ತುಮಕೂರು: ಜೀವನದಲ್ಲಿ ಜಿಗುಪ್ಸೆಗೊಂಡು ಹಾಸ್ಟೆಲ್‌ನಲ್ಲಿ ವಿದ್ಯಾರ್ಥಿಯೊಬ್ಬ ನೇಣು ಬಿಗಿದುಕೊಂಡು ಆತ್ಮಹತ್ಯೆ (Self Harming) ಮಾಡಿಕೊಂಡಿರುವುದು ಹನುಮಂತಪುರ ಬಳಿಯಿರುವ ಎಸ್‌ಸಿ, ಎಸ್‌ಟಿ ಹಾಸ್ಟೆಲ್‌ನಲ್ಲಿ ನಡೆದಿದೆ. ಕಳೆದ ಎರಡು ದಿನಗಳ ಹಿಂದೆ ವಿದ್ಯಾರ್ಥಿ ಆತ್ಮಹತ್ಯೆಗೆ ಶರಣಾಗಿರುವ ಶಂಕೆ ವ್ಯಕ್ತವಾಗಿದ್ದು, ಮಂಗಳವಾರ ಮಧ್ಯಾಹ್ನ ಬೆಳಕಿಗೆ ಬಂದಿದೆ.
ಮಧುಗಿರಿ ತಾಲೂಕಿನ ಕಸಬಾ ಹೋಬಳಿಯ ಮುದ್ದೇನಹಳ್ಳಿ ಗ್ರಾಮದ ಅಂಜನ್ ಕುಮಾರ್ (19) ಮೃತ ವಿದ್ಯಾರ್ಥಿ. ಮಕರ ಸಂಕ್ರಾಂತಿ ಹಬ್ಬದ ರಜೆ ಹಿನ್ನೆಲೆಯಲ್ಲಿ ಹಾಸ್ಟೆಲ್‌ನಲ್ಲಿದ್ದ ವಿದ್ಯಾರ್ಥಿಗಳೆಲ್ಲರೂ ತಮ್ಮ ಊರುಗಳಿಗೆ ತೆರಳಿದ್ದರು. ಹೀಗಾಗಿ ಯಾರೂ ಇಲ್ಲದ ವೇಳೆ ವಿದ್ಯಾರ್ಥಿ ಆತ್ಮಹತ್ಯೆಗೆ ಶರಣಾಗಿದ್ದಾನೆ.
ಹಾಸ್ಟೆಲ್‌ನಲ್ಲಿ ಡೆತ್‌ನೋಟ್ ಸಿಕ್ಕಿದ್ದು, ಜೀವನದಲ್ಲಿ ಜಿಗುಪ್ಸೆಗೊಂಡು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದೇನೆ. ನನ್ನ ಸಾವಿಗೆ ಯಾರೂ ಕಾರಣರಲ್ಲ ಎಂದು ಅಂಜನ್ ಕುಮಾರ್ ಬರೆದಿರುವುದು ಕಂಡುಬಂದಿದೆ. ನನ್ನನ್ನು ಇಷ್ಟು ದಿನ ಸಾಕಿ ಸಲುಹಿದ ದೊಡ್ಡಪ್ಪ-ದೊಡ್ಡಮ್ಮ ಅವರ ಋಣವನ್ನು 7 ಜನ್ಮವಾದರೂ ತೀರಿಸಲು ಸಾಧ್ಯವಿಲ್ಲ. ನಾನು ಯಾರಿಗಾದರೂ ನೋವು ಕೊಟ್ಟಿದ್ದರೆ ಕ್ಷಮಿಸಿಬಿಡಿ ಗೆಳೆಯರೇ ಎಂದು ಡೆತ್‌ನೋಟ್‌ನಲ್ಲಿ ಬರೆಯಲಾಗಿದೆ.
ಸ್ಥಳಕ್ಕೆ ಎನ್‌ಇಪಿಎಸ್ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ. ಹಾಸ್ಟೆಲ್‌ಗೆ ಜಿಲ್ಲಾಧಿಕಾರಿ ಶುಭಕಲ್ಯಾಣ್, ಜಿಲ್ಲಾ ಪಂಚಾಯಿತಿ ಸಿಇಒ ಪ್ರಭು ಹಾಗೂ ಸಮಾಜ ಕಲ್ಯಾಣ ಇಲಾಖೆ ಜಂಟಿ ನಿರ್ದೇಶಕ ಕೃಷ್ಣಪ್ಪ ಭೇಟಿ ನೀಡಿ ಮಾಹಿತಿ ಪಡೆದುಕೊಂಡಿದ್ದು, ಎನ್‌ಇಪಿಎಸ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಸಾಲದ ಬಾಧೆಯಿಂದ ವಿಷ ಸೇವಿಸಿ ರೈತ ಆತ್ಮಹತ್ಯೆ
ದಾವಣಗೆರೆ: ಸಾಲ ಬಾಧೆಯಿಂದ ನೊಂದು ವಿಷ ಸೇವಿಸಿ ರೈತ ಆತ್ಮಹತ್ಯೆ ಮಾಡಿಕೊಂಡಿರುವುದು ಹರಿಹರ ತಾಲೂಕಿನ ಬನ್ನಿಕೋಡು ಗ್ರಾಮದಲ್ಲಿ ನಡೆದಿದೆ. ಕರೆಕಾಳವ್ವರ ಸಿದ್ದಪ್ಪ (52) ಮೃತ ರೈತ.
ರಾಷ್ಟ್ರೀಕೃತ ಹಾಗೂ ಸಹಕಾರಿ ಬ್ಯಾಂಕ್‌ಗಳಲ್ಲಿ ರೈತ 12 ಲಕ್ಷಕ್ಕೂ ಅಧಿಕ ಸಾಲ ಮಾಡಿದ್ದರು ಎನ್ನಲಾಗಿದೆ. ಸಾಲದ ಬಾಧೆಯಿಂದ ಕಳೆದ ಭಾನುವಾರ ವಿಷ ಸೇವಿಸಿದ್ದರು. ಅವರನ್ನು ಚಿಕಿತ್ಸೆಗಾಗಿ ದಾವಣಗೆರೆ ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಮಂಗಳವಾರ ಮೃತಪಟ್ಟಿದ್ದಾರೆ. ಬರ ಹಾಗೂ ಸಾಲಗಾರರ ಕಾಟಕ್ಕೆ ಬೇಸತ್ತು ರೈತ ಆತ್ಮಹತ್ಯೆ ನಿರ್ಧಾರ ಮಾಡಿದ್ದಾರೆ.
ಇದನ್ನೂ ಓದಿ | Rama Mandir : ರಾಮ ಮಂದಿರ ಅಕ್ಷತೆ ವಿತರಿಸುತ್ತಿದ್ದವನ ಮೇಲೆ ಪುತ್ತಿಲ ಟೀಮ್ ಹಲ್ಲೆ
ಪ್ರೇಮಿಗಳ ನಡುವೆ ಕಿರಿಕ್; ನಡುರಸ್ತೆಯಲ್ಲೇ ಯುವತಿಗೆ ಚೂರಿ ಹಾಕಿದ ಯುವಕ
ಶಿವಮೊಗ್ಗ: ಯುವಕನೊಬ್ಬ ನಡುರಸ್ತೆಯಲ್ಲೇ ತನ್ನ ಪ್ರೇಯಸಿಗೆ ಚೂರಿಯಿಂದ ಇರಿದ (lover stabbed at Shivamogga) ಘಟನೆ ಶಿವಮೊಗ್ಗದಲ್ಲಿ (Shivamogga news) ನಡೆದಿದೆ. ಪರಸ್ಪರ ಪ್ರೀತಿಸುತ್ತಿದ್ದ (Love Case) ಅವರಿಬ್ಬರ ನಡುವೆ ಯಾವುದೋ ಕಾರಣಕ್ಕೆ ಕಿರಿಕ್ ಉಂಟಾಗಿ ಭಾರಿ ಜಗಳ ನಡೆದಿದೆ. ಈ ನಡುವೆ ಯುವಕ ಆಕೆಗೆ ಚೂರಿಯಿಂದ ಇರಿದಿದ್ದಾನೆ.
28 ವರ್ಷದ ಚೇತನ್ ಮತ್ತು 22 ವರ್ಷದ ಅಂಬಿಕಾ ಒಂದೇ ಊರಿನವರು. ಶಿವಮೊಗ್ಗ ಜಿಲ್ಲೆಯ ಆಡೋನಹಳ್ಳಿ ಗ್ರಾಮದ ಇವರಿಬ್ಬರು ಪರಸ್ಪರ ಪ್ರೀತಿಸುತ್ತಿದ್ದರು. ಇಬ್ಬರೂ ಊರಿನಿಂದ ಶಿವಮೊಗ್ಗಕ್ಕೆ ಬಂದಿದ್ದರು. ಶಿವಪ್ಪ ನಾಯಕ ವೃತ್ತದ ಬಳಿ ಬಂದಿದ್ದ ಅವರು ಪರಸ್ಪರ ಜಗಳವಾಡಿಕೊಂಡಿದ್ದರು. ಆಗ ಯುವಕ ಯುವತಿಗೆ ಚೂರಿಯಿಂದ ಇರಿದಿದ್ದಾನೆ.
ನಡು ರಸ್ತೆಯಲ್ಲಿ ಚೂರಿ ಇರಿತಕ್ಕೆ ಒಳಗಾದ ಅಂಬಿಕಾ ತಪ್ಪಿಸಿಕೊಳ್ಳಲು ಯತ್ನಿಸಿದ್ದಾಳೆ. ಆಕೆ ಸ್ವಲ್ಪ ದೂರ ಹೋಗಿ ಬಿದ್ದಿದ್ದು, ಕೂಡಲೇ ಅಲ್ಲಿದ್ದವರು ಚೇತನ್‌ನನ್ನು ತಡೆದರು. ಮತ್ತು ಇರಿತಕ್ಕೆ ಒಳಗಾದ ಅಂಬಿಕಾಳನ್ನು ಕೂಡೇ ಖಾಸಗಿ ಆಸ್ಪತ್ರೆಗೆ ದಾಖಲಿಸಿದರು. ಅಲ್ಲಿ ಪ್ರಾಥಮಿಕ ಚಿಕಿತ್ಸೆ ನೀಡಲಾಗಿದ್ದು, ಯುವತಿ ಜೀವಾಪಾಯದಿಂದ ಪಾರಾದಂತೆ ಕಂಡುಬಂದಿದ್ದಾಳೆ.
ಸಾರ್ವಜನಿಕರಿಂದ ಯುವಕನಿಗೆ ಧರ್ಮದೇಟು
ಈ ನಡುವೆ, ಯುವತಿಗೆ ನಡು ಬೀದಿಯಲ್ಲಿ ಚೂರಿಯಿಂದ ಇರಿದ ವಿಲಕ್ಷಣ ಪ್ರೇಮಿ ಚೇತನ್‌ನನ್ನು ಹಿಡಿದುಕೊಂಡ ಸಾರ್ವಜನಿಕರು ಆತನಿಗೆ ಚೆನ್ನಾಗಿ ಬಾರಿಸಿದ್ದಾರೆ. ಸಾರ್ವಜನಿಕರ ಕೈಯಲ್ಲಿ ಧರ್ಮದೇಟು ತಿಂದ ಈತನೂ ಅಸ್ವಸ್ಥನಾಗಿದ್ದು, ಆತನನ್ನು ಕೂಡಾ ಆಸ್ಪತ್ರೆಗೆ ದಾಖಲಿಸಲಾಗಿದೆ. ಕೋಟೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಇದನ್ನೂ ಓದಿ | Ghati Subramanya: ಘಾಟಿ ಸುಬ್ರಹ್ಮಣ್ಯದಲ್ಲಿ ಸಾರಿಗೆ ಬಸ್ ಚಕ್ರಕ್ಕೆ ಸಿಲುಕಿ ವ್ಯಕ್ತಿ ಸಾವು
ಜತೆಯಾಗಿ ಬಂದಿದ್ದ ಅವರಿಬ್ಬರು ಯಾಕೆ ಜಗಳಾಡಿಕೊಂಡರು.? ಯುವಕನಿಗೆ ಚೂರಿ ಎಲ್ಲಿ ಸಿಕ್ಕಿತು? ಆತ ಆಕೆಯನ್ನು ಕೊಲೆ ಮಾಡಲೆಂದೇ ಹವಣಿಸುತ್ತಿದ್ದನೇ ಎಂಬಿತ್ಯಾದಿ ಪ್ರಶ್ನೆಗಳಿಗೆ ಉತ್ತರ ಸಿಗಬೇಕಾಗಿದೆ.