Site icon Vistara News

Student suicide | ಪರೀಕ್ಷೆಯಲ್ಲಿ 10 ಮಾರ್ಕ್ಸ್‌ ಕಡಿಮೆ ಆಗಿದ್ದಕ್ಕೆ ನಿಂದಿಸಿದ ಪ್ರಿನ್ಸಿಪಾಲ್‌: ಪಿಯು ವಿದ್ಯಾರ್ಥಿನಿ ಆತ್ಮಹತ್ಯೆ

ತೃಪ್ತಿ ಆತ್ಮಹತ್ಯೆ

ಉಡುಪಿ: ಪರೀಕ್ಷೆಯಲ್ಲಿ ಹತ್ತು ಮಾರ್ಕ್‌ ಕಡಿಮೆಯಾಯಿತು ಎಂದು ಪ್ರಿನ್ಸಿಪಾಲ್‌ ಬೈದುದಲ್ಲದೆ ದಂಡ ವಿಧಿಸುವುದಾಗಿ ಎಚ್ಚರಿಕೆ ನೀಡಿದ್ದರಿಂದ ಬೇಸತ್ತ ವಿದ್ಯಾರ್ಥಿನಿಯೊಬ್ಬಳು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.

ಹೆಬ್ರಿಯಲ್ಲಿರುವ ಎಸ್ ಆರ್ ಪದವಿಪೂರ್ವ ಕಾಲೇಜಿನ ಪ್ರಥಮ ಪಿಯುಸಿ ವಿದ್ಯಾರ್ಥಿನಿಯಾಗಿರುವ ತೃಪ್ತಿ (೧೭) ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಉಡುಪಿ ಜಿಲ್ಲೆಯ ಪೆರ್ಡೂರಿನಲ್ಲಿರುವ ಕಲ್ಪಂಡೆ ನಿವಾಸಿಯಾಗಿರುವ ಸುರೇಶ್‌ ಮೆಂಡನ್‌ (೪೬) ಅವರ ಪುತ್ರಿಯಾಗಿರುವ ಈಕೆ ಮನೆಯ ಕೋಣೆಯಲ್ಲಿ ಸೀರೆಯನ್ನೇ ನೇಣಾಗಿಸಿಕೊಂಡು ಪ್ರಾಣ ಬಿಟ್ಟಿದ್ದಾಲೆ.

ಆತ್ಮಹತ್ಯೆ ಮಾಡಿಕೊಂಡ ತೃಪ್ತಿ ಮನೆಯ ಮುಂದೆ ಸೇರಿದ ಜನರು

ಸೌಂಡ್ಸ್‌ ಎಂಡ್‌ ಲೈಟ್ಸ್‌ ವ್ಯವಹಾರ ನಡೆಸುತ್ತಿರುವ ಸುರೇಶ್‌ ಮೆಂಡನ್‌ ಮತ್ತು ಹೇಮಾ ದಂಪತಿಗೆ ದೀಪ್ತಿ (೧೯) ಮತ್ತು ತೃಪ್ತಿ (೧೭) ಇಬ್ಬರು ಹೆಣ್ಮಕ್ಕಳು. ದೀಪ್ತಿ ಬಂಟಕಲ್ಲು ಎಂಜಿನಿಯರಿಂಗ್‌ ಕಾಲೇಜಿನಲ್ಲಿ ಮೊದಲ ವರ್ಷದ ಎಂಜಿನಿಯರಿಂಗ್‌ ವಿದ್ಯಾಭ್ಯಾಸ ಮಾಡುತ್ತಿದ್ದಾಳೆ. ಪ್ರತಿಭಾನ್ವಿತ ವಿದ್ಯಾರ್ಥಿನಿಯಾಗಿದ್ದ ತೃಪ್ತಿ ಎಸ್ಸೆಸ್ಸೆಲ್ಸಿಯಲ್ಲಿ ಡಿಸ್ಟಿಂಕ್ಷನ್‌ ಅಂಕ ಪಡೆದಿದ್ದಳು. ಬಳಿಕ ಎಸ್‌.ಆರ್‌. ಪದವಿಪೂರ್ವ ಕಾಲೇಜಿಗೆ ಉಚಿತ ಪ್ರವೇಶ ಪಡೆದಿದ್ದಳು.

ಆತ್ಮಹತ್ಯೆ ಮಾಡಿಕೊಂಡ ತೃಪ್ತಿಯ ಅಂತ್ಯಕ್ರಿಯೆಗೆ ಸೇರಿದ ಜನರು

ಮನೆಯಿಂದಲೇ ಕಾಲೇಜಿಗೆ ಹೋಗಿ ಬರುತ್ತಿದ್ದ ಆಕೆ ಈ ಬಾರಿಯ ಪರೀಕ್ಷೆಯಲ್ಲಿ ಆಕೆಯ ೧೦ ಅಂಕ ಕಡಿಮೆ ಪಡೆದಿದ್ದಳು ಎನ್ನಲಾಗಿದೆ. ಇದರ ಬಗ್ಗೆ ಪ್ರಿನ್ಸಿಪಾಲ್‌ ಪ್ರಶಾಂತ್‌ ಮಡಿವಾಳ ಅವರು ಸಾರ್ವಜನಿಕವಾಗಿ ಬೈದಿದ್ದಲ್ಲದೆ ಕಡಿಮೆ ಅಂಕ ಬಂದಿದ್ದಕ್ಕೆ ದಂಡ ಕಟ್ಟಬೇಕಾಗುತ್ತದೆ ಎಂದು ಹೇಳಿದ್ದರು. ಈ ವಿಷಯವನ್ನು ಆಕೆ ಮನೆಯಲ್ಲಿ ಬಂದು ಹೇಳಿಕೊಂಡಿದ್ದಳು. ಮನೆಯವರು ಸಮಾಧಾನ ಹೇಳಿದ್ದರು.

ಸುರೇಶ್‌ ಮೆಂಡನ್‌ ಅವರು ಕೊಟ್ಟ ದೂರಿನಲ್ಲಿ ಏನಿದೆ?

ಈ ನಡುವೆ, ನವೆಂಬರ್‌ ೨೭ರಂದು ಕಾಲೇಜಿಗೆ ಹೋಗಿದ್ದ ಆಕೆ ಮರಳಿ ಬಂದಿದ್ದಳು. ಬಟ್ಟೆ ಬದಲಾಯಿಸಲೆಂದು ಕೋಣೆಗೆ ಹೋಗಿದ್ದ ಆಕೆ ಮರಳಿ ಬಾರದೆ ಇದ್ದ ಹಿನ್ನೆಲೆಯಲ್ಲಿ ಆಕೆಯ ಅಜ್ಜಿ ಕೋಣೆಯ ಕಿಟಕಿಯ ಮೂಲಕ ಇಣುಕಿ ನೋಡಿದರು ಎನ್ನಲಾಗಿದೆ. ಆಗ ಆಕೆ ನೇಣು ಬಿಗಿದುಕೊಂಡಿರುವುದು ಕಂಡುಬಂದಿದೆ. ಕೂಡಲೇ ಆಸುಪಾಸಿನವರನ್ನು ಕರೆದು ಆಕೆಯನ್ನು ನೇಣಿನಿಂದ ಇಳಿಸಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ನವೆಂಬರ್‌ ೨೮ರಂದು ಆಕೆ ಮೃತಪಟ್ಟಿದ್ದನ್ನು ಘೋಷಿಸಲಾಗಿದೆ.

ಕಡಿಮೆ ಮಾರ್ಕ್ಸ್‌ ಪಡೆದಿದ್ದಾಳೆ ಎಂಬ ಕಾರಣಕ್ಕೆ ಎಲ್ಲಾ ಮಕ್ಕಳ ಮುಂದೆ ನನ್ನ ಮಗಳನ್ನು ಪ್ರಿನ್ಸಿಪಾಲ್‌ ನಿಂದಿಸಿದ್ದಾರೆ. ಈ ಕಾರಣಕ್ಕಾಗಿ ಅಕೆ ಮನ ನೊಂದು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ತಂದೆ ಸುರೇಶ್‌ ಮೆಂಡನ್‌ ಅವರು ಹಿರಿಯಡ್ಕ ಠಾಣೆಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ. ಊರಿನವರು ಕೂಡಾ ಪ್ರಿನ್ಸಿಪಾಲ್‌ ವರ್ತನೆಗೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ | Suicide | ಸ್ಕೂಲ್‌ನಲ್ಲಿ ಎಲ್ಲರೆದರು ಟೀಚರ್‌ ಬೈದರೆಂದು ನೇಣಿಗೆ ಶರಣಾದ ವಿದ್ಯಾರ್ಥಿನಿ!

Exit mobile version