ಬೆಂಗಳೂರು: ಭ್ರೂಣ ಹತ್ಯೆ ಪ್ರಕರಣಗಳಲ್ಲಿ (Foeticide Case) ಭಾಗಿಯಾಗುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುತ್ತದೆ. ಯಾರೇ ತಪ್ಪು ಮಾಡಿದರೂ ಕೂಡ ಅವರಿಗೆ ಶಿಕ್ಷೆಯಾಗುತ್ತದೆ. ಈ ಬಗ್ಗೆ ಒಂದು ಸಭೆ ಮಾಡಿ ಸೂಕ್ತ ಕ್ರಮದ ನಿರ್ಣಯ ಮಾಡುತ್ತೇವೆ ಎಂದು ಸಿಎಂ ಸಿದ್ದರಾಮಯ್ಯ ತಿಳಿಸಿದ್ದಾರೆ.
ಭಾರತ ಸಂವಿಧಾನ ದಿನದ ಹಿನ್ನೆಲೆಯಲ್ಲಿ ವಿಧಾನಸೌಧದ ಬಳಿ ಡಾ.ಬಿ.ಆರ್.ಅಂಬೇಡ್ಕರ್ ಅವರ ಪ್ರತಿಮೆಗೆ ಪುಷ್ಪಾರ್ಚನೆ ಮಾಡಿದ ಬಳಿಕ ಸಿಎಂ ಅವರು, ರಾಜ್ಯದಲ್ಲಿ ಭ್ರೂಣ ಹತ್ಯೆ ಪ್ರಕರಣಗಳ ಹೆಚ್ಚಳದ ಬಗ್ಗೆ ಪ್ರತಿಕ್ರಿಯಿಸಿದ್ದಾರೆ.
ಭ್ರೂಣ ಹತ್ಯೆ ಸಮಾಜಘಾತುಕ ಕೆಲಸ ಎಂದ ಚಲುವರಾಯಸ್ವಾಮಿ
ಮಂಡ್ಯ: ಭ್ರೂಣ ಹತ್ಯೆ ಮಾಡುವುದು ಸಮಾಜಘಾತುಕ ಕೆಲಸವಾಗಿದ್ದು, ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತದೆ ಎಂದು ಸಚಿವ ಎನ್.ಚಲುವರಾಯಸ್ವಾಮಿ ತಿಳಿಸಿದ್ದಾರೆ.
ಮಂಡ್ಯದಲ್ಲಿ ಭ್ರೂಣ ಲಿಂಗ ಪತ್ತೆ, ಭ್ರೂಣ ಹತ್ಯೆ ಪ್ರಕರಣದ ಬಗ್ಗೆ ಪ್ರತಿಕ್ರಿಯಿಸಿ, ನಮ್ಮ ಸರ್ಕಾರ ಬಂದ ಮೇಲೆ ಈ ರೀತಿಯ ಕೃತ್ಯಗಳಿಗೆ ಅವಕಾಶ ಇಲ್ಲ. ಬೆಂಗಳೂರು ಸೇರಿ ರಾಜ್ಯದಾದ್ಯಂತ ಇಂತಹ ಪ್ರಕರಣಗಳು ನಡೆಯದಂತೆ ಸಿಎಂ ಸಿದ್ದರಾಮಯ್ಯ ಅವರು ಸುಗ್ರೀವಾಜ್ಞೆ ಮಾದರಿಯ ಆದೇಶ ಕೊಟ್ಟಿದ್ದಾರೆ. ಜನರ ಪರ ಸರ್ಕಾರ ಕೆಲಸ ಮಾಡುತ್ತೆ. ವಿರೋಧ ಪಕ್ಷದವರು ಇಂತಹ ಪ್ರಕರಣಗಳಿಗೆ ಕಡಿವಾಣ ಹಾಕಿಲ್ಲ ತಡೆದಿಲ್ಲ ಎಂದು ಟೀಕಿಸಿದರು.
ಇಂತಹ ಘಟನೆಗಳು ಎಲ್ಲೂ ನಡೆಯಬಾರದು. ಇಂತಹ ಕೆಲಸ ಮಾಡುವುದು ಎಷ್ಟು ತಪ್ಪೋ, ಅದಕ್ಕೆ ಪ್ರೋತ್ಸಾಹ ನೀಡುವುದು ಕೂಡ ತಪ್ಪೇ, ಇದಕ್ಕೆ ಕಡಿವಾಣ ಹಾಕಲು ಕಾನೂನು ಇದೆ. ರಾಜ್ಯ ಸರ್ಕಾರದಿಂದ ಮತ್ತಷ್ಟು ಅರಿವು ಮೂಡಿಸಲಾಗುತ್ತದೆ ಎಂದು ತಿಳಿಸಿದರು.
ಭ್ರೂಣ ಹತ್ಯೆ ದೊಡ್ಡ ಅಪರಾಧ: ಶಾಸಕ ದರ್ಶನ್ ಪುಟ್ಟಣ್ಣಯ್ಯ
ಮಂಡ್ಯ: ಭ್ರೂಣ ಲಿಂಗ ಪತ್ತೆ, ಭ್ರೂಣ ಹತ್ಯೆ ದೊಡ್ಡ ಅಪರಾಧ. ಯಾರು ಈ ದಂಧೆಯಲ್ಲಿ ಭಾಗಿಯಾಗಿದ್ದಾರೆ ಅವರಿಗೆ ತಕ್ಕ ಶಿಕ್ಷೆಯಾಗಬೇಕು. ಈ ಕಾಲದಲ್ಲೂ ಈ ತರಹದ ಕೆಲಸ ಮಾಡಿದ್ದಾರೆ ಎಂದರೆ ನಂಬಕ್ಕಾಗಲ್ಲ. ಅಧಿಕಾರಿಗಳ ಜೊತೆ ಮಾತನಾಡಿ ಸೂಕ್ತ ಕ್ರಮ ಕೈಗೊಳ್ಳಲಾಗುವುದು. ತಪ್ಪಿತಸ್ಥರಿಗೆ ತಕ್ಕ ಶಿಕ್ಷೆಯಾಗಬೇಕು ಎಂದು ಹೇಳಿದರು.
900 ಅಮಾಯಕ ಭ್ರೂಣಗಳ ಹತ್ಯೆ; 9 ಆರೋಪಿಗಳ ಬಂಧನ
ಬೆಂಗಳೂರು: ಭ್ರೂಣ ಲಿಂಗ ಪತ್ತೆ ಹಾಗೂ ಭ್ರೂಣ ಹತ್ಯೆ (Fetus Gender Detection) ಮಾಡುತ್ತಿದ್ದ ಜಾಲವನ್ನು ಭೇದಿಸುವಲ್ಲಿ ಬೈಯಪ್ಪನಹಳ್ಳಿ ಠಾಣಾ ಪೊಲೀಸರು (Baiyappanahalli Police) ಯಶಸ್ವಿಯಾಗಿದ್ದು, ವೈದ್ಯರೂ ಸೇರಿ 9 ಆರೋಪಿಗಳನ್ನು ಬಂಧಿಸಿದ್ದಾರೆ.
ಆರೋಪಿಗಳು ಒಂದಲ್ಲ, ಎರಡಲ್ಲ ಬರೋಬ್ಬರಿ 900ಕ್ಕೂ ಹೆಚ್ಚು ಹೆಣ್ಣು ಭ್ರೂಣ ಹತ್ಯೆ ಮಾಡಿರುವುದು ತನಿಖೆಯಿಂದ ತಿಳಿದುಬಂದಿದೆ. ಭ್ರೂಣ ಲಿಂಗ ಪತ್ತೆಗಾಗಿ ಮಹಿಳೆಯನ್ನು ಬೆಂಗಳೂರಿಂದ ಮಂಡ್ಯಕ್ಕೆ ಕರೆದುಕೊಂಡು ಹೋಗುತ್ತಿದ್ದಾಗ ಶಿವಲಿಂಗೇಗೌಡ ಅಲಿಯಾಸ್ ಶಿವು (50), ನಯನ್ ಕುಮಾರ್ ಅಲಿಯಾಸ್ ನಯನ್ (36) ಎಂಬುವವರು ಸಿಕ್ಕಿಬಿದ್ದಿದ್ದರು. ವಿಚಾರಣೆ ವೇಳೆ ಜಾಲದ ಕುರಿತು ಮಾಹಿತಿ ನೀಡಿದ್ದರು.
ಇವರು ನೀಡಿದ ಮಾಹಿತಿ ಮೇರೆಗೆ ದಾಳಿ ಮಾಡಿದಾಗ ಹೆಣ್ಣು ಭ್ರೂಣದ ಗರ್ಭಪಾತ ಮಾಡುತ್ತಿದ್ದ ಮೈಸೂರಿನ ಮಾತಾ ಆಸ್ಪತ್ರೆಯನ್ನು ಪೊಲೀಸರು ಸೀಜ್ ಮಾಡಿದ್ದಾರೆ. ಈ ಕೃತ್ಯ ನಡೆಸುತ್ತಿದ್ದ ಮಾತಾ ಆಸ್ಪತ್ರೆಯ ವೈದ್ಯ, ಮಾಲೀಕ ಹಾಗೂ ಇತರೆ ಸಿಬ್ಬಂದಿಯನ್ನು ಪೊಲೀಸರು ಬಂಧಿಸಿದ್ದಾರೆ.
ಚೆನ್ನೈ ಮೂಲದ ತುಳಸಿರಾಮ್, ಡಾ ಚಂದನ್ ಬಲ್ಲಾಳ್ (ಮೈಸೂರು ಮಾತಾ ಆಸ್ಪತ್ರೆ ಮಾಲೀಕ), ಆಸ್ಪತ್ರೆಯ ರಿಸಪ್ಶನಿಸ್ಟ್ ಮೀನಾ ಹಾಗೂ ಚಂದನ್ ಬಲ್ಲಾಳ್ ಪತ್ನಿ ರಿಜ್ಮಾ, ಲ್ಯಾಬ್ ಟೆಕ್ನಿಶಿಯನ್ ನಿಸ್ಸಾರ್ ಎಂಬುವವರನ್ನು ಬಂಧಿಸಿದ್ದಾರೆ. ಈಗಾಗಲೇ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧಿತರ ಸಂಖ್ಯೆ 9ಕ್ಕೆ ಏರಿಕೆ ಆಗಿದೆ.
ಭ್ರೂಣ ಲಿಂಗ ಪತ್ತೆಗೆ 20 ಸಾವಿರ ರೂ. ಹಾಗೂ ಹೆಣ್ಣು ಭ್ರೂಣ ಹತ್ಯೆಗೆ 20 ರಿಂದ 25 ಸಾವಿರ ರೂ. ದರವನ್ನು ನಿಗಧಿ ಮಾಡಿದ್ದರು. ಬಂಧಿತರು ಕಳೆದ ಎರಡು ವರ್ಷದಿಂದ ಈ ಕೃತ್ಯದಲ್ಲೇ ತೊಡಗಿದ್ದು, ಈವರೆಗೆ 900ಕ್ಕೂ ಹೆಚ್ಚು ಭ್ರೂಣ ಹತ್ಯೆ ಮಾಡಿರುವ ಬಗ್ಗೆ ಆರೋಪಿಗಳು ಬಾಯ್ಬಿಟ್ಟಿದ್ದಾರೆ.
ಇದನ್ನೂ ಓದಿ | Murder Case : ಕುಡಿತದ ಚಟ ನೋಡಿ ಬಿಟ್ಟುಹೋಗಿದ್ದ ಹೆಂಡತಿ; ಕುಡಿತಕ್ಕೆ ಹಣ ನೀಡಿಲ್ಲವೆಂದು ಹೆತ್ತಮ್ಮನಿಗೇ ಇರಿದ!
ಮಂಡ್ಯದ ಆಲೆಮನೆಯೇ ಸ್ಕ್ಯಾನಿಂಗ್ ಸೆಂಟರ್
ಬೆಂಗಳೂರು, ಮಂಡ್ಯ, ಮೈಸೂರು, ಚಾಮರಾಜನಗರ ಸೇರಿದಂತೆ ಹಲವು ಭಾಗದಲ್ಲಿ ಹೆಣ್ಣು ಮಕ್ಕಳು ಬೇಡ ಎನ್ನುವವರನ್ನು ಟಾರ್ಗೆಟ್ ಮಾಡುತ್ತಿದ್ದರು. ಗರ್ಭಿಣಿಯರನ್ನು ಕರೆದುಕೊಂಡು ಹೋಗುತ್ತಿದ್ದ ಆರೋಪಿಗಳು, ಮಂಡ್ಯದ ಆಲೆಮನೆಯಲ್ಲಿಯೇ ಸ್ಕ್ಯಾನಿಂಗ್ ಮಾಡುತ್ತಿದ್ದರು. ಭ್ರೂಣ ಲಿಂಗ ಪತ್ತೆ ಕುರಿತು ಬೈಯಪ್ಪನಹಳ್ಳಿ ಪೊಲೀಸರಿಗೆ ಮಾಹಿತಿ ದೊರೆತಾಗ ಇನ್ಸ್‌ಪೆಕ್ಟರ್ ಪ್ರಶಾಂತ್ ಅವರ ತಂಡವು ಕಾರ್ಯಾಚರಣೆ ಕೈಗೊಂಡು ಆರೋಪಿಗಳನ್ನು ಬಂಧಿಸಿದೆ.
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ