವ ಈ ಇಬ್ಬರು ನಾಯಕರು, ಈಗ 5 ನೇ ಬಾರಿ ಮುಖಾಮುಖಿಯಾಗಿದ್ದು, ಗೆಲುವು ಯಾರಿಗೆ ಎನ್ನುವುದು ಕುತೂಹಲ ಕೆರಳಿಸಿದೆ.
ಕಳೆದ ಚುನಾವಣೆ ಫಲಿತಾಂಶ
ಕಳಕಪ್ಪ ಬಂಡಿ- ಬಿಜೆಪಿ- 76,401
ಜಿ.ಎಸ್.ಪಾಟೀಲ್- ಕಾಂಗ್ರೆಸ್- 83735
ಬಿಜೆಪಿ ಅಭ್ಯರ್ಥಿ ಕಳಕಪ್ಪ ಬಂಡಿ ಅವರಿಗೆ ಸಹೋದರನ ಸವಾಲು ಎದುರಾಗಿದೆ. ಬಿಜೆಪಿ ಟಿಕೆಟ್ ಆಕಾಂಕ್ಷಿಯಾಗಿದ್ದ ಸಿದ್ದಪ್ಪ ಬಂಡಿ, ಟಿಕೆಟ್ ಕೈ ತಪ್ಪಿದ್ದರಿಂದ ಕಾಂಗ್ರೆಸ್ ಸೇರಿಕೊಂಡು ಸಹೋದರನ ವಿರುದ್ಧವೇ ಪ್ರಚಾರ ನಡೆಸುತ್ತಿದ್ದಾರೆ. ಇದು ಕಳಕಪ್ಪ ಬಂಡಿ ಅವರಿಗೆ ನುಂಗಲಾರದ ತುತ್ತಾಗಿದೆ. ಇದು ಕಾಂಗ್ರೆಸ್‌ನ ಜಿ.ಎಸ್.ಪಾಟೀಲ್ ಅವರಿಗೆ ಸ್ವಲ್ಪ ಮಟ್ಟಿನ ಪೂರಕವಾದ ವಾತಾವರಣ ಸೃಷ್ಟಿಸಿದೆ ಎಂದು ಕಾರ್ಯಕರ್ತರು ಹೇಳುತ್ತಿದ್ದಾರೆ.
ಇನ್ನು ಬಿಜೆಪಿ ಟಿಕೆಟ್ ಪ್ರಮುಖ ಆಕಾಂಕ್ಷಿಗಳಾಗಿದ್ದ ರವಿ ದಂಡಿನ ಕ್ಷೇತ್ರದಲ್ಲಿ ಪ್ರಚಾರ ಕಾರ್ಯಕ್ಕೆ ಕೈ ಜೋಡಿಸಿದ್ದಾರೆ. ಯುವ ಮುಖಂಡ ಅಂದಪ್ಪ ಸಂಕನೂರ, ನರೇಗಲ್ ಭಾಗದಲ್ಲಿ ಒಂದಷ್ಟು ಪ್ರಚಾರ ನಡೆಸಿದ್ದಾರೆ. ಕಳಕಪ್ಪ ಬಂಡಿ ಪತ್ನಿ ಸಂಯುಕ್ತಾ ಬಂಡಿ ಅವರು ಕಳಕಪ್ಪ ಅವರ ಗೆಲುವಿಗೆ ಶ್ರಮಿಸುತ್ತಿದ್ದಾರೆ. ಮುಂಡರಗಿ ಮಂಡಲ ಬಿಜೆಪಿ ಅಧ್ಯಕ್ಷ ಹೇಮಗಿರಿಶ ಹಾವಿನಾಳ ರೋಣ ಮತ್ತು ಶಿರಹಟ್ಟಿ ಬಿಜೆಪಿ ಅಭ್ಯರ್ಥಿಗಳ ಪರ ಬಿರುಸಿನ ಪ್ರಚಾರ ನಡೆಸುತ್ತಿರುವುದು ಬಿಜೆಪಿಗೆ ಬಲ ನೀಡಿದೆ.
ಕಾಂಗ್ರೆಸ್ ಜಿಲ್ಲಾಧ್ಯಕ್ಷರಾಗಿರುವ ಜಿ.ಎಸ್.ಪಾಟೀಲ್ ಅವರು ಚುನಾವಣೆ ಘೋಷಣೆ ಪೂರ್ವದಲ್ಲಿಯೇ ಪಕ್ಷ ಸಂಘಟನೆಯಲ್ಲಿ ಸಕ್ರಿಯರಾಗಿ ತೊಡಗಿಸಿಕೊಂಡಿದ್ದರು. ಸದ್ಯ ಎಲ್ಲ ವರ್ಗದ ಜನರನ್ನ ವಿಶ್ವಾಸಕ್ಕೆ ತೆಗೆದುಕೊಂಡು ಮತಯಾಚನೆ ಮಾಡುತ್ತಿರುವುದು, ಮಾಜಿ ಸಿಎಂ ಸಿದ್ದರಾಮಯ್ಯ, ಲಕ್ಷ್ಮಣ ಸವದಿ ಅವರು ಕ್ಷೇತ್ರದಲ್ಲಿ ನಡೆಸಿರುವುದು ಪ್ಲಸ್ ಆಗಲಿದೆ ಎಂಬುದು ಕಾರ್ಯಕರ್ತರ ಮಾತಾಗಿದೆ.
ರೋಣ ಕಣದಲ್ಲಿ ಲಿಂಗಾಯತ ಮತಗಳೇ ನಿರ್ಣಾಯಕ. ಪಂಚಮಸಾಲಿ ಮತ್ತು ಗಾಣಿಗ ಸಮುದಾಯ ಅತಿ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಇಬ್ಬರು ಅಭ್ಯರ್ಥಿಗಳು ಈ ಸಮುದಾಯದ ಮತಗಳ ಮೇಲೆ ಕಣ್ಣಿಟ್ಟಿದ್ದಾರೆ. ಕುರುಬ ಸಮುದಾಯದ ಮತಗಳು ಆನೇಕಲ್ ದೊಡ್ಡಯ್ಯ ಸ್ಪರ್ಧೆಯಿಂದ ವಿಭಜನೆಯಾಗುವ ಸಾಧ್ಯತೆಯಿದೆ. ಅಲ್ಪ ಸಂಖ್ಯಾತರ ಮತಗಳು ಯಾವ ಕಡೆ ವಾಲಲಿವೆ ಎಂಬುದು ನಿಗೂಢವಾಗಿದೆ. ಇದರಿಂದ ರೋಣದಲ್ಲಿ ಜಾತಿ ರಾಜಕಾರಣ ಮತ್ತು ಸಮೀಕರಣ ಇನ್ನೂ ಅಸ್ಪಷ್ಟವಾಗಿದೆ.
ಶಿರಹಟ್ಟಿ: ತ್ರಿಕೋನ ಸ್ಪರ್ಧೆಯಲ್ಲಿ ಯಾರು ಜಟ್ಟಿ?
ಜಿಲ್ಲೆಯ ಗದಗ, ರೋಣ ಮತ್ತು ನರಗುಂದ ಮತಕ್ಷೇತ್ರದಲ್ಲಿ ಕಾಂಗ್ರೆಸ್-ಬಿಜೆಪಿ ಅಭ್ಯರ್ಥಿಗಳ ಮಧ್ಯೆ ನೇರ ಹಣಾಹಣಿ ಏರ್ಪಟ್ಟಿದ್ದರೆ, ಶಿರಹಟ್ಟಿ ಮೀಸಲು ಕ್ಷೇತ್ರದಲ್ಲಿ ಮಾತ್ರ ತ್ರಿಕೋನ ಸ್ಪರ್ಧೆ ನಡೆಯುತ್ತಿದೆ. ಕಾಂಗ್ರೆಸ್ ಅಭ್ಯರ್ಥಿ ಸುಜಾತಾ ದೊಡ್ಡಮನಿ, ಬಿಜೆಪಿ ಅಭ್ಯರ್ಥಿ ಡಾ.ಚಂದ್ರು ಲಮಾಣಿ ಅವರಿಗೆ ಪಕ್ಷೇತರರಾಗಿ ಸ್ಪರ್ಧಿಸಿರುವ ಮಾಜಿ ಶಾಸಕ ರಾಮಕೃಷ್ಣ ದೊಡ್ಡಮನಿ ಸವಾಲು ಒಡ್ಡಿದ್ದು, ತ್ರಿಕೋನ ಸ್ಪರ್ಧೆ ದಿನದಿಂದ ದಿನಕ್ಕೆ ರೋಚಕವಾಗುತ್ತಿದೆ.
ಕಾಂಗ್ರೆಸ್ ಟಿಕೆಟ್ ವಂಚಿತ ರಾಮಕೃಷ್ಣ ದೊಡ್ಡಮನಿ ಅವರಿಗೆ ಕಾಂಗ್ರೆಸ್ ಮತ್ತು ಬಿಜೆಪಿಯ ಅತೃಪ್ತರು ಬೆಂಬಲ ಸೂಚಿಸಿದ್ದಾರೆ. ಎಲ್ಲ ವರ್ಗದ ನಾಯಕರು, ಸಮುದಾಯಗಳ ಪ್ರಮುಖರು ರಾಮಕೃಷ್ಣ ದೊಡ್ಡಮನಿ ಪರ ಪ್ರಚಾರ ನಡೆಸುತ್ತಿದ್ದಾರೆ. ಸ್ಟಾರ್ ಪ್ರಚಾರಕರ ಕೊರತೆ ಹೊರತುಪಡಿಸಿ ಕ್ಷೇತ್ರದಲ್ಲಿ ಸಂಚಲನ ಸೃಷ್ಟಿಸಿದ್ದಾರೆ.
ಕಳೆದ ಚುನಾವಣೆ ಫಲಿತಾಂಶ
ರಾಮಪ್ಪ ಲಮಾಣಿ- ಬಿಜೆಪಿ- 91,967
ರಾಮಕೃಷ್ಣ ದೊಡ್ಡಮನಿ- ಕಾಂಗ್ರೆಸ್- 61,974
ವೈದ್ಯಾಧಿಕಾರಿ ಹುದ್ದೆಗೆ ನೀಡಿದ್ದ ರಾಜೀನಾಮೆ ಅಂಗೀಕಾರ ಪ್ರಹಸನದ ಮಧ್ಯೆಯೂ ಕೊನೆ ಕ್ಷಣದಲ್ಲಿ ಬಿಜೆಪಿ ಟಿಕೆಟ್ ಗಿಟ್ಟಿಸಿಕೊಳ್ಳುವಲ್ಲಿ ಯಶಸ್ವಿಯಾದ ಡಾ. ಚಂದ್ರು ಲಮಾಣಿ, ಕ್ಷೇತ್ರದಲ್ಲಿ ಬಿರುಸಿನ ಪ್ರಚಾರ ನಡೆಸಿದ್ದಾರೆ. ಕೇಂದ್ರ ಗೃಹ ಸಚಿವ ಅಮಿತ್ ಶಾ, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸಹಿತ ಅನೇಕ ನಾಯಕರು ಬಿಜೆಪಿ ಅಭ್ಯರ್ಥಿ ಪರ ಪ್ರಚಾರ ನಡೆಸಿದ್ದಾರೆ. ಪಕ್ಷದ ಪ್ರಮುಖರು, ಕಾರ್ಯಕರ್ತರು ಜತೆಗಿದ್ದಾರೆ.
ಕೈ ಪಾಳಯದಲ್ಲೂ ಉತ್ಸಾಹ
ಕಾಂಗ್ರೆಸ್ ಟಿಕೆಟ್ ಘೋಷಣೆ ನಂತರ ಕ್ಷೇತ್ರದಲ್ಲಿ ಕಾಂಗ್ರೆಸ್ ವಿರೋಧಿ ಅಲೆ ಏರ್ಪಟ್ಟಿತ್ತು. ಆದರೆ ನಿಧಾನವಾಗಿ ಕಾಂಗ್ರೆಸ್‌ನವರು ಸಹ ಒಂದಾಗಿ ಸುಜಾತಾ ದೊಡ್ಡಮನಿ ಪರ ಪ್ರಚಾರ ನಡೆಸುತ್ತಿದ್ದಾರೆ. ಮಾಜಿ ಸಿಎಂ ಸಿದ್ದರಾಮಯ್ಯ ಪ್ರಚಾರ ಕೈಗೊಂಡ ನಂತರ ಕಾಂಗ್ರೆಸ್ ನಾಯಕರು, ಕಾರ್ಯಕರ್ತರಲ್ಲಿ ಉತ್ಸಾಹ ಮೂಡಿದೆ. ಎಸ್‌ಸಿ, ಎಸ್‌ಟಿ ಮತಗಳ ಜತೆಗೆ ಮುಸ್ಲಿಮರ ಮತಗಳ ಮೇಲೆ ಕಾಂಗ್ರೆಸ್ ಕಣ್ಣಿಟ್ಟಿದೆ. ಇನ್ನೊಂದೆಡೆ, ಬಿಜೆಪಿ ಟಿಕೆಟ್ ಘೋಷಣೆ ನಂತರ ಎದುರಾಗಿದ್ದ ಬಂಡಾಯ ಭಾಗಶಃ ಶಮನವಾಗಿದೆ. ಹಾಲಿ ಬಿಜೆಪಿ ಶಾಸಕ ರಾಮಣ್ಣ ಲಮಾಣಿ ಒಲ್ಲದ ಮನಸ್ಸಿನಿಂದ ಪಕ್ಷದ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದಾರೆ.
ಇದನ್ನೂ ಓದಿ: ಬಳ್ಳಾರಿ ಜಿಲ್ಲೆ ಸಮೀಕ್ಷೆ : ಕಾಂಗ್ರೆಸ್, ಬಿಜೆಪಿ ಗೆಲುವಿನ ಮೇಲೆ ಪಕ್ಷಾಂತರಿಗಳ, ರೆಡ್ಡಿ ಪಕ್ಷದ ಎಫೆಕ್ಟ್
ಶಿರಹಟ್ಟಿ ಮೀಸಲು ಕ್ಷೇತ್ರವಾದರೂ ಲಿಂಗಾಯತ ಮತದಾರರ ಸಂಖ್ಯೆ ಅತ್ಯಧಿಕವಾಗಿದೆ. ಎಸ್‌ಸಿ, ಎಸ್‌ಟಿ ಸಮುದಾಯಗಳ ಜತೆಗೆ ಲಿಂಗಾಯತ, ಕುರುಬ ಸಮುದಾಯದ ಮತಗಳನ್ನು ಸೆಳೆಯುವ ಪಕ್ಷಕ್ಕೆ ಗೆಲುವು ನಿಶ್ಚಿತ ಎನ್ನಲಾಗುತ್ತಿದೆ. ಆದರೆ, ಸದ್ಯಕ್ಕೆ ಲಿಂಗಾಯತ, ಮುಸ್ಲಿಂ ಮತ್ತು ಕುರುಬ ಸಮುದಾಯದ ಮತಗಳು ವಿಭಜನೆಯಾಗಿವೆ. ಲಂಬಾಣಿ ಸಮುದಾಯ ಬಿಜೆಪಿ ವಿರುದ್ಧ ಅಸಮಾಧಾನಗೊಂಡಿದ್ದು, ಚುನಾವಣೆಯಲ್ಲಿ ಯಾರ ಪರ ಮತ ಚಲಾಯಿಸಲಿದ್ದಾರೆ ಎನ್ನುವುದು ಯಕ್ಷ ಪ್ರಶ್ನೆಯಾಗಿದೆ. ಇನ್ನು ಮುಸ್ಲಿಂ ಮತದಾರರು ರಾಮಕೃಷ್ಣ ದೊಡ್ಡಮನಿ ಪರ ಒಲವು ಹೊಂದಿದ್ದು, ಕಾಂಗ್ರೆಸ್ ಅಭ್ಯರ್ಥಿಗೆ ಸವಾಲಾಗುವ ಸಾಧ್ಯತೆಯಿದೆ. ಒಟ್ಟಾರೆ ಶಿರಹಟ್ಟಿ ಕ್ಷೇತ್ರದ ಜಾತಿ ರಾಜಕಾರಣ ನಿಗೂಢವಾಗಿದೆ. ಕಾಂಗ್ರೆಸ್ -ಬಿಜೆಪಿ ಜತೆಗೆ ಆಮ್ ಆದ್ಮಿ ಪಾರ್ಟಿ, ಜೆಡಿಎಸ್ ಅಭ್ಯರ್ಥಿಗಳು ಕಣದಲ್ಲಿದ್ದಾರೆ. ಪಕ್ಷೇತರರು ಸೇರಿ ಒಟ್ಟಾರೆ 14 ಜನ ಅಂತಿಮ ಕಣದಲ್ಲಿದ್ದಾರೆ.