ಮಂಗಳೂರು: ಯುವಕರನ್ನು ಪ್ರಚೋದಿಸಿ ಅವರ ಬೆತ್ತಲೆ ವಿಡಿಯೊ ಮಾಡಿಕೊಂಡು ಬಳಿಕ ಹಣಕ್ಕಾಗಿ ಬೇಡಿಕೆ ಇಟ್ಟು ಬ್ಲ್ಯಾಕ್‌ಮೇಲ್ (Video blackmail) ಮಾಡುವ ಜಾಲ ಎಗ್ಗಿಲ್ಲದೆ ಮುಂದುವರಿದಿದ್ದು, ಇದಕ್ಕೆ ಧರ್ಮಸ್ಥಳದ ಯುವಕನೊಬ್ಬ ಬಲಿಯಾಗಿದ್ದಾನೆ.
ಇನ್‌ಸ್ಟಾ ಗ್ರಾಂ ಮೂಲಕ ಮಹಿಳೆಯ ಹೆಸರಿನಲ್ಲಿ ಸಂಪರ್ಕಿಸಿದ ಜಾಲದ ಬ್ಲ್ಯಾಕ್‌ಮೇಲ್‌ನಿಂದ ನೊಂದು ಆತ್ಮಹತ್ಯೆ ಮಾಡಿಕೊಂಡ ಯುವಕನನ್ನು ಧರ್ಮಸ್ಥಳ ನಿವಾಸಿ ಹರ್ಷಿತ್(19) ಎಂದು ಗುರುತಿಸಲಾಗಿದೆ.
ಪದವಿ ವಿದ್ಯಾರ್ಥಿಯಾಗಿರುವ ಹರ್ಷಿತ್‌ಗೆ ೧೫ ದಿನಗಳ ಹಿಂದೆ ಇನ್‌ಸ್ಟಾ ಗ್ರಾಂನಲ್ಲಿ ಅಪರಿಚಿತ ವ್ಯಕ್ತಿಯೊಬ್ಬಳು ಪರಿಚಯವಾಗಿದ್ದಳು. ಸಾವಿತ್ರಿ ಎಂಬ ಹೆಸರಿನಿಂದ ಗುರುತಿಸಿಕೊಂಡ ಆಕೆ ಹರ್ಷಿತ್ ಜತೆ ಆತ್ಮೀಯವಾಗಿ ಚಾಟ್ ಮಾಡುತ್ತಾ ಮನ ಗೆದ್ದಿದ್ದಳು. ಕೆಲವು ದಿನಗಳ ಹಿಂದೆ ಆಕೆ ಚಾಟಿಂಗ್ ಮಾಡುತ್ತಲೇ ಬೆತ್ತಲೆ ವಿಡಿಯೊ ಮಾಡುವಂತೆ ಪ್ರಚೋದಿಸಿದ್ದಳು. ಆಕೆಯ ಮಾತಿಗೆ ಕಟ್ಟುಬಿದ್ದ ಹರ್ಷಿತ್ ವಿಡಿಯೋ ಆನ್ ಮಾಡಿದ್ದ.
ಇದಾಗಿ ಸ್ವಲ್ಪ ಹೊತ್ತಿನಿಂದಲೇ ಹರ್ಷಿತ್‌ಗೆ ಬ್ಲ್ಯಾಕ್ ಮೇಲ್ ಶುರುವಾಗಿತ್ತು. ಮೊದಲು ಯುವತಿ ಸಂಪರ್ಕದಲ್ಲಿದ್ದರೆ ಬಳಿಕ ಯಾರ‍್ಯಾರೋ ಆತನಿಗೆ ಫೋನ್ ಮಾಡಿ ಹಣಕ್ಕೆ ಬೇಡಿಕೆ ಇಡಲು ಶುರು ಮಾಡಿದರು. ಮೊದಲು ೧೧ ಸಾವಿರ ರೂ.ಗೆ ಬೇಡಿಕೆ ಇಟ್ಟಿದ್ದರು. ಆದರೆ, ಕಾಲೇಜು ವಿದ್ಯಾರ್ಥಿಯಾಗಿರುವ ಆತನಲ್ಲಿ ಅಷ್ಟೆಲ್ಲ ಹಣ ಇರಲಿಲ್ಲ. ಕೊನೆಗೆ ೧ ಸಾವಿರ ರೂ. ಕೊಟ್ಟು ಇನ್ನು ಮುಂದೆ ಕಾಡಬೇಡಿ ಎಂದು ಮನವಿ ಮಾಡಿದ್ದ.
ಆದರೆ, ಕಾಟ ಮುಂದುವರಿದಿತ್ತು. ಕೊನೆಗೆ ಹಣ ಹೊಂದಿಸಲಾಗದೆ ಇದ್ದಾಗ ನಿನ್ನ ವಿಡಿಯೊವನ್ನು ಸೋಷಿಯಲ್ ಮೀಡಿಯಾದಲ್ಲಿ ಹಾಕುವುದಾಗಿ ಬೆದರಿಕೆ ಹಾಕಿದರು. ಒಂದು ಕಡೆ ಕೊಡಲು ಹಣವಿಲ್ಲ, ಇನ್ನೊಂದು ಕಡೆ ಮರ್ಯಾದೆ ಹೋಗುವ ಭಯದಿಂದ ಹರ್ಷಿತ್ ಕೊನೆಗೆ ಸಾವಿಗೆ ಶರಣಾಗಲು ನಿರ್ಧರಿಸಿದ್ದಾನೆ. ಮನೆಯಲ್ಲೇ ಇದ್ದ ಇಲಿ ಪಾಷಾಣವನ್ನು ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ | Suicide Case: ಪ್ರೀತಿಸಿದವಳು ಮೋಸದಾಟ ಆಡಿದಳೇ?; ಮನ ನೊಂದ ಹಾಸನದ ಯುವಕ ಚೆನ್ನೈನಲ್ಲಿ ನೇಣಿಗೆ ಶರಣು