Site icon Vistara News

Kalaburagi News: ಅಂಬೇಡ್ಕರ್‌ ಪೂಜೆಗೆ ಬಾರದ ವಿದ್ಯಾರ್ಥಿಗೆ ಥಳಿಸಿ, ಅರೆಬೆತ್ತಲೆ ಮೆರವಣಿಗೆ

assault case

ಕಲಬುರಗಿ: ಹಾಸ್ಟೆಲ್‌ನಲ್ಲಿ ಡಾ.ಬಿ.ಆರ್‌. ಅಂಬೇಡ್ಕರ್ ಪೂಜೆಗೆ ಬರಲಿಲ್ಲ ಎನ್ನುವ ಕಾರಣಕ್ಕೆ ವಿದ್ಯಾರ್ಥಿಯೊಬ್ಬನ ಮೇಲೆ ಹಲ್ಲೆ ನಡೆಸಿ, ಅರೆಬೆತ್ತಲೆಯಾಗಿ ಮೆರವಣಿಗೆ ಮಾಡಿದ ಘಟನೆ ನಗರದಲ್ಲಿ (Kalaburagi News) ನಡೆದಿದೆ. ವಿದ್ಯಾರ್ಥಿಯ ಬಟ್ಟೆ ಬಿಚ್ಚಿಸಿ ಥಳಿಸಿರುವ ಹಾಸ್ಟೆಲ್ ವಿದ್ಯಾರ್ಥಿಗಳು, ಆತನನ್ನು ಅರೆಬೆತ್ತಲೆಗೊಳಿಸಿ ಕೈಯಲ್ಲಿ ಅಂಬೇಡ್ಕರ್ ಫೋಟೊ ಕೊಟ್ಟು ಮೆರವಣಿಗೆ ಮಾಡಿ ಅಮಾನವೀಯವಾಗಿ ವರ್ತಿಸಿದ್ದಾರೆ.

ನಗರದ ಹೈಕೋರ್ಟ್‌ ಹತ್ತಿರದ ಬಾಲಕರ ಹಾಸ್ಟೆಲ್‌ನಲ್ಲಿ ಗುರುವಾರ ಘಟನೆ ನಡೆದಿದೆ. ಹಾಸ್ಟೆಲ್‌ನಲ್ಲಿ ಅಂಬೇಡ್ಕರ್ ಭಾವಚಿತ್ರಕ್ಕೆ ವಿದ್ಯಾರ್ಥಿಗಳು ಪೂಜೆ ಸಲ್ಲಿಸುತ್ತಿದ್ದರು. ಆದರೆ, ಕೆಲಸದ ನಿಮಿತ್ತ ಪೂಜೆಗೆ ಹೋಗಲು ವಿದ್ಯಾರ್ಥಿಗೆ ಸಾಧ್ಯವಾಗಿರಲಿಲ್ಲ ಎನ್ನಲಾಗಿದೆ. ಅದೇ ಕಾರಣಕ್ಕೆ ವಿದ್ಯಾರ್ಥಿಗೆ ಹಿಗ್ಗಾಮುಗ್ಗಾ ಥಳಿಸಿ, ಅರೆಬೆತ್ತಲೆಗೊಳಿಸಿ ಮೆರವಣಿಗೆ ಮಾಡಲಾಗಿದೆ.

ಹಲ್ಲೆಗೊಳಗಾದ 17 ವರ್ಷದ ವಿದ್ಯಾರ್ಥಿಯು, ಜಿಲ್ಲೆಯ ಕಮಲಾಪುರ ತಾಲೂಕಿನ ತಾಂಡಾವೊಂದರ ನಿವಾಸಿಯಾಗಿದ್ದಾನೆ. ಈತ ಖಾಸಗಿ ಕಾಲೇಜಿನಲ್ಲಿ ಪಿಯುಸಿ ಓದುತ್ತಿದ್ದಾನೆ. ಈತನ ತಂದೆ-ತಾಯಿ ಮುಂಬೈನಲ್ಲಿ ಕೆಲಸ ಮಾಡುತ್ತಿದ್ದಾರೆ ಎನ್ನಲಾಗಿದೆ. ಹೀಗಾಗಿ ವಿದ್ಯಾರ್ಥಿಯು ಸಮಾಜ ಕಲ್ಯಾಣ ಇಲಾಖೆಯ ಹಾಸ್ಟೆಲ್‌ನಲ್ಲಿ ಇದ್ದುಕೊಂಡು ವಿದ್ಯಾಭ್ಯಾಸ ಮಾಡುತ್ತಿದ್ದ.

ವಿದ್ಯಾರ್ಥಿ ಮೇಲೆ ಹಲ್ಲೆ ಮಾಡಿರುವ ವಿದ್ಯಾರ್ಥಿಗಳೆಲ್ಲರೂ ಅಪ್ರಾಪ್ತ ವಯಸ್ಸಿನ ಬಾಲಕರಾಗಿದ್ದಾರೆ. ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ವಿದ್ಯಾರ್ಥಿಗಳ ವಿಚಾರಣೆ ನಡೆಸಿದ್ದಾರೆ. ಘಟನೆ ಸಂಬಂಧ ಅಶೋಕ ನಗರ ಪೊಲೀಸ್ ಠಾಣೆಯಲ್ಲಿ ಐಪಿಸಿ ಸೆ.341, 323, 504, 505(2) 506 ಅಡಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ | Bus Accident : ಅಡ್ಡ ಬಂದ ಬೈಕ್‌ ತಪ್ಪಿಸಲು ಹೋಗಿ ಪಲ್ಟಿ ಹೊಡೆದ ಬಸ್‌; ಹೊತ್ತಿ ಉರಿದ ಸ್ಕೂಟರ್‌

ಇತ್ತೀಚೆಗೆ ಅಂಬೇಡ್ಕರ್ ಭಾವಚಿತ್ರಕ್ಕೆ ದುಷ್ಕರ್ಮಿಗಳು ಅವಮಾನಿಸಿದ್ದ ಘಟನೆ ಜಿಲ್ಲೆಯಾದ್ಯಂತ ಭಾರೀ ಆಕ್ರೋಶಕ್ಕೆ ಕಾರಣವಾಗಿತ್ತು. ಘಟನೆಯನ್ನು ಖಂಡಿಸಿ ದಲಿತ ಸಂಘಟನೆಗಳು ಪ್ರತಿಭಟನೆ ನಡೆಸಿದ್ದವು. ಇದರ ಬೆನ್ನಲ್ಲೇ ಅಂಬೇಡ್ಕರ್ ಪೂಜೆ ಸಂಬಂಧ ವಿದ್ಯಾರ್ಥಿ ಮೇಲೆ ಹಲ್ಲೆ ನಡೆಸಲಾಗಿದೆ.

Exit mobile version