ಚಿಕ್ಕಬಳ್ಳಾಪುರ: ಒಂಬತ್ತನೇ ತರಗತಿ ವಿದ್ಯಾರ್ಥಿನಿಯನ್ನು ಚುಡಾಯಿಸಿದ್ದಕ್ಕೆ ವಿದ್ಯಾರ್ಥಿಯೊಬ್ಬನಿಗೆ ಸಾರ್ವಜನಿಕರಿಂದ ಧರ್ಮದೇಟು ಬಿದ್ದ ಘಟನೆ ನಗರದ (Chikkaballapur News) ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದಲ್ಲಿ ನಡೆದಿದೆ. ಸರ್ಕಾರಿ ಬಾಲಕಿಯರ ಪ್ರೌಢಶಾಲೆ ವಿದ್ಯಾರ್ಥಿನಿಯನ್ನು ಚುಡಾಯಿಸಿದ ಪಿಯುಸಿ ವಿದ್ಯಾರ್ಥಿಗೆ ಜನರು ಹಿಗ್ಗಾಮುಗ್ಗಾ ಥಳಿಸಿದ್ದಾರೆ.
ನಗರದ ವಾಪಸಂದ್ರದ ಬಾಲಕಿಯರ ಪ್ರೌಢಶಾಲೆ ವಿದ್ಯಾರ್ಥಿನಿಗೆ ಚುಡಾಯಿಸಿದ ವಿದ್ಯಾರ್ಥಿಯನ್ನು ಬಸ್ ನಿಲ್ದಾಣದ ಗೋಡೌನ್‌ನಲ್ಲಿ ಹಾಕಿ ಬಾಲಕಿಯರ ಶಾಲೆ ಶಿಕ್ಷಕ ಮಹಂತೇಶ್ ಸೇರಿ ಸಾರ್ವಜನಿರು ಥಳಿಸಿದ್ದಾರೆ.
ಸ್ನೇಹಿತನ ಜತೆ ಹೋದವನು ತೋಟದ ಮನೆಯಲ್ಲಿ ಶವವಾಗಿ ಪತ್ತೆ
ಬೆಳಗಾವಿ: ಸ್ನೇಹಿತನ ಜತೆ ಹೊರ ಹೋದ ವ್ಯಕ್ತಿ ತೋಟದ ಮನೆಯಲ್ಲಿ ಶವವಾಗಿ ಪತ್ತೆಯಾದ (body found) ಘಟನೆ ಬೆಳಗಾವಿ ಜಿಲ್ಲೆಯ ಸವದತ್ತಿ ತಾಲೂಕಿನ ಹೊಸೂರು ಗ್ರಾಮದಲ್ಲಿ ನಡೆದಿದೆ. ಮಂಜುನಾಥ ಕೋಲಕಾರ (25) ಕೊಲೆಯಾದ (Murder Case) ಯುವಕ.
ಮೂರು ದಿನದ ಹಿಂದೆ ನಾಪತ್ತೆಯಾಗುವ ಮುನ್ನ ಮಂಜುನಾಥ ಸ್ನೇಹಿತನ ಜತೆ ಹೊರ ಹೋಗಿದ್ದ. ಜೊತೆಗೆ ಎಣ್ಣೆ ಪಾರ್ಟಿ ಮಾಡಿದ ಸ್ನೇಹಿತನೇ ಈ ವ್ಯಕ್ತಿಗೆ ಚಟ್ಟ ಕಟ್ಟಿ ಪರಾರಿಯಾಗಿದ್ದಾನೆ. ತಲೆಯ ಮೇಲೆ ಕಲ್ಲು ಎತ್ತಿ ಹಾಕಿ ಕೊಲೆ ಮಾಡಲಾಗಿದೆ.
ಕೊಲೆಯಾಗುವ ಮುನ್ನ ಪ್ರದೀಪ ಎಂಬ ಯುವಕನ ಜತೆ ಕೊಲೆಯಾದ ಮಂಜುನಾಥ ತಿರುಗಾಡುತ್ತಿದ್ದ. ಇದೇ ತಿಂಗಳ 16ರಂದು ಸಂಜೆ ಹೊಸೂರು ಗ್ರಾಮದ ತೋಟದ ಮನೆಯಲ್ಲಿ ಮಂಜುನಾಥನ ಕೊಲೆಯಾಗಿದೆ. ಕೊಲೆಯಾದ ದಿನದಿಂದ ಆತನ ಸ್ನೇಹಿತ ಪ್ರದೀಪ ಕಾಣಿಸಿಲ್ಲ. ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಕಣ್ಮರೆಯಾಗಿರುವ ಪ್ರದೀಪಗಾಗಿ ಹುಡುಕಾಟ ನಡೆಸುತ್ತಿದ್ದಾರೆ. ಮುರಗೋಡ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ಪತ್ನಿಯ ಶೀಲ ಶಂಕಿಸಿ ಬರ್ಬರ ಹತ್ಯೆ
ವಿಜಯಪುರ: ಪತ್ನಿಯ ಶೀಲ ಶಂಕಿಸಿ ಪತಿಯೊಬ್ಬ ಬರ್ಬರವಾಗಿ ಹತ್ಯೆ (Murder Case) ಮಾಡಿದ್ದಾನೆ. ವಿಜಯಪುರ ಜಿಲ್ಲೆಯ ತಿಕೋಟ ತಾ. ಹುಬನೂರು ತಾಂಡಾ -2ರಲ್ಲಿ ಘಟನೆ ನಡೆದಿದೆ. ರೇಶ್ಮಾ ರಾಠೋಡ (25) ಎಂಬಾಕೆಯನ್ನು ಗುದ್ದಲಿಯಿಂದ ಹೊಡೆದು ಅಶೋಕ ರಾಠೋಡ (33) ಕೊಲೆ ಮಾಡಿದ್ದಾನೆ.
ರೇಶ್ಮಾ ಹಾಗೂ ಅಶೋಕ್ ಮದುವೆಯಾಗಿ 11 ವರ್ಷಗಳೇ ಕಳೆದಿತ್ತು. ದಂಪತಿಗೆ ಮೂವರು ಮಕ್ಕಳು ಸಹ ಇದ್ದರು. ಆದರೆ ಕೆಲ ತಿಂಗಳಿನಿಂದ ಅಶೋಕ್, ಪತ್ನಿ ಅನೈತಿಕ ಸಂಬಂಧ ಹೊಂದಿದ್ದಾಳೆ ಎಂದು ಸಂಶಯವನ್ನು ಹೊಂದಿದ್ದ. ಆಗಾಗ ಇದೇ ವಿಚಾರಕ್ಕೆ ಇಬ್ಬರ ನಡುವೆ ಗಲಾಟೆ ನಡೆಯುತ್ತಿತ್ತು.
ಪತ್ನಿ ರೇಶ್ಮಾಳ ಶೀಲ ಶಂಕಿಸುತ್ತಿದ್ದ ಅಶೋಕ, ಕುಡಿದು ಬಂದು ನಿತ್ಯ ಕಿರುಕುಳ ಕೊಡುತ್ತಿದ್ದ. ಈತನ ಕಾಟ ತಾಳಲಾರದೆ ಹುಬನೂರಿನಲ್ಲಿದ್ದ ತನ್ನ ತವರು ಮನೆಗೆ ರೇಶ್ಮಾ ಹೋಗಿದ್ದಳು. ಅಲ್ಲಿಗೆ ಹೋದ ಅಶೋಕ ಮತ್ತೆ ಕ್ಯಾತೆ ತೆಗೆದಿದ್ದಾನೆ. ಮಲಗಿದ್ದವಳ ಮೇಲೆ ಗುದ್ದಲಿಯಿಂದ ಹೊಡೆದು ಕೊಲೆ ಮಾಡಿದ್ದಾನೆ.
ಇದನ್ನೂ ಓದಿ | Road Accident : ತಿರುವಿನಲ್ಲಿ ಕಾದಿದ್ದ ಜವರಾಯ; ಬೈಕ್‌ಗೆ ಡಿಕ್ಕಿ ಹೊಡೆದ ಕಾರು, ದಂಪತಿ ಸಾವು
ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಿದ್ದಾರೆ. ಅಶೋಕನ ಸಂಶಯಾ ಸ್ವಭಾವಕ್ಕೆ ಪತ್ನಿ ಮೃತಪಟ್ಟರೆ, ಮಕ್ಕಳು ತಂದೆ-ತಾಯಿ ಇಬ್ಬರ ಆಸರೆ ಇಲ್ಲದೇ ಅನಾಥರಾಗಿದ್ದಾರೆ. ಘಟನೆ ಸಂಬಂಧ ದೂರು ದಾಖಲಿಸಿಕೊಂಡಿದ್ದು, ಪೊಲೀಸರು ತನಿಖೆಯನ್ನು ನಡೆಸುತ್ತಿದ್ದಾರೆ.