ತುಮಕೂರು: ಖಾಸಗಿ ಶಾಲಾ ಬಸ್‌ನಿಂದ ಬಿದ್ದು 4ನೇ ತರಗತಿ ವಿದ್ಯಾರ್ಥಿ ಮೃತಪಟ್ಟಿರುವ ಘಟನೆ ಜಿಲ್ಲೆಯ ಕುಣಿಗಲ್ ಪಟ್ಟಣದಲ್ಲಿ ನಡೆದಿದೆ. ಬಿಜಿಎಸ್ ಪಬ್ಲಿಕ್ ಸ್ಕೂಲ್ ಬಸ್‌ನಿಂದ ವಿದ್ಯಾರ್ಥಿ ಆಯತಪ್ಪಿ ಕೆಳಗೆ ಬಿದ್ದಾಗ, ತಲೆ ಮೇಲೆ ಚಕ್ರ ಹರಿದಿದ್ದರಿಂದ ದುರಂತ (Bus Accident) ಸಂಭವಿಸಿದೆ.
ಕುಣಿಗಲ್ ತಾಲೂಕಿನ ಕಟ್ಟಿಗೇನಹಳ್ಳಿ ಗ್ರಾಮದ ನಿವಾಸಿ ಮೋಹಿತ್ (10) ಮೃತ ದುರ್ದೈವಿ. ಬಿಜಿಎಸ್ ಶಾಲೆಯಲ್ಲಿ 4ನೇ ತರಗತಿ ಓದುತ್ತಿದ್ದ ಮೋಹಿತ್, ಚಲಿಸುತ್ತಿದ್ದ ಶಾಲಾ ಬಸ್ ಡೋರ್‌ನಿಂದ ಆಯತಪ್ಪಿ ಹೊರಗೆ ಬಿದ್ದಿದ್ದಾನೆ. ಆ ವೇಳೆ ಮೋಹಿತ್ ತಲೆ ಮೇಲೆ ಬಸ್ ಚಕ್ರ ಹರಿದಿದ್ದರಿಂದ ಸ್ಥಳದಲ್ಲಿಯೇ ಮೃತಪಟ್ಟಿದ್ದಾನೆ.
ಘಟನೆಗೆ ಪೋಷಕರು, ಸಂಬಂಧಿಕರು ಅಕ್ರೋಶ ಹೊರಹಾಕಿದ್ದು, ಬಿಜಿಎಸ್ ಶಾಲೆ ಬಳಿ ಮೋಹಿತ್ ಮೃತದೇಹವಿಟ್ಟು ಪ್ರತಿಭಟನೆ ನಡೆಸಿದರು.
ಇದನ್ನೂ ಓದಿ | Elephant attack : ಕೊಡಗಿನಲ್ಲಿ ಮುಂದುವರಿದ ಆನೆ ದಾಳಿ; ಕ್ಷಿಪ್ರ ಕಾರ್ಯಾಚರಣೆ ಸಿಬ್ಬಂದಿಯೇ ಬಲಿ
ವೈದ್ಯನ ಮೇಲೆ ಗುಂಡಿನ ದಾಳಿ ಪ್ರಕರಣದಲ್ಲಿ ಇಬ್ಬರ ಬಂಧನ
ರಾಯಚೂರು: ಖ್ಯಾತ ವೈದ್ಯನ ಮೇಲೆ ಗುಂಡಿನ ದಾಳಿ ಪ್ರಕರಣದಲ್ಲಿ ಇಬ್ಬರು ಆರೋಪಿಗಳನ್ನು ರಾಯಚೂರು ಗ್ರಾಮೀಣ ಪೊಲೀಸರರು ಬಂಧಿಸಿದ್ದಾರೆ. ಈ ಬಗ್ಗೆ ಬಳ್ಳಾರಿ ವಲಯದ ಐಜಿ ಲೋಕೇಶ್ ಕುಮಾರ್ ಅವರು ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ್ದು, ಎ1 ಸೈಫುದ್ದಿನ್ ಹಾಗೂ ಎ2 ಕಮರುದ್ದಿನ್ ಎಂಬುವವರನ್ನು ಬಂಧಿಸಲಾಗಿದೆ. ಇವರು ನಾಡ ಪಿಸ್ತೂಲ್‌ನಿಂದ ವೈದ್ಯನ ಕಾರಿನ ಮೇಲೆ ಎರಡು ಸುತ್ತು ಫೈರ್ ಮಾಡಿದ್ದರು. ದೂರುದಾರ ಡಾ. ಜಯಪ್ರಕಾಶ್ ಪಾಟೀಲ್‌ರಿಂದ ಹಣ ವಸೂಲಿ ಮಾಡಲು ಕೃತ್ಯ ಎಸಗಿದ್ದರು. ಈ ಬಗ್ಗೆ ತನಿಖೆ ನಡೆಸಲಾಗುತ್ತಿದೆ ಎಂದು ತಿಳಿಸಿದ್ದಾರೆ.
ಲೋಕಾಯುಕ್ತ ಪೊಲೀಸರ ಅತಿಥಿಯಾದ ಆರ್.ಟಿ.ಒ ಅಟೆಂಡರ್
ಚಿಕ್ಕಮಗಳೂರು: 3000 ರೂ. ಲಂಚ ಪಡೆಯುವಾಗ ಆರ್.ಟಿ.ಒ ಅಟೆಂಡರ್ ಅನ್ನು ಲೋಕಾಯುಕ್ತ ಅಧಿಕಾರಿಗಳು ವಶಕ್ಕೆ ಪಡೆದಿರುವ ಘಟನೆ ಚಿಕ್ಕಮಗಳೂರು ಆರ್.ಟಿ.ಒ ಕಚೇರಿಯಲ್ಲಿ ನಡೆದಿದೆ. ಪ್ರಾದೇಶಿಕ ಸಾರಿಗೆ ಅಧಿಕಾರಿ ಪರವಾಗಿ ಲಂಚ ಸ್ವೀಕರಿಸುತ್ತಿದ್ದಾಗ ಅಟೆಂಡರ್ ಲತಾ ಎಂಬುವವರು ಸಿಕ್ಕಿಬಿದ್ದಿದ್ದಾರೆ.
ಬಾಡಿಗೆ ಬೈಕ್‌ಗೆ ಪರವಾನಗಿಗಾಗಿ ಅಂಗಡಿ ಮಾಲೀಕರೊಬ್ಬರು ಆರ್‌ಟಿಒ ಕಚೇರಿಗೆ ಅರ್ಜಿ ಸಲ್ಲಿಸಿದ್ದರು. ಜತೆಗೆ ರಾಜ್ಯಾದ್ಯಂತ ಸಂಚರಿಸಲು ಅನುಮತಿಗಾಗಿ 1 ಬೈಕ್‌ಗೆ 500 ರೂ.ನಂತೆ 8 ಬೈಕ್‌ಗೆ 4000 ರೂ. ಸರ್ಕಾರಿ ಫೀಸ್ ಕಟ್ಟಿದ್ದರು. ಆದರೆ, ಫೈಲ್ ಪೆಂಡಿಂಗ್ ಇಟ್ಟು ಬೈಕ್‌ಗೆ ತಲಾ 1000 ರೂ.ಗಳಂತೆ 8 ಸಾವಿರ ರೂ. ನೀಡುವಂತೆ ಪ್ರಾದೇಶಿಕ ಸಾರಿಗೆ ಅಧಿಕಾರಿ(ಆರ್‌ಟಿಒ) ಮಧುರಾ ಬೇಡಿಕೆ ಇಟ್ಟಿದ್ದರು.
ಇದನ್ನೂ ಓದಿ | Heart Attack : ಬಿಇಒ ಕಚೇರಿ SDAಗೆ ಹೃದಯಾಘಾತ; ಹಿರಿಯ ಅಧಿಕಾರಿ ಕಿರುಕುಳ ಕಾರಣ ಎಂದು ಶವ ಇಟ್ಟು ಪ್ರತಿಭಟನೆ
ಅಟೆಂಡರ್ ಲತಾ ಮೂಲಕ ಆರ್.ಟಿ.ಒ. ಮಧುರಾ ಡೀಲ್ ನಡೆಸುತ್ತಿದ್ದರು ಎಂಬ ಆರೋಪ ಕೇಳಿಬಂದಿದೆ. ಮೊದಲೇ ನಡೆದ ಮಾತುಕತೆಯಂತೆ ಅಂಗಡಿ ಮಾಲೀಕನಿಂದ 3000 ರೂ. ಲಂಚ ಪಡೆಯುವಾಗ ಅಟೆಂಡರ್ ಲತಾ ಸಿಕ್ಕಿಬಿದ್ದಿದ್ದಾರೆ. ಹೀಗಾಗಿ ಅಟೆಂಡರ್ ಲತಾ, ಆರ್.ಟಿ.ಒ. ಮಧುರಾ ವಿರುದ್ಧ ಲೋಕಾಯುಕ್ತ ಅಧಿಕಾರಿಗಳು ಪ್ರಕರಣ ದಾಖಲಿಸಿಕೊಂಡಿದ್ದಾರೆ.