ಗದಗ: ಅತಿಥಿ ಶಿಕ್ಷಕನೊಬ್ಬ ಹುಚ್ಚು ಹಿಡಿದವನಂತೆ, ಮನ ಬಂದಂತೆ ಥಳಿಸಿದ ಪರಿಣಾಮವಾಗಿ ಬಾಲಕನೊಬ್ಬ (Student death) ಮೃತಪಟ್ಟಿದ್ದಾನೆ. ಗದಗ ಜಿಲ್ಲೆಯ ನರಗುಂದ ತಾಲೂಕಿನ ಹದಲಿ ಗ್ರಾಮದಲ್ಲಿ ಈ ಘಟನೆ ನಡೆದಿದ್ದು ಭರತ್ ಬಾರಕೇರಿ (೯) ಎಂಬ ಬಾಲಕ ಅತಿಥಿ ಶಿಕ್ಷಕನ ರಾಕ್ಷಸೀ ಹೊಡೆತಕ್ಕೆ ಸಿಲುಕಿ ಪ್ರಾಣ ಕಳೆದುಕೊಂಡಿದ್ದಾನೆ. ಮುತ್ತು ಹದಲಿ ಎಂಬ ಅತಿಥಿ ಶಿಕ್ಷಕನೇ ಈ ರೀತಿ ಹಲ್ಲೆ ಮಾಡಿದವನು.
ಹದಲಿ ಶಾಲೆಯ ಅತಿಥಿ ಶಿಕ್ಷಕನಾಗಿರುವ ಮುತ್ತು ಹದಲಿ ವಿದ್ಯಾರ್ಥಿಯ ಹಲ್ಲೆ ಮಾಡಿದ್ದು, ಗಂಭೀರ ಗಾಯಗೊಂಡ ಬಾಲಕನನ್ನು ಆಸ್ಪತ್ರೆಗೆ ಸೇರಿಸಲಾಗಿತ್ತು. ಆದರೆ, ಹುಡುಗ ಚೇತರಿಸಿಕೊಳ್ಳದೆ ಮೃತಪಟ್ಟಿದ್ದಾನೆ.
ಭರತ್‌ನ ತಾಯಿ ಗೀತಾ ಬಾರಕೇರಿ ಅದೇ ಶಾಲೆಯಲ್ಲಿ ಸಹಶಿಕ್ಷಕಿಯಾಗಿದ್ದು, ಆಕೆಯ ಮೇಲೂ ಮುತ್ತು ಹದಲಿ ಹಲ್ಲೆ ಮಾಡಿದ್ದಾನೆ. ಆಕೆಗೂ ಗಂಭೀರ ಗಾಯಗಳಾಗಿದ್ದು, ಜನಾಕ್ರೋಶ ಮೇರೆ ಮೀರಿದೆ. ಗದಗ ಜಿಲ್ಲೆ ನರಗುಂದ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಶಿಕ್ಷಕ ಮುತ್ತು ಪರಾರಿಯಾಗಿದ್ದಾನೆ. ಶೋಕಿಲಾಲನೂ ಆಗಿರುವ ಆತನಿಗಾಗಿ ಪೊಲೀಸರು ಹುಡುಕುತ್ತಿದ್ದಾರೆ.
ಭರತ್ ಎಂಬ ವಿದ್ಯಾರ್ಥಿಗೆ ಮುತ್ತು ಹದಲಿ ಹಲ್ಲೆ ನಡೆಸಿದಾಗ ಆತ ಅಳುತ್ತಾ ಇನ್ನೊಂದು ಕೋಣೆಯಲ್ಲಿ ಪಾಠ ಮಾಡುತ್ತಿದ್ದ ಅತಿಥಿ ಶಿಕ್ಷಕಿಯೇ ಆಗಿರುವ ತನ್ನ ತಾಯಿ ಬಳಿಗೆ ಹೋಗಿದ್ದಾನೆ. ಆಗ ಆಕೆ ಹೊರಬಂದು ಯಾಕೆ ಹೊಡೆಯುತ್ತೀರಿ ಎಂದು ಕೇಳಿದ್ದಾರೆ ಎನ್ನಲಾಗಿದೆ. ಅಷ್ಟು ಹೊತ್ತಿಗೆ ಮುತ್ತು ಹಡಗಲಿ ಸಲಾಕೆ ಹಿಡಿದು ಆಕೆಗೂ ಹೊಡೆದಿದ್ದಾನೆ. ಇದನ್ನು ಪ್ರಶ್ನಿಸಿದ ಮತ್ತೊಬ್ಬ ಶಿಕ್ಷಕನಿಗೂ ಹೊಡೆಯಲಾಗಿದೆ. ಈ ನಡುವೆ ಸಿಟ್ಟಿನ ಭರದಲ್ಲಿ ಭರತ್‌ನನ್ನು ಕೆಳಕ್ಕೆ ತಳ್ಳಿದ್ದಾನೆ ಎಂದು ಪ್ರಾಥಮಿಕ ಮಾಹಿತಿಗಳು ತಿಳಿಸಿವೆ.
ಪ್ರವಾಸಕ್ಕೆ ಹೋಗಿ ಬಂದಿದ್ದರು
ಈ ಭಾಗದಲ್ಲಿ ಉತ್ತಮ ಹೆಸರಿರುವ ಈ ಶಾಲೆಯ ವಿದ್ಯಾರ್ಥಿಗಳು ಎರಡು ದಿನದ ಹಿಂದಷ್ಟೇ ಶ್ರೀಶೈಲ ಪ್ರವಾಸಕ್ಕೆ ಹೋಗಿಬಂದ ಖುಷಿಯಲ್ಲಿದ್ದರು. ಪ್ರವಾಸದ ಅನುಭವಗಳನ್ನು ಹಂಚಿಕೊಳ್ಳುತ್ತಿದ್ದ ನಡುವೆಯೇ ಅತಿಥಿ ಶಿಕ್ಷಕ ರಾಕ್ಷಸನಂತೆ ವರ್ತಿಸಿದ್ದಾನೆ. ಆತನ ಮೃಗೀಯ ವರ್ತನೆಯ ಹಿಂದಿನ ಕಾರಣವೇನು ಎನ್ನುವ ಬಗ್ಗೆ ಪೊಲೀಸರಿಂದ ತನಿಖೆ ನಡೆಯಬೇಕಾಗಿದೆ. ಪೊಲೀಸರು ಈಗ ಆತನ ಬೆನ್ನು ಬಿದ್ದಿದ್ದಾರೆ. ಬಾಲಕನ ತಾಯಿಗೂ ಗಂಭೀರ ಹೊಡೆತ ಬಿದ್ದಿದ್ದು ಆಕೆ ನೀಡುವ ಹೇಳಿಕೆಯೂ ಮಹತ್ವದ್ದಾಗಲಿದೆ.
ಇದನ್ನೂ ಓದಿ | Sexual Harrassment | ಹಾಸ್ಟೆಲ್ ವಿದ್ಯಾರ್ಥಿನಿಯರಿಗೆ ಲೈಂಗಿಕ ಕಿರುಕುಳ ನೀಡುತ್ತಿದ್ದ ಶಿಕ್ಷಕ ಅಮಾನತು