ಗದಗ: ಜಿಲ್ಲೆಯ ನರಗುಂದ ತಾಲೂಕಿನ ಹದಗಿ ಸರಕಾರಿ ಪ್ರಾಥಮಿಕ ಶಾಲೆಯಲ್ಲಿ ಭರತ್ ಎಂಬ ನಾಲ್ಕನೇ ತರಗತಿ ವಿದ್ಯಾರ್ಥಿನಿಯನ್ನು ಹೊಡೆದೇ ಕೊಂದು ಹಾಕಿದ ಕ್ರೂರಿ ಶಿಕ್ಷಕ ಮುತ್ತಪ್ಪ ಹಡಗಲಿಯನ್ನು ಪೊಲೀಸರು ಬಂಧಿಸಿದ್ದಾರೆ. ಅದೇ ಶಾಲೆಯಲ್ಲಿ ಅತಿಥಿ ಶಿಕ್ಷಕಿಯಾಗಿಯಾಗಿರುವ, ಹುಡುಗನ ತಾಯಿ ಗೀತಾ ಬಾರಕೇರಿ ಮೇಲಿನ ಸಿಟ್ಟೇ ಈ ಕೊಲೆಗೆ ಕಾರಣ ಎಂದು ಬಯಲಾಗಿದೆ.
ಹದಲಿ ಶಾಲೆಯಲ್ಲಿ ಸೋಮವಾರ ಮಧ್ಯಾಹ್ನ ಭರತ್‌ನನ್ನು ಕೊಲೆ ಮಾಡಿದ್ದ ಮುತ್ತಪ್ಪ ಅತಿಥಿ ಶಿಕ್ಷಕಿ ಗೀತಾ ಬಾರಕೇರಿ ಮತ್ತು ಇನ್ನೊಬ್ಬ ಸಹ ಶಿಕ್ಷಕ ಸಂಗನ ಗೌಡ ಅವರ ಮೇಲೂ ಹಲ್ಲೆ ನಡೆಸಿದ್ದ. ಗೀತಾ ಅವರ ತಲೆಗೇ ಸಲಾಕೆಯಿಂದ ಹೊಡೆದಿದ್ದು, ಆಕೆ ಗಂಭೀರ ಸ್ಥಿತಿಯಲ್ಲಿ ಹುಬ್ಬಳ್ಳಿಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ನಡುವೆ, ಕೊಲೆ ಮಾಡಿ ಪರಾರಿಯಾಗಿರುವ ಆರೋಪಿ ಮುತ್ತಪ್ಪ ಹಡಗಲಿಯನ್ನು ನರಗುಂದ ಪಕ್ಕದ ರೋಣ ಕ್ರಾಸಿನಲ್ಲಿ ಬಂಧಿಸಲಾಗಿದೆ. ಕೊಲೆ ಮಾಡಿ ಪರಾರಿಯಾದ ಆತನನ್ನು ಬಂಧಿಸಲು ಡಿವೈಎಸ್ಪಿ ನೇತೃತ್ವದಲ್ಲಿ ತಂಡವನ್ನು ರಚಿಸಲಾಗಿತ್ತು.
ಕೊಲೆಯ ಹಿಂದಿನ ಕಾರಣವೇನು?
ಬಾಲಕನ ತಾಯಿ ಗೀತಾ ಬಾರಕೇರಿ ಮತ್ತು ಮುತ್ತಪ್ಪ ಹಡಗಲಿ ಜತೆಯಾಗಿ ಅತಿಥಿ ಶಿಕ್ಷಕರಾಗಿ ಕೆಲಸಕ್ಕೆ ಸೇರಿದ್ದರು. ಗೀತಾ ಅವರಿಗೆ ಕೆಲಸ ಸಿಗಲು ಮುತ್ತಪ್ಪನೂ ನೆರವು ನೀಡಿದ್ದ ಎನ್ನಲಾಗಿದೆ. ಹಾಗಾಗಿ ಅವರಿಬ್ಬರ ನಡುವೆ ಸ್ನೇಹ, ಆತ್ಮೀಯತೆ ಇತ್ತು.
ಈ ನಡುವೆ, ಎರಡು ದಿನದ ಹಿಂದೆ ಶಾಲಾ ವಿದ್ಯಾರ್ಥಿಗಳು ಮತ್ತು ಶಿಕ್ಷಕರ ಪ್ರವಾಸ ವ್ಯವಸ್ಥೆ ಮಾಡಲಾಗಿತ್ತು. ಈ ವೇಳೆ ಸಹ ಶಿಕ್ಷಕ ಸಂಗನ ಗೌಡ ಮತ್ತು ಶಿಕ್ಷಕಿ ಗೀತಾ ಆತ್ಮೀಯತೆಯಿಂದ ಮಾತನಾಡಿದ್ದರು ಎಂಬುದನ್ನೇ ತಲೆಗೆ ಹಚ್ಚಿಕೊಂಡು, ಹೊಟ್ಟೆಕಿಚ್ಚುಪಟ್ಟುಕೊಂಡು ಆಕ್ರೋಶದಿಂದ ಕುದಿಯುತ್ತಿದ್ದ ಎನ್ನಲಾಗಿದೆ.
ತಾನು ಕೆಲಸ ಕೊಡಿಸಿದ್ದು, ತಾನು ಬೆಂಬಲವಾಗಿ ನಿಂತಿರುವುದು, ಹೀಗಿರುವಾಗ ಅವನ ಜತೆಗೆ ಏನು ಸಲುಗೆ ಎಂಬ ಪೊಸೆಸಿವ್‌ನೆಸ್‌ಗೆ ಒಳಗಾದ ಮುತ್ತಪ್ಪ ಇಬ್ಬರಿಗೂ ಬುದ್ಧಿ ಕಲಿಸಲು ಮುಂದಾಗಿದ್ದ. ಈ ಆಕ್ರೋಶದ ಫಲವೇ ಭರತ್‌ನಿಗೆ ಹೊಡೆದದ್ದು ಎನ್ನಲಾಗಿದೆ. ಆದರೆ, ಬುದ್ಧಿ ಸ್ಥಿಮಿತವನ್ನೇ ಕಳೆದುಕೊಂಡು ರಾಕ್ಷಸನೇ ಆದ ಆತ ಬಾಲಕನನ್ನು ಕೊಂದೇ ಬಿಟ್ಟಿದ್ದಾನೆ. ಪ್ರವಾಸದ ವೇಳೆ ಗೀತಾ ಮತ್ತು ಸಂಗನಗೌಡ ಆತ್ಮೀಯತೆಯಿಂದ ಇದ್ದರು, ಅದನ್ನು ನೋಡಲು ಆಗಲಿಲ್ಲ ಎಂದು ಮತ್ತಪ್ಪ ಬಾಯಿ ಬಿಟ್ಟಿದ್ದಾನೆ.
ಇದನ್ನೂ ಓದಿ Student murder | ಶಿಕ್ಷಕನ ಕ್ರೌರ್ಯಕ್ಕೆ ವಿದ್ಯಾರ್ಥಿ ಬಲಿ: ಹದಲಿ ಶಾಲೆಗೆ ಕಾಲಿಡಲು ಭಯಪಡುತ್ತಿರುವ ಮಕ್ಕಳು